Site icon Kannada News-suddikshana

Davanagere ಲೋಕಸಭಾ ಕ್ಷೇತ್ರಕ್ಕೆ ಫೆ. 15ರೊಳಗೆ ಘೋಷಣೆಯಾಗಲಿದೆ ಕೈ ಟಿಕೆಟ್, ನನಗೆ ದೊರಕುವ ವಿಶ್ವಾಸವಿದೆ. ಸರ್ವೇ ಆಧರಿಸಿ ಅಭ್ಯರ್ಥಿ ಆಯ್ಕೆ: ಜಿ. ಬಿ. ವಿನಯ್ ಕುಮಾರ್

SUDDIKSHANA KANNADA NEWS/ DAVANAGERE/ DATE:25-01-2024

ದಾವಣಗೆರೆ (Davanagere): ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಬಯಸಿರುವ ನನಗೆ ಟಿಕೆಟ್ ಸಿಗುತ್ತದೆ ಎಂಬ ಬಲವಾದ ನಂಬಿಕೆ ಕೂಡ ಇದೆ . ನನ್ನದು ದಾವಣಗೆರೆ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಕನಸು ಹೊತ್ತು ಬಂದ ನನಗೆ ಪಕ್ಷದ ಸರ್ವ ಮುಖಂಡರ, ಕಾರ್ಯಕರ್ತರ, ಜಾತ್ಯಾತೀತವಾಗಿ ನಿರೀಕ್ಷೆಗೂ ಮೀರಿ ಸಹಕಾರ, ಬೆಂಬಲ ವ್ಯಕ್ತವಾಗುತ್ತಿರುವುದಕ್ಕೆ ಖುಷಿಯಾಗಿದ್ದೇನೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್ ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಸರ್ವೇ ನಡೆಸಲಾಗಿತ್ತು. ಈ ಸರ್ವೇ ಆಧಾರದ ಮೇಲೆ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರು 136 ಸ್ಥಾನಗಳಲ್ಲಿ
ಗೆಲ್ಲಲಿದ್ದೇವೆ ಎಂದಿದ್ದರು. ಅಷ್ಟು ನಿಖರವಾಗಿ ಸರ್ವೇ ನಡೆದಿತ್ತು. ಲೋಕಸಭೆ ಚುನಾವಣೆಗೂ ಇದೇ ಮಾನದಂಡ ಅನುಸರಿಸಲಾಗುತ್ತಿದೆ. ಶೇಕಡಾ 80 ರಷ್ಟು ಸರ್ವೇ ಆಧಾರದ ಮೇಲೆ ಟಿಕೆಟ್ ಘೋಷಿಸಲಾಗುತ್ತದೆ. ಇನ್ನು ಉಳಿದ
ಶೇಕಡಾ 20ರಷ್ಟು ನಮ್ಮ ಕಾರ್ಯವೈಖರಿ, ವ್ಯಕ್ತಿತ್ವ, ಕೆಲಸ, ಬೇರೆ ರೀತಿಯ ಒತ್ತಡಗಳು ಕೆಲಸ ಮಾಡಲಿವೆ. ಏನೇ ಇದ್ದರೂ ಸರ್ವೇ ವರದಿಯೇ ಅಂತಿಮ ಎಂದು ಹೇಳಿದರು.

ಸರ್ವೇ ಇನ್ನು ಶುರುವಾಗಿಲ್ಲ. ಸದ್ಯದಲ್ಲಿಯೇ ಶುರುವಾಗುತ್ತದೆ. ಹೈಕಮಾಂಡ್ ಗೆ ಇಬ್ಬರ ಹೆಸರು ಹೋಗಿದೆ ಎಂಬ ಮಾಹಿತಿ ಸಿಕ್ಕಿದೆ. ಆದ್ರೆ, ಸರ್ವೇ ಮುಗಿದ ಬಳಿಕ ಯಾರ ಪರ ಒಲವು ಇರುತ್ತದೆಯೋ ಅವರಿಗೆ ಟಿಕೆಟ್ ಸಿಗಲಿದೆ.

Read Also This Story: ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ರಾಜ್ಯ ಉಪಾಧ್ಯಕ್ಷರಾಗಿ ಬಿ. ಜಿ. ವಿನಯ್ ಕುಮಾರ್: ಯಾರಿಗೆ ಸಂದೇಶ ತಲುಪಬೇಕಿತ್ತೋ ಅದು ಆಗಿದೆ ಎಂದ ಯುವ ನೇತಾರ

ದಾವಣಗೆರೆಗೆ ನಾನೇ ಸೂಕ್ತ ಅಭ್ಯರ್ಥಿ ಇದ್ದೇನೆ ಅಲ್ವಾ:

ಸೂಕ್ತ ಅಭ್ಯರ್ಥಿಗಳು ಇಲ್ಲದ ಕಡೆಗಳಲ್ಲಿ ಸಚಿವರು ಸ್ಪರ್ಧೆ ಮಾಡುವಂತೆ ಸುರ್ಜೇವಾಲ ಅವರು ಸೂಚನೆ ನೀಡಿದ್ದಾರೆ. ದಾವಣಗೆರೆಯಲ್ಲಿ ಅಭ್ಯರ್ಥಿಗಳಿದ್ದಾರೆ. ನಾನೂ ಸಮರ್ಥನಿದ್ದೇನೆ. ಹಾಗಾಗಿ, ಸಚಿವರು ಸ್ಪರ್ಧೆ ಮಾಡುವ ವಾತಾವರಣ ನಿರ್ಮಾಣ ಆಗಿಲ್ಲ ಎಂದು ತಿಳಿಸಿದರು.

ಈಗಾಗಲೇ 650 ಕಿಲೋಮೀಟರ್ ಪಾದಯಾತ್ರೆ ಮಾಡಿದ್ದೇನೆ. ಜನರ ಸಮಸ್ಯೆ ಅರಿತಿದ್ದೇನೆ. ಒಂದೊಂದು ತಾಲೂಕಿನಲ್ಲಿ ಒಂದೊಂದು ಸಮಸ್ಯೆ ಇದೆ. ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಪ್ರತಿ ವರ್ಗದವರೂ ನನಗೆ ಬೆಂಬಲ ನೀಡಿದ್ದಾರೆ. ಪ್ರೀತಿ, ವಿಶ್ವಾಸ ತೋರಿದ್ದಾರೆ, ಆತ್ಮಬಲ ತುಂಬಿದ್ದಾರೆ. ಆತ್ಮಸ್ಥೈರ್ಯ ಮೂಡುವಂತೆ ಮಾಡಿದ್ದಾರೆ. ಜನಮನ್ನಣೆಯೂ ಪಾದಯಾತ್ರೆಗೆ ಸಿಕ್ಕಿದೆ. ಶಾಲಾ, ಕಾಲೇಜುಗಳು, ಅಂಗನವಾಡಿ ಕೇಂದ್ರಗಳು, ಗ್ರಂಥಾಲಯ ಸೇರಿದಂತೆ ಹಲವೆಡೆ ಭೇಟಿ ನೀಡಿದ್ದೇನೆ ಎಂದು ಹೇಳಿದರು.

ಶಾಲೆ ಬಿಡಿಸಿದ್ದಾರೆ:

ಕೆಲ ಗ್ರಾಮಗಳಿಗೆ ಬಸ್ ಸೌಲಭ್ಯ ಇಲ್ಲ ಎಂಬ ಕಾರಣಕ್ಕೆ ಹೆಣ್ಣು ಮಕ್ಕಳನ್ನು ಶಾಲೆಯಿಂದ ಬಿಡಿಸಿರುವ ಪ್ರಕರಣಗಳು ಗಮನಕ್ಕೆ ಬಂದಿದೆ. ಈ ಕುರಿತ ವರದಿ ಸಿದ್ದಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗುವುದು. ಯಾವ್ಯಾವ ಗ್ರಾಮಗಳಲ್ಲಿ ಬಸ್
ಸೌಲಭ್ಯ ಇಲ್ಲ ಎಂಬ ಕುರಿತಂತೆ ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸಲಾಗುವುದು. ಬಸ್ ಸೌಲಭ್ಯ ಕಲ್ಪಿಸಲು ಆದ್ಯತೆ ಮೇರೆಗೆ ಪ್ರಯತ್ನಿಸಲಾಗುವುದು ಎಂದು ವಿನಯ್ ಕುಮಾರ್ ಹೇಳಿದರು.

ಚನ್ನಗಿರಿ, ಮಾಯಕೊಂಡ ತಾಲೂಕಿನಲ್ಲಿ ನೀರಿನ ಅಭಾವದ ಸಮಸ್ಯೆ ಕುರಿತಂತೆ ಮನವರಿಕೆ ಆಗಿದೆ. ಚನ್ನಗಿರಿ ತಾಲೂಕಿನಲ್ಲಿ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಯು ಕಳೆದ 12 ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆ ಜಾರಿಯಾದರೆ 120 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಕುಡಿಯುವ ನೀರಿನ ಸಮಸ್ಯೆಯೂ ಬಗೆಹರಿಯಲಿದೆ. ಆದ್ಯತೆ ಮೇರೆಗೆ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು. ತಳಮಟ್ಟದಿಂದ ಪಕ್ಷ ಮತ್ತಷ್ಟು ಸದೃಢಗೊಳಿಸುವ ಕೆಲಸ ಮಾಡಲಾಗುತ್ತಿದೆ. ಎನ್ ಎಸ್ ಯು ಐ, ಯುವ ಕಾಂಗ್ರೆಸ್ ಸೇರಿದಂತೆ ಪಕ್ಷದ ಮುಖಂಡರೂ ಸಹ ಬಹಿರಂಗವಾಗಿ ನಮ್ಮ ಜೊತೆ ಬರುತ್ತಿದ್ದಾರೆ. ಇದು ಖುಷಿ ತಂದಿದೆ ಎಂದು ಹೇಳಿದರು.

ಭಾರತೀಯ ಯುವ ಕಾಂಗ್ರೆಸ್ ಔಟ್ರೀಚ್ ವಿಭಾಗದ ಕರ್ನಾಟಕ ರಾಜ್ಯ ಉಪಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಲಾಗಿದೆ. ರಾಜ್ಯಾಧ್ಯಕ್ಷರಾಗಿ ಕಾರ್ತಿಕ ವೆಂಕಟೇಶ್ ಮೂರ್ತಿ ಕೆಲಸ ಮಾಡುತ್ತಿದ್ದು, ನಾನು ಶಕ್ತಿಮೀರಿ ಪ್ರಯತ್ನಿಸುತ್ತೇನೆ. ಹುದ್ದೆ ಕೊಟ್ಟಿದ್ದಾರೆ ಎಂಬ ಕಾರಣಕ್ಕೆ ಕಾರಿನಲ್ಲಿ ಬೋರ್ಡ್ ಹಾಕಿಕೊಂಡು ಓಡಾಡುವುದಿಲ್ಲ. ನನಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.

 

ವೃತ್ತಿಪರನಾಗಿ ಕೆಲಸ ಮಾಡಿ ತೋರಿಸುತ್ತೇನೆ. ಪಾದಯಾತ್ರೆ ಬಳಿಕ ನಾನು ಹೋದ ಕಡೆಗಳಲ್ಲಿ ಜನರು ಗುರುತಿಸುತ್ತಿದ್ದಾರೆ. ಶೇಕಡಾ 75 ರಷ್ಟು ಜನರು ಗ್ರಾಮೀಣ ಭಾಗದಲ್ಲಿ ನನ್ನನ್ನು ಗುರುತು ಹಿಡಿಯುತ್ತಿದ್ದಾರೆ ಎಂದು ವಿನಯ್ ಕುಮಾರ್ ವಿವರಿಸಿದರು.

Exit mobile version