SUDDIKSHANA KANNADA NEWS/DAVANAGERE/DATE:13_12_2025
ದಾವಣಗೆರೆ: ನಗರದ ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿನ ಪಾರ್ಕ್ ಅನ್ನು ದೂಡ ಅಧ್ಯಕ್ಷ ದಿನೇಶ್ ಶೆಟ್ಟಿ ಖಾಸಗಿ ವ್ಯಕ್ತಿಗೆ ಏಕ ನಿವೇಶನ ಅನುಮೋದನೆ ಮಾಡಿಕೊಟ್ಟಿದ್ದಾರೆ. ಕಂದಾಯ ಇಲಾಖೆ, ಸರ್ವೆ ಇಲಾಖೆ ಮತ್ತು ನಗರ ಯೋಜನೆ ಇಲಾಖೆ, ದೂಡಾ ಹಾಗೂ ಮಹಾನಗರ ಪಾಲಿಕೆಯನ್ನೊಳಗೊಂಡ ತನಿಖಾ ತಂಡ ರಚಿಸಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿರುವುದು ಕಾಡುಗಳ್ಳ ವೀರಪ್ಪನ್ ಗೆ ಕಾಡಿನ ರಕ್ಷಣೆ ಕೊಟ್ಟಂತೆ ಎಂದು ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಮಾಡಿರುವ ಅಕ್ರಮಕ್ಕೆ ಈ ರೀತಿಯ ನಾಟಕ ಆಡುವುದನ್ನು ಬಿಡಬೇಕು. ದಿನೇಶ್ ಕೆ. ಶೆಟ್ಟಿ ಏನು ಎಂಬುದು ದಾವಣಗೆರೆ ಜನರಿಗೆ ಗೊತ್ತಿದೆ ಎಂದು ಹೇಳಿದ್ದಾರೆ.
2025ರ ಡಿಸೆಂಬರ್ 11ರಂದು ಪ್ರಾಧಿಕಾರದ ಅಧಿಕಾರಿಗಳ ಸಭೆಯನ್ನು ಕರೆದು ದಿನೇಶ್ ಕೆ. ಶೆಟ್ಟಿ ಈ ತೀರ್ಮಾನ ತೆಗೆದುಕೊಳ್ಳುವುದಕ್ಕೆ ಏನು ಅಧಿಕಾರ ಇದೆ. ಇವರೇನೂ ಮುಖ್ಯಮಂತ್ರಿನಾ ಅಥವಾ ಜಿಲ್ಲಾ ಉಸ್ತುವರಿ ಸಚಿವರಾ, ರಾಜ್ಯಪಾಲರ? ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿಕೊಂಡ ಎನ್ನುವ ಹಾಗಿದೆ ದಿನೇಶ್ ಕೆ. ಶೆಟ್ಟಿ ಪರಿಸ್ಥಿತಿ. ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಖಾಸಗಿ ವ್ಯಕ್ತಿಗೆ ಮಹಾನಗರ ಪಾಲಿಕೆಯ ಪಾರ್ಕ್ ಅನ್ನು ಮಾಡಿಕೊಟ್ಟು ಆ ವ್ಯಕ್ತಿಯಿಂದ ಕೋಟ್ಯಾಂತರ ಹಣವನ್ನು ಕಿಕ್ ಬ್ಯಾಕ್ ಪಡೆದು ಭ್ರಷ್ಟಾಚಾರ ಮಾಡಿದ್ದು ಮೇಲ್ನೋಟಕ್ಕೆ ಕಾಣುತ್ತಿದೆ ಎಂದು ಆರೋಪಿಸಿದ್ದಾರೆ.
ಏಕನಿವೇಶನಕ್ಕೆ ಅನುಮೋದನೆ ನೀಡಿರುವ ಕುರಿತಂತೆ ಲೋಕಾಯುಕ್ತ ತನಿಖೆಯಾಗಬೇಕು ಭ್ರಷ್ಟಾಚಾರ ಮಾಡಿದಂತಹ ದೂಡ ಅಧ್ಯಕ್ಷ ಹಾಗೂ ದೂಡ ಆಯುಕ್ತರು, ಅಧಿಕಾರಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ದೂಡ ಅಧ್ಯಕ್ಷ ಹಾಗೂ ಆಯುಕ್ತರು ಏಕ ನಿವೇಶನವೇ ಬೇರೆ, ಪಾರ್ಕೇ ಬೇರೆ ಎಂದು ಈಗಾಗಲೇ ಹಲವಾರು ಬಾರಿ ಹೇಳಿದ್ದಾರೆ. ಆದರೆ ಮಹಾನಗರ ಪಾಲಿಕೆ ಹಾಗೂ ಪ್ರಾಧಿಕಾರದ ಅಭಿಯಂತರರು ಮತ್ತು ಸರ್ವೆಯವರು ಡಿಜಿಪಿಎಸ್ ನಂತ ನಿಖರವಾದ ಡಿಜಿಟಲ್ ಸರ್ವೆ ನೆಡಸಿ ಸ್ಥಳ ಪರಿಶೀಲನೆ ಮಾಡಿ ಅವರು ಕೊಟ್ಟ ವರದಿಯಂತೆ ಏಕ ನಿವೇಶನ ಹಾಗೂ ಪಾರ್ಕ್ ಒಂದೇ ಜಾಗ ಎಂದು ಅಧಿಕೃತವಾಗಿ ಈಗಾಗಲೇ ಪಾಲಿಕೆ ಆಯುಕ್ತರು ವರದಿ ಕೊಟ್ಟಿದ್ದಾರೆ. ಏಕ ನಿವೇಶನ ತೀರ್ಮಾನವನ್ನು ರದ್ದು ಮಾಡಲು ಕೋರಿದ್ದಾರೆ. ಹಾಗಿದ್ದರೂ ಇಲ್ಲಿಯವರೆಗೂ ಈ ವಿಷಯ ಕೋರ್ಟ್ ನಲ್ಲಿದೆ ಎಂದು ಹೇಳುತ್ತಾ ಬಂದಿದ್ದ ಇವರು, ದಿಢೀರ್ ಅಂತ ತನಿಖಾ ತಂಡ ರಚನೆ ಮಾಡಲು ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿರುವುದು ಏಕೆ? ಎಂದು ಪ್ರಶ್ನಿಸಿದ್ದಾರೆ.
ಅಂದರೆ ಇವರು ತಾವು ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಂತಾಗಿದೆ, ನಗರ ಪಾಲಿಕೆ ಪಾರ್ಕ್ ವಿಚಾರವಾಗಿ ಸಾರ್ವಜನಿಕರಿಗೆ ಗಮನ ಬೇರೆಯಡೆ ಸೆಳೆಯಲು ಈ ರೀತಿ ತನಿಖಾ ತಂಡದ ನಾಟಕ ಮಾಡಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಲು
ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಈಗಿನ ತನಿಖಾ ತಂಡದ ಎಲ್ಲಾ ಅಧಿಕಾರಿಗಳು ಜಿಲ್ಲಾ ಮಂತ್ರಿಗಳ ಅಡಿಯಲ್ಲಿ ಬರುತ್ತಾರೆ. ಸಚಿವರ ಒತ್ತಡಕ್ಕೆ ಮಣಿದು ಇವರಿಗೆ ಬೇಕಾದಂತ ವರದಿಯನ್ನು ತರಿಸಿಕೊಳ್ಳುತ್ತಾರೆ, ಅಂದರೆ ದಿನೇಶ್ ಶೆಟ್ಟಿ ಈಗ ಮಾಡಿರುವ ತಪ್ಪಿನಿಂದ ರಕ್ಷಿಸಿಕೊಳ್ಳಲು ತನಿಖಾ ತಂಡ ಎಂಬ ಗುರಾಣಿಯನ್ನು ಬಳಸುತ್ತಿದ್ದಾರೆ. ಆದ್ದರಿಂದ ದೂಡದಲ್ಲಿ ಇವರು ಮಾಡಿರುವ ಭ್ರಷ್ಟಾಚಾರದ ತನಿಖೆಯನ್ನು ಲೋಕಾಯುಕ್ತಕ್ಕೆ ವಹಿಸಬೇಕು. ಕೂಡಲೇ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈ ಕೂಡಲೇ ಪ್ರಾಧಿಕಾರದ ನಿಯಮಗಳನ್ನು ಉಲ್ಲಂಘನೆ ಮಾಡಿ ಭೂಮಾಫಿಯಾದವನಿಗೆ ನೀಡಿರುವ ಏಕ ನಿವೇಶನ ಅನುಮೋದನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸುತ್ತೇನೆ ಎಂದಿರುವ ಅವರು, ಮಹಾನಗರಪಾಲಿಕೆಯ ಮಾಲೀಕತ್ವದ
ಸಾರ್ವಜನಿಕ ಪಾರ್ಕ್ ಅನ್ನು ಉಳಿಸುವ ಎಲ್ಲಾ ರೀತಿಯ ಹೋರಾಟವನ್ನು ನಾವು ಮುಂದುವರಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.





Leave a comment