Site icon Kannada News-suddikshana

ಧರ್ಮಸ್ಥಳದ ಬಗ್ಗೆಅಪಪ್ರಚಾರ ಶುರುವಾಗಿದ್ದು ಯಾವಾಗಿನಿಂದ? ನಮ್ಮ ಕುಟುಂಬದ ವಿರುದ್ಧ ಷಡ್ಯಂತ್ರ ಎಂದಿದ್ಯಾಕೆ ಡಾ. ವೀರೇಂದ್ರ ಹೆಗ್ಗಡೆ?

ಧರ್ಮಸ್ಥಳ

SUDDIKSHANA KANNADA NEWS/ DAVANAGERE/DATE:20_08_2025

ಧರ್ಮಸ್ಥಳ: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಿದ್ದೇನೆಂಬ ಮುಸುಕುಧಾರಿ ಆರೋಪದ ಬಳಿಕ ದೇಶ ಮಾತ್ರವಲ್ಲ, ವಿಶ್ವಾದ್ಯಂತ ದೊಡ್ಡ ಸದ್ದು ಮಾಡಿದೆ. ಎಸ್ ಐ ಟಿ ತನಿಖೆ ಚುರುಕುಗೊಳಿಸಿದೆ. ಸದ್ಯಕ್ಕೆ ಉತ್ಖನನ ಕಾರ್ಯ ನಿಲ್ಲಿಸಲಾಗಿದೆ. ಬುರುಡೆ, ಮೂಳೆಗಳನ್ನು ಫೊರೆನ್ಸಿಕ್ ರಿಪೋರ್ಟ್ ಗೆ ಕಳುಹಿಸಿದ್ದು, ಇದು ಬಂದ ಬಳಿಕ ತನಿಖೆ ಮತ್ತಷ್ಟು ಚುರುಕು ಪಡೆಯಲಿದೆ. ಈ ನಡುವೆ ಎಸ್ಐಟಿ ಮುಂದೆ ಮೂರ್ನಾಲ್ಕು ಮಂದಿ ಬಂದಿದ್ದು ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

READ ALSO THIS STORY: ಧರ್ಮಸ್ಥಳದಲ್ಲಿ ಎಲ್ಲವೂ ಗೊಂದಲಮಯ: ಸುಳ್ಳಿನ ಜಾಲದಿಂದ ದೇವಾಲಯದ ಪರಂಪರೆಗೆ ಧಕ್ಕೆ ತರುವ ಹುನ್ನಾರ!

ಆರೋಪ, ಪ್ರತ್ಯಾರೋಪ, ಧರ್ಮಸ್ಥಳ ಪರ ಪ್ರತಿಭಟನೆಗಳು ಶುರುವಾಗಿವೆ. ಈ ನಡುವೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೇ ಪಿಟಿಐ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ.

ಕಳೆದ ಹದಿನಾಲ್ಕು ವರ್ಷಗಳಿಂದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಲು ಕೆಲ ದುಷ್ಟ ಶಕ್ತಿಗಳು ಷಡ್ಯಂತ್ರ ರೂಪಿಸಿವೆ. ಸರಣಿ ಕೊಲೆ ಆರೋಪ ಮಾಡಿರುವುದು ಆಧಾರ ರಹಿತ. ನಮ್ಮ ಕುಟುಂಬವನ್ನು ಟಾರ್ಗೆಟ್ ಮಾಡಿ ಅವಹೇಳನ ಮಾಡಲಾಗುತ್ತಿದೆ. ಇದು ಬೇಸರ ತರಿಸಿದೆ. ನಮ್ಮ ಕುಟುಂಬ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.

ವಿದ್ಯಾರ್ಥಿನಿ ಸೌಜನ್ಯ ಸಾವಿಗೆ ನ್ಯಾಯ ಸಿಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ನಾವು ನ್ಯಾಯ ಒದಗಿಸಲು ಬದ್ಧ. ಆ ರೀತಿಯ ಸಾವು ಆದಾಗ ನಾವೇ ಪೊಲೀಸ್ ಇಲಾಖೆ ಮತ್ತು ಸರ್ಕಾರಕ್ಕೆ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು
ಎಂಬ ಒತ್ತಾಯ ಮಾಡಿದ್ದೇವೆ. ನಮ್ಮ ಕುಟುಂಬದ ಮೇಲೆ ಮಾಡಿರುವ ಎಲ್ಲಾ ಆರೋಪಗಳು ನಿರಾಧಾರ. ಅವರು ಆರೋಪ ಮಾಡಿರುವ ನಮ್ಮ ಕುಟುಂಬದ ಸದಸ್ಯರು ವಿದ್ಯಾಭ್ಯಾಸಕ್ಕಾಗಿ ವಿದೇಶದಲ್ಲಿ ಇದ್ದರು. ಅದಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ನೀಡಿದ್ದೇವೆ. ಆದರೂ ಆರೋಪ ಮಾಡುವುದು ಮುಂದುವರಿದಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಧರ್ಮಸ್ಥಳದಲ್ಲಿ ಶವಗಳನ್ನು ಹೂಳಲಾಗಿದೆ ಎಂಬ ಸಾಕ್ಷಿ ದೂರುದಾರನ ಆರೋಪಗಳಿಗೆ ಸಂಬಂಧಿಸಿದಂತೆ ಮಾತನಾಡಿದ ವೀರೇಂದ್ರ ಹೆಗಡೆ ಅವರು ಅದು ಅಸಾಧ್ಯ. ಧರ್ಮಸ್ಥಳದಲ್ಲಿ ಯಾರಾದರೂ ಮೃತಪಟ್ಟರೆ ಅವರಿಗೆ ಮೋಕ್ಷ ಸಿಗುತ್ತದೆ ಎಂಬ ನಂಬಿಕೆ ಇದೆ. ಯಾವುದೇ ಸಾವು ಸಂಭವಿಸಿದಾಗಲೂ ನಾವು ಪಂಚಾಯಿತಿಗೆ ಮಾಹಿತಿ ನೀಡಿದ್ದೇವೆ. ಅವರು ಎಲ್ಲಾ ನಿಯಮಗಳನ್ನು ಪಾಲಿಸಿ ಶವಗಳನ್ನು ಹೂಳುತ್ತಿದ್ದರು ಎಂದು ಹೇಳಿದ್ದಾರೆ.

ಎಸ್ಐಟಿ ತನಿಖೆ ನಡೆಸುತ್ತಿದೆ. ಸತ್ಯಾಂಶ ಹೊರ ಬರಲಿ. ಯಾರೇ ತಪ್ಪು ಮಾಡಿದ್ದರೂ ಶಿಕ್ಷೆಯಾಗುತ್ತದೆ. ಎಸ್ ಐಟಿ ತನಿಖೆ ಸ್ವಾಗತಿಸುತ್ತೇವೆ. ನಮಗೂ ಸತ್ಯ ಹೊರಬೇಕು ಎಂಬ ಅಪೇಕ್ಷೆ ಇದೆ. ಸುಳ್ಳು ಮತ್ತು ಆಧಾರ ರಹಿತ ಆರೋಪಗಳು ಮನಸ್ಸಿಗೆ ನೋವು ತಂದಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಿರುವ ರೀತಿ ನೋಡಿದರೆ ತಪ್ಪು ಮಾಹಿತಿ ಹಂಚಲಾಗುತ್ತದೆ. ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ತನಿಖೆಯಿಂದ ಸತ್ಯ ಹೊರ ಬರಲಿದೆ ಎಂದಿದ್ದಾರೆ. ತನಿಖೆಗೆ ಎಸ್ಐಟಿ ರಚಿಸಿದ್ದನ್ನು ನಾವು ಅದೇ ದಿನ ಸ್ವಾಗತ ಮಾಡಿದ್ದೇವೆ. ಸರ್ಕಾರ ಎಸ್ ಐಟಿ ರಚಿಸಿರುವುದು ಒಳ್ಳೆಯದು. ಸತ್ಯ ಹೊರ ಬರಬೇಕು. ಈಗ ಕೇಳಿ ಬಂದಿರುವ ಆರೋಪಗಳು ಹಾಗೇ ಉಳಿಯಬಾರದು. ಎಸ್ ಐ ಟಿ ತನಿಖೆ ಆದಷ್ಟು ಬೇಗ ಪೂರ್ಣಗೊಂಡು ವಿವಾದ ಬಗೆಹರಿಯಬೇಕು ಎಂಬ ಅಪೇಕ್ಷೆ ನಮ್ಮದು ಎಂದು ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ.

Exit mobile version