Site icon Kannada News-suddikshana

Davanagere: ಐದಾರು ದಿನಗಳಲ್ಲಿ ದಾವಣಗೆರೆಗೆ ಮೃತದೇಹಗಳು: ಪತ್ನಿ, ಪುತ್ರ ಕೊಂದು ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣನಾ…? ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ…?

SUSPECT DEATH

SUSPECT DEATH

SUDDIKSHANA KANNADA NEWS/ DAVANAGERE/ DATE:25-08-2023

ದಾವಣಗೆರೆ (Davanagere): ಅಮೆರಿಕಾದ ಮೇರಿ ಲ್ಯಾಂಡ್ ರಾಜ್ಯದ ಬಾಲ್ತಿಮೇರ್ ನಲ್ಲಿ ದಾವಣಗೆರೆ (Davanagere) ಮೂಲದ ಮೂವರ ಸಾವಿಗೆ ಕಾರಣ ಏನೆಂಬುದು ದಿನ ಕಳೆದಂತೆ ಸ್ಪಷ್ಟವಾಗತೊಡಗಿದೆ. ಬಾಲ್ಟಿಮೋರ್ ಕೌಂಟಿ ಪೊಲೀಸರು ಸದ್ಯಕ್ಕೆ ಕುಟುಂಬಸ್ಥರಿಗೆ ನೀಡಿರುವ ಮಾಹಿತಿ ಪ್ರಕಾರ ಮಾನಸಿಕ ಖಿನ್ನತೆಯಿಂದ ಯೋಗೇಶ್ ಹೊನ್ನಾಳ ಬಳಲುತ್ತಿದ್ದರು. ಇದೇ ಕಾರಣಕ್ಕೆ ಪತ್ನಿ ಪ್ರತಿಭಾ ಹೊನ್ನಾಳ ಹಾಗೂ ಪುತ್ರ ಯಶ್ ಹೊನ್ನಾಳನಿಗೆ ಶೂಟ್ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವುದಾಗಿ ಸದ್ಯಕ್ಕೆ ಮಾಹಿತಿ ನೀಡಿದ್ದಾರೆ.

ಅಮೆರಿಕಾಕ್ಕೆ ಯೋಗೇಶ್ ತಾಯಿ:

ಇನ್ನು ಸಂಬಂಧಿಕರೊಬ್ಬರು ಬಾಲ್ತಿಮೇರ್ ಗೆ ಹೋದರೂ ಬಾಲ್ಟಿಮೋರ್ ಪೊಲೀಸರು ಮಾತ್ರ ಯಾವುದೇ ನಿಖರತೆ ಕಾರಣ ಹೇಳಿಲ್ಲ. ಈ ಹಿನ್ನೆಲೆಯಲ್ಲಿ ಯೋಗೇಶ್ ಹೊನ್ನಾಳ ತಾಯಿ ಶೋಭಾ ಹೊನ್ನಾಳ ಹಾಗೂ ಅವರ ಸಹೋದರ ನಿನ್ನೆ ಚೆನ್ನೈನಿಂದ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ. ಸದ್ಯಕ್ಕೆ ಅಲ್ಲಿಗೆ ಹೋಗಿ ತಲುಪಿದ್ದು, ಪೊಲೀಸರು ಸ್ಪಷ್ಟ ಮಾಹಿತಿ ಕೊಡಲಿದ್ದಾರೆ.

ಈ ಸುದ್ದಿಯನ್ನೂ ಓದಿ: 

Costly Flower: ದುಬಾರಿ ವರಮಹಾಲಕ್ಷ್ಮೀ ಪೂಜೆ: ಗಗನಕ್ಕೇರಿದ ಹೂ, ಹಣ್ಣು, ದರ ಕೇಳಿ ಶಾಕ್ ಆಗ್ತಿರುವ ಗ್ರಾಹಕರು, ಮಹಿಳೆಯರು…!

ಅಮೆರಿಕಾ ಕಾನೂನಿನ ಪ್ರಕಾರ ಸಂಬಂಧಿಕರಿಗೆ ಯಾವುದೇ ಮಾಹಿತಿ ನೀಡುವುದಿಲ್ಲ. ತಂದೆ, ತಾಯಿ, ಸಹೋದರ ಸೇರಿದಂತೆ ಕುಟುಂಬಸ್ಥರಿಗೆ ಸ್ಪಷ್ಟ ಮಾಹಿತಿ ನೀಡಲಾಗುತ್ತದೆ. ಈ ಕಾರಣಕ್ಕಾಗಿ ಚೆನ್ನೈನಿಂದ ಯೋಗೇಶ್ ಹೊನ್ನಾಳ ತಾಯಿ ಹಾಗೂ ಅವರ ಸಹೋದರ ಪ್ರಯಾಣ ಬೆಳೆಸಿರುವುದಾಗಿ ಕುಟುಂಬದ ಮೂಲಗಳು ಸ್ಪಷ್ಟಪಡಿಸಿವೆ.

ಡೆತ್ ನೋಟ್ ಪತ್ತೆ:

ಬಾಲ್ಟಿಮೋರ್ ಕೌಂಟಿ ಪೊಲೀಸರು ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ. ಸಂಬಂಧಿಕರಿಗೆ ಇದನ್ನು ಕೊಟ್ಟಿಲ್ಲ. ಕುಟುಂಬಸ್ಥರಿಗೆ ಮಾತ್ರ ಹಸ್ತಾಂತರ ಮಾಡುವ ಸಾಧ್ಯತೆ ಇದೆ. ಮನೆಯಲ್ಲಿ ಮೂವರ ಪಾಸ್ ಪೋರ್ಟ್, ಬೆಂಗಳೂರಿನಲ್ಲಿ
ಖರೀದಿಸಿದ್ದ ಫ್ಲ್ಯಾಟ್ ಸೇರಿದಂತೆ ಇತರೆ ಆಸ್ತಿಗೆ ಸಂಬಂಧಿತ ದಾಖಲೆಗಳು, ಮನೆಯಲ್ಲಿನ ಪರಿಕರಗಳು ಸೇರಿದಂತೆ ಎಲ್ಲವನ್ನೂ ಹಸ್ತಾಂತರ ಮಾಡಲಿದ್ದಾರೆ. ಡೆತ್ ನೋಟ್ ನಲ್ಲಿ ಏನೆಲ್ಲಾ ಬರೆಯಲಾಗಿದೆ ಎಂಬುದರ ಬಗ್ಗೆ ಮಾಹಿತಿ ಸ್ಪಷ್ಟ ಆಗಿಲ್ಲ.
ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಪ್ರಕಾರ ಯೋಗೇಶ್ ಹೊನ್ನಾಳ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎಂಬುದು ಗೊತ್ತಾಗಿದೆ.

ಎರಡೂ ಕುಟುಂಬದವರು ಹೇಳುವ ಪ್ರಕಾರ ಪತಿ ಹಾಗೂ ಪತ್ನಿ ನಡುವೆ ಯಾವುದೇ ಕಲಹ ಇರಲಿಲ್ಲ. ಇಬ್ಬರೂ ಅನೋನ್ಯವಾಗಿದ್ದರು. ಕುಟುಂಬದ ಅಂದ ಮೇಲೆ ಸಣ್ಣಪುಟ್ಟ ಗಲಾಟೆ ಆಗಿರಬಹುದು. ಇಂಥ ಅನಾಹುತ ಆಗುವಷ್ಟು ಯಾವುದೇ ತೊಂದರೆ ಇರಲಿಲ್ಲ. ಆದ್ರೆ, ಅಲ್ಲಿ ಏನಾಯ್ತು ಎಂಬುದು ಇಲ್ಲಿ ಕುಳಿತು ಹೇಳಲು ಆಗದು. ಡೆತ್ ನೋಟ್ ನಲ್ಲೇನಿದೆ? ಮಾನಸಿಕ ಖಿನ್ನತೆಗೆ ಒಳಗಾಗುವಂಥದ್ದು ಏನಾಗಿತ್ತು..? ಬೇರೆ ಯಾವ ಕಾರಣ ಇರಬಹುದು ಎಂಬುದು ಅಮೆರಿಕಾ ಪೊಲೀಸರು ಸ್ಪಷ್ಟಪಡಿಸಿದ ಬಳಿಕ ಗೊತ್ತಾಗಲಿದೆ. ಅದೇ ರೀತಿಯಲ್ಲಿ ಯೋಗೇಶ್ ಹೊನ್ನಾಳ ತಾಯಿ ಕೂಡ ಅಲ್ಲಿಗೆ ಹೋಗಿದ್ದರೆ. ಇಲ್ಲಿಗೆ ಬಂದ ಬಳಿಕ ಸಾವಿಗೆ ಕಾರಣವೇನು ಎಂಬುದು ಸ್ಪಷ್ಟವಾಗುವುದಂತೂ ನಿಜ.

ಹಸ್ತಾಂತರಕ್ಕೆ ಸಿದ್ಧತೆ:

ಯೋಗೇಶ್ ಹೊನ್ನಾಳ, ಪ್ರತಿಭಾ ಹೊನ್ನಾಳ, ಯಶ್ ಹೊನ್ನಾಳ ಮೃತದೇಹಗಳನ್ನು ಅಮೆರಿಕಾದಿಂದ ದಾವಣಗೆರೆ (Davanagere)ಗೆ ಕರೆತರಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯೋಗೇಶ್ ಹೊನ್ನಾಳ ತಾಯಿ ಹಾಗೂ ಸಹೋದರ ಅಮೆರಿಕಾಕ್ಕೆ ಪ್ರಯಾಣ ಬೆಳೆಸಿರುವುದರಿಂದ ಅಮೆರಿಕಾದಲ್ಲಿನ ಕಾನೂನು ಹಾಗೂ ನಿಯಮದಂತೆ ಮೃತದೇಹಗಳ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಅಮೆರಿಕಾದಲ್ಲಿರುವ ಯೋಗೇಶ್ ಹೊನ್ನಾಳ ಸಂಬಂಧಿಕರು ಕೊಟ್ಟಿರುವ ಮಾಹಿತಿ ಪ್ರಕಾರ ಸೋಮವಾರ ಅಥವಾ ಮಂಗಳವಾರ ಮೃತದೇಹಗಳನ್ನು ತರಲಾಗುವುದು. ಇಲ್ಲದಿದ್ದರೆ ಸ್ವಲ್ಪ ತಡವಾದರೂ ಆಗಬಹುದು. ಶೋಭಾ ಹಾಗೂ ಅವರ ಪುತ್ರ ತೆರಳಿರುವುದರಿಂದ ಭಾರತಕ್ಕೆ ಮೃತದೇಹಗಳನ್ನು ತರುವುದು ಖಚಿತ ಎಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರದ ವಿದೇಶಾಂಗ ಇಲಾಖೆ, ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಸಂಸದ ಜಿ. ಎಂ. ಸಿದ್ದೇಶ್ವರ, ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರು ಮೃತದೇಹಗಳನ್ನು ತರಲು ಎಲ್ಲಾ ರೀತಿಯ ಪ್ರಯತ್ನ ಹಾಗೂ
ಸಹಕಾರ ನೀಡಿದ್ದು, ಐದಾರು ದಿನಗಳೊಳಗೆ ಮೃತದೇಹಗಳು ದಾವಣಗೆರೆ ತರಲಾಗುತ್ತಿದೆ.

ಅಮೆರಿಕಾದಲ್ಲಿ ಮೂವರ ಸಾವಿನ ಸುದ್ದಿ ತಿಳಿದ ದಿನದಿಂದಲೂ ಕುಟುಂಬಸ್ಥರು ಹಾಗೂ ಸಂಬಂಧಿಕರು ಮೃತದೇಹಗಳನ್ನು ದಾವಣಗೆರೆಗೆ ತರಿಸಿಕೊಡುವಂತೆ ಒತ್ತಾಯಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ
ಮಾಡಿದ್ದರು. ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿದ್ದ ಸಿದ್ದರಾಮಯ್ಯ ಅವರು, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಒಟ್ಟಾರೆ ಈಗ ಮೃತದೇಹಗಳನ್ನು ದಾವಣಗೆರೆಗೆ ತರಲಾಗುತ್ತಿದ್ದು, ಸಾವಿಗೆ ಮಾನಸಿಕ ಖಿನ್ನತೆ ಎಂದು ಹೇಳಲಾಗುತ್ತಿದೆಯಾದರೂ ಮಾನಸಿಕ ಖಿನ್ನತೆಗೆ ಯಾಕೆ ಒಳಗಾಗಿದ್ದರು ಎಂಬುದು ಬಹಿರಂಗವಾಗಬೇಕಿದೆ ಅಷ್ಟೇ.

Exit mobile version