Home ದಾವಣಗೆರೆ ಜನ ಸಾಮಾನ್ಯರ ಕೆಲಸಗಳಲ್ಲಿ ವಿಳಂಬ ಧೋರಣೆ ತೋರಿದ್ರೆ ಶಿಸ್ತು ಕ್ರಮದ ಎಚ್ಚರಿಕೆ!
ದಾವಣಗೆರೆಬೆಂಗಳೂರು

ಜನ ಸಾಮಾನ್ಯರ ಕೆಲಸಗಳಲ್ಲಿ ವಿಳಂಬ ಧೋರಣೆ ತೋರಿದ್ರೆ ಶಿಸ್ತು ಕ್ರಮದ ಎಚ್ಚರಿಕೆ!

Share
ಕ್ರಮ
Share

ದಾವಣಗೆರೆ: ಸರ್ಕಾರಿ ಕೆಲಸಗಳನ್ನು ಗಾಳಿಗೆ ತೂರಿ, ಜನ ಸಾಮಾನ್ಯರನ್ನು ಕಚೇರಿಗಳಿಗೆ ಅಲೆದಾಡಿಸುವ ಪ್ರವೃತ್ತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎಚ್ಚರಿಕೆ ನೀಡಿದರು. 

ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ದಕ್ಷತೆಯಿಂದ ಕೆಲಸ ಮಾಡುವ ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರಿಗೆ ರಾಜ್ಯದಲ್ಲಿ ಪ್ರೋತ್ಸಾಹಧನ ನೀಡಲು ಮಾರ್ಚ್‍ನಲ್ಲಿ 7 ರಿಂದ 8 ಕೋಟಿ ರೂಪಾಯಿಗಳ ಪ್ರೋತ್ಸಾಹ ಧನವನ್ನು ಮಾರ್ಚ್ ಅಂತ್ಯದೊಳಗೆ ಅವರ ಪ್ರಗತಿಯನ್ನು ಆಧರಿಸಿ ನೀಡಲಾಗುತ್ತದೆ ಎಂದರು.

ಜಂಟಿ ಖಾತೆ ಮಾಡುವಾಗ ತಾಂತ್ರಿಕ ಸಮಸ್ಯೆಗಳಿದ್ದರೆ ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ತಕ್ಷಣ ಪರಿಹರಿಸಿಕೊಳ್ಳಬೇಕು. ಮಾರ್ಚ್ ಅಂತ್ಯದೊಳಗೆ ಬಾಕಿ ಇರುವ ಅರ್ಜಿಗಳನ್ನು ಇತ್ಯರ್ಥಪಡಿಸಲು ಕಟ್ಟುನಿಟ್ಟಿನ ಗಡುವು
ನೀಡಲಾಗಿದೆ. ಸಾರ್ವಜನಿಕರ ಕೆಲಸದಲ್ಲಿ ನಿರ್ಲಕ್ಷ್ಯ ತೋರುವ ಅಧಿಕಾರಿಗಳು ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸಭೆಯಲ್ಲಿ ನೇರ ಎಚ್ಚರಿಕೆ ನೀಡಿದರು.

ಮುಂದಿನ ದಿನಗಳಲ್ಲಿ ಆಧಾರ್ ಅನ್ವಯ ಇ-ಜನ್ಮ ಪೋರ್ಟಲ್‍ಗೆ ಲಿಂಕ್ ಮಾಡುವುದರಿಂದ ಮರಣ ಹೊಂದಿದವರ ಜಮೀನುಗಳ ವಿವರ ಭೂಮಿಯಲ್ಲಿ ಲಭ್ಯವಾಗುತ್ತದೆ. ಮೊದಲು ಮೇ ತಿಂಗಳಲ್ಲಿ ಜಮಾಬಂದಿ ಮಾಡಲಾಗುತ್ತಿತ್ತು, ಆದರೆ ಜಮಾಬಂದಿ ಮಾಡುವುದನ್ನು ಬಿಟ್ಟಿದ್ದರಿಂದ ಪೌತಿ ಖಾತೆಯು ಉಳಿದಿದೆ. ಮುಂದಿನ ದಿನಗಳಲ್ಲಿ ಜಮಾಬಂದಿ ಆರಂಭಿಸಲಾಗುತ್ತದೆ. ರಾಜ್ಯದಲ್ಲಿ ಸುಮಾರು 50 ಲಕ್ಷ ಪಹಣಿಗಳು ಮೃತರ ಹೆಸರಿಗೆ ಇರುವುದರಿಂದ ಪ್ರಧಾನಮಂತ್ರಿಗಳ ಕಿಸಾನ್ ಸಮ್ಮಾನ್ ಯೋಜನೆಯ ಲಾಭ, ನೀರಾವರಿ ಸಬ್ಸೀಡಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದರು.

ಇ-ಕಚೇರಿ:

ಕಂದಾಯ ಇಲಾಖೆಯಲ್ಲಿ ಎಲ್ಲಾ ಕಡೆ ಇ-ಕಚೇರಿ ಮೂಲಕವೇ ಕಡತ ನಿರ್ವಹಣೆ ಮಾಡಲಾಗುತ್ತಿದೆ. ಎಲ್ಲಾ ತಾಲ್ಲೂಕು ಕಚೇರಿ, ಎಸಿ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗಳು ಇ-ಕಚೇರಿ ಮೂಲಕ ಕಡತ ನಿರ್ವಹಣೆ, ಅರ್ಜಿ ವಿಲೇವಾರಿ ಮಾಡಲಾಗುತ್ತಿದೆ. ಜಿಲ್ಲೆಯ 3 ನಾಡ ಕಚೇರಿಗಳನ್ನು ಇ-ಕಚೇರಿ ಮಾಡಲಾಗಿದ್ದು ಇಲ್ಲಿ ಕೇಸ್ವಾನ್ ನೆಟ್‍ವರ್ಕ್ ನೀಡಲಾಗಿದೆ. ಉಳಿದ ನಾಡ ಕಚೇರಿಗಳಿಗೂ ಕೇಸ್ವಾನ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗಿದೆ. ಈಗಾಗಲೇ ಎಲ್ಲಾ ಗ್ರಾಮ ಆಡಳಿತ ಅಧಿಕಾರಿಗಳಿಗೆ ಲ್ಯಾಪ್‍ಟಾಪ್ ನೀಡಿದ್ದು ಮುಂದಿನ ದಿನಗಳಲ್ಲಿ ಕಂದಾಯ ನಿರೀಕ್ಷಕರು ಸೇರಿದಂತೆ ಎಲ್ಲಾ ಹಂತದಲ್ಲಿ ಕಂಪ್ಯೂಟರ್ ಒದಗಿಸಲಾಗುತ್ತದೆ ಎಂದರು.

ಡಿಜಿಟಲ್ ದಾಖಲೆ:

ಕಂದಾಯ ಇಲಾಖೆಯಿಂದ ಎಲ್ಲಾ ದಾಖಲೆಗಳನ್ನು ಸ್ಕ್ಯಾನಿಂಗ್ ಮಾಡಲಾಗುತ್ತಿದ್ದು ದಾಖಲೆ ಕೋರುವ ಸಾರ್ವಜನಿಕರಿಗೆ ಡಿಜಿಟಲ್ ದಾಖಲೆಗಳನ್ನು ನೀಡಲಾಗುತ್ತಿದೆ. ಸಾರ್ವಜನಿಕರು ಕಂದಾಯ ದಾಖಲೆಗಳಿಗಾಗಿ ತಾಲ್ಲೂಕು ಕಚೇರಿಗೆ ಬರುವಂತಿಲ್ಲ, ನೇರವಾಗಿ ಆನ್‍ಲೈನ್ ಮೂಲಕವೇ ತಮ್ಮ ಮನೆಯಲ್ಲಿ ಕುಳಿತು ಬೆರಳತುದಿಯಲ್ಲಿ ದಾಖಲೆಗಳನ್ನು ಪಡೆಯಬಹುದಾಗಿದೆ ಎಂದರು.

ಹಾವೇರಿಯಲ್ಲಿ ಹಕ್ಕುಪತ್ರ ವಿತರಣೆ:

ಕಳೆದ ಎರಡೂವರೆ ವರ್ಷಗಳಲ್ಲಿ ಸುಮಾರು 2.20 ಲಕ್ಷ ಹಕ್ಕುಪತ್ರಗಳನ್ನು ಸಿದ್ದಪಡಿಸಲಾಗಿದ್ದು ಕಳೆದ ಮೇ 20 ರಂದು ಹೊಸಪೇಟೆಯಲ್ಲಿ ನಡೆದ ಸಮಾರಂಭದಲ್ಲಿ 1,11,000 ಹಕ್ಕುಪತ್ರಗಳನ್ನು ನೀಡಲಾಗಿತ್ತು. ಫೆಬ್ರವರಿ 14 ರಂದು ಸರ್ಕಾರದ 1000 ದಿನಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಹಾವೇರಿಯಲ್ಲಿ ನಡೆಯುವ ಹಕ್ಕುಪತ್ರ ವಿತರಣೆ ಸಮಾರಂಭದಲ್ಲಿ 1.10 ಲಕ್ಷ ಜನರಿಗೆ ಹಕ್ಕಪತ್ರ ನೀಡಲಾಗುತ್ತದೆ. ದಾವಣಗೆರೆ ಜಿಲ್ಲೆಯಿಂದ ಬರುವ ಫಲಾನುಭವಿಗಳಿಗೆ ಆಸ್ತಿಯ ಪತ್ರವನ್ನು ನೊಂದಣಿ ಮಾಡಿಸಿ ಸಿದ್ದತೆ ಮಾಡಿಕೊಂಡು ಜನರನ್ನು ಕರೆದುಕೊಂಡು ಬಂದು ಕೊಡಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಸಭೆಯಲ್ಲಿ ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ, ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *