SUDDIKSHANA KANNADA NEWS/ DAVANAGERE/ DATE:02-09-2023
ದಾವಣಗೆರೆ: ಆಕೆ ಹೆಸರು ಸೌಮ್ಯ. ಮಾಡಿರುವ ಸಾಧನೆ ಅಪಾರ. ಹೆಸರಿಗಷ್ಟೇ ಸೌಮ್ಯ ಆಗಿತ್ತು. ವಿಧ್ವಂಸಕ ಕೃತ್ಯ, ಸ್ಫೋಟಕ (Explosive) ದಾಸ್ತಾನು ಮಾಡುವವರ ನರನಾಡಿಯಲ್ಲೂ ಕಂಪನ ಬರುವಂತೆ ಕೆಲಸ ಮಾಡುತ್ತಿದ್ದಾಕೆ. ಪೊಲೀಸ್ ಶ್ವಾನ ದಳದಲ್ಲಿ ತನ್ನದೇ ಆದ ಛಾಪು ಮೂಡಿಸಿತ್ತು. ಸ್ಥಳೀಯ ಮಟ್ಟದ ಚುನಾವಣೆಯಿಂದ ಹಿಡಿದು ಪ್ರಧಾನಿ ನರೇಂದ್ರ ಮೋದಿ ಅವರು ಆಗಮನದ ವೇಳೆಯಲ್ಲಿ ಪರಿಶೀಲನೆಯ ನಿಪುಣೆಯಾಗಿದ್ದ ಸೌಮ್ಯ ಈಗ ನೆನಪಷ್ಟೇ. ಉಳಿದಿರುವುದು ಆಕೆಯ ಟ್ರ್ಯಾಕ್ ರೆಕಾರ್ಡ್ ಮಾತ್ರ.
ಹೌದು. ಇದು ದಾವಣಗೆರೆ ಜಿಲ್ಲೆ ಪೊಲೀಸ್ ಶ್ವಾನ ದಳದಲ್ಲಿತ್ತು. ಈ ಶ್ವಾನದ ಹಲವು ವಿಶೇಷತೆಗಳನ್ನು ಹೊಂದಿದೆ. ಕೇವಲ ನಾಲ್ಕು ವರ್ಷಗಳಲ್ಲಿ ಅದ್ವಿತೀಯ ಸೇವೆ ನೀಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಯಾವುದೇ ಕಾರ್ಯಕ್ರಮಗಳಿದ್ದರೂ ಮುಂಚಿತವಾಗಿಯೇ ಸೌಮ್ಯ ಎಂಟ್ರಿ ಆಗುತಿತ್ತು. ಈಕೆ ಇದ್ದರೆ ಎಲ್ಲಾ ಕೆಲಸವೂ ಸಲೀಸು ಎಂಬಂತಿತ್ತು. ಯಾಕೆಂದರೆ ಅಷ್ಟು ಕರಾರುವಕ್ ಆದ ಕೆಲಸ ಈಕೆಯದ್ದು. ಪೊಲೀಸ್ ಇಲಾಖೆಗೆ ತನ್ನದೇ ಆದ ಸೇವೆ ಸಲ್ಲಿಸಿ ಈಗ ವಿಧಿವಶವಾಗಿದೆ.
ಈ ಸುದ್ದಿಯನ್ನೂ ಓದಿ:
Gruhalakshmi ಎಫೆಕ್ಟ್: ಹೊಸ ಬಿಪಿಎಲ್ ಕಾರ್ಡ್ ಗಿಲ್ಲ ಪರ್ಮಿಷನ್, ತಿದ್ದುಪಡಿಗಷ್ಟೇ ಗ್ರೀನ್ ಸಿಗ್ನಲ್.. ಯಾಕೆ ಅನ್ನೋದಕ್ಕೆ ಇಲ್ಲಿದೆ ನೋಡಿ ಕಾರಣ…!
2018ರ ಜೂನ್. 8ರಂದು ಜನಿಸಿದ ಲ್ಯಾಬ್ರಡಾರ್ ಶ್ವಾನ ತಳಿಗೆ ಸೌಮ್ಯ ಎಂದು ಹೆಸರು ನಾಮಕರಣ ಮಾಡಲಾಗಿತ್ತು. ಒಂದು ವರ್ಷದ ಈ ಶ್ವಾನ 2019ರಲ್ಲಿ ಪೊಲೀಸ್ಇಲಾಖೆಗೆ ಸೇರಿತ್ತು. ಅಲ್ಲಿಂದ ಅಮೂಲ್ಯ ಸೇವೆ ನೀಡುತ್ತಿತ್ತು. ಆದ್ರೆ, ಕಳೆದ ಏಳು ದಿನಗಳಿಂದ ರೋಗಕ್ಕೆ ತುತ್ತಾಗಿತ್ತು. ನಾಲ್ಕೈದು ದಿನಗಳ ಹಿಂದೆ ಆಹಾರವನ್ನೂ ತ್ಯಜಿಸಿತ್ತು. ಹಾಗಾಗಿ, ಪ್ರಾಣ ಬಿಟ್ಟಿದೆ.
ಸ್ಫೋಟಕ (Explosive) ಪತ್ತೆ ಚತುರೆ:
ಸೌಮ್ಯ ಟ್ರ್ಯಾಕ್ ರೆಕಾರ್ಡ್ ಕೇಳಿದರೆ ಬೆರಗಾಗುವುದು ಖಚಿತ. ಸ್ಫೋಟಕ (Explosive) ಪತ್ತೆಗಳ ಕಾರ್ಯ, ವಿವಿಐಪಿ, ವಿಐಪಿ ಭದ್ರತಾ ತಪಾಸಣೆ ಸೇರಿದಂತೆ ಹಲವು ರೀತಿಯಲ್ಲಿ ಪೊಲೀಸ್ಇಲಾಖೆಗೆ ನೆರವಾಗಿತ್ತು. ತನ್ನ ಕಾರ್ಯವೈಖರಿಯಿಂದಲೇ
ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಸ್ಫೋಟಕ ಪತ್ತೆ ವಿಭಾಗದಲ್ಲಿ ಸೌಮ್ಯ ಕಾರ್ಯನಿರ್ವಹಿಸಿತ್ತು.
ಸೌಮ್ಯ ಟ್ರ್ಯಾಕ್ ರೆಕಾರ್ಡ್:
- ಶ್ವಾನ ಹಾಜರಾದ ಒಟ್ಟು ವಿವಿಐಪಿ ವಿಐಪಿ ಭದ್ರತೆ:
- 225 ಭದ್ರತಾ ಕರ್ತವ್ಯಗಳು
- ಶ್ವಾನ ಹಾಜರಾದ ಸ್ಫೋಟಕ (Explosive) ಪತ್ತೆ ಪ್ರಕರಣಗಳು: 4ಸ್ಫೋಟಕ ಪ್ರಕರಣಗಳು
- ಶ್ವಾನ ಬೇಧಿಸಿದ ಸ್ಫೋಟಕ ಪತ್ತೆ ಪ್ರಕರಣಗಳು: 2 ಸ್ಫೋಟಕ ಪ್ರಕರಣಗಳು
- ಸೌಮ್ಯ ಶ್ವಾನವು ಹಾಜರಾದ ಕರ್ತವ್ಯಗಳ ವಿವರ:
- ರಾಷ್ಟ್ರಪತಿ, ಉಪರಾಷ್ಟ್ರಪತಿ ಕರ್ತವ್ಯಗಳು -04
- ರಾಜ್ಯಪಾಲರ ಕರ್ತವ್ಯಗಳು – 10
- ಮುಖ್ಯಮಂತ್ರಿಗಳ ಕರ್ತವ್ಯಗಳು- 64
- ಪ್ರಧಾನ ಮಂತ್ರಿಗಳ ಕರ್ತವ್ಯಗಳು – 12
- ಎಐಸಿಸಿ ಅಧ್ಯಕ್ಷರಾಗಿದ್ದಾಗ ರಾಹುಲ್ ಗಾಂಧಿ ಕರ್ತವ್ಯಗಳು – 3
- ಭಾರತ್ ಜೂಡೋ ಯಾತ್ರೆ -02
- ಜಿ-20 ಶೃಂಗಸಭೆ (ಬೆಂಗಳೂರು, ಹಂಪಿ) – 02
- ಕೇಂದ್ರ ಗೃಹಮಂತ್ರಿಗಳ ಕರ್ತವ್ಯಗಳು – 05
- ದಸರಾ ಉತ್ಸವ – 02
- ಚಳಿಗಾಲದ ಅಧಿವೇಶನ ಬೆಳಗಾವಿ -01
- ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕರ್ತವ್ಯಗಳು – 01
- ಬಾಬ್ರಿ ಮಸೀದಿ ತೀರ್ಪಿನ ಸಂದರ್ಭದ ಕರ್ತವ್ಯಗಳು – 01
- ಹರಿಹರ ನಗರ ಹರ ಜಾತ್ರೆ ಮತ್ತು ಮೇರಿ ಜಾತ್ರೆ ಕರ್ತವ್ಯ- 04
- ಕಾಡಜ್ಜಿ ಗ್ರಾಮದಲ್ಲಿ ಗೋದಾಮಿನಲ್ಲಿದ್ದ ಸ್ಫೋಟಕ ಪತ್ತೆ ಕಾರ್ಯ
- ಕಾಶಿಪುರ ಗ್ರಾಮದ ಜಮೀನಿನಲ್ಲಿ ಜಿಲೇಟಿನ್ ಪತ್ತೆ ಕಾರ್ಯಾಚರಣೆ
- ಮಾಯಕೊಂಡದ ಕಬ್ಬೂರು ಗ್ರಾಮದ ಜಮೀನಿನಲ್ಲಿ ಅನುಮಾನಾಸ್ಪದ ವಸ್ತು ಬಿದ್ದಾಗ ನಡೆಸಿದ ಪತ್ತೆ ಕಾರ್ಯ
- ಅಂತರಾಷ್ಟ್ರೀಯ ಮತ್ತು ಐಪಿಎಲ್ ಮ್ಯಾಚ್ ಕರ್ತವ್ಯಗಳು
- ದಾವಣಗೆರೆ ಜಿಲ್ಲೆಯಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆಯಿಂದ ಲೋಕಸಭೆ ಚುನಾವಣೆಯ ತಪಾಸಣೆ ಕಾರ್ಯ ನಿರ್ವಹಿಸಿದೆ
- ಪ್ರತಿದಿನ ಕೋರ್ಟ್, ಬಸ್ ನಿಲ್ದಾಣ, ರೈಲು ನಿಲ್ದಾಣಗಳ ತಪಾಸಣೆ ಕಾರ್ಯ
- ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ರಂಜಾನ್ ಸೇರಿದಂತೆ ಹಲವು ವಿಧ್ವಂಸಕ ಕೃತ್ಯ ತಪಾಸಣೆ ಕಾರ್ಯಗಳ ನಿರ್ವಹಣೆ
ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಮುಂದೆ ಸೌಮ್ಯಳಿಗೆ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು, ಕಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಸೌಮ್ಯಳ ಮೃತದೇಹಕ್ಕೆ ಹೂವಿನ ಹಾರವಿಟ್ಟು ಸೆಲ್ಯೂಟ್ ಮಾಡಿ ಗೌರವ ಸಲ್ಲಿಸಿದರು.
ಏನಾಗಿತ್ತು ಸೌಮ್ಯಳಿಗೆ…?
ತುಂಬಾ ಚಟುವಟಿಕೆ, ಕ್ರಿಯಾಶೀಲವಾಗಿದ್ದ ಸೌಮ್ಯ ಕಳೆದ ಏಳೆಂಟು ದಿನಗಳ ಹಿಂದೆ ಮಂಕಾಗಿತ್ತು. ಕಣ್ಣು ಮತ್ತು ಬಾಯಿಯಲ್ಲಿ ಬಿಳಿಯಾದ ರೀತಿಯಲ್ಲಿ ಕಂಡು ಬರುತಿತ್ತು. ಕೂಡಲೇ ಚಿಕಿತ್ಸೆ ಕೊಡಿಸಲಾಯಿತು. ಬೆಂಗಳೂರಿನಲ್ಲಿ ನಾಲ್ಕು ದಿನ ಚಿಕಿತ್ಸೆ ನೀಡಿಸಲಾಯಿತಾದರೂ ಬದುಕಲಿಲ್ಲ. ಸ್ಪಿನೋ ಮೆಗಾಲಿನ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದ ಸೌಮ್ಯ 5 ವರ್ಷ 2 ತಿಂಗಳಿಗೆ ವಯಸ್ಸಿಗೆ ಪ್ರಾಣ ಬಿಟ್ಟಿದೆ.
ಈ ಕಾಯಿಲೆ ಯಾಕಾಗಿ ಬರುತ್ತೆ…?
ಈ ಶ್ವಾನಗಳು ದೊಡ್ಡ ವಿವಿಐಪಿ, ವಿಐಪಿ, ಸ್ಫೋಟಕ (Explosive) ಪತ್ತೆ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ಜನನಿಬಿಡ ಪ್ರದೇಶಗಳು ಸೇರಿದಂತೆ ಹಲವೆಡೆ ಪತ್ತೆ ಕಾರ್ಯದಲ್ಲಿ ನಿರತವಾಗುತಿತ್ತು. ಗುಟ್ಕಾ ಜಗಿದು ಕೆಲವರು ಉಗುಳಿರುತ್ತಾರೆ. ಆ ಉಗುಳನ್ನು ಮೂಸುವುದಲ್ಲದೇ, ವಾಸನೆ ಮೂಗಿಗೆ ಬಡಿಯುತ್ತದೆ. ಆದ್ರೆ, ಇದು ನಿಧಾನವಾಗಿ ಶ್ವಾನದ ದೇಹದೊಳಗೆ ಹೋಗುತ್ತದೆ. ಬಲಹೀನವಾದಾಗ ಮಾತ್ರ ಈ ಕಾಯಿಲೆ ಇದೆ ಎಂಬುದು ಗೊತ್ತಾಗುತ್ತದೆ. ರಕ್ತ ಪರೀಕ್ಷೆ ಮಾಡಿಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ ಎಂದು ಈ ಶ್ವಾನ ನೋಡಿಕೊಳ್ಳುತ್ತಿದ್ದ ಪ್ರಕಾಶ್ ಅವರು ಈ ಮಾಹಿತಿ ನೀಡಿದ್ದಾರೆ.
ಒಟ್ಟಿನಲ್ಲಿ ಪೊಲೀಸ್ ಇಲಾಖೆಯ ಬಲಗೈ ಬಂಟನಂತಿದ್ದ, ತಪಾಸಣೆ, ಸ್ಫೋಟಕ ಪತ್ತೆಯಲ್ಲಿ ನಿಪುಣೆ, ಚಾಣಾಕ್ಷತೆಯಿಂದ ಸೌಮ್ಯ ನಿಧನ ಪೊಲೀಸ್ ಇಲಾಖೆಗೆ ತುಂಬಲಾರದ ನಷ್ಟ ಉಂಟಾಗಿದೆ ಎಂದೂ ಹೇಳಿದ್ದಾರೆ.