ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಸಾದಿಕ್ ಪೈಲ್ವಾನ್ ಒಳ್ಳೆಯ ಮನುಷ್ಯ. ಆದರೆ ದಿಕ್ಕು ತಪ್ಪಿಸಿದವರು ಹಲವು ಮಂದಿ ಇದ್ದಾರೆ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಬೇಸರ ವ್ಯಕ್ತಪಡಿಸಿದರು.
ಹಳೇ ದಾವಣಗೆರೆಯ ಸಾದಿಕ್ ಪೈಲ್ವಾನ್ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ ಅವರು, ಸಾದಿಕ್ ಪೈಲ್ವಾನ್ ಗೆ ಯಾವ ಭರವಸೆ ಕೊಟ್ಟಿಲ್ಲ. ಯಾವ ಸ್ಥಾನಮಾನ ಕುರಿತಂತೆ ಮಾತುಕತೆ ಆಗಿಲ್ಲ ಎಂದು ಸ್ಪಷ್ಟಪಡಿಸಿದರು.
ಪೈಲ್ವಾನ ಒಳ್ಳೆಯ ಮನುಷ್ಯ. ದಿಕ್ಕು ತಪ್ಪಿಸಿದವರು ಬಹಳ ಜನರು ಇದ್ದಾರೆ. ಸಂದರ್ಶನದಲ್ಲಿ ಸ್ಪಷ್ಟವಾಗಿ ಮಾತನಾಡಿದ್ದೇವೆ. ಸಾದಿಕ್ ಪೈಲ್ವಾನ್ ಸುಳ್ಳು ಹೇಳಲ್ಲ. ಆಸೆ ಆಮೀಷಗಳಿಗೆ ಒಳಗಾಗಿಲ್ಲ. ನಾನೇ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ, ಡಿಸಿಎಂ ಡಿ. ಕೆ. ಶಿವಕುಮಾರ್ ಜೊತೆ ಮಾತನಾಡಿದ್ದೆ. ಸಾದಿಕ್ ಪೈಲ್ವಾನ್ ಭೇಟಿಯಾಗುವುದು ಒಂದು ದಿನ ತಡವಾಗಿತ್ತು. ನಾಮಪತ್ರ ವಾಪಸ್ ತೆಗೆಯಲು ಸಮಯ ಮೀರಿ ಹೋಗಿತ್ತು. ಹಾಗಾಗಿ, ಬೆಂಗಳೂರಿಗೆ ಹೋಗಿ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿ ಚಹಾ ಕುಡಿದು ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸುವುದಾಗಿ ಘೋಷಿಸಿದ್ದಾರೆ. ಎಲ್ಲವೂ ಸರಿ ಹೋಗಿದೆ ಎಂದು ತಿಳಿಸಿದರು.
11 ಮುಸ್ಲಿಂ ಅಭ್ಯರ್ಥಿಗಳು ಕಣದಲ್ಲಿದ್ದು, ಸಿಎಂ ಇಬ್ರಾಹಿಂ ಬೆಂಬಲ ಮಾಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ನನಗೇನು ಹೆಚ್ಚು ಗೊತ್ತಿಲ್ಲ. ಒಳ್ಳೆ ರೀತಿಯಿಂದ ಕಾಂಗ್ರೆಸ್ ಪಕ್ಷಕ್ಕೆ ದುಡಿಯುವಂತೆ ಕಾರ್ಯಕರ್ತರಿಗೆ ಸೂಚಿಸಿದ್ದೇವೆ ಎಂದು ತಿಳಿಸಿದರು.





Leave a comment