Home ದಾವಣಗೆರೆ ಜನರ ಮನದಲಿ ಅಜಾರಮರ ಶಾಮನೂರು ಶಿವಶಂಕರಪ್ಪ: ಆಜಾತಶತ್ರು ರಾಜಕಾರಣಿಯ ಅಭಿವೃದ್ಧಿಯ ನೆನಪಿನಂಗಳ
ದಾವಣಗೆರೆಬೆಂಗಳೂರು

ಜನರ ಮನದಲಿ ಅಜಾರಮರ ಶಾಮನೂರು ಶಿವಶಂಕರಪ್ಪ: ಆಜಾತಶತ್ರು ರಾಜಕಾರಣಿಯ ಅಭಿವೃದ್ಧಿಯ ನೆನಪಿನಂಗಳ

Share
ಶಾಮನೂರು ಶಿವಶಂಕರಪ್ಪ
Share

ದಾವಣಗೆರೆ: ಕರ್ನಾಟಕ ರಾಜ್ಯವಷ್ಟೇ ಅಲ್ಲ ಭಾರತ ದೇಶ ಕಂಡ ಅಪ್ರತಿಮ ರಾಜಕಾರಣಿ ಶಾಮನೂರು ಶಿವಶಂಕರಪ್ಪರು. ರಾಜ್ಯ ರಾಜಕಾರಣದಲ್ಲಿ ಎಂದೂ ಸೋತವರಲ್ಲ. ಒಮ್ಮೆ ಸಂಸದರಾಗಿ ಗೆದ್ದವರು. ಎಂದಿಗೂ ದ್ವೇಷದ ರಾಜಕಾರಣ ಮಾಡಿದವರಲ್ಲ. ಎಲ್ಲಾ ಪಕ್ಷದವರ ಜೊತೆಗೆ ಉತ್ತಮ ಬಾಂಧವ್ಯದ ಜೊತೆಗೆ ದಾವಣಗೆರೆಯು ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ ಹೆಮ್ಮೆ ಶಾಮನೂರು ಶಿವಶಂಕರಪ್ಪರಿಗೆ ಸಲ್ಲುತ್ತದೆ ಎಂದರೆ ಅತಿಶಯೋಕ್ತಿ ಅಲ್ಲ.

ದಾವಣಗೆರೆ ರಾಜಕೀಯದಲ್ಲಿ ಶಾಮನೂರು ಶಿವಶಂಕರಪ್ಪರ ಹೆಸರು ಅಚ್ಚಳಿಯದಂತೆ ಉಳಿದಿದೆ. ಅವರಿಲ್ಲದೇ ನಡೆಯುತ್ತಿರುವ ಮೊದಲ ಚುನಾವಣೆ. ದಾವಣಗೆರೆ ದಕ್ಷಿಣ ವಿಧಾನಸಭಾ ಉಪಚುನಾವಣೆಯು ಶಿವಶಂಕರಪ್ಪರ ಅನಿರೀಕ್ಷಿತ ನಿಧನದಿಂದ ಎದುರಾಗಿದೆ. ಆದರೆ, ಶಾಮನೂರು ಶಿವಶಂಕರಪ್ಪರು ಬದುಕಿರುವವರೆಗೆ ಮಾಡಿದ ಸೇವೆ, ದಾನ ಧರ್ಮ, ದೇಗುಲಗಳಿಗೆ ನೀಡಿದ ದೇಣಿಗೆ, ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ ಪರಿ ಊಹಿಸಲು ಆಗದು.

ಶೈಕ್ಷಣಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ಕ್ಷೇತ್ರಕ್ಕೆ ಶಿವಶಂಕರಪ್ಪರು ನೀಡಿರುವ ಕೊಡುಗೆ ಅನನ್ಯ ಅಪಾರ. ಕೇವಲ ಮೂರು ದಶಕಗಳಲ್ಲಿ ಇಷ್ಟೊಂದು ಅಭಿವೃದ್ಧಿ ಪಥದಲ್ಲಿ ದಾವಣಗೆರೆ ಸಾಗಲು ಶಾಮನೂರು ಶಿವಶಂಕರಪ್ಪರ ದೂರದೃಷ್ಟಿತ್ವ, ಚಿಂತನಶೀಲ ಆಲೋಚನೆ, ಅಭಿವೃದ್ಧಿ ಪರ ಇದ್ದ ಕಾಳಜಿಯೇ ಇದಕ್ಕೆ ಸಾಕ್ಷಿ. ಎಲ್ಲಾ ಪಕ್ಷದವರೊಂದಿಗೆ ಹೊಂದಿದ್ದ ಅವಿನಾಭಾವ ಸಂಬಂಧ ಅವರೊಬ್ಬ ಅಜಾತಶತ್ರು ರಾಜಕಾರಣಿಯಾಗಲು ಕಾರಣ.

ಸೋಲೇ ಕಾಣದ ಶಾಸಕರು:

ಒಟ್ಟು ಆರು ಬಾರಿ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪರು ಒಮ್ಮೆಯು ರಾಜ್ಯ ರಾಜಕಾರಣದಲ್ಲಿ ಸೋಲು ಕಾಣಲಿಲ್ಲ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಗೆದ್ದು ಇತಿಹಾಸ ದಾಖಲಿಸಿದರು. 93ನೇ ವಯಸ್ಸಿನಲ್ಲಿ ಶಾಸಕರಾಗಿ ಗಿನ್ನಿಸ್ ರೆಕಾರ್ಡ್ ಬುಕ್ ನಲ್ಲಿ ಹೆಸರು ಬರೆಸಿದ ಕೀರ್ತಿ ಶಿವಶಂಕರಪ್ಪರಿಗೆ ಸಲ್ಲುತ್ತದೆ. ಶಾಸಕರಾಗಿ ಶಕ್ತಿ ಮೀರಿ ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದ್ದರು. ಜನರಿಗಾಗಿ ಮನ ಮಿಡಿಯುತ್ತಲೇ ಇತ್ತು. ದೈಹಿಕವಾಗಿ ಶಿವಶಂಕರಪ್ಪರು ಇಲ್ಲದಿದ್ದರೂ ಭೌತಿಕವಾಗಿ, ಮಾನಸಿಕವಾಗಿ ಎಲ್ಲರ ಮನದಲ್ಲಿ ನೆಲೆ ನಿಂತಿದ್ದಾರೆ.

ಶಾಮನೂರು ಶಿವಶಂಕರಪ್ಪ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿ ಮೂರನೇ ಬಾರಿ ಆಯ್ಕೆಯಾಗಿದ್ದ ಶಾಮನೂರು ಶಿವಶಂಕರಪ್ಪ ಅವರು ರಾಜ್ಯ ರಾಜಕಾರಣದ ಅತ್ಯಂತ ಹಿರಿಯ ಶಾಸಕರಾಗಿದ್ದರು. ಮುತ್ಸದ್ಧಿ ರಾಜಕಾರಣಿಯೂ ಹೌದು.
ದಾವಣಗೆರೆ ಜನತೆಯ ಪಾಲಿನ ಧಣಿ. ಸೋಲರಿಯದ ಸರದಾರ ಎಂದೇ ಕರೆಯಲ್ಪಡುತ್ತಿದ್ದ ಶಾಮನೂರು ಶಿವಶಂಕರಪ್ಪರು ಇಳಿವಯಸ್ಸಿನಲ್ಲಿಯೂ ಕನ್ನಡಕ ಧರಿಸದೇ ಪತ್ರಿಕೆ ಓದುತ್ತಿದ್ದರೆಂದರೆ ಎಷ್ಟು ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು ಎಂಬುದಕ್ಕೆ
ಸಾಕ್ಷಿ. ಅಂಗಡಿಗೆ ಹೋದರೆ ಬೇಳೆ, ಕಾಳು ಸೇರಿದಂತೆ ಎಲ್ಲವನ್ನೂ ಪರೀಕ್ಷಿಸುತ್ತಿದ್ದರು. ಆಸ್ಪತ್ರೆಯಲ್ಲಿದ್ದಾಗಲೂ ವ್ಯವಹಾರದ ಬಗ್ಗೆ ವಿಚಾರಿಸುತ್ತಿದ್ದ ಪರಿ ಅವರೊಬ್ಬ ಶ್ರಮಿಕರು, ವ್ಯವಹಾರದ ಬಗ್ಗೆ ಎಷ್ಟು ಕಾಳಜಿ, ನಿಷ್ಠೆ ಹೊಂದಿದ್ದರೆಂಬುದು ಗೊತ್ತಾಗುತ್ತದೆ. ಹಾಗಾಗಿ, ಅವರ ಬದುಕೇ ಆದರ್ಶ. ಜೀವನವೇ ಎಲ್ಲರಿಗೂ ಮಾದರಿ.

ದಾವಣಗೆರೆ ಅಭಿವೃದ್ಧಿಗೆ ಕೊಡುಗೆ ಅಪಾರ:

ದಾವಣಗೆರೆ ಇಷ್ಟೊಂದು ವೇಗವಾಗಿ ಅಭಿವೃದ್ಧಿ ಪಥದತ್ತ ಸಾಗಲು ಕೊಟ್ಟಿರುವ ಕೊಡುಗೆ ಅಪಾರ. ದಾವಣಗೆರೆಯ ದಣಿವರಿಯದ ರಾಜಕಾರಣಿ ಎಂದರೆ ಅದು ಎಸ್. ಎಸ್. ಮಾತ್ರ. ರಾಜಕೀಯ ಅಷ್ಟೇ ಅಲ್ಲದೇ ಶಿಕ್ಷಣ ತಜ್ಞರಾಗಿದ್ದರು. ಅತ್ಯುತ್ತಮ
ಕೈಗಾರಿಕೋದ್ಯಮಿಗಳಾಗಿದ್ದರು. ಶೈಕ್ಷಣಿಕ, ಉದ್ಯಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದ ಅಮೃತ ಪುರುಷ ಡಾ. ಶಾಮನೂರು ಶಿವಶಂಕರಪ್ಪರು.

ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪ ಅವರಿಗೆ ಯಾರೂ ಸಾಟಿ ಇರಲಿಲ್ಲ. ದೇಗುಲಗಳಿಗೆ ಅನುದಾನ, ಸಮಾಜಸೇವೆ, ದಾನ ಧರ್ಮಕ್ಕೆ ಹೆಸರುವಾಸಿಯಾಗಿದ್ದರು. ಮಧ್ಯಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲಿ ದಾವಣಗೆರೆ ರಾಜಕಾರಣ ಶಾಮನೂರು
ಶಿವಶಂಕರಪ್ಪರನ್ನು ಬಿಟ್ಟು ಇಲ್ಲ ಎನ್ನುವಂತಾಗಿತ್ತು. ದೇವಸ್ಥಾನಗಳಿಗೆ ಇಳಿ ವಯಸ್ಸಿನಲ್ಲಿಯೂ ಹೋಗುತ್ತಿದ್ದ ಶಿವಶಂಕರಪ್ಪರು ಶ್ರದ್ಧಾ, ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸುತ್ತಿದ್ದರು. ಕಲ್ಲೇಶ್ವರ ದೇಗುಲ, ದುರ್ಗಾಂಬಿಕಾ ದೇವಸ್ಥಾನ, ಶಾಮನೂರು ಆಂಜನೇಯ
ಸ್ವಾಮಿ ದೇವಸ್ಥಾನಕ್ಕೆ ತೆರಳಿ ಇಳಿವಯಸ್ಸಿನಲ್ಲಿ ಪೂಜೆ ಸಲ್ಲಿಸುತ್ತಿದ್ದ ಶಿವಶಂಕರಪ್ಪರ ದೈವ ಭಕ್ತಿಗೆ ಯಾರೂ ಸಾಟಿ ಇಲ್ಲ.

ಎಲ್ಲಾ ವರ್ಗದ ನಾಯಕರು:

ಶಾಮನೂರು ಶಿವಶಂಕರಪ್ಪರು ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದವರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಮಾಜಿ ಸಿಎಂ ಧರ್ಮಸಿಂಗ್, ಪಿಜಿಆರ್ ಸಿಂಧ್ಯಾ, ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಸಿಎಂ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಸೇರಿದಂತೆ ಎಲ್ಲಾ ರಾಜಕಾರಣಿಗಳ ಜೊತೆ ಉತ್ತಮ ಒಡನಾಟ ಹೊಂದಿದ್ದ ಆಜಾತಶತ್ರು ನಾಯಕ.

ಸರ್ಕಾರ ಯಾವುದೇ ಇರಲಿ, ಸಮುದಾಯದ ಪರ, ಶೋಷಿತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರ ನಿಲ್ಲುವ ಶಾಮನೂರು ಶಿವಶಂಕರಪ್ಪರು ದಾವಣಗೆರೆ ಮಾತ್ರವಲ್ಲ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಜಾತ್ಯಾತೀತ ನಾಯಕರೆಂದೇ ಕರೆಯಲ್ಪಡುತ್ತಾರೆ.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷರಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಶಾಮನೂರು ಶಿವಶಂಕರಪ್ಪ ಲಿಂಗಾಯತ ಸಮುದಾಯದ ಪ್ರಮುಖ ನಾಯಕರು. ಪ್ರತ್ಯೇಕ ಲಿಂಗಾಯತ ಧರ್ಮದ ಕೂಗು ಬಂದಾಗ ವೀರಶೈವ ಲಿಂಗಾಯತರು ಒಂದೇ ಎಂದು ಪ್ರತಿಪಾದಿಸಿ ಒಟ್ಟಾಗುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ. ವೀರಶೈವ ಲಿಂಗಾಯತ ಸಮಾಜ ಒಡೆಯಲು ಬಿಡಲಿಲ್ಲ. ಶಿಕ್ಷಣ ತಜ್ಞ, ಕೈಗಾರಿಕೋಧ್ಯಮಿ, ಆದರ್ಶ ರಾಜಕಾರಣಿ ಹೀಗೆ ಹಲವು ಬಿರುದುಗಳಿಂದ ಕರೆಯಲ್ಪಡುವ ಶಾಮನೂರು ಶಿವಶಂಕರಪ್ಪ ಕರ್ನಾಟಕ ಕಂಡ ನಿಷ್ಕಳಂಕ, ಮಾನವೀಯ ನೆಲೆಯ ಅದ್ಭುತ ರಾಜಕಾರಣಿ.

ಜೂನ್ 16, 1931ರಲ್ಲಿ ಕಲ್ಲಪ್ಪ, ಸಾವಿತ್ರಮ್ಮ ದಂಪತಿಯ ಪುತ್ರನಾಗಿ ಜನಿಸಿದ ಶಾಮನೂರು ಶಿವಶಂಕರಪ್ಪ ಅವರು ದ್ವಿತೀಯ ಪಿಯುಸಿ ಯನ್ನು ಆ ಕಾಲದಲ್ಲಿ ಮುಗಿಸಿದ್ದರು. ಪಾರ್ವತಮ್ಮ ಅವರನ್ನು ಮದುವೆಯಾದರು, ಈಗಿನ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಎಸ್ ಎಸ್ ಬಕ್ಕೇಶ್, ಎಸ್ ಎಸ್ ಗಣೇಶ್ ಸೇರಿದಂತೆ ಹೆಣ್ಣು ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳನ್ನು ಕಂಡಿರುವ ಹಿರಿಯ ಜೀವ. ಕಾಟನ್ ಮಿಲ್ ಗಳಿಂದ ದಾವಣಗೆರೆ ಕರ್ನಾಟಕದ ಮ್ಯಾಂಚೆಸ್ಟರ್ ಎಂದೇ ಪ್ರಸಿದ್ಧಿಯಾಗಿತ್ತು. ಆದರೆ ಕೆಲವೊಂದು ತಿಕ್ಕಾಟಗಳಿಂದ ಕಾಟನ್ ಮಿಲ್ ಗಳು ಬಂದ್ ಆದವು, ಆಗ ದಾವಣಗೆರೆಯಲ್ಲಿ ಶಿಕ್ಷಣ ಕ್ಷೇತ್ರ, ವೈದ್ಯಕೀಯ ಕ್ಷೇತ್ರದ ಅಭ್ಯುದಯಕ್ಕೆ ಬೂಸ್ಟ್ ನೀಡಿದವರೇ ಶಾಮನೂರು ಶಿವಶಂಕರಪ್ಪ.

1975ರಲ್ಲಿ ಬಾಪೂಜಿ ವಿದ್ಯಾಸಂಸ್ಥೆ ನೇತೃತ್ವ ವಹಿಸಿಕೊಂಡು ಶಾಲೆ, ಕಾಲೇಜು, ಮೆಡಿಕಲ್ ಕಾಲೇಜು, ಇಂಜಿನಿಯರ್ ಕಾಲೇಜ್ ಗಳನ್ನ ಉನ್ನತ ಸ್ಥಾನಕ್ಕೆ ಏರಿಸಿದ್ದು ಇತಿಹಾಸ. ಡಾ ಶಿವಶಂಕರಪ್ಪ ಅವರು ಕಲೆ, ವಿಜ್ಞಾನ, ವಾಣಿಜ್ಯ, ಕಾನೂನು ನಿರ್ವಹಣೆ,
ಎಂಜಿನಿಯರಿಂಗ್ ಮತ್ತು ವೈದ್ಯಕೀಯ ವಿಭಾಗಗಳಲ್ಲಿ ಶಿಕ್ಷಣ ಸಂಸ್ಥೆಗಳನ್ನ ಉನ್ನತಿಕರಿಸಿದ್ದಾರೆ. ಪ್ರತಿ ವರ್ಷ ಸಾವಿರಾರು ವಿದ್ಯಾರ್ಥಿಗಳು ಈ ಸಂಸ್ಥೆಗಳಿಂದ ಹೊರಬರುತ್ತಾರೆ. ಭಾರತ ಮತ್ತು ವಿದೇಶಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿಯೂ ಕೆಲಸ ಮಾಡುತ್ತಿದ್ದಾರೆ. ಈ ಸಂಸ್ಥೆಗಳ ಸ್ಥಾಪನೆಯು ದಾವಣಗೆರೆ ಜಿಲ್ಲೆಯ ಜನರಿಗೆ ಉದ್ಯೋಗಾವಕಾಶವನ್ನು ಸೃಷ್ಟಿಸಿದೆ. ಈ ಸಂಸ್ಥೆಗಳಲ್ಲಿ ಸಾವಿರಾರು ವಿದ್ಯಾರ್ಥಿಗಳು ಪ್ರವೇಶ ಪಡೆಯುವುದರಿಂದ, ಸಣ್ಣ ವ್ಯಾಪಾರ ಚಟುವಟಿಕೆಗಳು ಅಭಿವೃದ್ಧಿ ಹೊಂದಲು ಉತ್ತಮ ಅವಕಾಶ ಕಲ್ಪಿಸಿಕೊಡಲು ಸಾಧ್ಯವಾಗಿದೆ.

ಕರ್ನಾಟಕ ರಾಜ್ಯದ ದಾವಣಗೆರೆ ಶಿಕ್ಷಣ ಕೇಂದ್ರದ ಸಂಪೂರ್ಣ ಪರಿವರ್ತನೆಗೆ ಕಾರಣಕರ್ತರಾಗಿದ್ದಾರೆ ಡಾ. ಶಾಮನೂರು ಶಿವಶಂಕರಪ್ಪ. ಜನಕಲ್ಯಾಣ ಟ್ರಸ್ಟ್ ಸ್ಥಾಪಿಸಿ 5 ಕೋಟಿ ರೂ. ಮೀಸಲಿಟ್ಟು ದಾವಣಗೆರೆ ಜಿಲ್ಲೆಯ ಬಡ ಮಕ್ಕಳಿಗೆ ನೆರವಾಗಿದ್ದಾರೆ. ಪತ್ರಕರ್ತರ ಪ್ರತಿಭಾವಂತ ಮಕ್ಕಳಿಗಾಗಿ 1 ಕೋಟಿ ರೂ. ಈ ಠೇವಣಿಗಳ ಬಡ್ಡಿಯನ್ನು ಕರ್ನಾಟಕದಾದ್ಯಂತ ಅವರ ಜಾತಿ, ಧರ್ಮ ಇತ್ಯಾದಿಗಳನ್ನು ಲೆಕ್ಕಿಸದೆ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವಾಗಿ ಪಾವತಿಸಲಾಗುತ್ತದೆ. ಚಾಣಾಕ್ಷ ಉದ್ಯಮಿಯಾಗಿರುವ ಅವರು ಅಭಿವೃದ್ಧಿಗೆ ಬ್ಯಾಂಕ್‌ಗಳ ಅಗತ್ಯವನ್ನು ಮುಂದಿಟ್ಟುಕೊಂಡು ಬಾಪೂಜಿ ಸಹಕಾರಿ ಬ್ಯಾಂಕ್ ಸ್ಥಾಪಿಸಿದ್ದಾರೆ.

ಉದ್ಯೋಗಿಗಳಿಗೆ ಮನೆ ನಿರ್ಮಾಣ, ನಿವೇಶನ ಖರೀದಿ, ಮಕ್ಕಳಿಗೆ ಶಿಕ್ಷಣ ಸಾಲ, ವ್ಯಾಪಾರ ಸಾಲಗಳಿಗೆ ಸಾಲ ನೀಡುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ನಗರ ಸಹಕಾರಿ ಬ್ಯಾಂಕ್‌ಗಳ ಸಂಘದ ಗೌರವಾಧ್ಯಕ್ಷರಾಗಿರುವ ಶಾಮನೂರು ಸಹಕಾರಿ ಕ್ಷೇತ್ರದಲ್ಲೂ ಪರಿಣಿತರಾಗಿದ್ದರು.

ಡಾ.ಶಿವಶಂಕರಪ್ಪ ದಾವಣಗೆರೆಯ ಮಹಾನ್ ಉಪಕಾರಿ. ಸಾಮಾಜಿಕ ಉದ್ದೇಶಗಳಿಗಾಗಿ ಉದಾರವಾಗಿ ದಾನ ನೀಡಿದ್ದಾರೆ, ನೀಡುತ್ತಲೇ ಬರುತ್ತಿದ್ದಾರೆ. ದಾವಣಗೆರೆ ಮತ್ತು ರಾಜ್ಯದ ಇತರ ಭಾಗಗಳಲ್ಲಿ, ನೆರೆಯ ರಾಜ್ಯಗಳಲ್ಲಿನ ದೇವಸ್ಥಾನಗಳಲ್ಲಿ ಊಟದ ಹಾಲ್ ಗಳನ್ನು ನಿರ್ಮಿಸಿದ್ದಾರೆ. ಅವರು ಬಡವರಿಗೆ ಉಚಿತವಾಗಿ ನೀಡುವ ಉದ್ದೇಶದಿಂದ ದಾವಣಗೆರೆಯಲ್ಲಿ ಶಿವ ಪಾರ್ವತಿ ಕಲ್ಯಾಣಮಂಟಪ ನಿರ್ಮಿಸಿಕೊಟ್ಟು ಕೊಡುಗೈ ದಾನಿ ಎನಿಸಿಕೊಂಡಿದ್ದರು.

ಸಂಜೀವಿನಿ ಕೊಟ್ಟ ಎಸ್.ಎಸ್.:

ವಿಶ್ವವನ್ನೇ ವ್ಯಾಪಿಸಿದ್ದ ಕೊರೊನಾ ಸಂಕಷ್ಟದ ವೇಳೆಯಲ್ಲಿ ಕೋವಿಡ್ ಲಸಿಕೆಗೆ ಭಾರೀ ಬೇಡಿಕೆ ಇತ್ತು. ಸರ್ಕಾರ ನೀಡದಿದ್ದಾಗ ಸ್ವಂತ ಖರ್ಚಿನಲ್ಲಿಯೇ ಲಸಿಕೆ ಕೊಡಿಸಿದ್ದರು. ಡಾ. ಶಿವಶಂಕರಪ್ಪ ಅವರು. ಬಡವರಿಗಾಗಿ ಬರೋಬ್ಬರಿ 6ಕೋಟಿ ರೂಪಾಯಿ
ಸ್ವಂತ ಹಣ ಪಾವತಿಸಿ 60,000 ಡೋಸ್ ಕೋವಿಡ್ -19 ಲಸಿಕೆಗಳನ್ನು ಖರೀದಿಸಿ ಉಚಿತವಾಗಿ ಜನರಿಗೆ ಹಂಚಿದ್ದು, ಜನಪರ ಕಾಳಜಿಗೆ ಸಾಕ್ಷಿಯಾಗಿತ್ತು.

ಶಿವಶಂಕರಪ್ಪ ಶಿಕ್ಷಣ ತಜ್ಞರಷ್ಟೇ ಅಲ್ಲ, ದೊಡ್ಡ ಉದ್ಯಮಿಯೂ ಹೌದು. ದಾವಣಗೆರೆ ಜಿಲ್ಲೆ ಭದ್ರಾ ಕಾಲುವೆಯಿಂದ ನೀರಾವರಿಗೆ ಒಳಪಡುತ್ತದೆ ಮತ್ತು ಅಕ್ಕಿ ಮತ್ತು ಕಬ್ಬನ್ನು ಮುಖ್ಯ ಬೆಳೆಯಾಗಿ ಬೆಳೆಯಲಾಗುತ್ತದೆ. ರೈತರು ತಮ್ಮ ಕಬ್ಬನ್ನು ಮಾರಾಟ ಮಾಡಲು ಸಕ್ಕರೆ ಕಾರ್ಖಾನೆಯ ಅವಶ್ಯಕತೆ ಇತ್ತು, ದಾವಣಗೆರೆ ಸಮೀಪದ ಕುಕ್ಕುವಾಡದಲ್ಲಿ ದಾವಣಗೆರೆ ಶುಗರ್ ಮಿಲ್ಫ್ ಎಂಬ ಸಕ್ಕರೆ ಕಾರ್ಖಾನೆಯಿದ್ದು ಸರಿಯಾಗಿ ನಿರ್ವಹಣೆಯಾಗುತ್ತಿರಲಿಲ್ಲ, ಅವರು ಕಾರ್ಖಾನೆಯ ಜವಾಬ್ದಾರಿ ವಹಿಸಿಕೊಂಡು ಅದನ್ನು ಆಧುನೀಕರಿಸಿದರು ಮತ್ತು ಈಗ ಅದನ್ನು ಸಮರ್ಥವಾಗಿ ನಡೆಸುತ್ತಿದ್ದಾರೆ. ಜೊತೆಗೆ ದುಗ್ಗಾವತಿಯಲ್ಲಿ ಮತ್ತೊಂದು ಸಕ್ಕರೆ ಕಾರ್ಖಾನೆಯನ್ನು ಸಹ ಪ್ರಾರಂಭಿಸಿದರು. ಇದು ಹಿಂದಿನವರಿಗೆ ತಮ್ಮ ಕಬ್ಬಿನ ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ಉದ್ಯೋಗ ಸಾಮರ್ಥ್ಯವನ್ನು ಸೃಷ್ಟಿಸಿದೆ.

ರಾಜಕೀಯ ಹಿನ್ನೆಲೆ:

ಶಾಮನೂರು ಶಿವಶಂಕರಪ್ಪನವರು 1972ರಲ್ಲಿ ನಗರಸಭೆ ಸದಸ್ಯರಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ದಾವಣಗೆರೆ ದಕ್ಷಿಣ ಕ್ಷೇತ್ರದಿಂದ 2008, 2013, 2018, 2023ರಲ್ಲಿ ಒಟ್ಟು ನಾಲ್ಕು ಬಾರಿ ಎಂಎಲ್ ಎ ಚುನಾವಣೆಯಲ್ಲಿ ಜಯಗಳಿಸಿದ್ದು, 1998-1999ರ ಒಂದು ವರ್ಷದ ಅವಧಿಗೆ ಲೋಕಸಭೆ ಸದಸ್ಯರಾಗಿ ಆಯ್ಕೆಗೊಂಡಿದ್ದರು, 2013ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ತೋಟಗಾರಿಕೆ ಸಚಿವರಾಗಿ ಕಾರ್ಯನಿರ್ವಹಣೆ ಮಾಡಿ ಜನಮನ್ನಣೆ ಪಡೆದವರು, ಮೂರು ದಶಕಗಳಿಂದ ಕೆಪಿಸಿಸಿ ಖಚಾಂಜಿಯಾಗಿ ಕಾರ್ಯ ನಿರ್ವಹಿಸಿದ ಹೆಗ್ಗಳಿಕೆಯೂ ಎಸ್. ಎಸ್. ಅವರದ್ದು.

ಸುವರ್ಣ ಕರ್ನಾಟಕದ ಆತ್ಯುತ್ತಮ ಕೈಗಾರಿಕೋದ್ಯಮಿ, ಸಿರಿಗೆರೆ ಮಠದಿಂದ ಧರ್ಮ ಚೂಡಾಮಣಿ, ಚಿತ್ರದುರ್ಗ ಮಠದಿಂದ ಶಿಕ್ಷಣ ಸುಧಾರಕ, ಅದಿನಾಥ ಪ್ರತಿಷ್ಠಾನದಿಂದ ಶತಮಾನದ ಶ್ರೇಷ್ಟರು, ಇತರ ಪ್ರತಿಫಲಗಳು ಶಿರೋಮಣಿವಿಕಾಸ, ಇಂದಿರಾ ಪ್ರಿಯದರ್ಶಿನಿ, ಸಮಾಜಶ್ರೀ, ಭಾರತ ಗೌರವ, ನಿತ್ಯಸೇವಾಯಜ್ಞಧಾರಿ, ಅಂತರಾಷ್ಟ್ರೀಯ ವ್ಯಾಪಾರ ಕುಶಾಗ್ರಮತಿ ಇತ್ಯಾದಿ, 2008 ರಲ್ಲಿ ಕುವೆಂಪು ವಿಶ್ವವಿದ್ಯಾಲಯ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಅವರ ಅಮೋಘ ಸೇವೆ ಪರಿಗಣಿಸಿ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿದ್ದು ಶಾಮನೂರು ಶಿವಶಂಕರಪ್ಪನವರ ಸೇವೆಗೆ ಸಂದ ಗೌರವ.

ದಾವಣಗೆರೆ ರಸ್ತೆ ಅಗಲೀಕರಣ, ಗಾಜಿನ ಮನೆ, ಮಂಡಕ್ಕಿ ಬಟ್ಟಿಗಳ ಅಭಿವೃದ್ಧಿ, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸಿಸಿ ರಸ್ತೆ, ರಸ್ತೆ ಡಾಂಬರೀಕರಣ, ಮುಸ್ಲಿಂ ಸಮುದಾಯದವರಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಮೂಲಕ ಶಿಕ್ಷಣ, ಸಾಮಾಜಿಕ, ಆರ್ಥಿಕ ಸಬಲೀಕರಣಕ್ಕೆ ಹೆಚ್ಚು ಮಹತ್ವ ನೀಡಿದವರು. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕೋಮುಗಲಭೆಗಳಿಗೆ ಅವಕಾಶ ನೀಡದೇ, ಶಾಂತಿ ನೆಲೆಸುವಂತೆ ಮಾಡಿದ ಶಾಂತಿಪ್ರಿಯರು ಶಾಮನೂರು ಶಿವಶಂಕರಪ್ಪರು.

1990ರ ದಶಕದಲ್ಲಿ ದಾವಣಗೆರೆ ದಕ್ಷಿಣ ಇದ್ದ ರೀತಿಗೂ ಶಾಮನೂರು ಶಿವಶಂಕರಪ್ಪರು ಶಾಸಕರಾಗಿ ಗೆದ್ದ ಬಳಿಕ ಆದ ಅಭಿವೃದ್ಧಿಗೂ ಅಜಗಜಾಂತರ ವ್ಯತ್ಯಾಸ ಇದೆ. ಓಡಾಡಲು ಆಗದಂಥ ಕಿರಿದಾದ ರಸ್ತೆಗಳಿದ್ದವು. ಆದರೆ ಶಿವಶಂಕರಪ್ಪರು ಜನರಿಗೆ ಸೂರು, ವಿದ್ಯುತ್, ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು, ಮುಸ್ಲಿಂ ಸಮುದಾಯದ ಬೇಡಿಕೆಗಳನ್ನು ಈಡೇರಿಸುವ ಮೂಲಕ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಮನೆಗೆ ಬಂದವರನ್ನು ಬರಿಗೈಯಲ್ಲಿ ವಾಪಸ್ ಕಳುಹಿಸದೇ ಕಷ್ಟಗಳಿಗೆ ಸ್ಪಂದಿಸುವ ಮೂಲಕ ಜನಪ್ರಿಯ ನಾಯಕರು ಎನಿಸಿಕೊಂಡಿದ್ದರು. ಮಾತ್ರವಲ್ಲ, ಕೊಡುಗೈ ದಾನಿ ಎಂಬ ಕೀರ್ತಿಗೂ ಭಾಜನರಾಗಿದ್ದರು.

ಡಿಸಿಎಂ ಡಿಕೆ ಶಿವಕುಮಾರ್ ನೆನಪು:

ನಾವು ದಾವಣಗೆರೆ ಜಿಲ್ಲೆ ಬೆಂಗಳೂರಿಗಿಂತ ಬಹಳ ಉತ್ತಮವಾಗಿ ಯೋಜಿತವಾಗಿ ರೂಪುಗೊಂಡಿರುವ ನಗರ. ಈ ಭಾಗಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟಿರುವ ಕೊಡುಗೆ, ಶಿಕ್ಷಣ ಸಂಸ್ಥೆಯ ಮೂಲಕ ಈ ಜಿಲ್ಲೆ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಈ ಜಿಲ್ಲೆಯ ಈ ಪ್ರಗತಿಗೆ ಕೊಡುಗೆ ನೀಡಿದ್ದು ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಹಾಗೂ ಅವರ ಸಂಸ್ಥೆ. ಇದೆಲ್ಲವನ್ನು ಜನ ಸ್ಮರಿಸುತ್ತಿದ್ದಾರೆ” ಎಂದು ಡಿಸಿಎಂ ಡಿ. ಕೆ. ಶಿವಕುಮಾರ್ ಹೇಳಿದ್ದರು.

ನಾವು ಎಂದಿಗೂ ಶಾಮನೂರು ಶಿವಶಂಕರಪ್ಪರ ಕೊಡುಗೆ ಮರೆಯುವುದಿಲ್ಲ. ಅವರೊಬ್ಬ ಅದ್ಭುತ ರಾಜಕಾರಣಿ. ಶಾಮನೂರು ಶಿವಶಂಕರಪ್ಪರು ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದಿದ್ದಾರೆ. ಪಕ್ಷ ಕಟ್ಟಿದ್ದಾರೆ. ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಎಂದರೆ ಕಾಂಗ್ರೆಸ್, ಕಾಂಗ್ರೆಸ್ ಎಂದರೆ ಶಾಮನೂರು ಶಿವಶಂಕರಪ್ಪರು ಎಂಬಂತಿದೆ. ಇದು ಅವರ ಶ್ರಮಕ್ಕೆ ಸಾಕ್ಷಿ ಎಂದು ದಾವಣಗೆರೆಗೆ ಬಂದಾಗ ಹೇಳಿದ್ದರು.

ಸಿಎಂ ಸಿದ್ದರಾಮಯ್ಯ ಗುಣಗಾನ:

ಸಿಎಂ ಸಿದ್ದರಾಮಯ್ಯರು ಸಹ ಶಾಮನೂರು ಶಿವಶಂಕರಪ್ಪರ ಕೊಡುಗೆ ಸ್ಮರಿಸಿದರು. ಅವರಿಲ್ಲದೇ ನಡೆಯುತ್ತಿರುವ ಉಪಚುನಾವಣೆ ಇದು. ಅವರು ನೀಡಿರುವ ಕೊಡುಗೆ, ದಾವಣಗೆರೆ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟಿರುವ ಕೊಡುಗೆ ಬಣ್ಣಿಸಲು ಆಗದು ಎಂದಿದ್ದರು.

ಸಿದ್ದರಾಮಯ್ಯ

ಕೇವಲ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಅವರಷ್ಟೇ ಅಲ್ಲ, ದೇಶದ ಪ್ರಧಾನಿ ನರೇಂದ್ರ ಮೋದಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ  ಸೇರಿದಂತೆ ಎಲ್ಲಾ ಪಕ್ಷಗಳ ನಾಯಕರು ಪಕ್ಷಭೇದ ಮರೆತು ಸಂತಾಪ ಸೂಚಿಸಿದ್ದರು. ಇದು ಶಾಮನೂರು ಶಿವಶಂಕರಪ್ಪರ ನಿಷ್ಕಳಂಕ ವ್ಯಕ್ತಿತ್ವಕ್ಕೆ ಸಂದಿದ್ದ ಗೌರವವಾಗಿತ್ತು.

ಶಾಮನೂರು ಶಿವಶಂಕರಪ್ಪರ ಬಗ್ಗೆ ಪ್ರತಿಯೊಬ್ಬರದ್ದೂ ಒಂದೇ ಮಾತು. ನೂರು ವರ್ಷ ಆಗಬೇಕಿತ್ತು. ಆದರೆ ವಿಧಿಯಾಟವೇ ಬೇರೆ ಇತ್ತು. ಅವರಿಲ್ಲ ಎಂಬ ಕೊರಗಿದ್ದರೂ ನಮ್ಮ ಮನಸ್ಸಿನಲ್ಲಿ, ಹೃದಯದಲ್ಲಿ ಸಾಮ್ರಾಟರಾಗಿ ನೆಲೆಸಿದ್ದಾರೆ ಎನ್ನುತ್ತಾರೆ ಜನರು.

ಯುಟ್ಯೂಬ್ ನಲ್ಲಿ ವಿಡಿಯೋ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ: https://www.youtube.com/@suddikshanalive

Share

Leave a comment

Leave a Reply

Your email address will not be published. Required fields are marked *