ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯಲ್ಲಿ ಗೆಲ್ಲುವ ಸಮರ್ಥ ಅಭ್ಯರ್ಥಿಗೆ ಟಿಕೆಟ್ ಘೋಷಿಸಿ. ಭಿನ್ನಾಭಿಪ್ರಾಯ ಬದಿಗೊತ್ತಿ ನಗುನಗುತ್ತಾ ಚುನಾವಣೆ ಮಾಡೋಣ. ಘೋಷಣೆ ಮಾಡುವುದಿದ್ದರೆ ಈಗಲೇ ಮಾಡಿ. ಈ ಹಿಂದೆ ಆದಂತೆ ಆಗುವುದು ಬೇಡ ಎಂದು ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಹೇಳಿದ್ದಾರೆ.
ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪ ಚುನಾವಣೆ ನಿಗದಿ ಆದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕರೆದಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ನಮಗೆ ಅವರು ಇವರು ಎಂದೇನಿಲ್ಲ. ಕಾಂಗ್ರೆಸ್ ಪಕ್ಷವು ಗೆಲ್ಲುವ ಅಭ್ಯರ್ಥಿಯನ್ನು ಗುರುತಿಸಿ ಟಿಕೆಟ್ ನೀಡಿ. ಚುನಾವಣೆ ವೇಳೆ ಹೊರಗೆ ಬರುವವರನ್ನು ನಿಲ್ಲಿಸುವುದು ಬೇಡ. ಹಿಂದಿನ ಚುನಾವಣೆಯಲ್ಲಿ ಕೆಲಸ ಮಾಡಿದವರು, ಕಟ್ಟಕಡೆಯ ವ್ಯಕ್ತಿ, ಕಾರ್ಯಕರ್ತರನ್ನು ನಿಲ್ಲಿಸಿ. ಇಂದು ಬಂದು ಟಿಕೆಟ್ ಗೆ ಅರ್ಜಿ ಸಲ್ಲಿಸಿ ಬಳಿಕ ಬೆಂಗಳೂರಿಗೆ ಹೋದರು, ಇನ್ನೆಲ್ಲಿಗೋ ಹೋದರು ಎಂಬುವವರು ಬೇಡ. ಯಾರನ್ನಾದರೂ ನಿಲ್ಲಿಸಿ, ಒಳ್ಳೆಯವರಿಗೆ ನೀಡಿ ಎಂದು ಸಲಹೆ ನೀಡಿದರು.
ಅವರಿಗೆ ಟಿಕೆಟ್ ಕೊಡಿ, ಇವರಿಗೆ ಟಿಕೆಟ್ ಕೊಡಿ ಎಂದರೆ ನಾವು ಹೇಳಲು ತಯಾರಿಲ್ಲ. ಒಳ್ಳೆಯ ಮತ್ತು ಸೂಕ್ತ ಅಭ್ಯರ್ಥಿ ಆರಿಸಿ. ಕಾಂಗ್ರೆಸ್ ಪಕ್ಷಕ್ಕೆ ದುಡಿದ ನಿಷ್ಠಾವಂತ ಕಾರ್ಯಕರ್ತರನ್ನು ಆರಿಸಬೇಕು ಎಂದು ಹೇಳಿದರು.
ಎಲ್ಲರೂ ಹಿರಿಯರಿದ್ದಾರೆ. ಎಲ್ಲರನ್ನೂ ಸೇರಿಸಿ ಒಗ್ಗಟ್ಟಿನಿಂದ ಹೋಗಬೇಕು. ಯಾವುದೇ ಸಮಾಜ ಇರಬಹುದು. ಆ ಸಮಾಜ, ಈ ಸಮಾಜ ಎನ್ನೋದಲ್ಲ. ಕಾಂಗ್ರೆಸ್ ಪಕ್ಷವೇ ಒಂದು ಸಮಾಜ, ಒಂದು ಜಾತಿ. ಎಲ್ಲರನ್ನೂ ಒಳಗೊಂಡಿರುವ ಪಕ್ಷ. ಕುಳಿತು ಚರ್ಚಿಸಿ ತೀರ್ಮಾನಿಸಿ. ನನ್ನ ಸಂಪೂರ್ಣ, ಸಹಕಾರ ಬೆಂಬಲ ಇದೆ ಎಂದು ಹೇಳಿದರು.
- Assembly Byelection 2026
- Candidate Announcement.
- Congress Candidate Selection
- Davanagere Politics
- Davanagere South Byelection
- Karnataka Congress
- Shamanur Shivashankarappa
- SS Mallikarjun
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ
- ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ
- ಕಾಂಗ್ರೆಸ್ ಸಭೆ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ವಿಧಾನಸಭಾ ಚುನಾವಣೆ 2026
- ಶಾಮನೂರು ಶಿವಶಂಕರಪ್ಪ





Leave a comment