ದಾವಣಗೆರೆ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ರಾಷ್ಟ್ರಾಧ್ಯಕ್ಷರೂ ಆಗಿದ್ದ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪರ ಅನಿರೀಕ್ಷಿತ ನಿಧನದ ಹಿನ್ನೆಲೆಯಲ್ಲಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ಎದುರಾಗಿದೆ.
ಮೊದಲಿನಿಂದಲೂ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಮುಸ್ಲಿಂ ಸಮುದಾಯದ ನಾಯಕರು ಈಗ ಒಗ್ಗಟ್ಟು ಪ್ರದರ್ಶನ ಮಾಡುತ್ತಿದ್ದಾರೆ. ಈ ಬಾರಿಯ ಬೈ ಎಲೆಕ್ಷನ್ ನಲ್ಲಿ ಅಲ್ಪಸಂಖ್ಯಾತ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಒಕ್ಕೊರಲ ಒತ್ತಾಯ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
READ ALSO THIS STORY: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ “ಇಂಡಿಪೆಂಡೆಂಟ್” ಆಗಿ ಕಣಕ್ಕಿಳಿಯಲ್ಲ, “ಮತ್ತೇ…”?: ಜಿ. ಬಿ. ವಿನಯ್ ಕುಮಾರ್ ಸ್ಪೋಟಕ ಸಂದರ್ಶನ
ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಸ್ಪರ್ಧಿಸಿ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ ಶಾಮನೂರು ಶಿವಶಂಕರಪ್ಪರು ಪ್ರತಿನಿಧಿಸುತ್ತಿದ್ದ ಕ್ಷೇತ್ರ. 93ರ ಇಳಿ ವಯಸ್ಸಿನಲ್ಲಿಯೂ ಚುನಾವಣಾ ಆಖಾಡಕ್ಕೆ ಧುಮುಕಿ ಗೆಲುವಿನ
ನಗೆ ಬೀರಿದ್ದರು. ಆದರೆ, ಇದುವರೆಗೆ ಬಿಜೆಪಿಗೆ ಈ ಕ್ಷೇತ್ರ ಕೈಗೆ ಸಿಕ್ಕಿಲ್ಲ.
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆ. 1997ರಲ್ಲಿ ಚಿತ್ರದುರ್ಗ ಜಿಲ್ಲೆಯಿಂದ ಬೇರ್ಪಟ್ಟು ದಾವಣಗೆರೆ ಸ್ವತಂತ್ರ ಜಿಲ್ಲೆಯಾಯ್ತು. ಅಲ್ಲಿಂದ ಇಲ್ಲಿಯವರೆಗೆ ನಡೆದಿರುವ ವಿಧಾನಸಭೆ ಚುನಾವಣೆಯಲ್ಲಿ ಶಾಮನೂರು ಶಿವಶಂಕರಪ್ಪರ ವಿರುದ್ಧ ಬಿಜೆಪಿ ಗೆದ್ದಇತಿಹಾಸ ಇಲ್ಲ. ಶಾಮನೂರು ಶಿವಶಂಕರಪ್ಪರು ಆರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 93 ವರ್ಷ ವಯಸ್ಸಿನವರಾದರೂ ಕಾಂಗ್ರೆಸ್ ಎಸ್. ಎಸ್. ಗೆ ಟಿಕೆಟ್ ನೀಡಿತ್ತು. ಸೋಲಿನ ಮೇಲೆ ಸೋಲು ಅನುಭವಿಸಿದ್ದ ಬಿಜೆಪಿಯು ಈ ಕ್ಷೇತ್ರದಲ್ಲಿ ಕಮಲ ಅರಳಿಸಲು ಪಣ ತೊಟ್ಟಿದ್ದರೂ ಯಶ ಸಾಧಿಸಿರಲಿಲ್ಲ. ಈಗ ಎದುರಾಗಿರುವ ಬೈ ಎಲೆಕ್ಷನ್ ನಲ್ಲಿ ಶತಾಯಗತಾಯ ಗೆಲ್ಲಲು ರಣತಂತ್ರ ರೂಪಿಸುತ್ತಿದೆ.
1994ರಲ್ಲಿ ದಾವಣಗೆರೆ ಕ್ಷೇತ್ರದಿಂದ ಆಯ್ಕೆಯಾಗಿದ್ದ ಶಾಮನೂರು ಶಿವಶಂಕರಪ್ಪರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ 1997ರಲ್ಲಿ ಲೋಕಸಭೆಗೆ ಸ್ಪರ್ಧಿಸಿದರು. ಆಗ ನಡೆದ ಉಪಚುನಾವಣೆಯಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಜಯ ಗಳಿಸಿದರು.
1999ರಲ್ಲಿ ಎಸ್. ಎಸ್. ಮಲ್ಲಿಕಾರ್ಜುನ್ ಮತ್ತೆ ಆರಿಸಿ ಬಂದರು. 2004ರಲ್ಲಿ ಮತ್ತೆ ದಾವಣಗೆರೆ ಕ್ಷೇತ್ರದಿಂದ ಸ್ಪರ್ಧಿಸಿದ ಶಾಮನೂರು ಶಿವಶಂಕರಪ್ಪ ಶಾಸಕರಾಗಿ ಚುನಾಯಿತರಾದರು. 2008ರ ಹೊತ್ತಿಗೆ ಕ್ಷೇತ್ರ ಪುನರ್ವಿಂಗಡಣೆಯಾದ ಕಾರಣ ದಾವಣಗೆರೆ ಉತ್ತರ ಮತ್ತು ದಾವಣಗೆರೆ ದಕ್ಷಿಣ ಎಂಬ ಎರಡು ಕ್ಷೇತ್ರಗಳಾದವು. ಆ ಬಳಿಕ ನಡೆದ ದಾವಣಗೆರೆ ದಕ್ಷಿಣ ಕ್ಷೇತ್ರದ ಮೂರು ಚುನಾವಣೆಯಲ್ಲಿಯೂ ಬಿಜೆಪಿಯ ಯಶವಂತರಾವ್ ಜಾಧವ್ ವಿರುದ್ಧ ಎಸ್. ಎಸ್. ಗೆದ್ದು ಬೀಗಿದ್ದರು.
ಕಾಂಗ್ರೆಸ್ ಒಮ್ಮೆಯೂ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿಲ್ಲ. ಬಿ. ಜಿ. ಅಜಯಕುಮಾರ್ ಉತ್ಸಾಹಿ ಯುವಕರಾಗಿ 2023ರಲ್ಲಿ 93 ವರ್ಷ ವಯಸ್ಸಿನ ಹಿರಿಯ ಮುತ್ಸದ್ಧಿ ವಿರುದ್ಧ ಬಿಜೆಪಿಯಿಂದ ಸ್ಪರ್ಧೆ ಮಾಡಿ ತೊಡೆ ತಟ್ಟಿದ್ದರೂ ಸೋಲು ಕಂಡರು.
ಮುಸ್ಲಿಂ ನಾಯಕರ ಒಗ್ಗಟ್ಟು:
2013ರಿಂದಲೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಬೇಡಿಕೆ ಇಟ್ಟಿದ್ದರೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ದೊರೆತಿರಲಿಲ್ಲ. ಇದಕ್ಕೆ ಕಾರಣ ಶಾಮನೂರು ಶಿವಶಂಕರಪ್ಪ ಎಂಬ ದೊಡ್ಡ ಶಕ್ತಿ. ಸುಮಾರು ನಾಲ್ಕು ಚುನಾವಣೆಗಳಲ್ಲಿಯೂ ಟಿಕೆಟ್ ಬೇಡಿಕೆ ಇಟ್ಟಿದ್ದ ಅಲ್ಪಸಂಖ್ಯಾತ ಸಮುದಾಯ ಈ ಬಾರಿ ಗಟ್ಟಿ ನಿಲುವು ತಾಳಲು ಮುಂದಾಗಿದೆ. ಮುಸ್ಲಿಂ ಸಮುದಾಯದ ಯಾವುದೇ ನಾಯಕರಿಗೂ ಟಿಕೆಟ್ ನೀಡಿದರೂ ಒಗ್ಗಟ್ಟಾಗಿ ಚುನಾವಣೆ ಎದುರಿಸುವ, ಬೆಂಬಲಿಸುವ, ತನು, ಮನ, ಧನ ಸಹಕಾರ
ನೀಡುವ ಪ್ರತಿಜ್ಞೆ ಮಾಡಿದ್ದಾರೆ.
ಸೈಯದ್ ಸೈಫುಲ್ಲ ಮತ್ತು ಸೈಯದ್ ಖಾಲಿದ್ ಅಹ್ಮದ್:
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಮುಸ್ಲಿರ ಪ್ರಾಬಲ್ಯ ಹೆಚ್ಚಿದೆ. ನಿರ್ಣಾಯಕರೂ ಹೌದು. ಈ ಕ್ಷೇತ್ರದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು 85ಸಾವಿರಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರಿದ್ದಾರೆ. ಹಾಗಾಗಿ, ಮಧ್ಯ ಕರ್ನಾಟಕದ ಹೆಬ್ಬಾಗಿಲು ದಾವಣಗೆರೆ
ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದವರಿಗೆ ಒಮ್ಮೆಯೂ ಕಾಂಗ್ರೆಸ್ ಟಿಕೆಟ್ ನೀಡಿಲ್ಲ. ಒಮ್ಮೆ ಬಿ ಫಾರಂ ನೀಡಿದ್ದರೂ ಸ್ಪರ್ಧೆ ಮಾಡಲು ಆಗಿರಲಿಲ್ಲ. ಹಾಗಾಗಿ, ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲೇಬೇಕೆಂಬ ಪಟ್ಟು ಹೆಚ್ಚಿದೆ.
ಈ ಸುದ್ದಿಯನ್ನೂ ಓದಿ: ರಾಹುಲ್ ಗಾಂಧಿ ಸೇರಿ ರಾಷ್ಟ್ರಮಟ್ಟದ ನಾಯಕರ ಮನಗೆದ್ದ ಸಂಘಟನಾ ಚಾಣಕ್ಯ ಸೈಯದ್ ಖಾಲಿದ್ ಅಹ್ಮದ್ ಗೆ ಒಲಿಯುತ್ತಾ ಅದೃಷ್ಟ?
ಸೈಯದ್ ಸೈಫುಲ್ಲ ಅವರು ಈ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಹೊಂದಿದ್ದಾರೆ. 2013ರಲ್ಲಿ ಚುನಾವಣಾ ಅಖಾಡಕ್ಕೆ ಇಳಿದು ಸುಮಾರು 26100ಕ್ಕೂ ಹೆಚ್ಚು ಮತ ಪಡೆದು ಗಮನ ಸೆಳೆದಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯರ ಆಪ್ತರೂ ಹೌದು. ಕಾಂಗ್ರೆಸ್ ಪಕ್ಷಕ್ಕೆ
ಹಲವು ವರ್ಷಗಳಿಂದ ದುಡಿಯುತ್ತಾ ಬಂದಿದ್ದರೂ ವಿಧಾನ ಪರಿಷತ್ ಸದಸ್ಯರಾಗಲೀ, ವಿಧಾನಸಭೆ ಚುನಾವಣೆಗೆ ಟಿಕೆಟ್ ಆಗಿಲ್ಲ ದೊರೆತಿಲ್ಲ. ಹಾಗಾಗಿ, ಈ ಬಾರಿಯಾದರೂ ಟಿಕೆಟ್ ನೀಡಬೇಕೆಂಬ ಕೂಗು ಅಲ್ಪಸಂಖ್ಯಾತರಲ್ಲಿ ಹೆಚ್ಚಾಗುತ್ತಿದೆ.
ಇನ್ನು ಸೈಯದ್ ಖಾಲಿದ್ ಅಹ್ಮದ್ ಅವರು ಸೈಯದ್ ಸೈಫುಲ್ಲರ ಪುತ್ರ. ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, ತೆಲಂಗಾಣ ಯುವ ಕಾಂಗ್ರೆಸ್ ರಾಜ್ಯ ಉಸ್ತುವಾರಿಯಾಗಿದ್ದು, ಪಕ್ಷದ ಹೈಕಮಾಂಡ್ ಸೂಚಿಸಿದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. 2023ರಲ್ಲಿಯೇ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಟಿಕೆಟ್ ನೀಡುವಂತೆ ಮನವಿಯನ್ನೂ ಸಲ್ಲಿಸಿದ್ದರು. ಶಾಮನೂರು ಶಿವಶಂಕರಪ್ಪರಿಗೆ ಟಿಕೆಟ್ ದೊರೆತ ಕಾರಣ ನಿರಾಸೆ ಅನುಭವಿಸಿದ್ದರು.
ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ ಅವರ ಜೊತೆ ಭಾರತ್ ಜೊಡೋ ಯಾತ್ರೆ ಕೈಗೊಂಡಿದ್ದರು. ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಸೇರಿದಂತೆ ಹಲವು ಹುದ್ದೆಗಳನ್ನು ಅಲಂಕರಿಸಿದ್ದಾರೆ. ಕಾಂಗ್ರೆಸ್ ಪಕ್ಷದ
ಅಭ್ಯರ್ಥಿಗಳ ಪರ ಮಹಾರಾಷ್ಟ್ರ, ತೆಲಂಗಾಣ, ಕರ್ನಾಟಕ, ಆಂಧ್ರ ಪ್ರದೇಶ, ರಾಜಸ್ತಾನ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಪ್ರಚಾರ ನಡೆಸಿದ್ದಾರೆ. ಕೇವಲ ರಾಜ್ಯ ಮಟ್ಟದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿಯೂ ಗಮನ ಸೆಳೆದಿದ್ದಾರೆ. ಹಾಗಾಗಿ, ಸೈಯದ್
ಖಾಲಿದ್ ಅಹ್ಮದ್ ಅವರೂ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.
ಅಬ್ದುಲ್ ಜಬ್ಬಾರ್:
ಇನ್ನು ಅಬ್ದುಲ್ ಜಬ್ಬಾರ್. ಹಾಲಿ ವಿಧಾನ ಪರಿಷತ್ ಸದಸ್ಯ. ಮೂರು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ಇವರಿಗೆ ಕಾಂಗ್ರೆಸ್ ನಿಂದ ಅಧಿಕಾರ ಸಿಕ್ಕಿದೆ. ಸದ್ಯಕ್ಕೆ ವಿಧಾನ ಪರಿಷತ್ ಸದಸ್ಯರಾಗಿರುವ ಕಾರಣ ಅಬ್ದುಲ್ ಜಬ್ಬಾರ್ ಗೆ ಟಿಕೆಟ್ ಸಿಗುವುದು ಡೌಟ್. ಅಧಿಕಾರದಲ್ಲಿದ್ದರೂ ಎಂಎಲ್ ಸಿ ಸ್ಥಾನ ಕೊಟ್ಟು ಮತ್ತೆ ಚುನಾವಣೆಗೆ ಟಿಕೆಟ್ ನೀಡಲು ಹೈಕಮಾಂಡ್ ಮುಂದಾಗಲ್ಲ. ಹಾಗಾಗಿ, ನನಗೆ ಟಿಕೆಟ್ ನೀಡದಿದ್ದರೆ ನಾನು ಸೂಚಿಸುವವರಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್ ಮಟ್ಟದಲ್ಲಿ ಲಾಬಿ ಶುರು ಮಾಡಿದ್ದಾರೆ.
ಸಾದಿಕ್ ಪೈಲ್ವಾನ್:
ಸಾದಿಕ್ ಪೈಲ್ವಾನ್ ಅವರು ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿದ್ದಾರೆ. ಹಲವು ವರ್ಷಗಳಿಂದ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ಮನವಿ ಮಾಡಿದ್ದಾರೆ. ಪಕ್ಷಕ್ಕಾಗಿ ಹಗಲಿರುಳು ಶ್ರಮಿಸಿದ್ದು, ಶಾಮನೂರು ಶಿವಶಂಕರಪ್ಪರ ಎಲ್ಲಾ ಚುನಾವಣೆಗಳಲ್ಲಿ ಗೆಲ್ಲಲು ಶ್ರಮಿಸಿದ್ದೇವೆ. ಅದೇ ರೀತಿ ಕಳೆದ ಲೋಕಸಭೆ ಚುನಾವಣೆಯಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಗೆ ಮುನ್ನಡೆ ನೀಡಿದ್ದೇವೆ. ನನಗೆ ಟಿಕೆಟ್ ನೀಡುವಂತೆ ಸಾದಿಕ್ ಪೈಲ್ವಾನ್ ಅವರೂ ಸಹ ಅವಿರತ ಶ್ರಮ ಪಡುತ್ತಿದ್ದಾರೆ.
ಅಲ್ಪಸಂಖ್ಯಾತರ ಸಭೆಯಲ್ಲಿ ಒಗ್ಗಟ್ಟು ಪ್ರದರ್ಶನ:
ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಆಗಿದೆ. ಆದರೆ ದಾವಣಗೆರ ದಕ್ಷಿಣ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಮುಖಂಡ ಇತ್ತೀಚೆಗೆ ಕರೆದಿದ್ದ ಅಲ್ಪಸಂಖ್ಯಾತರ ಸಭೆಯಲ್ಲಿ ಬಹಿರಂಗವಾಗಿಯೇ ಪಕ್ಷದ ವಿರುದ್ಧವೇ ಮಾತನಾಡಿದ್ದಾರೆ. ಈ ಬಾರಿ ಕಾಂಗ್ರೆಸ್ ಪಕ್ಷವು ಮುಸ್ಲಿಂರಿಗೆ ಬೈ ಎಲೆಕ್ಷನ್ ನಲ್ಲಿ ಟಿಕೆಟ್ ನೀಡಿದರೆ ನಾನು ಬಹಿರಂಗವಾಗಿಯೇ ಅಭ್ಯರ್ಥಿ ಪರ ಪ್ರಚಾರ ಮಾಡುತ್ತೇನೆ. ನನ್ನ ಕೈಯಲಾದಷ್ಟು ಧನ ಸಹಾಯ ಮಾಡುತ್ತೇನೆ ಎಂದು ಬಹಿರಂಗವಾಗಿಯೇ ಘೋಷಿಸಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತರಿಗೆ ಟಿಕೆಟ್ ಸಿಗಬೇಕೆಂಬ ವಿಚಾರದಲ್ಲಿ ಪಕ್ಷ ಭೇದ ಮರೆತು ಒಂದಾಗಿದ್ದಾರೆ.
ಈ ಸಭೆಯಲ್ಲಿ ಮಾತನಾಡಿದ ಬಹುತೇಕರ ಅಭಿಪ್ರಾಯವೂ ಇದೇ ಆಗಿತ್ತು. ಇಷ್ಟು ವರ್ಷಗಳಿಂದ ಕಾಂಗ್ರೆಸ್ ಬೆಂಬಲಿಸಿಕೊಂಡು ಬಂದಿದ್ದೇವೆ. ಶಾಮನೂರು ಶಿವಶಂಕರಪ್ಪರ ಗೆಲುವಿಗೆ ಕಾರಣಕರ್ತರಾಗಿದ್ದೇವೆ. ಹಾಗಾಗಿ, ಈ ಬಾರಿ ಮುಸ್ಲಿಂ ಸಮುದಾಯದವರಿಗೆ ಟಿಕೆಟ್ ನೀಡಬೇಕು. ಇಲ್ಲದಿದ್ದರೆ ಬೇರೆ ಯೋಚನೆ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಅಲ್ಪಸಂಖ್ಯಾತ ಮುಖಂಡರು ಸಭೆ ನಡೆಸಿ ಎಚ್ಚರಿಕೆ ನೀಡಿರುವುದು ಆತಂಕಕ್ಕೆ ಕಾರಣವಾಗಿದೆ. ಕಾಂಗ್ರೆಸ್ ಪಕ್ಷವನ್ನು ಮುಸ್ಲಿಂರು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಈ ಬಾರಿ ಅವರು ಕೈ ಕೊಟ್ಟರೆ ಎಂಬ ಭಯವೂ ಕಾಡುತ್ತಿದೆ. ಮತ್ತೊಂದೆಡೆ ಶಾಮನೂರು ಶಿವಶಂಕರಪ್ಪರ ನಿಧನದಿಂದ ಅವರ ಕುಟುಂಬದವರಿಗೆ ಟಿಕೆಟ್ ನೀಡಲು ಕಾಂಗ್ರೆಸ್ ಹೈಕಮಾಂಡ್ ಚಿಂತನೆ ನಡೆಸಿತ್ತು. ಈ ಬಗ್ಗೆ ನಿರ್ಧಾರಕ್ಕೂ ಬರಲು ಮುಂದಾಗಿತ್ತು. ಮುಸ್ಲಿಂ ಸಮುದಾಯದ ಈ ಬೆಳವಣಿಗೆ ಹೈಕಮಾಂಡ್ ಗೆ ಇಕ್ಕಟ್ಟು ತಂದಿದೆ.









Leave a comment