Site icon Kannada News-suddikshana

40 ಸಾವಿರ ರೂ. ಲಂಚ ಪಡೆಯುವಾಗ ಇಒ ಜೀಪ್ ಚಾಲಕ ಲೋಕಾಯುಕ್ತ ಬಲೆಗೆ!

SUDDIKSHANA KANNADA NEWS/ DAVANAGERE/ DATE:25-03-2025

ದಾವಣಗೆರೆ: 40 ಸಾವಿರ ರೂಪಾಯಿ ಲಂಚ ಪಡೆಯುವಾಗ ಚನ್ನಗಿರಿ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯ ಜೀಪ್ ಚಾಲಕ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಚನ್ನಗಿರಿಯಲ್ಲಿ ನಡೆದಿದೆ.

ಚನ್ನಗಿರಿ ತಾಲೂಕು ಪಂಚಾಯಿತಿ ಇಒ ಬಿ. ಕೆ. ಉತ್ತಮ್ ಅವರ ಕಾರು ಚಾಲಕ ಶ್ಯಾಮ್ ಕುಮಾರ್ ಬಂಧಿತ ಆರೋಪಿ.

ಅಮಾನತಗೊಂಡಿದ್ದ ಗ್ರಂಥಾಲಯದ ಮೇಲ್ವಿಚಾರಕರನ್ನು ಕರ್ತವ್ಯಕ್ಕೆ ಮರು ನಿಯೋಜಿಸಲು 40 ಸಾವಿರ ರೂಪಾಯಿ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಬಂಧಿಸಿದ್ದಾರೆ.

ದಿನಗೂಲಿ ಆಧಾರದ ಮೇಲೆ ಕಾರು ಚಾಲಕನಾಗಿದ್ದ ಈತನು ಲಂಚದ ರೂಪದಲ್ಲಿ ಪಡೆದ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಬೆಳ್ಳಿಗನೂಡು ಗ್ರಾಮ ಪಂಚಾಯಿತಿ ಗ್ರಂಥಾಲಯ ಮೇಲ್ವಿಚಾರಕ ಶಫೀವುಲ್ಲಾ ಫೆಬ್ರವರಿಯಲ್ಲಿ ಸಸ್ಪೆಂಡ್ ಆಗಿದ್ದರು. ಕರ್ತವ್ಯಕ್ಕೆ ಮರು ನಿಯೋಜಿಸಲು 50 ಸಾವಿರ ರೂಪಾಯಿ ಲಂಚ ಕೇಳಿದ್ದ ಶ್ಯಾಮ್ ಕುಮಾರ್ ವಿರುದ್ಧ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಗೆ ದೂರು ಕೊಟ್ಟಿದ್ದರು.

ಚನ್ನಗಿರಿ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಲಂಚದ ರೂಪದಲ್ಲಿ 40 ಸಾವಿರ ರೂಪಾಯಿ ಅನ್ನು ಶ್ಯಾಮ್ ಕುಮಾರ್ ಪಡೆಯುವ ವೇಳೆ ದಾಳಿ ನಡೆಸಿ ಬಂಧಿಸಲಾಗಿದೆ ಎಂದು ಲೋಕಾಯುಕ್ತ ಎಸ್ಪಿ ಎಂ. ಎಸ್. ಕೌಲಾಪುರ ಮಾಹಿತಿ ನೀಡಿದ್ದಾರೆ.

Exit mobile version