ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಚುನಾವಣಾ ಕಣ ರಂಗೇರುತ್ತಿದೆ. ಕಾಂಗ್ರೆಸ್ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಮೂರ್ನಾಲ್ಕು ಮಂದಿ ಇದ್ದಾರೆ. ಅದರಲ್ಲಿ ಪ್ರಮುಖವಾಗಿ ಕಾಂಗ್ರೆಸ್ ಯುವ ನಾಯಕ, ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಘಟಕದ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುದ್ದಿಕ್ಷಣ ನ್ಯೂಸ್ ಮೀಡಿಯಾ ಜೊತೆಗೆ ಎಕ್ಸ್ ಕ್ಲ್ಯೂಸಿವ್ ಆಗಿ ಖಾಲಿದ್ ಅಹ್ಮದ್ ಅವರು ಮಾತನಾಡಿದ್ದಾರೆ.
ಸುದ್ದಿಕ್ಷಣ ಪ್ರಶ್ನೆ: ಬೈ ಎಲೆಕ್ಷನ್ ಬಗ್ಗೆ?
ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ನನ್ನ ಹೆಸರು ಕೇಳಿ ಬರುತ್ತಿದೆ. ತಂದೆ ಸೈಯದ್ ಸೈಫುಲ್ಲಾ ಅವರು ಕಳೆದ 30 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಕ್ಷೇತ್ರದಲ್ಲಿ ಟಿಕೆಟ್ ನೀಡಿದರೆ ಖಂಡಿತ ಸ್ಪರ್ಧೆ ಮಾಡುತ್ತೇನೆ. ನಾನೂ ಸಹ ಟಿಕೆಟ್ ಆಕಾಂಕ್ಷಿ. ಪಕ್ಷದ ಚೌಕಟ್ಟಿನೊಳಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಹೇಳಿದ್ದೇನೆ. ಪಕ್ಷ ಯಾರಿಗೆ ಟಿಕೆಟ್ ನೀಡಿದರೂ ಗೆಲುವಿಗೆ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ.
ಸುದ್ದಿಕ್ಷಣ ಪ್ರಶ್ನೆ: ನಿಮ್ಮ ಹೆಸರು ಪ್ರಬಲವಾಗಿ ಕೇಳಿ ಬರುತ್ತಿದೆ?
ನಾನು ಎಂದಿಗೂ ಪಕ್ಷದ ವಿರುದ್ಧ ಹೋಗಿಲ್ಲ, ಹೋಗುವುದೂ ಇಲ್ಲ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧನಿದ್ದೇನೆ. ದಕ್ಷಿಣದಲ್ಲಿ ಕಾಂಗ್ರೆಸ್ ಪಕ್ಷ ಗೆಲ್ಲಬೇಕು ಎಂಬುದಷ್ಟೇ ನಮ್ಮ ಗುರಿ. ನಾನು ಟಿಕೆಟ್ ನೀಡುವಂತೆ ಕೇಳಿದ್ದೇನೆ. ಕೊಟ್ಟರೆ ಈ ಬಾರಿಯ ಬೈ ಎಲೆಕ್ಷನ್ ನಲ್ಲಿ ಗೆಲ್ಲುವ ವಿಶ್ವಾಸ ಇದೆ. ಎಲ್ಲಾ ವರ್ಗದವರು, ಜಾತಿಯವರು, ಧರ್ಮದವರು ಬೆಂಬಲಿಸುತ್ತಾರೆ ಎಂಬ ವಿಶ್ವಾಸ ಇದೆ. ದಾವಣಗೆರೆ ದಕ್ಷಿಣ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆ.
ಸುದ್ದಿಕ್ಷಣ ಪ್ರಶ್ನೆ: ಶಾಮನೂರು ಶಿವಶಂಕರಪ್ಪರ ಬಗ್ಗೆ
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿದ್ದ, ಕಾಂಗ್ರೆಸ್ ಹಿರಿಯ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪರ ನಿಧನದಿಂದ ಅನಿರೀಕ್ಷಿತವಾಗಿ ಬೈ ಎಲೆಕ್ಷನ್ ಬಂದಿದೆ. ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಇನ್ನೂ ಕೆಲಸಗಳು ಬಾಕಿ ಇವೆ. ಆ ಕೆಲಸಗಳನ್ನು ಮಾಡಬೇಕಿದೆ. ಈ ಬಾರಿಯ ಉಪಚುನಾವಣೆ ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಠೆಯ ಪ್ರಶ್ನೆ ಎಂಬುದರಲ್ಲಿ ಎರಡು ಮಾತಿಲ್ಲ. ಶಾಮನೂರು ಶಿವಶಂಕರಪ್ಪರ ರಾಜಕೀಯ ಮತ್ತು ವೈಯಕ್ತಿಕ ಜೀವನ ನಮಗೆಲ್ಲಾ ಮಾದರಿ.
ಶಾಮನೂರು ಶಿವಶಂಕರಪ್ಪರು ಶಾಸಕರಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಸಿಸಿ ರಸ್ತೆ, ಶಾದಿ ಮಹಲ್, ಶಿಕ್ಷಣ ಸೇರಿದಂತೆ ಸಾಕಷ್ಟು ಅನುದಾನ ತಂದಿದ್ದಾರೆ. ಕೆಲಸವೂ ಆಗಿವೆ.
ಸುದ್ದಿಕ್ಷಣ ಪ್ರಶ್ನೆ: ಹೇಗೆ ಪ್ರಾರಂಭವಾಯ್ತು ನಿಮ್ಮ ರಾಜಕೀಯ ಜೀವನ?
ಖಾಲಿದ್ ಅವರ ರಾಜಕೀಯ ಪ್ರಯಾಣವು ವಿದ್ಯಾರ್ಥಿ ಜೀವನದ ದಿನಗಳಲ್ಲಿ ಪ್ರಾರಂಭವಾಯಿತು. ವಿದ್ಯಾರ್ಥಿ ಕಾಂಗ್ರೆಸ್ ಚುನಾವಣೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವುದರೊಂದಿಗೆ ವಿದ್ಯಾರ್ಥಿ ನಾಯಕರಾದವರು. ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ಪ್ರೇರಿತರಾಗಿ ಯುವ ಕಾಂಗ್ರೆಸ್ಗೆ ತತ್ವ, ಸಿದ್ಧಾಂತಗಳಡಿ ಕೆಲಸ ಮಾಡಿದವರು. ವಿದ್ಯಾರ್ಥಿ ಮತ್ತು ಯುವ ರಾಜಕೀಯದಲ್ಲಿ ಪ್ರೇರಕ ಶಕ್ತಿಯಾದರು. ಅನುಭವ ಪಡೆದ ಅವರು ಕಿಸ್ಮಾ ಫೌಂಡೇಶನ್ ಅನ್ನು ಸ್ಥಾಪಿಸಿದರು. ಮಿಲ್ಲತ್ ಶೈಕ್ಷಣಿಕ ಮತ್ತು ಕಲ್ಯಾಣ ಸಂಘ ದ ಜಂಟಿ ಕಾರ್ಯದರ್ಶಿಯಾಗಿ ಪ್ರಮುಖ ಪಾತ್ರ ನಿಭಾಯಿಸುತ್ತಿದ್ದಾರೆ.
ನಾನು ಬೂತ್ ಮಟ್ಟದಿಂದ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಬೂತ್ ಮಟ್ಟದಲ್ಲಿಯೂ ಚುನಾವಣೆ ಮೂಲಕವೇ ಗೆದ್ದು ರಾಜಕೀಯ ಪ್ರಾರಂಭ ಮಾಡಿದ್ದೆೇನೆ. 2017ರಲ್ಲಿಯೂ ದಾವಣಗೆರೆ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧೆ ಗೆಲುವು ಸಾಧಿಸಿದ್ದೆ. ಜಿಲ್ಲೆಯ ಎಂಟು ತಾಲೂಕುಗಳಲ್ಲಿಯೂ ಓಡಾಡಿ ಯುವಕರ ಸಂಘಟನೆ ಮಾಡಿದ್ದೆ. ಕಾಂಗ್ರೆಸ್ ಪಕ್ಷದ ಸಂಘಟನೆಗೆ ಕೆಲಸ ಮಾಡಿದ್ದೆ. ಯುವಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೆಳೆಯುವಲ್ಲಿ ಶಕ್ತಿಮೀರಿ ಪ್ರಯತ್ನಿಸಿದ್ದೇನೆ. ಅಧ್ಯಕ್ಷನಾಗಿ ಎಲ್ಲಾ ಕಡೆಗಳಲ್ಲಿ ಓಡಾಡಿ ಪಕ್ಷದ ಅಭ್ಯರ್ಥಿಗಳ ಗೆಲುವಿಗೆ ಚುನಾವಣೆ ವೇಳೆ ಕೆಲಸ ಮಾಡಿದ್ದೇನೆ. ಚುನಾವಣೆ ವೇಳೆಯಲ್ಲಿ ಪಕ್ಷ ಕೊಟ್ಟಿರುವ ಜವಾಬ್ದಾರಿ ನಿಭಾಯಿಸಿದ್ದೇನೆ.
ಸುದ್ದಿಕ್ಷಣ ಪ್ರಶ್ನೆ: ಏನೆಲ್ಲಾ ಕೆಲಸ ಮಾಡಿದ್ದೀರಾ?
ನಾನು ಸುಮಾರು ಹದಿನೈದು ವರ್ಷಗಳಿಗೂ ಅಧಿಕ ಕಾಂಗ್ರೆಸ್ ಪಕ್ಷ ಸಂಘಟನೆಗೆ ದುಡಿದಿದ್ದೇನೆ. 2018, 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಮಾಡಿದ್ದೇನೆ. ಮನೆ ಮನೆಗೆ ಹೋಗಿ ಮತ ಕೇಳಿದ್ದೇನೆ. 2024ರ ಲೋಕಸಭೆ ಚುನಾವಣೆ ವೇಳೆಯೂ ಪಕ್ಷದ ಅಭ್ಯರ್ಥಿ ಪರ ಕೆಲಸ ಮಾಡಿದ್ದೇನೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತನಗೆ ವಹಿಸಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಿದ್ದೇನೆ. ಬೂತ್ ಮಟ್ಟದಿಂದ ಹಿಡಿದು ಪ್ರತಿಯೊಂದು ಕಡೆಯಲ್ಲಿಯೂ ಪ್ರಚಾರ ನಡೆಸಿದ್ದೇನೆ. ಜನರಿಗೆ ಗ್ಯಾರಂಟಿ ಯೋಜನೆಗಳು, ಸಾಧನೆ, ಅಭಿವೃದ್ಧಿ ಸೇರಿದಂತೆ ಪ್ರತಿಯೊಂದು ವಿಚಾರಗಳ ಕುರಿತಂತೆ ಜನರಿಗೆ ಮನವರಿಕೆ ಮಾಡಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿಸಿದ್ದೇನೆ.
ಸುದ್ದಿಕ್ಷಣ ಪ್ರಶ್ನೆ: ಏನೆಲ್ಲಾ ಸಮಾಜ ಸೇವೆ ಮಾಡಿದ್ದೀರಾ?
ಕೊರೊನಾ ಸಂಕಷ್ಟದ ಕಾಲದಲ್ಲಿ ದಾವಣಗೆರೆ ದಕ್ಷಿಣ ಜನರ ಪರ ನಿಂತಿದ್ದೇನೆ. ಶಕ್ತಿಮೀರಿ ಸಹಾಯ ಮಾಡಿದ್ದೇನೆ. ಇಡೀ ವಿಶ್ವವೇ ಕೊರೊನಾದಿಂದ ಸಂಕಷ್ಟಕ್ಕೆ ಈಡಾಗಿತ್ತು. ಜನರು ಎದುರಿಸಿದ ಸಮಸ್ಯೆಗಳು ಇಂದಿಗೂ ಕಣ್ಮುಂದೆ ಮುಂದೆ ಬಂದರೆ ನೋವಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರ ಸಹಾಯಕ್ಕಾಗಿ ಆಕ್ಸಿಜನ್ ಸಿಲಿಂಡರ್, ರೇಷನ್ ಕಿಟ್ಸ್, ಸ್ಯಾನಿಟೈಸರ್ ಸೇರಿದಂತೆ ಕೆಎಸ್ಎಸ್ ಫೌಂಡೇಶನ್ ಮೂಲಕ ಸಹಾಯ ಹಸ್ತ ಚಾಚಿದ್ದೇನೆ. ಕರೆಕಟ್ಟೆ ಸೈಯದ್ ಸೈಫುಲ್ಲಾ ಫೌಂಡೇಶನ್ ಮೂಲಕ ಹಲವು ಜನಪರ, ಜೀವಪರ ಕಾರ್ಯಕ್ರಮಗಳನ್ನು ನಡೆಸಲಾಗಿದೆ.
ಸುದ್ದಿಕ್ಷಣ ಪ್ರಶ್ನೆ: ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಬೇಕೆಂಬ ಕೂಗು ಈ ಬಾರಿ ಪ್ರಬಲವಾಗಿದೆಯಲ್ವಾ?
ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ ಟಿಕೆಟ್ ಕೇಳುತ್ತಿರುವುದಲ್ಲ. ಕಳೆದ 35 ವರ್ಷಗಳಿಂದಲೂ ಅಲ್ಪಸಂಖ್ಯಾತ ಸಮುದಾಯದವರು ಬೇಡಿಕೆ ಇಡುತ್ತಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡ ನಿರ್ಧಾರಕ್ಕೆ ಆಗಿನಿಂದಲೂ ಬದ್ಧರಿದ್ದೇವು. ಈಗಲೂ ಬದ್ಧರಾಗಿದ್ದೆವು. ಈಗಲೂ ಬದ್ಧರಾಗಿದ್ದೇವೆ. ಕಾಂಗ್ರೆಸ್ ಪಕ್ಷದಲ್ಲಿ ಮೊದಲಿನಿಂದಲೂ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರವೇ ಅಂತಿಮ. ಅದಕ್ಕೆ ತಲೆಬಾಗಿ ಕೆಲಸ ಮಾಡುತ್ತೇವೆ. ಟಿಕೆಟ್ ನೀಡಿದರೆ ನಾನೂ ಕೂಡ ಸ್ಪರ್ಧೆ ಮಾಡುತ್ತೇನೆ. ಬೇರೆಯವರಿಗೆ ನೀಡಿದರೂ ಗೆಲುವಿಗೆ ಶ್ರಮಿಸುತ್ತೇನೆ. ಯಾವುದೇ ರೀತಿಯ ಗೊಂದಲಕ್ಕೆ ಆಸ್ಪದ ಆಗಬಾರದು ಎಂಬುದು ನನ್ನ ಉದ್ದೇಶ.
ನಮ್ಮ ನಾಯಕರಾದ ಎಸ್. ಎಸ್. ಮಲ್ಲಿಕಾರ್ಜುನ್ ಹಾಗೂ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ. ಎಸ್. ಎಸ್. ಮಲ್ಲಿಕಾರ್ಜುನ್ ಮತ್ತು ಪ್ರಭಾ ಮಲ್ಲಿಕಾರ್ಜುನ್ ಅವರೂ ಸೇರಿದಂತೆ ಪಕ್ಷದ ನಾಯಕರೆಲ್ಲರೂ ನಿರ್ಧರಿಸಿ ಟಿಕೆಟ್ ನೀಡಿದರೆ ಖಂಡಿತವಾಗಿ ಸ್ಪರ್ಧಿಸುತ್ತೇನೆ. ಎಲ್ಲರ ಸಹಕಾರ ಸಿಗುತ್ತೆ ಎಂಬ ವಿಶ್ವಾಸ ಇದೆ. ಹೈಕಮಾಂಡ್ ಯಾರಿಗೆ ಬಿ ಫಾರಂ ನೀಡಿದರೂ ಸ್ವಾಗತಿಸುತ್ತೇನೆ.
ಸುದ್ದಿಕ್ಷಣ ಪ್ರಶ್ನೆ: ನಿಮ್ಮ ತಂದೆ ಸೈಯದ್ ಸೈಫುಲ್ಲರ ರಾಜಕೀಯ ಜೀವನದ ಬಗ್ಗೆ
ತಂದೆ ಸೈಯದ್ ಸೈಫುಲ್ಲಾ ಅವರು 1994ರಲ್ಲಿಯೇ ಕಾಂಗ್ರೆಸ್ ನಲ್ಲಿ ಪ್ರಭಾವ ಹೊಂದಿದವರು. ಆಗ ಮುಖ್ಯಮಂತ್ರಿಯಾಗಿದ್ದ ವೀರಪ್ಪ ಮೊಯ್ಲಿ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು. ಆದರೆ, ಟಿಕೆಟ್ ಸಿಕ್ಕಿರಲಿಲ್ಲ. ಜಾಫರ್ ಷರೀಫ್ ಅವರು ಕೊನೆ ಗಳಿಗೆಯಲ್ಲಿ ಟಿಕೆಟ್ ಕೈ ತಪ್ಪಲು ಕಾರಣವಾಗಿದ್ದರು. ಮಾತ್ರವಲ್ಲ ದಾವಣಗೆರೆಗೆ ಬಂದಾಗ ಈ ಮಾತನ್ನು ಸ್ವತಃ ಜಾಫರ್ ಷರೀಫ್ ಅವರೇ ಹೇಳಿದ್ದರು. ಸೈಯದ್ ಸೈಫುಲ್ಲಾ ಅವರಿಗೆ ದಾವಣಗೆರೆಯಲ್ಲಿ ಟಿಕೆಟ್ ನೀಡಲು ತೀರ್ಮಾನಿಸಲಾಗಿತ್ತು. ಮುಂದೆ ಅವಕಾಶಗಳಿವೆ ಎಂದು ಆಗ ಶಾಮನೂರು ಶಿವಶಂಕರಪ್ಪನವರಿಗೆ ಟಿಕೆಟ್ ನೀಡಲಾಗಿತ್ತು.
ಕೆಪಿಸಿಸಿ ಕಾರ್ಯದರ್ಶಿಗಳಾಗಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕ ರಾಜ್ಯ ಉಪಾಧ್ಯಕ್ಷರಾಗಿ, ಕೆಪಿಸಿಸಿ ಸದಸ್ಯರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ದಾವಣಗೆರೆಯಲ್ಲಿ ತಮ್ಮದೇ ಆದ ಪ್ರಾಬಲ್ಯ ಹೊಂದಿದ್ದ ತಂದೆಯವರಾದ ಸೈಯದ್ ಸೈಫುಲ್ಲಾ ಅವರು ಕಳೆದ 40 ವರ್ಷಗಳಿಂದಲೂ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ.
ಮೊದಲಿನಿಂದಲೂ ಸಿದ್ದರಾಮಯ್ಯರಿಗೆ ತಂದೆಯವರು ಆಪ್ತರು. 2006ರಲ್ಲಿ ನಡೆದ ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಸಿದ್ದರಾಮಯ್ಯರ ಪರವಾಗಿ ಹೋರಾಟ ಮಾಡಿದವರು.
ಬರೋಬ್ಬರಿ 20 ದಿನಗಳ ಕಾಲ ಮೈಸೂರು ಜಿಲ್ಲೆಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಇದ್ದು ಓಡಾಡಿ ಗೆಲ್ಲಿಸಿದ್ದರು. ಮುಸ್ಲಿಂ ಸಮುದಾಯದ ಮತಗಳು ಬರುವಂತೆ ಮಾಡಿದ್ದರು.
ಬಿಜೆಪಿ – ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ನಿಲ್ಲಿಸಿದ್ದರೂ, ಜೆಡಿಎಸ್ ನ ಸಾಂಪ್ರಾದಾಯಿಕ ಮುಸ್ಲಿಂ ಮತಗಳು ಸಿದ್ದರಾಮಯ್ಯರಿಗೆ ಬರುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಇದು ಸಿದ್ದರಾಮಯ್ಯರಿಗೂ ಗೊತ್ತು.
ಇನ್ನು ಸಿದ್ದರಾಮಯ್ಯರು ಅಹಿಂದ ಸಮಾವೇಶ ಆಯೋಜನೆ ಮಾಡುವಾಗ, ರಾಜ್ಯಾದ್ಯಂತ ಸಂಚರಿಸುವಾಗ ಬೆನ್ನೆಲುಬಾಗಿ ನಿಂತಿದ್ದರು.
ಅಂದಿನಿಂದ ಸಿದ್ದರಾಮಯ್ಯರ ಮತ್ತಷ್ಟು ಹತ್ತಿರವಾದರು. ಅಹಿಂದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಹುಬ್ಬಳ್ಳಿ, ಹಾಸನ, ಮೈಸೂರು, ತುಮಕೂರು, ಬೆಂಗಳೂರು, ದಾವಣಗೆರೆ ಸೇರಿದಂತೆ ಬೇರೆ ಬೇರೆ ಕಡೆಗಳಲ್ಲಿ ಸಮಾವೇಶ ನಡೆದಾಗಲೂ ಮುಂಚೂಣಿಯಲ್ಲಿದ್ದರು.
ಸಿದ್ದರಾಮಯ್ಯರು ರಾಜಕೀಯ ಉತ್ತುಂಗಕ್ಕೇರಿದ್ದಾರೆ. ಎರಡು ಬಾರಿ ಮುಖ್ಯಮಂತ್ರಿಯೂ ಆಗಿದ್ದಾರೆ. ಆದರೆ ಆಪ್ತತೆ ಕಡಿಮೆಯಾಗಿಲ್ಲ. ಸಿದ್ದರಾಮಯ್ಯರ ಬೆಳವಣಿಗೆಯಲ್ಲಿ ತಂದೆ ಸೈಯದ್ ಸೈಫುಲ್ಲ ಅವರು ಸಾಕಷ್ಟು ದುಡಿದಿದ್ದಾರೆ. ಆದರೆ ಇದುವರೆಗೆ ಒಮ್ಮೆಯೂ ವಿಧಾನ ಪರಿಷತ್ ಸದಸ್ಯರಾಗಲೀ, ಶಾಸಕರಾಗಲೀ ಆಗಿಲ್ಲ.
ಸುದ್ದಿಕ್ಷಣ ಪ್ರಶ್ನೆ: ಕೊನೆಯದಾಗಿ ಟಿಕೆಟ್ ಸಿಗುವ ವಿಶ್ವಾಸ ಇದೆಯೇ?
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಕೇಳುವ ಹಕ್ಕಿದೆ. ನಾವು ಕೇಳಿದ್ದೇವೆ. ಪಕ್ಷವು ಯಾರಿಗೆ ಟಿಕೆಟ್ ಕೊಟ್ಟರೂ ನಿರ್ಧಾರಕ್ಕೆ ತಲೆಬಾಗಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಪಕ್ಷದ ಅಭ್ಯರ್ಥಿ ಗೆಲ್ಲಿಸುತ್ತೇವೆ. ನನಗೆ ಟಿಕೆಟ್ ಕೊಟ್ಟರೂ ಗೆಲ್ಲುತ್ತೇನೆಂಬ ವಿಶ್ವಾಸ ಇದೆ.
ಎಲ್ಲವೂ ಹೈಕಮಾಂಡ್ ಗೆ ಬಿಟ್ಟ ವಿಚಾರ. ಟಿಕೆಟ್ ಸಿಕ್ಕರೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನಡೆಯುತ್ತೇನೆ. ನಾನು ಪಕ್ಷದ ಶಿಸ್ತಿನ ಸಿಪಾಯಿ. ಟಿಕೆಟ್ ಯಾರಿಗೆ ಕೊಟ್ಟರೂ ಶ್ರಮಿಸುತ್ತೇನೆ. ಶಕ್ತಿಮೀರಿ ದುಡಿಯುತ್ತೇನೆ. ಪಕ್ಷದ ತತ್ವ, ಸಿದ್ಧಾಂತ ಬಿಟ್ಟು ಹೋದವನಲ್ಲ ಎಂದು ಸೈಯದ್ ಖಾಲಿದ್ ಅಹ್ಮದ್ ಅವರು ಹೇಳಿದ್ದಾರೆ.
- Bye-election Updates
- Congress Ticket Aspirant
- DAVANAGERE NEWS
- Davanagere South Bye-election
- Davanagere South Constituency.
- Karnataka Politics 2026
- Shamanur Shivashankarappa
- Syed Khalid Ahmed
- Syed Saifulla
- Youth Congress Leader
- ಕರ್ನಾಟಕ ರಾಜಕೀಯ 2026
- ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ
- ದಾವಣಗೆರೆ ನ್ಯೂಸ್
- ಬೈ ಎಲೆಕ್ಷನ್ ಅಪ್ಡೇಟ್ಸ್
- ಯುವ ಕಾಂಗ್ರೆಸ್ ನಾಯಕ
- ಶಾಮನೂರು ಶಿವಶಂಕರಪ್ಪ
- ಸಿದ್ದರಾಮಯ್ಯ ಆಪ್ತ ಸೈಯದ್ ಸೈಫುಲ್ಲಾ
- ಸೈಯದ್ ಖಾಲಿದ್ ಅಹ್ಮದ್

















Leave a comment