SUDDIKSHANA KANNADA NEWS/ DAVANAGERE/ DATE:28-06-2024
ದಾವಣಗೆರೆ: ಕೇಂದ್ರ ಸರ್ಕಾರವು ಯುಜಿಸಿ – ನೆಟ್ ಪರೀಕ್ಷೆ ಅಕ್ರಮದ ಹೊಣೆ ಹೊರಬೇಕು. ಭವಿಷ್ಯ ಹೊತ್ತ ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುವುದನ್ನು ಬಿಡಬೇಕು. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಒತ್ತಾಯಿಸಿ ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ ಬಿ. ವಿ. ಶ್ರೀನಿವಾಸ್ ನೇತೃತ್ವದಲ್ಲಿ ದೆಹಲಿಯ ಜಂತರ್ ಮೆಂತರ್ ನಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಯುವ ಕಾಂಗ್ರೆಸ್ ನ ಪ್ರಮುಖರಾದ ಐವೈಸಿ ಕಾರ್ಯದರ್ಶಿ ಕೊಖೊ ಪಧಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಈ ವೇಳೆ ಮಾತನಾಡಿದ ಸೈಯದ್ ಖಾಲಿದ್ ಅಹ್ಮದ್ ಅವರು, ನೀಟ್ ಪಿಪಿ ಅನ್ನು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ರದ್ದುಪಡಿಸಲಾಗಿತ್ತು. ಕೆಲ ರಾಜ್ಯಗಳಲ್ಲಿ ಅಕ್ರಮವಾಗಿರುವುದು ಸಾಬೀತಾಗಿದೆ. ಈ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಜವಾಬ್ದಾರಿ ಹೊರಬೇಕು. ಇದರಲ್ಲಿ ಭಾಗಿಯಾದವರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಬಾರದು. ಸಿಬಿಐ ತನಿಖೆಗೆ ವಹಿಸಲಾಗಿದ್ದು, ತನಿಖೆಯಲ್ಲಿ ಹಸ್ತಕ್ಷೇಪ ಮಾಡಬಾರದು ಎಂದು ಒತ್ತಾಯಿಸಿದರು.
ಉಜ್ವಲ ಭವಿಷ್ಯದ ಕನಸು ಹೊತ್ತು ವಿದ್ಯಾರ್ಥಿಗಳು ಯುಜಿಸಿ – ನೆಟ್ ಪರೀಕ್ಷೆ ಬರೆಯಲು ಸಜ್ಜಾಗಿರುತ್ತಾರೆ. ಇಂಥ ಉನ್ನತ ಪರೀಕ್ಷೆಗಳಲ್ಲಿಯೇ ಅಕ್ರಮ ನಡೆದರೆ ಉಳಿದ ಪರೀಕ್ಷೆಗಳು ಹೇಗೆ ನಡೆಯುತ್ತವೆ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ ಎಂದು ತಿಳಿಸಿದರು.
ದೇಶದಲ್ಲಿ ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿಯು ಬಂದ ಮೇಲೆ ಶಿಕ್ಷಣ ವ್ಯವಸ್ಥೆ ಅಧೋಗತಿಗೆ ಹೋಗಿದೆ ಎಂಬುದಕ್ಕೆ ಈ ಪ್ರಕರಣ ಉತ್ತಮ ಸಾಕ್ಷಿಯಾಗಿದೆ. ಇಂಥ ಪ್ರಕರಣ ನಡೆಯುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಇದೊಂದು ದುರದೃಷ್ಟಕರ ಬೆಳವಣಿಗೆ. ನೀಟ್ ಪರೀಕ್ಷೆಗಳ ಅಕ್ರಮಗಳು ಎಲ್ಲವೂ ಬಹಿರಂಗವಾಗಬೇಕು. ಯಾವ ರಾಜ್ಯದಲ್ಲಿ ಅಕ್ರಮ ನಡೆದಿದ್ದರೂ ಬಿಡಬಾರದು. ಕೇಂದ್ರ ಸರ್ಕಾರದ ಸಂಬಂಧಿಸಿದ ಸಚಿವರ ರಾಜೀನಾಮೆ ಪಡೆಯಬೇಕು ಎಂದು ಅವರು ಆಗ್ರಹಿಸಿದರು.
ಎನ್ ಡಿ ಎ ಮೈತ್ರಿಕೂಟ ರಚನೆಯಾದ ಬೆನ್ನಲ್ಲೇ ಈ ಪ್ರಕರಣ ಹೊರಬಂದಿರುವುದನ್ನು ನೋಡಿದರೆ ಕೇಂದ್ರ ಸರ್ಕಾರದ ಕಾರ್ಯವೈಖರಿ ತೋರಿಸುತ್ತದೆ. ಇಷ್ಟು ಸಾಕ್ಷ್ಯ ಸಿಕ್ಕರೂ ಪ್ರಧಾನಿ ಮೋದಿ ಅವರು ಮೌನ ವಹಿಸಿರುವುದೇಕೆ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಪ್ರಶ್ನಿಸಿದರು.
ಬಂಧನ, ಬಿಡುಗಡೆ:
ಕೇಂದ್ರ ಸರ್ಕಾರದ ಶಿಕ್ಷಣ ವಿರೋಧಿ ನೀತಿ ವಿರೋಧಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬಿ. ವಿ. ಶ್ರೀನಿವಾಸ್, ಸೈಯದ್ ಖಾಲಿದ್ ಅಹ್ಮದ್ ಸೇರಿದಂತೆ ಕೆಲವರನ್ನು ದೆಹಲಿಯ ರೋಹಿನಿ ಜಿಲ್ಲೆಯ ಕಂಜಾವಾಲಾ ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.