SUDDIKSHANA KANNADA NEWS/ DAVANAGERE/ DATE-28-06-2025
ದಾವಣಗೆರೆ: ಭದ್ರಾ ಡ್ಯಾಂ ಸಮೀಪದಲ್ಲಿ ಭದ್ರಾ ನಾಲೆಯನ್ನು ಸೀಳಿ ನೆಡೆಸುತ್ತಿರುವ ಅವೈಜ್ಞಾನಿಕ ಕಾಮಗಾರಿಯನ್ನು ವಿರೋಧಿ ರೈತ ಒಕ್ಕೂಟ ಹಾಗೂ ಜಿಲ್ಲಾ ರೈತ ಮೋರ್ಚಾ ಕರೆ ಕೊಟ್ಟಿದ್ದ ದಾವಣಗೆರೆ ಬಂದ್ ಯಶಸ್ವಿಯಾಗಲಿಲ್ಲ.
ಭಾಗಶಃ ಅಂದರೆ ಅಲ್ಲಲ್ಲಿ ಮಾತ್ರ ಬಂದ್ ಆಗಿತ್ತು. ಜನಜೀವನ ಎಂದಿನಂತೆ ಇತ್ತು. ಆಟೋ, ವಾಹನಗಳು, ಬಸ್ ಸಂಚಾರ, ಹೊಟೇಲ್ ಸೇರಿದಂತೆ ಎಲ್ಲವೂ ಎಂದಿನಂತಿತ್ತು.
READ ALSO THIS STORY: ದಾವಣಗೆರೆಯಲ್ಲಿ 22, 18, 24 ಕ್ಯಾರಟ್ ಗೋಲ್ಡ್ ದರ ಪ್ರತಿ ಗ್ರಾಂಗೆ ಎಷ್ಟಿದೆ?
ರೈತರಿಗಾಗಿ ಬಂದ್ ಗೆ ಬೆಂಬಲ ನೀಡುವಂತೆ ವರ್ತಕರು, ಬಸ್, ಲಾರಿ ಮತ್ತು ಆಟೋ ಮಾಲೀಕರು ಹಾಗೂ ಚಾಲಕರು, ಹೋಟೆಲ್ ಮತ್ತು ಅಂಗಡಿ ಮಾಲೀಕರು ಹಾಗೂ ಸಾರ್ವಜನಿಕರಿಗೆ ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ, ಮಾಡಾಳ್ ಮಲ್ಲಿಕಾರ್ಜುನ್, ಕೊಳೇನಹಳ್ಳಿ ಸತೀಶ್ ಸೇರಿದಂತೆ ಬಿಜೆಪಿ ಮುಖಂಡರು ಬೆಳಿಗ್ಗೆಯಿಂದಲೇ ತೆರೆದ ವಾಹನದಲ್ಲಿ ತೆರಳಿ ಮನವಿ ಮಾಡಿದರು. ಆದ್ರೆ, ಜನರು ಬೆಳಿಗ್ಗೆ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಆಮೇಲೆ ಎಂದಿನಂತೆ ವ್ಯಾಪಾರ ವಹಿವಾಟು ನಡೆಸಿದರು.
ದಾವಣಗೆರೆಯಲ್ಲಿ ಎಂದಿನಂತೆ ಶಾಲಾ ಕಾಲೇಜು:
ಶಾಲಾ ಕಾಲೇಜುಗಳು ಎಂದಿನಂತೆ ನಡೆದವು. ವ್ಯಾಪಾರ ವಹಿವಾಟು, ಜನಜೀವನಕ್ಕೆ ಯಾವುದೇ ರೀತಿಯ ತೊಂದರೆ ಆಗಲಿಲ್ಲ. ಹಾಗಾಗಿ, ದಾವಣಗೆರೆ ನಗರ ಬಂದ್ ಯಶಸ್ವಿಯಾಗಲಿಲ್ಲ. ಸ್ವಲ್ಪ ಮಟ್ಟಿಗೆ ಪ್ರತಿಕ್ರಿಯೆ ಮಾತ್ರ ಇತ್ತು. ಲೋಕಿಕೆರೆ ನಾಗರಾಜ್, ಬಿ. ಜಿ. ಅಜಯ್ ಕುಮಾರ್, ರೇಣುಕಾಚಾರ್ಯ ಅವರು ಬೆಳ್ಳಂಬೆಳಿಗ್ಗೆಯೇ ಪ್ರಮುಖ ವೃತ್ತಗಳಲ್ಲಿ ಟೈರ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಆನಂತರ ಖಾಸಗಿ ಬಸ್ ಗಳ ಚಾಲಕರು, ಆಟೋಚಾಲಕರಿಗೆ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.
ಬಿಜೆಪಿ ರೈತ ಮೋರ್ಚಾ ಹಾಗೂ ಜಿಲ್ಲಾ ರೈತ ಒಕ್ಕೂಟದ ವತಿಯಿಂದ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಹಳ್ಳಿಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಮುಖಾಂತರ ನೀರು ಬಿಡಲು ಭದ್ರಾ ಬಲದಂಡೆ ನಾಲೆಗೆ ಪೈಪ್ ಲೈನ್ ಕಾಮಗಾರಿ ಮಾಡಲಾಗುತ್ತಿದೆ. ಕೂಡಲೇ ಕಾಮಗಾರಿ ನಿಲ್ಲಿಸಿ ಯೋಜನೆ ಕೈಬಿಡಬೇಕೆಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಿದ್ದರಿಂದ ಜಿಲ್ಲಾ ಪೊಲೀಸ್ ಇಲಾಖೆಯು ಬಿಗಿ ಬಂದೋಬಸ್ತ್ ಏರ್ಪಡಿಸಿತ್ತು.
ಮಾಧ್ಯಮದವರ ಜೊತೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರು, ಭದ್ರಾ ಬಲದಂಡೆ ಕಾಲುವೆಯಿಂದ ಮೂರು ತಾಲೂಕುಗಳ ಗ್ರಾಮೀಣ ಭಾಗಕ್ಕೆ ಕುಡಿಯುವ ನೀರನ್ನು ಒಯ್ಯಲು ಸಿದ್ಧತೆ ನಡೆದಿದೆ. ಈ ಯೋಜನೆ ಕಾಮಗಾರಿ ಅವೈಜ್ಞಾನಿಕವಾಗಿದೆ. ಭದ್ರೆಯ ರೈತ ಮಕ್ಕಳು ಒಕ್ಕೊರಲಿನಿಂದ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕಾಮಗಾರಿ ನಿಲ್ಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿಕೊಂಡರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ತರೀಕೆರೆ ತಾಲೂಕುಗಳ ಪೈಕಿ 1200 ಹಳ್ಳಿಗಳಿಗೆ ಜೆಜೆಎಂ ಯೋಜನೆ ಅಡಿ ಕುಡಿಯುವ ನೀರಿಗಾಗಿ ಈ ಯೋಜನೆ ಮಾಡಲಾಗಿದೆ. ಅಲ್ಲದೆ ಭದ್ರಾ ಬಲದಂಡೆ ಕಾಲುವೆ ಸೀಳಿ ಕಾಮಗಾರಿ ಕೂಡ ಆರಂಭ ಆಗಿದೆ. ಈ ಯೋಜನೆ ಪೂರ್ಣಗೊಂಡು ಮೂರು ತಾಲೂಕುಗಳಿಗೆ ನೀರು ಹರಿದರೆ ದಾವಣಗೆರೆ ರೈತರಿಗೆ ಸಮಸ್ಯೆ ಎದುರಾಗಲಿದೆ. ದಾವಣಗೆರೆ ಕೊನೆ ಭಾಗದ ರೈತರಿಗೆ ನೀರು ತಲುಪುವುದು ಕಷ್ಟಕರ ಆಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಳೆಗಳಿಗೆ ನೀರಿಗಾಗಿ ಹಾಹಾಕಾರ ಉಂಟಾಗಿರುವ ಸಮಯದಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ರೈತರಿಗೆ ನೀರು ಸಿಗದೇ ಪರದಾಡುವಂಥ ಪರಿಸ್ಥಿತಿ ಉಂಟಾಗುತ್ತದೆ. ಕೂಡಲೇ ಕಾಮಗಾರಿ ಸ್ಥಗಿತಗೊಳಿಸುವಂತೆ ರೈತ ಮುಖಂಡರು ಒತ್ತಾಯಿಸಿದ್ದಾರೆ. ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ರೈತರ ಒಕ್ಕೂಟದಿಂದ ಶನಿವಾರ ದಾವಣಗೆರೆ ಬಂದ್ಗೆ ಕರೆ ನೀಡಿದ್ದು, ಜನರು ಸಹಕಾರ ನೀಡಿದ್ದಾರೆ ಎಂದು ತಿಳಿಸಿದರು.
ಈ ಕಾಮಗಾರಿ ಬಫರ್ ಜೋನ್ನಲ್ಲಿ ನಡೆಯುತ್ತಿದ್ದು, ಡ್ಯಾಮ್ಗೂ ಅಭದ್ರತೆ ಕಾಡುತ್ತಿದೆ. ಅದರಲ್ಲೂ ಕುಡಿಯುವ ನೀರಿನ ಯೋಜನೆ ಕಾಮಗಾರಿಯನ್ನು ಪ್ರತ್ಯೇಕವಾಗಿ ಡ್ಯಾಮ್ನಿಂದಲೇ ಮಾಡಬೇಕೇ ವಿನಃ, ದಾವಣಗೆರೆ
ಜಿಲ್ಲೆಗೆ ಪೂರೈಕೆ ಆಗುತ್ತಿರುವ ಬಲದಂಡೆ ನಾಲೆಯನ್ನು ಸೀಳಿ ಕುಡಿಯುವ ನೀರಿನ ಕಾಮಗಾರಿ ನಡೆಸುವುದು ಎಷ್ಟು ಸರಿ ಎಂದು ರೇಣುಕಾಚಾರ್ಯ ಪ್ರಶ್ನಿಸಿದರು.
ಬಲದಂಡೆ ನಾಲೆಯಿಂದ ಕಾಮಗಾರಿಗೆ ಹಾಕುವ ಪೈಪ್ 8 ಅಡಿ ಕೆಳಗೆ ಅಳವಡಿಸಿರುವುದು ಎಷ್ಟರ ಮಟ್ಟಿಗೆ ಸರಿ. ಒಂದೂವರೆ ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರುಣಿಸುವ ಭದ್ರಾ ಅಚ್ಚುಕಟ್ಟು ಪ್ರದೇಶ. ಈ ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಒಟ್ಟು ಒಂದೂವರೆ ಲಕ್ಷ ಪ್ರದೇಶಕ್ಕೆ ಈ ಭದ್ರಾ ನೀರು ಉಪಯೋಗ ಆಗಲಿದೆ. ಚನ್ನಗಿರಿ, ಹರಿಹರ, ದಾವಣಗೆರೆ ತಾಲೂಕಿನ ರೈತರಿಗೆ ಭದ್ರಾ ನೀರು ಆಸರೆಯಾಗಿದೆ. ಈ ನೀರಿನಲ್ಲಿ ಅಡಿಕೆ, ಭತ್ತ ಅತೀ ಹೆಚ್ಚು ಬೆಳೆಯಲಾಗುತ್ತದೆ ಎಂದರು.
ಬಲದಂಡೆ ಒಡೆದುಹಾಕಿದ್ದರಿಂದ ದಾವಣಗೆರೆ ಭಾಗಕ್ಕೆ ನೀರು ಹರಿಯುವುದಿಲ್ಲ. ಇನ್ನು ಇಲ್ಲಿಂದ 30 ಸಾವಿರ ಕ್ಯೂಸೆಕ್ಸ್ ನೀರು ಹರಿಸಲು ಸಿದ್ಧತೆ ನಡೆದಿದೆ. ಕಾಲುವೆ ಮೂಲಕ 3200 ಕ್ಯೂಸೆಕ್ನಷ್ಟು ದಾವಣಗೆರೆಗೆ ಹರಿಸಿದ್ರು ಕೂಡ ನೀರು ಮಾತ್ರ ಕೊನೇ ಭಾಗದ ರೈತರಿಗೆ ತಲುಪುವುದು ಕಷ್ಟಕರವಾಗಿದೆ ಎಂದು ಬೇಸರ ಹೊರಹಾಕಿದರು.
ಯೋಜನೆ ವಿರೋಧಿಸಿ ಶನಗರ ಬಂದ್ ಮಾಡಿದ್ದೇವೆ. ಮುಂಬರುವ ದಿನಗಳಲ್ಲಿ ಭದ್ರಾ ಅಚ್ಚುಕಟ್ಟು ತಾಲೂಕುಗಳಲ್ಲಿ ಬಂದ್ ನಡೆಸುವ ಕುರಿತಂತೆ ಚರ್ಚೆ ನಡೆಸುತ್ತೇವೆ. ಬಂದ್ ವೇಳೆ ಯಾವುದೇ ರೀತಿಯಲ್ಲೂ ಸಾರ್ವಜನಿಕರಿಗೆ ತೊಂದರೆಯಾಗಲಿಲ್ಲ. ಸಂಪೂರ್ಣವಾಗಿ ಶಾಂತಿಯುತವಾಗಿ ನಡೆದಿದೆ ಎಂದು ಹೇಳಿದರು.