Site icon Kannada News-suddikshana

ಅಕ್ಟೋಬರ್ 7 ರಿಂದ ರಾಜ್ಯವ್ಯಾಪ್ತಿ ಇ-ಖಾತಾ ಕಡ್ಡಾಯ

(E-Asset) ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯ ಸ್ಥಿರಾಸ್ತಿ ದಸ್ತಾವೇಜು ನೋಂದಣಿಗೆ ಇ-ಸ್ವತ್ತು ತಂತ್ರಾಂಶದಿಂದ ಪಡೆದ ಇ-ಖಾತಾವನ್ನು ಕಡ್ಡಾಯ ಮಾಡುವ ಜೊತೆಗೆ ರಾಜ್ಯ ವ್ಯಾಪ್ತಿ ವಿಸ್ತರಿಸಿ ಕಂದಾಯ ಇಲಾಖೆ ಆದೇಶಿಸಿದೆ.

ಸೆ.9ರಿಂದ ಚಾಮರಾಜನಗರ, ಚಿತ್ರದುರ್ಗ, ಬಾಗಲಕೋಟೆ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಜಾರಿಗೆ ತರಲಾಗಿತ್ತು. ಸೆ. 23 ರಿಂದ ಬಳ್ಳಾರಿ, ಬೀದರ್, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಹಾವೇರಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲೂ ಜಾರಿಗೆ ತರಲಾಗಿದೆ. ಉಳಿದ 18 ಜಿಲ್ಲೆಗಳ ನಗರಸಭೆ, ಪುರಸಭೆ ಮತ್ತು ಪಪಂ ವ್ಯಾಪ್ತಿಯ ಆಸ್ತಿಗಳಿಗೂ ಇನ್ಮುಂದೆ ಇ-ಖಾತಾ ಕಡ್ಡಾಯ.

ಅ 7ರಿಂದ ರಾಜ್ಯಾದ್ಯಂತ ಇ-ಆಸ್ತಿ ಖಾತಾ ತಂತ್ರಾಂಶ ವ್ಯವಸ್ಥೆ ಜಾರಿಯಾಗಲಿದೆ. ನಗರಾಭಿವೃದ್ಧಿ ಇಲಾಖೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆಸ್ತಿಗಳ ಹಕ್ಕು ವರ್ಗಾವಣೆಗೆ ಸಂಬಂಧಿಸಿದಂತೆ ಇ-ಆಸ್ತಿ ತಂತ್ರಾಂಶ ಮತ್ತು ಕಾವೇರಿ ತಂತ್ರಾಂಶವನ್ನು ಸಂಯೋಜನೆ ಮಾಡಲು ಸಮ್ಮತಿ ನೀಡಿದೆ.

ತಪ್ಪಿದರೆ ಕಾನೂನು ಕ್ರಮ:
ಇ-ಸ್ವತ್ತು ತಂತ್ರಾಂಶ ಮತ್ತು ಕಾವೇರಿ 2.0 ಸಾಫ್ಟ್ ವೇರ್ ಸಂಯೋಜನೆ ಮಾಡಲಾಗಿದೆ. ಆದ್ದರಿಂದ ಜನರು ತಮ್ಮ ಆಸ್ತಿಗಳಿಗೆ ಇ-ಸ್ವತ್ತಿನಲ್ಲಿ ಖಾತಾ ಪಡೆದ ಮೇಲಷ್ಟೇ ದಸ್ತಾವೇಜು ನೋಂದಣಿ ಪ್ರಕ್ರಿಯೆ ನಡೆಯಲಿದೆ. ಕೈಬರಹ ಅಥವಾ ಭೌತಿಕ ಖಾತಾ ಪಡೆದು ನೋಂದಣಿ ನಡೆಸಿದರೆ ಅಂತಹ ಸಬ್ ರಿಜಿಸ್ಟಾರ್ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಕಂದಾಯ ಇಲಾಖೆ ಎಚ್ಚರಿಕೆ ನೀಡಿದೆ.

ಇದರ ಉದ್ದೇಶವೇನು?;
ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಸುವುದನ್ನು ತಡೆಯುವ ಉದ್ದೇಶಕ್ಕೆ ಸರ್ಕಾರದ ವೆಬ್ ಸೈಟ್ ಗಳಿಂದ ಮಾಹಿತಿ ಪಡೆದು ಆಸ್ತಿ ನೋಂದಣಿ ಪ್ರಕ್ರಿಯೆ ಕಡ್ಡಾಯ ಮಾಡಲಾಗುತ್ತದೆ.

Exit mobile version