Site icon Kannada News-suddikshana

BIG EXCLUSIVE: ಪ್ರಧಾನಿ ನರೇಂದ್ರ ಮೋದಿ ಪ್ರಭಾವ ಕುಗ್ಗಿಸಲ್ಲ, ಅಪ್ಪ-ಮಗನಿಗೆ ಬಗ್ಗಲ್ಲ! : ದಾವಣಗೆರೆ ಬಿಜೆಪಿ ಲಗಾನ್ ತಂಡದ ಬಿಗಿಪಟ್ಟು…!

SUDDIKSHANA KANNADA NEWS/ DAVANAGERE/ DATE:24-03-2024

ದಾವಣಗೆರೆ: ಲೋಕಸಭಾ ಚುನಾವಣೆಯಲ್ಲಿ ಲೋಕಸಭಾ ಸದಸ್ಯ ಡಾ. ಜಿ.ಎಂ. ಸಿದ್ದೇಶ್ಬರ ಮತ್ತವರ ಕುಟುಂಬಕ್ಕೆ ಟಿಕೆಟ್ ನೀಡಬಾರದು ಎಂದು ಏಳೆಂಟು ತಿಂಗಳಿನಿಂದ ಬಿಗಿಪಟ್ಡು ಹಿಡಿದಿದ್ದ ದಾವಣಗೆರೆ ಬಿಜೆಪಿಯ ಲಗಾನ್ ತಂಡ ತನ್ನ ಬಿಗಿಪಟ್ಟು ಸಡಿಲಿಸುತ್ತಿಲ್ಲ.

ದಾವಣಗೆರೆಗೆ ಹೊಸ ಅಭ್ಯರ್ಥಿ ಘೋಷಣೆ ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದ ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ. ವಿಜಯೇಂದ್ರ, ಕೊನೆಗೆ ಸಿದ್ದೇಶ್ವರ ಕುಟುಂಬಕ್ಕೆ ಟಿಕೆಟ್ ಕೊಡಿಸಿದ್ದರ ಬಗ್ಗೆ ಜಿಲ್ಲಾ ಕಾರ್ಯಕರ್ತರ ಆದಿಯಾಗಿ ಲಗಾಮ್ ತಂಡಕ್ಕೆ ತೀವ್ರ ಅಸಮಾಧಾನ ಎದ್ದಿದೆ.

ನರೇಂದ್ರ ಮೋದಿಯವರು ಪ್ರಧಾನಿಯಾಗಿಸಲು ನಾವು ಪಣ ತೊಟ್ಟಿದ್ದೇವೆ. ಆದರೆ, ದಾವಣಗೆರೆ ಬಿಜೆಪಿಯನ್ನು‌ ಜಿ.ಎಂ.ಸಿದ್ದೇಶ್ವರ ಕುಟುಂಬದ ಹಿಡಿತದಿಂದ ಬಿಡಿಸಿಯೇ ಸಿದ್ಧ ಎಂದು ಬಿಜೆಪಿ ಲಗಾನ್ ತಂಡ ರಣಕೇಕೆ ಮೊಳಗಿಸಿದೆ.

ಈ ನಡುವೆ, ಎಸ್. ಎ. ರವೀಂದ್ರನಾಥ್ ನಿವಾಸದಲ್ಲಿ ಭಾನುವಾರ ಸಂಜೆ ನಡೆದ ದಾವಣಗೆರೆ ಉತ್ತರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಜಿ.ಎಂ. ಸಿದ್ದೇಶ್ವರರ ವಿರುದ್ಧ ದೊಡ್ಡ ದನಿಯಲ್ಲಿ ವಿರೋಧ ವ್ಯಕ್ತವಾಗಿದೆ. ಯಡಿಯೂರಪ್ಪ ಅವರೇ ಖುದ್ದಾಗಿ ದಾವಣಗೆರೆಗೆ ಬರುವುದಾಗಿ‌ ತಿಳಿಸಿದ್ದು, ಬಿಎಸ್ ವೈ ಬಂದು ನಮ್ಮ ಬೇಡಿಕೆ ಕೇಳಿ, ಅಭ್ಯರ್ಥಿ ಬದಲು ಮಾಡುವವರೆಗೂ ನಮ್ಮ ಬಿಗಿ ಪಟ್ಟು ಸಡಿಲಿಸುವುದಿಲ್ಲ ಎಂದಿದ್ದಾರೆ.

ಶಸ್ತ್ರಚಿಕಿತ್ಸಾ ತಜ್ಞರಾಗಿ ಯುವನಾಯಕನಾಗಿ ಗುರುತಿಸಿಕೊಂಡಿರುವ ಡಾ. ರವಿಕುಮಾರ್ ಟಿ.ಜಿ ಅವರಿಗೆ ಲೋಕಸಭಾ ಟಿಕೇಟ್ ನೀಡಿ ಎಂದು ಮಾಜಿ ಸಚಿವರಾದ ಎಸ್. ಎ.ರವೀಂದ್ರನಾಥ್, ಎಂ.ಪಿ. ರೇಣುಕಾಚಾರ್ಯ ಆದಿಯಾಗಿ ಜಿಲ್ಲೆಯ ಎಲ್ಲ ಹಿರಿಯ ನಾಯಕರು ಬಿಜೆಪಿ ಹೈಕಮಾಂಡ್ ಗೆ ಒತ್ತಾಯ ಮಾಡುತ್ತಲೇ ಬಂದಿತ್ತು.

ದಾವಣಗೆರೆ ಜಿಲ್ಲಾದ್ಯಂತ ಮೂಡಿದ್ದ ಜಿ.ಎಂ. ವಿರೋಧಿ ಕೂಗನ್ನು ಗಂಭೀರವಾಗಿ ಪರಿಗಣಿಸಿದ ಬಿಜೆಪಿ ಹೈಕಮ್ಯಾಂಡ್ ಜಿ.ಎಂ.ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರಿಗೆ ಟಿಕೆಟ್ ನೀಡಿದೆ. ಇದರಿಂದಾಗಿ ಮತ್ತಷ್ಟು ಆಕ್ರೋಶಗೊಂಡಿರುವ ದಾವಣಗೆರೆ ಲಗಾನ್ ಟೀಂ, ಅಭ್ಯರ್ಥಿ ಬದಲಿಗೆ ಪಟ್ಟು ಹಿಡಿದಿದೆ.

ಹೇಗೆ ಗೆಲ್ತೀರ ನೋಡೋಣ!

ಮುಂದಿನ ಚುನಾವಣರ ಹೇಗೆ ಗೆಲ್ತೀರ ನೋಡೋಣ ಎಂಬರ್ಥದಲ್ಲಿ ಜಿ.ಎಂ. ಸಿದ್ದೇಶ್ವರ ಅವರು ನಮ್ಮ ಗುಂಪಿಗೆ ಧಮ್ಕಿ ಹಾಕಿದ್ದಾರೆ. ನಮ್ಮಂತವರಿಗೇ ಹೀಗಾದರೆ ಸಾಮಾನ್ಯ ಕಾರ್ಯಕರ್ತರಿಗೆ ಬಿಜೆಪಿ ಬಗ್ಗೆ ಯಾವ ಭಾವನೆ ಮೂಡಬಹುದು ಎಂಬುದನ್ನು ಅಂದಾಜಿಸಬಹುದು ಎಂದು ದಾವಣಗೆರೆ ದಕ್ಷಿಣ ಬಿಜೆಪಿ ಅಭ್ಯರ್ಥಿಯಾಗಿದ್ದ ಬಿ‌.ಜೆ. ಅಜಯ್ ಕುಮಾರ್ ಬೇಸರ ಹೊರಹಾಕಿದ್ದಾರೆ.

ಲಗಾನ್ ತಂಡದ ಬಿಗಿಪಟ್ಟು!

ಜಿ.ಎಂ. ಸಿದ್ದೇಶ್ವರ ಮತ್ತವರ ಕುಟುಂಬ ರಾಜಕಾರಣದ ವಿರುದ್ಧ ಒಗ್ಗಟ್ಟಾಗಿರುವ 11 ಜನರ ತಂಡಕ್ಕೆ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಅವರೇ ಕ್ಯಾಪ್ಟನ್! ಇವರೊಂದಿಗೆ ಮಾಜಿ ಸಚಿವರಾದ ಜಿ. ಕರುಣಾಕರ ರೆಡ್ಡಿ, ಎಂ.ಪಿ.ರೇಣುಕಾಚಾರ್ಯ, ಮಾಜಿ ಶಾಸಕ ಎಂ. ಬಸವರಾಜ್ ನಾಯ್ಕ್, ಮಾಜಿ ಎಂಎಲ್‌ಸಿ ಶಿವಯೋಗಿಸ್ವಾಮಿ, ಯುವ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ, ಲೋಕಿಕೆರೆ ನಾಗರಾಜ್, ಡಾ. ಟಿ.ಜಿ.ರವಿಕುಮಾರ್, ಸೋಮೇಶ್ವರ ಸುರೇಶ್, ಎಲ್. ಎನ್. ಕಲ್ಲಪ್ಪ ಅವರ ಸಶಕ್ತ ತಂಡವಿದೆ. ದಾವಣಗೆರೆ ವಾಜಪೇಯಿ ಎಂಬ ಖ್ಯಾತಿಯ ಮಾಜಿ ಶಾಸಕ ಟಿ. ಗುರುಸಿದ್ಧನಗೌಡರು ದಾವಣಗೆರೆ ಲಗಾನ್ ತಂಡದ ಕೋಚ್ ಆಗಿದ್ದು, ಈ ಎಲ್ಲರ ತೀವ್ರ ವಿರೋಧವು ಜಿ.ಎಂ. ಟೀಂಗೆ ಕಂಪನ ಮೂಡಿಸಿರಿವುದು ಸುಳ್ಳಲ್ಲ.

ಕಾರ್ಯಕರ್ತರು ದಿನವೂ ಕಣ್ಣೀರು ಹಾಕುತ್ತಿದ್ದು, ದಾವಣಗೆರೆ ಬಿಜೆಪಿ ಅಳಿವು ಉಳಿವಿಗಾಗಿ ಲೋಕಸಭಾ ಅಭ್ಯರ್ಥಿ ಬದಲಾವಣೆಗೆ ನಮ್ಮ ಬೇಡಿಕೆ ಇಟ್ಡಿದ್ದೇವೆ. ಇದು ನಾಯಕರ ಮನವಿಯಲ್ಲ, ಬಿಜೆಪಿಯ ಸಾಮಾನ್ಯ ಕಾರ್ಯಕರ್ತರೆಲ್ಲರ ಮನದಾಳದ ನೋವಾಗಿದೆ ಎಂದು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಡಾ. ರವಿಕುಮಾರ್ ಟಿ. ಜಿ. ತಿಳಿಸಿದ್ದಾರೆ.

 

 

Exit mobile version