Home ದಾವಣಗೆರೆ ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಟಿಕೆಟ್ ಬಗ್ಗೆ ಗೊಂದಲ ಸೃಷಿಸುವುದು ಬೇಡ: ಒಟ್ಟಾಗಿ ಅಭ್ಯರ್ಥಿ ಗೆಲ್ಲಿಸಲು ಪಣ ತೊಡೋಣ ಎಂದ ಮಲ್ಲಣ್ಣ
ದಾವಣಗೆರೆಬೆಂಗಳೂರು

ದಾವಣಗೆರೆ ದಕ್ಷಿಣ ಬೈ ಎಲೆಕ್ಷನ್ ಟಿಕೆಟ್ ಬಗ್ಗೆ ಗೊಂದಲ ಸೃಷಿಸುವುದು ಬೇಡ: ಒಟ್ಟಾಗಿ ಅಭ್ಯರ್ಥಿ ಗೆಲ್ಲಿಸಲು ಪಣ ತೊಡೋಣ ಎಂದ ಮಲ್ಲಣ್ಣ

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಟಿಕೆಟ್ ಫೈಟ್ ಜೋರಾಗಿದೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪರ ನೇತೃತ್ವದಲ್ಲಿ ಮುಖಂಡರು, ಕಾರ್ಯಕರ್ತರು ಬೆಂಗಳೂರಿಗೆ ಹೋಗಿ ಸಿಎಂ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿದೆ. ಈ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರೂ ಹಾಜರಿದ್ದು, ಈ ವೇಳೆ ಮಹತ್ವದ ಸಂದೇಶ ಕೊಟ್ಟಿದ್ದಾರೆ.

ಟಿಕೆಟ್ ಹಂಚಿಕೆ ವಿಚಾರವಾಗಿ ದಾವಣಗೆರೆಯಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಸೂಕ್ತ ಅಭ್ಯರ್ಥಿಗೆ ಟಿಕೆಟ್ ನೀಡುವಂತೆ ಮಲ್ಲಿಕಾರ್ಜುನ್ ಅವರು ಮನವಿ ಮಾಡಿದರು. ಈ ವೇಳೆ ಅಲ್ಲಿಯೇ ಹಾಜರಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶಾಮನೂರು ಶಿವಶಂಕರಪ್ಪರ ನಿಧನದಿಂದ ತೆರವಾಗಿರುವ ಸ್ಥಾನಕ್ಕೆ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡುವಂತೆ ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಿಕೊಂಡರು.

ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ದಾವಣಗೆರೆ ಜಿಲ್ಲೆ ಅಭಿವೃದ್ಧಿಗೆ ಕಟಿಬದ್ದರಾಗಿದ್ದಾರೆ. ಶಾಮನೂರು ಶಿವಶಂಕರಪ್ಪರು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅವರಿಲ್ಲದ ಕ್ಷೇತ್ರದಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ. ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ಕೊಟ್ಟಿದ್ದೇ ಆದರೆ ಗೆಲುವು ಕಟ್ಟಿಟ್ಟ ಬುತ್ತಿ. ಹಾಗಾಗಿ, ಸಮರ್ಥ್ ಅವರಿಗೆ ಟಿಕೆಟ್ ನೀಡುವಂತೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ನೇತೃತ್ವದ ನಿಯೋಗ ಒತ್ತಾಯಿಸಿತು.

ಮುಖ್ಯಾಂಶಗಳು: ಒಗ್ಗಟ್ಟಿನ ಮಂತ್ರ ಜಪಿಸಿದ ಮಲ್ಲಣ್ಣ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚಿಸಿತು. ಈ ಸಂದರ್ಭದ ಪ್ರಮುಖ ಬೆಳವಣಿಗೆಗಳು ಕೆಳಗಿನಂತಿವೆ:

  • ಸಮರ್ಥ್ ಶಾಮನೂರು ಪರ ಬ್ಯಾಟಿಂಗ್: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿರುವ ಈ ಸ್ಥಾನಕ್ಕೆ ಅವರ ಮೊಮ್ಮಗ ಸಮರ್ಥ್ ಶಾಮನೂರು ಅವರಿಗೆ ಟಿಕೆಟ್ ನೀಡಬೇಕೆಂದು ಕಾರ್ಯಕರ್ತರು ಮತ್ತು ಮುಖಂಡರು ಒತ್ತಾಯಿಸಿದರು.

  • ಗೊಂದಲಕ್ಕೆ ಆಸ್ಪದ ಬೇಡ: ಟಿಕೆಟ್ ವಿಚಾರವಾಗಿ ಗೊಂದಲ ಸೃಷ್ಟಿಸಿಕೊಂಡು ವಿರೋಧ ಪಕ್ಷದವರಿಗೆ ಅನುಕೂಲ ಮಾಡಿಕೊಡುವುದು ಬೇಡ ಎಂದು ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.

  • ಗೆಲುವೇ ಗುರಿ: ದಾವಣಗೆರೆ ದಕ್ಷಿಣವು ಸೂಕ್ಷ್ಮ ಕ್ಷೇತ್ರವಾಗಿರುವುದರಿಂದ, ಎಲ್ಲರೂ ಒಟ್ಟಾಗಿ ಶ್ರಮಿಸಿ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸುವತ್ತ ಗಮನಹರಿಸಬೇಕು ಎಂದು ಅವರು ಕರೆ ನೀಡಿದರು.

ಈ ವೇಳೆ ಮಾತನಾಡಿದ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ಇಷ್ಟೊಂದು ಸಂಖ್ಯೆಯಲ್ಲಿ ಮುಖಂಡರು ಮತ್ತು ಕಾರ್ಯಕರ್ತರು ಬಂದಿರುವುದು ಖುಷಿ ವಿಚಾರ. ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ನಮ್ಮ ಮೇಲೆ ಇಷ್ಟೊಂದು ಪ್ರೀತಿ ತೋರುತ್ತಿದ್ದಾರೆ. ಅವರಿಗೆ ಚಿರಋಣಿ ಎಂದರು.

ಉಪಚುನಾವಣೆ ವಿಚಾರವಾಗಿ ಮನವಿ ಮಾಡಲು ನೀವೆಲ್ಲರೂ ಬಂದಿದ್ದೀರಿ. ನಿಮಗೆ ತುಂಬುಹೃದಯದಿಂದ ಧನ್ಯವಾದ ಹೇಳುತ್ತೇನೆ. ಅವರೂ ಇವರು ಎಂದುಕೊಂಡು ವಾತಾವರಣ ಹಾಳು ಮಾಡುವುದು ಬೇಡ. ವಾತಾವರಣ ಹಾಳು ಮಾಡಿ ವಿರೋಧ ಪಕ್ಷದವರಿಗೆ ಸುಲಭವಾಗಿ ಹಾಸಿಗೆ ಹಾಸಿ ಕೊಟ್ಟಂತೆ ಆಗುವುದಕ್ಕೆ ಆಸ್ಪದ ಕೊಡಬಾರದು. ದಾವಣಗೆರೆ ದಕ್ಷಿಣ ಕ್ಷೇತ್ರವು ಸೂಕ್ಷ್ಮ ಸ್ಥಳ. ಈ ನಿಟ್ಟಿನಲ್ಲಿ ಎಲ್ಲರೂ ಸೇರಿ ಒಟ್ಟಾಗಿ ಗೆಲ್ಲುವ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಕೊಡಿಸಿ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲು ಶ್ರಮಿಸೋಣ ಎಂದು ಕರೆ ನೀಡಿದರು.

Share

Leave a comment

Leave a Reply

Your email address will not be published. Required fields are marked *