ದಾವಣಗೆರೆ: ನಗರದಲ್ಲಿ ಜಲಸಿರಿ ಯೋಜನೆಯಡಿ 24×7 ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಸಾರ್ವಜನಿಕರು ನೀರಿನ ಶುಲ್ಕವನ್ನು ನಿಗದಿತ ಅವಧಿಯೊಳಗೆ ಪಾವತಿಸುವಂತೆ ಮಹಾನಗರ ಪಾಲಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ನಗರದ ನಿವಾಸಿಗಳು ತಮ್ಮ ಮನೆಯ ಹಳೆಯ ಪೈಪುಗಳಿಗೆ ಕಡ್ಡಾಯವಾಗಿ ‘ಎಂಡ್ ಕ್ಯಾಪ್’ (End Cap) ಅಳವಡಿಸಿ ಅವುಗಳನ್ನು ಸ್ಥಗಿತಗೊಳಿಸಬೇಕು. ಒಂದು ವೇಳೆ ಹಳೆಯ ಪೈಪುಗಳನ್ನು ಬಂದ್ ಮಾಡದಿದ್ದಲ್ಲಿ, ನೀರು ವ್ಯರ್ಥವಾಗಿ ಹರಿದು ಹೋಗಿ ಬಳಕೆಯ ಪ್ರಮಾಣ ಹೆಚ್ಚಾಗುವುದರಿಂದ ಹೆಚ್ಚಿನ ನೀರಿನ ಶುಲ್ಕ ಭರಿಸಬೇಕಾಗುತ್ತದೆ ಎಂದು ಪಾಲಿಕೆ ಎಚ್ಚರಿಸಿದೆ.
ಶುಲ್ಕ ಪಾವತಿ ಎಲ್ಲಿ?
ಗ್ರಾಹಕರು ತಮ್ಮ ನೀರಿನ ಬಿಲ್‌ಗಳನ್ನು ಮಹಾನಗರ ಪಾಲಿಕೆ ಆವರಣದ ಸೇವಾ ಕೇಂದ್ರ, ಐಟಿಐ ಕಾಲೇಜು ಬಳಿಯ ನೀರಿನ ಟ್ಯಾಂಕ್ ಕಚೇರಿ ಅಥವಾ ಆಶ್ರಯ ಆಸ್ಪತ್ರೆ ಪಕ್ಕದ ವಲಯ ಕಚೇರಿಯಲ್ಲಿ ನಗದು ರೂಪದಲ್ಲಿ ಪಾವತಿಸಬಹುದು.
ಆನ್‌ಲೈನ್ ಪಾವತಿ ಸೌಲಭ್ಯ:
ಸಾರ್ವಜನಿಕರ ಅನುಕೂಲಕ್ಕಾಗಿ ಆನ್‌ಲೈನ್ ಮೂಲಕವೂ ಪಾವತಿಸಲು ಅವಕಾಶವಿದ್ದು, www.Davangerewater.co.in ವೆಬ್‌ಸೈಟ್ ಅಥವಾ PhonePe, Google Pay, Paytm ನಂತಹ UPI ಆಪ್‌ಗಳ ಮೂಲಕ ಹಣ ಪಾವತಿಸಬಹುದಾಗಿದೆ. ನಿಗದಿತ ಸಮಯದಲ್ಲಿ ಶುಲ್ಕ ಪಾವತಿಸದಿದ್ದಲ್ಲಿ ನೀರಿನ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಹಾಯವಾಣಿ:
ಜಲಸಿರಿ ಯೋಜನೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಗ್ರಾಹಕರು 9036544419 ಸಂಖ್ಯೆಗೆ ಕರೆ ಮಾಡಬಹುದು.





Leave a comment