ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಇಲ್ಲವೇ ಅಹಿಂದ ವರ್ಗಕ್ಕೆ ಟಿಕೆಟ್ ನೀಡಬೇಕೆಂಬ ಕೂಗು ಬಲವಾಗಿ ಕೇಳಿ ಬರುತ್ತಿದೆ.ಈ ನಡುವೆ ವಸತಿ ಸಚಿವ ಜಮೀರ್ ಅಹ್ಮದ್ ಅವರು ಈ ಬಾರಿ ಮುಸ್ಲಿಂರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಗೆ ಸಹಮತ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಸಿಎಂ ಸಿದ್ದರಾಮಯ್ಯ ಹಾಗೂ ಹೈಕಮಾಂಡ್ ಗೆ ನನ್ನ ಅಭಿಪ್ರಾಯ ತಿಳಿಸುತ್ತೇನೆ ಎಂದಿದ್ದಾರೆ.
ಮುಸ್ಲಿಂ ಮುಖಂಡರ ಅಹವಾಲು ಆಲಿಸಿದ್ದೇನೆ:
ದಾವಣಗೆರೆಗೆ ಭೇಟಿ ನೀಡಿದ್ದ ಜಮೀರ್ ಅಹ್ಮದ್ ಅವರು, ಈಗಾಗಲೇ ನಾನು ಮುಸ್ಲಿಂ ಮುಖಂಡರ ಮನವಿ ಆಲಿಸಿದ್ದೇನೆ. ಕಾಂಗ್ರೆಸ್ ನ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪರ ನಿಧನದಿಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ. ಈ ಹಿಂದೆಯೂ ಮುಸ್ಲಿಂ ಮುಖಂಡರು ನನ್ನನ್ನು ಭೇಟಿ ಮಾಡಿ ಈ ಬಾರಿ ಅತಿ ಹೆಚ್ಚು ಸಮುದಾಯ ಹೊಂದಿರುವ ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಂರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟಿದ್ದರು. ಈಗಲೂ ಇಟ್ಟಿದ್ದಾರೆ ಎಂದು ತಿಳಿಸಿದರು.
ಮುಖ್ಯಾಂಶಗಳು:
ಮುಸ್ಲಿಂ ಸಮುದಾಯದ ಪಟ್ಟು: ಶಾಮನೂರು ಭರವಸೆ ನೆನಪಿಸಿದ ಜಮೀರ್
ಸಿದ್ದು ಕುರ್ಚಿ ಭದ್ರ: ನಾಯಕತ್ವ ಬದಲಾವಣೆ ವದಂತಿಗೆ ಬ್ರೇಕ್ ಹಾಕಿದ ಸಚಿವರು
ದಾವಣಗೆರೆ ದಕ್ಷಿಣದಲ್ಲಿ ಅಹಿಂದ ಅಲೆ: ಹೈಕಮಾಂಡ್‌ಗೆ ಸಲ್ಲಿಕೆಯಾಗಲಿದೆ ವಿಶೇಷ ವರದಿ
ಶಾಮನೂರು ಕುಟುಂಬ ವರ್ಸಸ್ ಅಲ್ಪಸಂಖ್ಯಾತ ಮುಖಂಡರು: ಕೈ ಟಿಕೆಟ್ ಯಾರಿಗೆ?
ಕಾಂಗ್ರೆಸ್ ಅಗ್ರಗಣ್ಯ ನಾಯಕರಲ್ಲಿ ಶಾಮನೂರು ಶಿವಶಂಕರಪ್ಪರೂ ಒಬ್ಬರು. ಮುಂಬರುವ ಚುನಾವಣೆಯಲ್ಲಿ ತಾನೇ ಖುದ್ದಾಗಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿಸಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು 2023ರ ವಿಧಾನಸಭಾ ಚುನಾವಣೆ ವೇಳೆ ಭರವಸೆ ನೀಡಿದ್ದರು ಎಂದು ಮುಸ್ಲಿಂ ಸಮುದಾಯದ ಮುಖಂಡರೇ ಹೇಳಿದ್ದಾರೆ. ಅದರಂತೆ ಈಗ ನಡೆದುಕೊಳ್ಳಬೇಕಾಗುತ್ತದೆ. ನಾನು ಸಿಎಂ ಮತ್ತು ಹೈಕಮಾಂಡ್ ಗೆ ನೀಡುವ ವರದಿಯಲ್ಲಿ ಈ ವಿಚಾರವನ್ನು ಗಮನಕ್ಕೆ ತರುತ್ತೇನೆ ಎಂದು ಹೇಳಿದರು.
ಸಿಎಂ ಸಿದ್ದು ಸೇಫ್:
2028ರವರೆಗೆ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯಲಿದ್ದಾರೆ. ಸದ್ಯಕ್ಕೆ ಮುಖ್ಯಮಂತ್ರಿ ಖುರ್ಚಿ ರಾಜ್ಯದಲ್ಲಿ ಖಾಲಿ ಇಲ್ಲ. ಖುರ್ಚಿ ಖಾಲಿಯಾದಾಗ ಮಾತ್ರ ಈ ಬಗ್ಗೆ ಮಾತನಾಡಬಹುದು. ಅಂಥ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ. ಖುರ್ಚಿ ಖಾಲಿಯಾದಾಗ ಹೈಕಮಾಂಡ್ ಬೇರೊಬ್ಬರನ್ನು ಸಿಎಂ ಅನ್ನಾಗಿ ಮಾಡುವ ಆಲೋಚನೆ ಮಾಡಬಹುದು ಎಂದು ಜಮೀರ್ ಅಹ್ಮದ್ ತಿಳಿಸಿದರು.





Leave a comment