Site icon Kannada News-suddikshana

ಡಿಕೆ ಸುರೇಶ್‌ಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಫಿಕ್ಸ್‌?

ಬೆಂಗಳೂರು: ಲೋಕಸಭಾ ಚುನಾವಣೆಯ ನಂತರ ರಾಜ್ಯದಲ್ಲಿ ಮೂರು ಕ್ಷೇತ್ರಗಳಿಗೆ ಉಪಚುನಾವಣೆಯಲ್ಲೂ ಕಾಂಗ್ರೆಸ್‌ ಭರ್ಜರಿ ಗೆಲುವು ಕಂಡಿತ್ತು. ಇದೀಗ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್‌ ಮುಂದಾಗಿದೆ. ಕೆಪಿಸಿಸಿ ಅಧ್ಯಕ್ಷರ ಸ್ಥಾನಕ್ಕೆ ಕೈ ಪಾಳಯದಲ್ಲಿ ಹಲವು ಹೆಸರುಗಳು ಕೇಳಿ ಬರುತ್ತಿವೆ. ಈಗಾಗಲೇ ನೂತನ ಅಧ್ಯಕ್ಷರ ಆಯ್ಕೆಗೆ ಕಾಂಗ್ರೆಸ್‌ ಹೈಕಮಾಂಡ್‌ ಮುಂದಾಗಿದೆ.

ರಾಜ್ಯದಲ್ಲಿ ಉಪಚುನಾವಣೆಯ ಬಳಿಕ ರಾಜ್ಯ ಸಚಿವ ಸಂಪುಟ ಪುನರ್‌ ರಚನೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದ ಚರ್ಚೆ ಮತ್ತೆ ಮುನ್ನಲೆಗೆ ಬಂದಿದೆ. ಕೆಲವರು ಸಚಿವ ಸ್ಥಾನದ ಕಡೆಗೆ ಕಣ್ಣಿಟ್ಟಿದ್ದರೆ, ಮತ್ತೊಂದೆಡೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೂ ಪ್ರಬಲ ನಾಯಕರು ಹದ್ದಿನಕಣ್ಣಿಟ್ಟಿದ್ದಾರೆ. ಇತ್ತ ಅಧ್ಯಕ್ಷ ಸ್ಥಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಣ ಹಾಗೂ ಡಿ ಕೆ ಶಿವಕುಮಾರ್‌ ಅವರ ಬಣದಲ್ಲಿ ತೀವ್ರ ಪೈಪೋಟಿ ನಡೆಯುತ್ತಿದೆ. ಸಂಕ್ರಾಂತಿ ಹಬ್ಬದ ಬಳಿಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನೂತನ ಸಾರಥಿ ಆಯ್ಕೆಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸದ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿದ್ದು, ಡಿ ಕೆ ಶಿವಕುಮಾರ್‌ ಅವರು ಅಧ್ಯಕ್ಷ ಸ್ಥಾನವನ್ನ ಸ್ವೀಕಾರಿಸಿದ ಬಳಿಕ ಸಾಲು ಸಾಲು ಚುನಾವಣೆಯಲ್ಲೂ ಕಾಂಗ್ರೆಸ್‌ ಭರ್ಜರಿಯಾಗಿ ಗೆಲುವು ಕಂಡಿದೆ. ಈ ಹಿಂದೆ ಸರ್ಕಾರ ರಚನೆಯ ಸಂದರ್ಭದಲ್ಲಿ ಸಿಎಂ ಸ್ಥಾನದ ಮೇಲೆ ಕಣ್ಣೀಟ್ಟಿರುವ ಡಿ ಕೆ ಶಿವಕುಮಾರ್ ಮುಂದಿನ ಸಿಎಂ ಸ್ಥಾನದ ಬಗ್ಗೆಯೂ ‌ನಿಗಾ ಇಟ್ಟಿರುವುದರಿಂದ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಂಡಿಲ್ಲ. ಆದರೆ, ತಮ್ಮ ನಂತರ ಈ ಕೆಪಿಸಿಸಿ ಅಧಿಕಾರ ಬೇರೆಯವರಿಗೆ ಹೋದರೆ ಸಮಸ್ಯೆಯಾಗಬಹುದು ಎಂದು ಅವಲೋಕಿಸಿ, ತನ್ನ ಸಹೋದರ ಡಿ.ಕೆ.ಸುರೇಶ್‌ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನ ಕೊಡಿಸುವ ನಿಟ್ಟಿನಲ್ಲಿ ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆಯಾಗುತ್ತಿದೆ ಎಂದು ಹೇಳಲಾಗಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ನಡೆಸಿದ್ದ ಡಿ.ಕೆ.ಸುರೇಶ್‌ ಸೋತಿದ್ದರು. ಇದರಿಂದಾಗಿ ತಮ್ಮನಿಗೆ ರಾಜಕೀಯ ಭವಿಷ್ಯ ಕಟ್ಟಿಕೊಡಬೇಕು ಎಂದು ಡಿಕೆ ಶಿವಕುಮಾರ್‌ ಅವರು ಅವಿರತ ಶ್ರಮ ಪಡುತ್ತಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಸ್ಥಾನ ಸೇರಿ ಹಲವು ಜವಾಬ್ದಾರಿಗಳಿರುವುದರಿಂದ ಕೆಪಿಸಿಸಿ ಸ್ಥಾನ ನಿಭಾಯಿಸುವುದು ಕಷ್ಟವಾಗುತ್ತಿದೆ ಎಂದು ಹೇಳಲಾಗಿತ್ತು. ಹೀಗಾಗಿ ತಮ್ಮ ಸಹೋದರನಿಗೆ ಕೆಪಿಸಿಸಿ ಅಧ್ಯಕ್ಷಗಿರಿಯ ಪಟ್ಟ ಕಟ್ಟಲು ಡಿ ಕ ಶಿವಕುಮಾರ್‌ ಭರ್ಜರಿ ತಯಾರಿಯನ್ನ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Exit mobile version