Site icon Kannada News-suddikshana

ಉದ್ಯೋಗಾವಕಾಶ ಹೆಚ್ಚಿಸಲು ದಾವಣಗೆರೆಗೆ ಐಟಿ ಕಂಪನಿ ಕರೆತರಲು ಪ್ರಯತ್ನ: ಎಸ್. ಎಸ್. ಮಲ್ಲಿಕಾರ್ಜುನ್

S. S. Mallikarjun

SUDDIKSHANA KANNADA NEWS/ DAVANAGERE/DATE:15_08_2025

ದಾವಣಗೆರೆ: ಸ್ವಾತಂತ್ರ್ಯವು ನಮ್ಮ ಹೊಣೆಗಾರಿಕೆ, ದೇಶದ ಏಕತೆ, ಶಾಂತಿ, ಪ್ರಗತಿ ಜೊತೆಗೆ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಮತ್ತು ಕ್ರೀಡೆ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ವಿಶ್ವದ ಗಮನ ಸೆಳೆಯುತ್ತಿದ್ದೇವೆ. ಆದರೆ ಭ್ರಷ್ಟಾಚಾರ, ಅಸಮಾನತೆ, ಪರಿಸರ ಮಾಲಿನ್ಯ, ನಿರುದ್ಯೋಗ ಮುಂತಾದ ಸವಾಲುಗಳನ್ನು ನಿವಾರಿಸಲು ಎಲ್ಲರೂ ಒಟ್ಟಾಗಿ ಶ್ರಮಿಸುವುದು ಇಂದಿನ ಅಗತ್ಯವಾಗಿದೆ ಎಂದು ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

READ ALSO THIS STORY: ಧರ್ಮಸ್ಥಳ ದೇಗುಲದ ಮಾಹಿತಿ ಕೇಂದ್ರದಿಂದ ಶವ ಹೂತಾಕಲು ಬರ್ತಿತ್ತು ಆದೇಶ, ಶೇ.90ರಷ್ಟು ಹೆಣ್ಮಕ್ಕಳ ಸಮಾಧಿ ಮಾಡಿದ್ದೇನೆ: ಮುಸುಕುಧಾರಿ ಸ್ಫೋಟಕ ಮಾಹಿತಿ!

ಅವರು ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ 79 ನೇ ಸ್ವಾತಂತ್ರ್ಯೋತ್ಸವದಲ್ಲಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಪಥ ಸಂಚಲನದಲ್ಲಿ ಗೌರವ ವಂದನೆ ಸ್ವೀಕರಿಸಿ ತಮ್ಮ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಮಾತನಾಡುತ್ತಾ ಹೇಳಿದರು.

ಅನೇಕ ಹೋರಾಟಗಾರರ ತ್ಯಾಗ, ಶೌರ್ಯ ಮತ್ತು ದೃಢಸಂಕಲ್ಪದ ಫಲವಾಗಿ, ನಮ್ಮ ದೇಶವು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿಯಾಯಿತು. ಮಹಾತ್ಮ ಗಾಂಧೀಜಿ, ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್, ಸರೋಜಿನಿ ನಾಯ್ಡು, ಲಾಲಾ ಲಜಪತ್ ರಾಯ್, ಟಿಪ್ಪು ಸುಲ್ತಾನ್, ಕಿತ್ತೂರು ರಾಣಿ ಚೆನ್ನಮ್ಮ ಸೇರಿದಂತೆ ಅನೇಕ ಹೋರಾಟಗಾರರ ಅಮರ ತ್ಯಾಗವನ್ನು ನೆನಪಿಸಿಕೊಳ್ಳಬೇಕು ಎಂದರು.

ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ದಾವಣಗೆರೆಯ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದಿರಕುಂದಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಹದಡಿ ನಿಂಗಪ್ಪ, ಮಾಗಾನಹಳ್ಳಿ ಹನುಮಂತಪ್ಪ ಇವರುಗಳು ಅಂದು ಬ್ರಿಟೀಷರ ಗುಂಡಿಗೆ ಪ್ರಾಣಾರ್ಪಣೆ ಮಾಡಿ ಹುತಾತ್ಮರಾಗಿದ್ದನ್ನು ನಾವಿಂದು ನೆನಪಿಸಿಕೊಳ್ಳುತ್ತಾ, ಅವರಿಗೂ ಸಹ ನಾವೆಲ್ಲರೂ ಗೌರವ ನಮನಗಳನ್ನು ಸಲ್ಲಿಸುವ ಜೊತೆಗೆ ನಮ್ಮ ಸಂಸ್ಕೃತಿ, ಭಾಷೆ, ಪರಂಪರೆಗಳನ್ನು ಕಾಪಾಡಿಕೊಂಡು, ನವೀನತೆ ಮತ್ತು ಅಭಿವೃದ್ಧಿಯತ್ತ ಸಾಗೋಣ ಎಂದರು.

ನಮ್ಮ ಸರ್ಕಾರ ಅಧಿಕಾರವಹಿಸಿಕೊಂಡ ನಂತರ ಆರ್ಥಿಕವಾಗಿ ಬಸವಳೆದು ಹೋಗಿದ್ದ ರಾಜ್ಯದ ಜನತೆಗೆ ಆರ್ಥಿಕ ಶಕ್ತಿಯನ್ನು ತುಂಬಬೇಕೆಂಬ ಉದ್ದೇಶದಿಂದ ನುಡಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸಿದೆ. ಇದಕ್ಕಾಗಿ ರೂ.2346 ಕೋಟಿಯಷ್ಟು ಹಣವನ್ನು ಗ್ಯಾರಂಟಿ ಯೋಜನೆಗಳು ಜಾರಿಯಾದಾಗಿನಿಂದ ಜಿಲ್ಲೆಯ ಜನರಿಗಾಗಿ ಖರ್ಚು ಮಾಡಲಾಗಿದೆ ಎಂದು ಹೇಳಿದರು.

ಈ ವರ್ಷ ಮುಂಗಾರು ಮಳೆ ಬಹಳ ಆಶಾದಾಯಕವಾಗಿದೆ. ರೈತರಿಗೆ ಬೇಕಾದ ಬಿತ್ತನೆ ಬೀಜ, ರಸಗೊಬ್ಬರ ವಿತರಣೆ ಮಾಡಲಾಗಿದೆ. ಈ ವರ್ಷ ತೋಟಗಾರಿಕೆ ಇಲಾಖೆಯಿಂದ ವಿವಿಧ ಯೋಜನೆಗಳ ಮೂಲಕ ಜಿಲ್ಲೆಯ ತೋಟಗಾರಿಕೆ ಅಭಿವೃದ್ದಿಗೆ ರೂ.49.98 ಕೋಟಿ ಅನುದಾನ ನೀಡಲಾಗಿದೆ. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಎಲ್ಲಾ ವರ್ಗದ ರೈತರಿಗೆ ಶೇ 90 ರಷ್ಟು ಸಹಾಯಧನವನ್ನು ಒದಗಿಸುವುದರ ಜೊತೆಗೆ 7 ವರ್ಷಗಳ ಹಿಂದೆ ಹನಿ ನೀರಾವರಿಗೆ ಸಹಾಯಧನ ಪಡೆದಿದ್ದಲ್ಲಿ ಅದೇ ಸರ್ವೆ ನಂಬರ್ ಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಲಾಗಿದೆ. ಮತ್ತು ರಾಜ್ಯದ ಜೇನುತುಪ್ಪಕ್ಕೆ “ಝೇಂಕಾರ” ಹೆಸರಿನ ಬ್ರ್ಯಾಂಡ್ ನೀಡಲಾಗಿದೆ ಎಂದು ವಿವರಿಸಿದರು.

ಕಂದಾಯ ಇಲಾಖೆಯಿಂದ ಕಂದಾಯ ಗ್ರಾಮವನ್ನಾಗಿ ಪರಿವರ್ತಿಸಿ 25581 ನಿವಾಸಿಗಳಿಗೆ ಹಕ್ಕುಪತ್ರ ವಿತರಿಸುವ ಸಂಕಲ್ಪ ಮಾಡಲಾಗಿದೆ. ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 2.11 ಲಕ್ಷ ಕಡತಗಳನ್ನು ಡಿಜಟಲೀಕರಣ ಮಾಡಿ 32302 ಪುಟಗಳ ದಾಖಲೆ ವಿತರಿಸಿ ರಾಜ್ಯದಲ್ಲಿಯೇ ದಾವಣಗೆರೆ ಮೊದಲ ಸ್ಥಾನದಲ್ಲಿದೆ ಎಂದು ಮಾಹಿತಿ ನೀಡಿದರು.

ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 100 ಗ್ರಾಮಗಳಲ್ಲಿ 24 ಗಂಟೆ ನೀರು ಪೂರೈಕೆ ಮಾಡಲು ಉದ್ದೇಶಿಸಿ ಈಗಾಗಲೇ 50 ಗ್ರಾಮಗಳಲ್ಲಿ 24*7 ನೀರು ಪೂರೈಸಲಾಗುತ್ತಿದೆ. ಜಿಲ್ಲೆಯಲ್ಲಿ 1771 ಅಂಗನವಾಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದ 407 ಕೇಂದ್ರಗಳಿಗೆ ನಿವೇಶನ ಒದಗಿಸಿ ಮುಂದಿನ ದಿನಗಳಲ್ಲಿ ಬಾಡಿಗೆ ಮುಕ್ತ ಅಂಗನವಾಡಿ ಕೇಂದ್ರಗಳ ಜಿಲ್ಲೆ ಎಂದು ಘೋಷಣೆ ಮಾಡಲಾಗುತ್ತದೆ ಎಂದರು.

ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯ:

ಚಿಗಟೇರಿ ಆಸ್ಪತ್ರೆಯಲ್ಲಿ 400 ಹಾಸಿಗೆಯ ಕಟ್ಟಡ ನಿರ್ಮಿಸಲು ರೂ.260 ಕೋಟಿಗಳನ್ನು ಸರ್ಕಾರದಿಂದ ಮಂಜೂರು ಮಾಡಿಸಿ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಮತ್ತು ಎಸ್.ಎಸ್.ಎಲ್.ಸಿ. ಫಲಿತಾಂಶ ಮತ್ತು ಪಿಯುಸಿ ಫಲಿತಾಂಶ ಸುಧಾರಣೆಗೆ ಕಲಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮತ್ತು ಸ್ಪರ್ಧಾತ್ಮಕ ಪರೀಕ್ಷೆ ತೆಗೆದುಕೊಳ್ಳುವ ಬಡವರಿಗೆ ಅನುಕೂಲ ಕಲ್ಪಿಸಲು ಸಂಕಲ್ಪ ಕೇಂದ್ರವನ್ನು ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ದಾವಣಗೆರೆಗೆ ಸಾಫ್ಟ್‍ವೇರ್ ಕಂಪನಿಗಳನ್ನು ಆಹ್ವಾನಿಸಿ ಉದ್ಯೋಗ ನೀಡಲು ವಿಷನ್ ಗ್ರೂಪ್ ರಚಿಸಿ ಈ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ ಎಂದರು
.
ಮಹಾನಗರ ಪಾಲಿಕೆಯಿಂದ ಪಿ.ಬಿ.ರಸ್ತೆಯಿಂದ ಬಸಾಪುರ ರಸ್ತೆವರೆಗೆ ರಾಜಕಾಲುವೆ ಎತ್ತರಿಸುವುದು ಮತ್ತು ರಿಂಗ್ ರಸ್ತೆ ಕಾಮಗಾರಿಯನ್ನು ರೂ.129 ಕೋಟಿ ಮೊತ್ತದಲ್ಲಿ ನಿರ್ಮಿಸಲು ಟೆಂಡರ್ ಹಂತದಲ್ಲಿದೆ. ಜಲಸಿರಿ ಯೋಜನೆಯಡಿ 24*7 ನೀರು ಪೂರೈಕೆಯನ್ನು ಈಗಾಗಲೇ 32 ವಲಯಗಳಲ್ಲಿ ಮಾಡಲಾಗುತ್ತಿದೆ. ತಿಂಗಳಾಂತ್ಯಕ್ಕೆ ಉಳಿದ 18 ವಲಯಗಳಲ್ಲಿ ನಿರಂತರ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತದೆ ಎಂದರು.

ಆಕರ್ಷಕ ಪಥ ಸಂಚಲನ: ಸ್ವಾತಂತ್ರ್ಯ ದಿನಾಚರಣೆಯ ಪಥ ಸಂಚಲನದಲ್ಲಿ ಪ್ರಶಾಂತ್ ಅವರು ಕವಾಯತು ಪಥ ಸಂಚಾಲಕರಾಗಿ ಕಾರ್ಯನಿರ್ವಹಿಸಿದರು. 30 ವಿವಿಧ ಘಟಕಗಳು ಭಾಗವಹಿಸಿದ್ದವು ಅದರಲ್ಲಿ ಸಶಸ್ತ್ರ ಮೀಸಲು ಪಡೆ, ನಗರ ಉಪವಿಭಾಗ ಪೊಲೀಸ್ ತಂಡ, ಸಿವಿಲ್ ಪೆÇಲೀಸ್, ಗೃಹ ರಕ್ಷಕದಳ, ಅರಣ್ಯ ಇಲಾಖೆ ತಂಡ, ಅಗ್ನಿ ಶಾಮಕ ದಳ, ಗೃಹರಕ್ಷಕ ಮಹಿಳಾ ದಳ, ಕಂದಾಯ ಇಲಾಖೆ, ಮಹಾನಗರ ಪಾಲಿಕೆ, ಕಂದಾಯ, ಡಿಆರ್‍ಎಮ್, ಜಿಎಫ್‍ಜಿ ಕಾಲೇಜ್, ಎವಿಕೆ, ಸಿದ್ದಗಂಗಾ ಶಾಲೆ ಸೇರಿದಂತೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳ ತಂಡ, ಪೆÇಲೀಸ್ ಬ್ಯಾಂಡ್ ತಂಡದಿಂದ ಆಕರ್ಷಕ ಪಥ ಸಂಚಲನ ನಡೆಸಲಾಯಿತು.

ಪಥ ಸಂಚಲನದಲ್ಲಿ ಭಾಗವಹಿಸಿದ ಎಸ್.ಎಸ್.ಎನ್‍ಪಿಎಸ್ ಶಾಲೆ ಉತ್ತಮ ಸಮವಸ್ತ್ರ ವಿಜೇತ ಶಾಲೆಯಾಗಿ ಗುರುತಿಸಿಲಾಯಿತು. ಈ ಬಾರಿಯ ಪಥ ಸಂಚಲನದಲ್ಲಿ ಮಹಾನಗರ ಪಾಲಿಕೆ, ಕಂದಾಯ ಇಲಾಖೆ ಮತ್ತು ಪಿ.ಎಸ್.ಇ.ಎಂ.ಆರ್ ತೋಳಹುಣಸೆ ಪೈಪ್ ಬ್ಯಾಂಡ್ ಜೂನಿಯರ್ ತಂಡಗಳು ವಿಶೇಷ ತಂಡಗಳಾಗಿ ಭಾಗವಹಿಸಿದ್ದವು.
ವಿದ್ಯಾರ್ಥಿಗಳಿಂದ ಆಕರ್ಷಕ ದೇಶಭಕ್ತಿ ಗೀತೆಗಳ ನೃತ್ಯ ರೂಪಕ; ವಿಶ್ವಚೇತನ ಶಾಲೆಯಿಂದ ಹಿಂದೂಸ್ತಾನ್ ನೃತ್ಯವನ್ನು, ಲಲಿತಾ ಇಂಟರ್ ನ್ಯಾಷನಲ್ ಶಾಲೆಯಿಂದ ಇವರಿಂದ ಗಾಂಧಿ ಗೋಖಲೆ ಶಾಂತಿ ಇಂಡಿಯಾ, ಗೋಲ್ಡನ್ ಪಬ್ಲಿಕ್ ಶಾಲೆಯಿಂದ ಸಂಕೋಲೆಯಿಂದ ಸ್ವಾತಂತ್ರ್ಯದೆಡೆಗೆ ರೂಪಕ ಪ್ರದರ್ಶನವನ್ನು ಸಾವಿರಾರು ವಿದ್ಯಾರ್ಥಿಗಳಿಂದ ಪ್ರದರ್ಶನ ಮಾಡಲ್ಪಟ್ಟಿತು. ಪಿಎಸ್‍ಎಸ್‍ಎಂಆರ್ ಶಾಲೆಯ ಮಕ್ಕಳು ವಿಶೇಷ ಬ್ಯಾಂಡ್ ವಾದ್ಯವನ್ನು ಪ್ರಸ್ತುತಪಡಿಸಿದರು.

ಬಹುಮಾನ ಪಡೆದಂತಹ ಶಾಲೆಗಳ ವಿವರ: ಗೋಲ್ಡನ್ ಪಬ್ಲಿಕ್ ಶಾಲೆ ಪ್ರಥಮ ಬಹುಮಾನ, ವಿಶ್ವಚೇತನ ಶಾಲೆ ದ್ವಿತೀಯ ಬಹುಮಾನ, ಲಲಿತಾ ಇಂಟರ್ ನ್ಯಾಷನಲ್ ಶಾಲೆ ತೃತೀಯ ಬಹುಮಾನ ಪಡೆಯಲಾಯಿತು. ಹಾಗೂ ಪಿಎಸ್‍ಎಸ್‍ಎಂಆರ್ ಶಾಲೆಯ ಮಕ್ಕಳು ವಿಶೇಷ ಬ್ಯಾಂಡ್ ವಾದ್ಯವನ್ನು ನುಡಿಸಿದ ಪುಟಾಣಿಗಳಿಗೆ ವಿಶೇಷ ಬಹುಮಾನ ನೀಡಲಾಯಿತು.

ಡ್ರೋನ್ ಮೂಲಕ ರೈತರು ತಮ್ಮ ವಿವಿಧ ಬೆಳೆಗಳಿಗೆ ನ್ಯಾನೋ ಗೊಬ್ಬರ, ಔಷಧಿ ಸಿಂಪಡಿಸಲು ಸರಳ ಮತ್ತು ಕಡಿಮೆ ವೆಚ್ಚದಲ್ಲಿ ಬಳಕೆ ಮಾಡುವ ಬಗ್ಗೆ ಇಂಜಿನಿಯರ್ ಹೇಮಂತ್ ಡ್ರೋನ್ ಪ್ರದರ್ಶನ ಮಾಡಿದರು.

ದಾವಣಗೆರೆ ಲೋಕಸಭಾ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್, ಪೊಲೀಸ್ ಮಹಾನಿರೀಕ್ಷಕ ಡಾ. ರವಿಕಾಂತೇಗೌಡ, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ. ಜಿ.ಎಂ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ್ ವಿಠ್ಠಲ್ ರಾವ್, ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ದೂಡಾ ಅಧ್ಯಕ್ಷ ದಿನೇಶ್ ಕೆ ಶೆಟ್ಟಿ, ಗ್ಯಾರಂಟಿ ಯೋಜನೆಗಳ ಜಿಲ್ಲಾ ಅನುಷ್ಟಾನ ಸಮಿತಿ ಅಧ್ಯಕ್ಷ ಶಾಮನೂರು ಟಿ.ಬಸವರಾಜ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು, ಸಾರ್ವಜನಿಕರು ಭಾಗವಹಿಸಿದ್ದರು.

Exit mobile version