ದಾವಣಗೆರೆ: ಶಾಮನೂರು ಗ್ರಾಮದ ಬಿಜೆಪಿ ಮುಖಂಡ ಹಾಗೂ ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಚಂದ್ರಶೇಖರ್ ಸಂಕೊಳ್ ಸಾವಿನ ಪ್ರಕರಣ ಸಂಬಂಧ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಆತ್ಮಹತ್ಯೆಗೆ ಮುನ್ನ ಅಮಲು ಪದಾರ್ಥ ಸೇವಿಸಿದ್ದರೇ ಎಂಬ ಪ್ರಶ್ನೆಯೂ ಕಾಡುತ್ತಿದೆ.
ತಾಲೂಕಿನ ಬಿಸ್ಲೇರಿ ಗ್ರಾಮದ ಜಮೀನಿಲ್ಲಿ ಕಾರಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆತ್ಮಹತ್ಯೆಗೆ ಶರಣಾಗಿದ್ದ ಚಂದ್ರಶೇಖರ್ ಸಂಕೊಳ್ ಸಾವಿಗೆ ದಾವಣಗೆರೆಯೇ ಮಮ್ಮಲ ಮರುಗಿತ್ತು. ಈಗ ಪೊಲೀಸರು ಚಂದ್ರಶೇಖರ್ ಸಂಕೊಳ್ ಸಾವು ಹೇಗಾಯಿತು ಎಂಬ ಕುರಿತಂತೆ ತನಿಖೆ ಆರಂಭಿಸಿದ್ದು, ಡಿಎನ್ಎ ಪರೀಕ್ಷೆಗೆ ನಿರ್ಧರಿಸಿದ್ದಾರೆ.
READ ALSO THIS STORY: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟಿಕೆಟ್ ಕೇಳಲು ಎಲ್ಲರಿಗೂ ಹಕ್ಕಿದೆ, ಹೈಕಮಾಂಡ್ ತೀರ್ಮಾನಕ್ಕೆ ಬದ್ಧ: ಶಿವಗಂಗಾ ಬಸವರಾಜ್
ತನ್ನಿಬ್ಬರು ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದರು ಎಂಬ ವಿಚಾರ ತಿಳಿಯುತ್ತಿದ್ದಂತೆ ಆತ್ಮಹತ್ಯೆಗೆ ಶರಣಾಗಿದ್ದ ಚಂದ್ರಶೇಖರ್ ಸಂಕೊಳ್ ಅವರ ಮೃತದೇಹದ ಅವಶೇಷಗಳ ಖಚಿತತೆಗೆ ಡಿಎನ್ಎ ಪರೀಕ್ಷೆ ನಡೆಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ. ಹದಡಿ ಪೊಲೀಸರು ಪ್ರಕರಣದ ತನಿಖೆ ಬಿರುಸುಗೊಂಡಿದ್ದು, ವಿಧಿವಿಜ್ಞಾನ ಪ್ರಯೋಗಾಲಯ ಹಾಗೂ ಅಪರಾಧ ಸ್ಥಳ ಪರಿಶೀಲನಾ ತಂಡವು ನೀಡುವ ವರದಿ ಆಧರಿಸಿ ಮುಂದಿನ ಕ್ರಮಕ್ಕೆ ಪೊಲೀಸರು ಮುಂದಾಗಲಿದ್ದಾರೆ.
ಘಟನೆ ನಡೆದ ದಿನದಂದೇ ಘಟನಾ ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದರು. ಅಲ್ಲಿ ಸಿಕ್ಕ ವಸ್ತುಗಳನ್ನು ವಶಪಡಿಸಿಕೊಂಡು ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಅಮಲು ಪದಾರ್ಥ ಸೇವಿಸಿದ್ದರೇ?
ಪೊಲೀಸರಿಗೆ ಕಾಡುತ್ತಿರುವ ಪ್ರಶ್ನೆಗಳು ಹಲವು. ಅದರಲ್ಲಿ ಮುಖ್ಯವಾದದ್ದು ಇಂಥ ಕಠೋರ ನಿರ್ಧಾರಕ್ಕೆ ಬರುವ ಮುನ್ನ ಚಂದ್ರಶೇಖರ್ ಸಂಕೊಳ್ ಅವರು ಅಮಲು ಬರುವ ಪದಾರ್ಥ ಸೇವಿಸಿದ್ದರೇ? ವಿಪರೀತ ಮದ್ಯ ಸೇವನೆ ಮಾಡಿದ್ದರೇ?
ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಆಯಾಮಗಳಲ್ಲಿಯೂ ತನಿಖೆ ನಡೆಸಲು ವಿಧಿವಿಜ್ಞಾನ ಪ್ರಯೋಗಾಲಯದ ವರದಿ ನೋಡಿದ ಬಳಿಕ ನಿರ್ಧಾರ ತೆಗೆದುಕೊಳ್ಳಲಾಗುವುದು. ಜಮೀನಿನಲ್ಲಿ ಪತ್ತೆಯಾದ ಕಾರು ಸಂಪೂರ್ಣ ಸುಟ್ಟು ಭಸ್ಮವಾಗಿದೆ. ಅದೇ ರೀತಿಯಲ್ಲಿ ಮೃತದೇಹ ಕೂಡ ಸುಟ್ಟು ಕರಕಲಾಗಿತ್ತು. ಪೊಲೀಸರಿಗೆ ಮೂಳೆಗಳು ಸಿಕ್ಕಿದ್ದು, ಮೇಲ್ನೋಟಕ್ಕೆ ಇದು ಚಂದ್ರಶೇಖರ್ ಸಂಕೊಳ್ ಅವರ ಮೃತದೇಹ ಎಂಬುದು ಗಮನಕ್ಕೆ ಬಂದಿದ್ದರೂ ಡಿಎನ್ ಎ ಪರೀಕ್ಷಾ ವರದಿ ಬಳಿಕವೇ ಖಚಿತವಾಗಲಿದೆ. ಈ ಕಾರಣಕ್ಕಾಗಿ ಡಿಎನ್ಎ ಪರೀಕ್ಷೆ ಅನಿವಾರ್ಯ ಎಂಬುದು ಪೊಲೀಸರ ವಾದ.
ಖಚಿತತೆಗೆ ಬರಲು ಮಕ್ಕಳ ರಕ್ತದ ಮಾದರಿಗಳನ್ನು ಸಂಗ್ರಹಿಸಿ ಪ್ರಕ್ರಿಯೆ ಶುರು ಮಾಡಬೇಕಿದೆ. ಮೃತದೇಹದ ಅವಶೇಷಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಿಲ್ಲ. ಡಿಎನ್ಎ ಪರೀಕ್ಷಾ ವರದಿ ಬಂದ ಬಳಿಕ ಚಂದ್ರಶೇಖರ್ ಸಂಕೊಳ್ ಅವರದ್ದೇ ಮೃತದೇಹ ಎಂದು ಖಚಿತವಾದ ಬಳಿಕವಷ್ಟೇ ಕುಟುಂಬಕ್ಕೆ ಅವಶೇಷಗಳನ್ನು ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೋಟಿ ಕೋಟಿ ಸಾಲ:
ಇನ್ನು ಚಂದ್ರಶೇಖರ್ ಸಂಕೊಳ್ ಅವರು ರಾಜಕಾರಣದಲ್ಲಿ ಮಹತ್ವಾಕಾಂಕ್ಷೆ ಹೊಂದಿದ್ದರು. 2007ರಲ್ಲಿ ಮಹಾನಗರ ಪಾಲಿಕೆ ಸದಸ್ಯರಾಗಿದ್ದರು. ಆ ಬಳಿಕ ಚುನಾವಣೆಗಳಲ್ಲಿಯೂ ಗೆದ್ದಿರಲಿಲ್ಲ. ಶಾಸಕನಾಗಬೇಕೆಂಬ ಆಸೆ ಕಂಡಿದ್ದರು. ಕೋಟ್ಯಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಚಂದ್ರಶೇಖರ್ ಅವರಿಗೆ ಸಾಲಗಾರರ ಕಾಟ ಹಾಗೂ ಬ್ಯಾಂಕ್ ನಲ್ಲಿ ಪಡೆದಿದ್ದ ಲೋನ್ ಕಟ್ಟಲು ಆಗದೇ ದಿನವೂ ಒತ್ತಡದಲ್ಲಿ ಇರುತ್ತಿದ್ದರು. ಉದ್ಯಮದಲ್ಲಿ ಸಾಕಷ್ಟು ಆರ್ಥಿಕ ನಷ್ಟ, ರಾಜಕಾರಣದಲ್ಲಿ ಹಿನ್ನೆಡೆ,
ಅತಿಯಾದ ಸಾಲ ಚಂದ್ರಶೇಖರ್ ಅವರು ಮಾನಸಿಕವಾಗಿ ಕುಗ್ಗುವಂತೆ ಮಾಡಿತ್ತು. ಸ್ಥಿರಾಸ್ತಿ ಮಾರಾಟ ಮಾಡಿ ಸಾಲ ತೀರಿಸಲು ಮುಂದಾಗಿದ್ದ ಚಂದ್ರಶೇಖರ್ ಸಂಕೊಳ್ ಹಾಗೂ ಕುಟಂಬದವರಲ್ಲಿ ಆಗಾಗ್ಗೆ ಜಗಳಕ್ಕೆ ಕಾರಣವಾಗಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.





Leave a comment