SUDDIKSHANA KANNADA NEWS/DAVANAGERE/DATE:25_11_2025
ದಾವಣಗೆರೆ: ಬಂಗಾರ ತಯಾರಕನ ಬೆದರಿಸಿ ಗನ್ ತೋರಿಸಿ ಚಿನ್ನಾಭರಣ ದರೋಡೆ ಕೇಸ್ ಸಂಬಂಧ ಇಬ್ಬರು ಪಿಎಸ್ಐ ಸೇರಿ ಏಳು ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿರುವ ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ದಾವಣಗೆರೆ ಪೊಲೀಸರು ಭಾಗಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
READ ALSO THIS STORY: BIG NEWS: ದಾವಣಗೆರೆಯಲ್ಲಿ ರಕ್ಷಕರೇ ಭಕ್ಷಕರಾಗಿ ಸಿಕ್ಕಿಬಿದ್ದಿದ್ದೇ ರೋಚಕ: ಇಬ್ಬರು ಪಿಎಸ್ಐಗಳು ಸೇರಿ ನಾಲ್ವರ ಬಂಧನ!
ಈ ದರೋಡೆ ಪ್ರಕರಣದಲ್ಲಿ ದಾವಣಗೆರೆ ಜಿಲ್ಲೆಯ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಸಿಬ್ಬಂದಿಗಳ ಪಾತ್ರ ಇಲ್ಲ ಎಂದು ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ನವೆಂಬರ್ 25ರಂದು ಸಂಜೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಪದ್ಮಾನಾಭನಗರದ ಆಭರಣ ತಯಾರಿಕೆ ಕೆಲಸ ಮಾಡುತ್ತಿದ್ದ ವಿಶ್ವನಾಥ್ ಎಂ ಅರ್ಕಸಾಲಿ ಎಂಬುವವರು ಕೆಟಿಜೆ ನಗರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ನೀಡಿದ್ದಾರೆ.
ವಿಶ್ವನಾಥ ಎಮ್ ಅರ್ಕಸಾಲಿ ನವೆಂಬರ್ 23ರ ಸಂಜೆ ದಾವಣಗೆರೆಗೆ ಬಂದು ಮಂಡಿಪೇಟೆಯ ವಿಕಾಸ್ ಜ್ಯೂಯಲರ್ ಬೇಬಿ ಉಂಗುರಗಳನ್ನು ತಯಾರಿಸಿ ಕೊಡಲು 36.150 ಗ್ರಾಂ ಬಂಗಾರದ ಚೂರುಗಳು ಮತ್ತು ಬಂಗಾರದ ಕೆಲಸ ಮಾಡುವ ಹಳೆ ಪೇಟೆಯ ಆನೆಕೊಂಡ ಪೇಟೆಯ ಸುರೇಶ್, ಕೆ.ಬಿ ಎಂಬುವರ ಬಳಿ 22 ಗ್ರಾಂ ಬಂಗಾರದ ಚೂರು ಮತ್ತು ಹಳೆಯ ಬಂಗಾರದ ಉಂಗುರ, ಮುರಗಳು ಹಾಗೂ ಬಂಗಾರದ ಕೆಲಸ ಮಾಡುವ ಮಂಜುನಾಥ ಬಳಿ 20 ಗ್ರಾಂ ಬಂಗಾರದ ಚೂರುಗಳನ್ನು ಪಡೆದುಕೊಂಡಿದ್ದರು.
ಒಟ್ಟು 78.150 ಗ್ರಾಂ ಬಂಗಾರದ ಚೂರು ಮತ್ತು ಹಳೆಯ ಬಂಗಾರದ ಬೇಬಿ ಉಂಗುರ ಮತ್ತು ಮುರಗಳಾಗಿದ್ದು ಇವುಗಳ ಒಟ್ಟು ಅಂದಾಜು ಬೆಲೆ 7.50.000 ರೂಪಾಯಿ ಆಗುತ್ತದೆ ಎಂದು ಅಂದಾಜಿಸಲಾಗಿದೆ.
ಈ ಬಂಗಾರದ ಚೂರು ಮತ್ತು ಆಭರಣಗಳನ್ನು ತೆಗೆದುಕೊಂಡು ಊಟ ಮಾಡಿಕೊಂಡು ಊರಿಗೆ ಹೋಗಲು ದಾವಣಗೆರೆಯ ಕೆ.ಎಸ್.ಆರ್.ಟಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ರಾತ್ರಿ ಅಂದರೆ ನವೆಂಬರ್ 24ರ ರಾತ್ರಿ 12.30ರ ಸಮಯದಲ್ಲಿ ಹುಬ್ಬಳ್ಳಿ ಬಸ್ ಹತ್ತಿಕೊಂಡು ಸೀಟ್ ನೋಡುತ್ತಿದ್ದಾಗ ಹಿಂಬದಿಯಿಂದ ಯಾರೋ ಒಬ್ಬ ವ್ಯಕ್ತಿ ಬಂದು ಹಿಡಿದುಕೊಂಡಿದ್ದಾರೆ. ನಾನು ಪೊಲೀಸ್ ಅಧಿಕಾರಿ ಅಂತ ಹೇಳಿ ಬಸ್ಸಿನಿಂದ ಕೆಳಗೆ ಇಳಿಸಿ ಕರೆದುಕೊಂಡು ಬಸ್ ನಿಲ್ದಾಣದ ಫ್ಲಾಟ್ ಫಾರಂ ಬಳಿ ಬಂದಾಗ ಆರೋಪಿತರ ಜೊತೆಗಿದ್ದ ಇನ್ನೊಬ್ಬ ಆರೋಪಿತನು ಬಂದಿದ್ದಾನೆ. ಆಗ ವಿಶ್ವನಾಥ್ ಸರ್ ನನ್ನನ್ನು ಏಕೆ ಕರೆದುಕೊಂಡು ಹೋಗುತ್ತಿದ್ದೀರಾ? ಎಂದು ಕೇಳಿದಾಗ ಆರೋಪಿತರು ಇಬ್ಬರು ಸೇರಿಕೊಂಡು ನಮಗೆ ನೀನು ಏನು ಮಾಡುತ್ತೀಯಾ ಅಂತಾ ಗೊತ್ತು ಬಾ ಎಂದು ದಾವಣಗೆರೆ ನಗರದ ಯಾವುದೋ ಒಂದು ಪೊಲೀಸ್ ಠಾಣೆಯ ಮುಂದೆ ಕರೆದುಕೊಂಡು ಬಂದಿದ್ದಾರೆ.
ಪೊಲೀಸ್ ಠಾಣೆಯಿಂದ ಒಬ್ಬರು ಪೊಲೀಸರು ಬಂದು ಪಿರ್ಯಾದಿಗೆ ಮತ್ತು ಆರೋಪಿತನು ಕರೆದುಕೊಂಡು ಬಂದ ಸಾದಾ ಉಡುಪಿನಲ್ಲಿದ್ದ ಪೊಲೀಸರಿಗೆ ಮಾತಾನಾಡಿಸಿ ನಿಜವಾದ ಪೊಲೀಸರು ಎಂದು ಹೇಳಿ ಪಿರ್ಯಾದಿಗೆ ಜೀಪ್ ನಿಂದ ಇಳಿಸಿಕೊಂಡು ನಂತರ ಸಾದಾ ಉಡುಪಿನಲ್ಲಿದ್ದ ಇಬ್ಬರು ಆರೋಪಿತ ಪೊಲೀಸರು ವಿಶ್ವನಾಥ್ ಅವರನ್ನು ಅವರ ಕಾರಿನಲ್ಲಿ ಬಿ.ಎಸ್.ಎನ್,ಎಲ್ ಕಛೇರಿಯ ಮುಂಭಾಗದ ರಸ್ತೆಗೆ ಕರೆದುಕೊಂಡು ಹೋಗಿದ್ದಾರೆ.
ವಿಶ್ವನಾಥನ ಬಳಿ ಇದ್ದ 78 ಗ್ರಾಂ ನ ಬಂಗಾರದ ಗಟ್ಟಿ ಮತ್ತು ಬೇಬಿ ಉಂಗುರಗಳನ್ನು ಇಟ್ಟುಕೊಂಡಿದ್ದ ಪ್ಯಾಕೇಟ್ ಗಳನ್ನು ಕಸಿದುಕೊಂಡಿದ್ದು, ನಂತರ ಪಿರ್ಯಾದಿಗೆ ಆರೋಪಿತರು ತಮ್ಮ ಕಾರಿನಲ್ಲಿಯೇ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಕರೆದುಕೊಂಡು ಬಂದು ಊರಿಗೆ ಹೋಗಲು ಬಸ್ ಹತ್ತಿಸಿದ್ದಾರೆ.
ಪಿರ್ಯಾದಿಗೆ ಹಲ್ಲೆ ಮಾಡಿ ಹೆದರಿಸಿ ಪಿರ್ಯಾದಿಯ ಬಳಿ ಇದ್ದ ಬಂಗಾರದ ಗಟ್ಟಿ ಮತ್ತು ಬೇಬಿ ಉಂಗುರ ಹಾಗೂ ಮುರಾಗಳನ್ನು ಕಿತ್ತುಕೊಂಡು ಹೋಗಿದ್ದಾರೆ. ಸುಮಾರು 30 ರಿಂದ 35 ವರ್ಷ ವಯಸ್ಸಿನ ಪೊಲೀಸರಾಗಿರುತ್ತಾರೆ. ನನಗೆ ಹಲ್ಲೆ ಮಾಡಿ ಹೆದರಿಸಿ ಬಂಗಾರದ ಗಟ್ಟಿಯ ಚೂರುಗಳನ್ನು ಕಿತ್ತುಕೊಂಡು ಹೋದ ಪೊಲೀಸರನ್ನು ಪತ್ತೆ ಮಾಡಿ ಈ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಿ ಎಂದು ದೂರಿನಲ್ಲಿ ಮನವಿ ಮಾಡಿದ್ದರು. ಈ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ದಾವಣಗೆರೆ ನಗರ ಡಿವೈಎಸ್ಪಿ ಶರಣಬಸವೇಶ್ವರ ಬಿ. ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ತಂಡವನ್ನು ರಚಿಸಿದ್ದು, ತಂಡವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿತ್ತು.
ಪ್ರಕರಣದ ಸಂಬಂಧ ಮಾಳಪ್ಪ ಹಾಗೂ ಪ್ರವೀಣ್ ಎಂಬ ಇಬ್ಬರು ಪಿಎಸ್ಐ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ನಂತರ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 7 ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. ತನಿಖೆ ಮುಂದುವರೆದಿರುತ್ತದೆ.
ಆರೋಪಿತರಿಂದ ವಿಶ್ವನಾಥ್ ಅವರಿಂದ ದರೋಡೆ ಮಾಡಿದ್ದ ಸುಮಾರು 8 ಲಕ್ಷ ಮೌಲ್ಯದ ಬಂಗಾರದ ಗಟ್ಟಿ ಮತ್ತು ಆಭರಣಗಳು, 3 ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಉಮಾ ಪ್ರಶಾಂತ್ ಮಾಹಿತಿ ನೀಡಿದ್ದಾರೆ.






Leave a comment