Site icon Kannada News-suddikshana

ಧಾರ್ಮಿಕ ಉಡುಪು ವಿಚಾರಕ್ಕೆ ಕೊಡಗಿನಲ್ಲಿ ತಾರಕಕ್ಕೇರಿದ ಜನಾಂಗೀಯ ಸಂಘರ್ಷ: ನಿಷೇಧಾಜ್ಞೆ ಜಾರಿ

ಕಟ್ಟೆಮಾಡು ದೇವಸ್ಥಾನದಲ್ಲಿ ಧಾರ್ಮಿಕ ಉಡುಪು ಧರಿಸುವ ವಿಷಯದಲ್ಲಿ ಉಂಟಾದ ವಿವಾದದಿಂದ ಜನಾಂಗೀಯ ಸಂಘರ್ಷ ಉದ್ಭವಿಸಿದೆ. ಒಂದು ಜನಾಂಗದ ಸಾಂಪ್ರದಾಯಿಕ ಉಡುಪು ಧರಿಸಲು ಅನುಮತಿ ನಿರಾಕರಿಸಿದ್ದರಿಂದ ಉದ್ವಿಗ್ನತೆ ಹೆಚ್ಚಿದೆ. ಪೊಲೀಸರು ನಿಷೇಧಾಜ್ಞೆ ಜಾರಿಗೊಳಿಸಿದ್ದು, ಶಾಂತಿ ಸಭೆ ನಡೆಯಲಿದೆ. ಈ ಘಟನೆಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ

ಕೊಡಗು ಜಿಲ್ಲೆಯಲ್ಲಿ ಜನಾಂಗೀಯ ಸಂಘರ್ಷ ತಾರಕಕ್ಕೇರಿದೆ. ದೇವಸ್ಥಾನವೊಂದರ ಉತ್ಸವ ಸಂದರ್ಭ ಸ್ಥಳೀಯ ಧಾರ್ಮಿಕ ಉಡುಪು ಧರಿಸುವ ಸಂಬಂಧ ವಿವಾದ ಬುಗಿಲೆದ್ದಿದ್ದು, ದೇವಸ್ಥಾನ ಇರುವ ಊರಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಪೊಲೀಸ್​ ಸರ್ಪಗಾವಲು ನಿಯೋಜನೆ ಮಾಡಲಾಗಿದೆ.

ಮಡಿಕೇರಿ ತಾಲೂಕಿನ ಕಟ್ಟೆ‌ಮಾಡು ಗ್ರಾಮದಲ್ಲಿ ಪಾಳು ಬಿದ್ದಿದ್ದ ಪುರಾತನ ಮೃತ್ಯುಂಜಯ ದೇವಸ್ಥಾನವನ್ನು ಕೋಟ್ಯಂತರ ರೂ ಖರ್ಚು ಮಾಡಿ ಕಳೆದ ಒಂಭತ್ತು ವರ್ಷಗಳಿಂದ ಜೀರ್ಣೋದ್ಧಾರ ಮಾಡಲಾಗಿದೆ. ಕಳೆದ ವರ್ಷದಿಂದ ವಾರ್ಷಿಕ ಉತ್ಸವವನ್ನೂ ಆಚರಿಸಿಕೊಂಡು ಬರಲಾಗುತ್ತಿದೆ. ಈ ಸಂದರ್ಭ ಊರಿನಲ್ಲಿ ಕೊಡವ, ಗೌಡ ಜನಾಂಗ ಸೇರಿದಂತೆ ಹತ್ತು ಹಲವು ಜನಾಂಗಳಿರುವುದರಿಂದ ಯಾವುದೇ ಒಂದು ಜನಾಂಗದ ಧಾರ್ಮಿಕ ಉಡುಪು ತೊಟ್ಟು ಬರುವುದನ್ನು ನಿಷೇಧಿಸಿ ಬೈಲಾ ರಚನೆ ಮಾಡಲಾಗಿತ್ತು.‌
ಅದೇ ಪ್ರಕಾರವಾಗಿ ಕಳೆದ ವರ್ಷ ಉತ್ಸವ ನೆರವೇರಿತ್ತು. ಈ ವರ್ಷವೂ ಇದೇ ಡಿಸೆಂಬರ್ 23 ರಿಂದ ಬೇರೆ ಬಗೆಯ ಉತ್ಸವಗಳು ನಡೆದಿವೆ. ಉತ್ಸವದ ಕೊನೆಯ ದಿನ ಅಂದರೆ, ಡಿ. 27 ರಂದು ಸಂಜೆ ದೇವರು ಸ್ನಾನಕ್ಕೆ ಹೊರಡುವ ಸಂದರ್ಭದಲ್ಲಿ ಒಂದು ಜನಾಂಗಕ್ಕೆ ಸೇರಿದ ಹಲವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಆಗಮಿಸಿದ್ದಾರೆ. ಇದಕ್ಕೆ ದೇವಸ್ಥಾನ ಆಡಳಿತ ಮಂಡಳಿ ಸದಸ್ಯರು ಹಾಗೂ ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭ ಎರಡೂ ಗುಂಪುಗಳ ಮಧ್ಯೆ ತೀವ್ರ ಮಾತಿನ ಚಕಮಕಿ ನಡೆದಿದೆ.

ದೇವರ ಮೂರ್ತಿ ಹೊತ್ತು ಜಳಕಕ್ಕೆ ಹೊರಟಿದ್ದ ಅರ್ಚಕ ವೃಂದ ಈ ಘಟನೆಯಿಂದ ಬೇಸರಗೊಂಡು ಉತ್ಸವ ಮೂರ್ತಿಯನ್ನ ಕೆಳಗಿಳಿಸಿದ್ದಾರೆ. ಮಾತಿನ ಚಕಮಕಿ ನಡೆಯುತ್ತಿದ್ದ ಸಂದರ್ಭ ವ್ಯಕ್ತಿಯೊಬ್ಬ ಮಾರಕಾಸ್ತ್ರ ತೋರಿಸಿದ್ದು, ಮತ್ತಷ್ಟು ಕೆರಳುವಂತೆ ಮಾಡಿದೆ. ಕೊನೆಗೆ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ. ಮಧ್ಯರಾತ್ರಿ 12 ಕಳೆದರೂ ಎರಡೂ ಕಡೆಯವರು ಪಟ್ಟು ಬಿಡಲಿಲ್ಲ. ಹಾಗಾಗಿ ವಿವಾದ ಇತ್ಯರ್ಥವಾಗಿಲ್ಲ.

ಧಾರ್ಮಿಕ ಉಡುಪನ್ನು ಧರಿಸಿ ತೆರಳಲು ಅವಕಾಶ ನೀಡಲಿಲ್ಲ ಎಂಬ ವಿಚಾರ ಸಾಮಾಜಿಕ ಜಾಲತಾಣದಲ್ಲಿ ಕಾಳ್ಗಿಚ್ಚಿನಂತೆ ಹಬ್ಬಿದೆ. ತಮ್ಮ ಜನಾಂಗದ ಉಡುಪಿಗೆ ವಿರೋಧ ವ್ಯಕ್ತಪಡಿಸಿದರು ಎಂದು ಆ ಜನಾಂಗದ ಕೆಲವರು ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. ದೇವಸ್ಥಾನಕ್ಕೆ ಆ ಜನಾಂಗದ ಸಾವಿರಾರು ಮಂದಿ ಸಾಂಪ್ರದಾಯಿಕ ಉಡುಪಿನಲ್ಲಿ ಬೈಕ್ ಜಾಥಾ ತೆರಳಲು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ನಡೆಯುತ್ತದೆ. ಇದೇ ವೇಳೆ, ಇದರ ವಿರುದ್ಧ ಮತ್ತೊಂದು ಜನಾಂಗದ ಜನರೂ ಕೂಡ ದೇವಸ್ಥಾನಕ್ಕೆ ಸಾವಿರಾರು ಸಂಖ್ಯೆಯಲ್ಲಿ ತೆರಳಲು ಕರೆ ನೀಡುತ್ತಾರೆ.

ಜನಾಂಗಗಳ ಮಧ್ಯೆ ಘರ್ಷಣೆ ಸಂಭವಿಸುವುದನ್ನ ಅರಿತ ಜಿಲ್ಲಾಡಳಿತ ತಕ್ಷಣವೇ ಕಟ್ಟೆಮಾಡು ದೇವಸ್ಥಾನ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ 400ಕ್ಕೂ ಅಧಿಕ ಪೊಲಿಸರನ್ನ ನಿಯೋಜನೆ ಮಾಡಿದೆ. ಕಟ್ಟೆಮಾಡು ಗ್ರಾಮ ಪ್ರವೇಶಿಸುವ ಎಲ್ಲಾ ಮಾರ್ಗಗಳಲ್ಲೂ ನಾಕಬಂಧಿ ಹಾಕಲಾಗಿದೆ. ಯಾವುದೇ ಜಾಥಾ, ರ‍್ಯಾಲಿ, ಮೆರವಣಿಗೆ ಗ್ರಾಮ ಪ್ರವೇಶಿಸದಂತೆ ಎಚ್ಚರಿಕೆವಹಿಸಲಾಗಿದೆ.

Exit mobile version