ದಾವಣಗೆರೆ: ನಗರದ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ರಾಜಕೀಯ ಸಂಚಲನ ಉಂಟಾಗಿದ್ದು, ಎಂ.ಎಂ. ಇಷಣ್ಣ ನಗರ ಮತ್ತು ಎಸ್.ಕೆ.ಎಂ. ನಗರದ ಕುರುಬ ಸಮುದಾಯದ ಪ್ರಮುಖ ಮುಖಂಡರು ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಮಂಗಳವಾರ (ಏಪ್ರಿಲ್ 07, 2026) ನಗರದ ಎಂ.ಐ.ಜಿ. ಲೇಔಟ್‌ನಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಮುಖಂಡರಾದ ನಾಗರಾಜಪ್ಪ ಮತ್ತು ಮಂಜಪ್ಪ ಅವರು ತಮ್ಮ ನೂರಾರು ಬೆಂಬಲಿಗರೊಂದಿಗೆ ಅಧಿಕೃತವಾಗಿ ಕೇಸರಿ ಪಡೆಗೆ ಸೇರಿದರು. ಮಾಜಿ ಸಚಿವ ಎಂ. ಚಂದ್ರಪ್ಪ ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ಪಿ. ಹರೀಶ್ ಅವರು ಮುಖಂಡರನ್ನು ಪಕ್ಷಕ್ಕೆ ಬರಮಾಡಿಕೊಂಡರು.
ದಕ್ಷಿಣ ಕ್ಷೇತ್ರದ ಸಮಗ್ರ ಅಭಿವೃದ್ಧಿ ಮತ್ತು ಬದಲಾವಣೆಯ ಆಕಾಂಕ್ಷೆಯೊಂದಿಗೆ, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತ ವೈಖರಿಯನ್ನು ಮೆಚ್ಚಿ ಈ ನಿರ್ಧಾರ ಕೈಗೊಂಡಿರುವುದಾಗಿ ಸೇರ್ಪಡೆಗೊಂಡ ಮುಖಂಡರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಅನಿಲ್ ಕುಮಾರ್, ವೀರಭದ್ರಪ್ಪ, ರೋಹಿಣಿ ಅನಿಲ್ ಕುಮಾರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.





Leave a comment