SUDDIKSHANA KANNADA NEWS/DAVANAGERE/DATE:05_01_2026
ಬೆಂಗಳೂರು: ಇ-ಸ್ವತ್ತು 2.0 ತಂತ್ರಾಂಶದಲ್ಲಿ ನಮೂನೆ-11ಬಿ ಖಾತೆಗಳನ್ನು ಎರಡು ವಾರಗಳ ಕಾಲಾವಧಿಯಲ್ಲಿ ನಮೂನೆ-11ಎ ಖಾತೆಗಳನ್ನಾಗಿ ಪರಿವರ್ತನೆ ಮಾಡಿಕೊಳ್ಳಲು ಮತ್ತು ಹೊಸ ಬಡಾವಣೆ ಮತ್ತು ಬಹುಮಹಡಿ (ಅಪಾರ್ಟ್‌ಮೆಂಟ್) ಕಟ್ಟಡಗಳಿಗೆ ಅರ್ಜಿಗಳನ್ನು ಸಲ್ಲಿಸಲು ಮುಂದಿನ ಒಂದು ತಿಂಗಳೊಳಗೆ ಅವಕಾಶ ಕಲ್ಪಿಸಲಾಗುವುದು.
ಇ-ಸ್ವತ್ತು ಪ್ರಕ್ರಿಯೆ ಹಾಗೂ ತಂತ್ರಾಂಶವನ್ನು ಹೆಚ್ಚು ನಾಗರಿಕಸ್ನೇಹಿಯಾಗಿ ಅನುಷ್ಠಾನಗೊಳಿಸಲು ಇಲಾಖೆ ಬದ್ಧವಾಗಿದ್ದು, ಅದರನ್ವಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಈವರೆಗೆ ಆನ್‌ಲೈನ್ ಮೂಲಕ 21,429 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅನುಮೋದನೆಗಾಗಿ ವಿವಿಧ ಹಂತದಲ್ಲಿ ಬಾಕಿ ಇರುತ್ತದೆ.
ಕೆಲವೊಂದು ಅರ್ಜಿಗಳನ್ನು ಸಲ್ಲಿಸುವಾಗ ತಾಂತ್ರಿಕ ಸಮಸ್ಯೆಗಳು ಉಂಟಾಗುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಅವುಗಳನ್ನು ಸರಿಪಡಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಅನುಕೂಲವಾಗುವಂತೆ ಇ-ಸ್ವತ್ತು ತಂತ್ರಾಂಶದಲ್ಲಿರುವ
ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಿ, ಮತ್ತಷ್ಟು ಸರಳೀಕರಿಸಲು ಕ್ರಮವಹಿಸಲಾಗುತ್ತಿದೆ. ಈ ಬಗ್ಗೆ ಸಾರ್ವಜನಿಕರು ಆತಂಕ ಪಡಬೇಕಿಲ್ಲ.
ಸಾರ್ವಜನಿಕರಿಂದ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಅನುಮೋದನೆ ಮಾಡುವ ಪ್ರಕ್ರಿಯೆಯು ಜನವರಿ 1 ರಿಂದ ಆರಂಭಗೊಂಡಿದ್ದು, ಸಾರ್ವಜನಿಕರು ಇ-ಸ್ವತ್ತು 2.0 ತಂತ್ರಾಂಶದ ಆನ್-ಲೈನ್ ಪೋರ್ಟಲ್ ಮೂಲಕ ತೆರಿಗೆ ಮತ್ತು ಪ್ರಿಂಟಿಂಗ್
ಶುಲ್ಕವನ್ನು ಪಾವತಿಸಿ, ಇ-ಖಾತಾವನ್ನು ಡೌನ್-ಲೋಡ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಇ-ಸ್ವತ್ತು ಅರ್ಜಿ ಸಲ್ಲಿಸಲು ಯಾವುದೇ ಕಾಲಮಿತಿಯನ್ನು ನಿಗದಿಪಡಿಸಿಲ್ಲ. ಸಾರ್ವಜನಿಕರು ಗ್ರಾಮ ಪಂಚಾಯಿತಿಗೆ ಭೇಟಿ ನೀಡದೆ, ತಾವಿರುವಲ್ಲಿಯೇ ತಮ್ಮ ಆಸ್ತಿಗೆ ಸಂಬಂಧಿಸಿದ ನಮೂನೆಗಳನ್ನು ಇ-ಸ್ವತ್ತು ತಂತ್ರಾಂಶದ ಮೂಲಕ ಪಡೆಯಲು
ಅವಕಾಶ ನೀಡಲಾಗಿದೆ. ಜನರ ಸಮಸ್ಯೆ ಹಾಗೂ ಸಂದೇಹಗಳನ್ನು ಬಗೆಹರಿಸಲು ಸರ್ಕಾರ ಬದ್ಧವಾಗಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಬೇಕು.
ಇ-ಸ್ವತ್ತು 2.0 ರಡಿ ಅರ್ಜಿ ಸಲ್ಲಿಸಲು ಸಂಬಂಧಿತ ದಾಖಲಾತಿ, ಪ್ರಕ್ರಿಯೆ ಅಥವಾ ತಂತ್ರಾಂಶದ ಬಳಕೆಯ ಕುರಿತು ಸಂದೇಹಗಳಿದ್ದಲ್ಲಿ ತಮ್ಮ ಜಿಲ್ಲಾ ಸಹಾಯವಾಣಿಗೆ ಕರೆ ಮಾಡಬಹುದಾಗಿದೆ. ಜಿಲ್ಲಾ ಸಹಾಯವಾಣಿಗಳ ಸಂಖ್ಯೆಯನ್ನು ಇ-ಸ್ವತ್ತು ಪೋರ್ಟಲ್ https://eswathu.karnataka.gov.in/Login.aspx ಹಾಗೂ ಪಂಚತಂತ್ರ ಪೋರ್ಟಲ್ https://panchatantra.karnataka.gov.in ನಲ್ಲಿಯೂ ಪಡೆದುಕೊಳ್ಳಬಹುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.





Leave a comment