ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭೆ ಉಪಚುನಾವಣೆ ಟಿಕೆಟ್ ಗೆ ಒತ್ತಡ ಹೇರಲು ಪದೇ ಪದೇ ಸಭೆ ನಡೆಸುವುದು ಅನಾವಶ್ಯಕ ಎಂದು ಗಣಿ ಮತ್ತು ಭೂ ವಿಜ್ಞಾನ, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಮೂಲಕ ಉಪಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಇಲ್ಲವೇ ಅಹಿಂದ ವರ್ಗದವರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆ ಇಟ್ಟುಕೊಂಡು ಅಲ್ಪಸಂಖ್ಯಾತರ ಸಭೆ ನಡೆಸುತ್ತಿರುವ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮತ್ತು
ತಂಡದವರಿಗೆ ಎಸ್. ಎಸ್. ಮಲ್ಲಿಕಾರ್ಜುನ್ ಅವರು ತಿರುಗೇಟು ನೀಡಿದರು.
ಮೊದ್ಲು ಹಬ್ಬ ಆಚರಿಸೋಣ
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಈ ಹಿಂದೆಯೇ ಹೇಳಿದ್ದೇನೆ. ಮೊದಲು ದುರ್ಗಮ್ಮನ ಹಬ್ಬ ಮಾಡೋಣ. ಎಲ್ಲರೂ ಖುಷಿ ಖುಷಿಯಿಂದ ಹಬ್ಬ ಆಚರಿಸೋಣ. ಆಮೇಲೆ ಮಾತನಾಡೋಣ ಎಂದು ತಿಳಿಸಿದರು.
ಬೇರೆಯವರು ಸಭೆ ಮಾಡಲು ಬರಲ್ವಾ?
ಅಲ್ಪಸಂಖ್ಯಾತರು ಸಭೆ ನಡೆಸುವುದು ಅನಾವಶ್ಯಕ. ವೈಯಕ್ತಿಕವಾಗಿ ನನ್ನನ್ನು ಕೇಳಿದರೆ ಇವೆಲ್ಲಾ ಮಾಡಬಾರದು. ಬೇರೆಯವರಿಗೂ ಸಭೆ ಮಾಡಲು ಬರುವುದಿಲ್ಲವಾ? ಇದು ಗುಂಪುಗಾರಿಕೆ ಮಾಡಿದಂತಾಗುತ್ತದೆ. ಎಲ್ಲರೂ ಕುಳಿತು ಮಾತನಾಡಿಕೊಂಡು ಹೋಗಬೇಕು. ಕಾಂಗ್ರೆಸ್ ನಲ್ಲಿ ಇವೆಲ್ಲಾ ಬಹಳ ದಿನ ನಡೆಯಲ್ಲ. ಎಲ್ಲರೂ ಸಮಾಲೋಚಿಸಿ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಮಾತನಾಡಬೇಕು. ದಿನಾಂಕ ಘೋಷಣೆಯಾಗಬೇಕು. ಚುನಾವಣೆಗೆ ದಿನಾಂಕವೇ ಘೋಷಣೆಯಾಗಿಲ್ಲ. ಈಗಲೇ ಗುಂಪುಗಾರಿಕೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು.
ರಾಜಕೀಯವೇ ಹಂಗೆ:
ನೀವು ಹೀಗೆ ಹೇಳಿ ಹೇಳಿಯೇ ಪತ್ನಿಯನ್ನು ಸಂಸದರನ್ನಾಗಿ ಗೆಲ್ಲಿಸಿದ್ದೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಎಸ್. ಎಸ್. ಮಲ್ಲಿಕಾರ್ಜುನ್ ಅವರು, ರಾಜಕೀಯ ಹಂಗೆ. ಹೆಚ್. ಬಿ. ಮಂಜಪ್ಪ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿದ್ದಾರೆ. ಬಯಲುಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರೂ ಆಗಿದ್ದಾರೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಹೊನ್ನಾಳಿಯಿಂದ ಸ್ಪರ್ಧೆ ಮಾಡಲು ಈಗಲೇ ಟಿಕೆಟ್ ಕೇಳುತ್ತಾರೆ. ಎಲ್ಲರನ್ನೂ ಕೂರಿಸಿಕೊಂಡು ಮಾತನಾಡಿ ನಿರ್ಧಾರಕ್ಕೆ ಬರಬೇಕು ಎಂದು ಹೇಳಿದರು.
ಕೂತು ಚರ್ಚಿಸಿ ಆಮೇಲೆ ನಿರ್ಧರಿಸೋಣ:
ಎಲ್ಲರೂ ಸಮಾಧಾನದಿಂದ ಹೋಗಬೇಕು. ಕಾರ್ಯಕರ್ತರು, ಮುಖಂಡರನ್ನು ಕೂರಿಸಿಕೊಂಡು ಏನು ಮಾಡಬೇಕು? ಯಾವ ರೀತಿ ಚುನಾವಣೆಗೆ ರಣತಂತ್ರ ರೂಪಿಸಬೇಕು ಎಂಬ ಕುರಿತಂತೆ ಸುದೀರ್ಘವಾಗಿ ಚರ್ಚೆ ನಡೆಸಬೇಕು. ದಾವಣಗೆರೆಯ ದಕ್ಷಿಣದಲ್ಲಿ ಎಲ್ಲರೂ ಹಬ್ಬ ಮಾಡುತ್ತಿದ್ದಾರೆ. ಹಬ್ಬ ಮುಗಿಯಲಿ. ಹಬ್ಬ ಮುಗಿದ ಬಳಿಕ ಎಲ್ಲರೂ ಸಮಾಧಾನವಾಗಿ ಕುಳಿತುಕೊಂಡು ಒಳ್ಳೆಯ ಸೂಕ್ತ ಅಭ್ಯರ್ಥಿ ಮತ್ತು ಗೆಲ್ಲುವಂಥವರನ್ನು ಗುರುತಿಸಿ ಗೆಲ್ಲಿಸಿಕೊಂಡು ಬರಬೇಕು ಎಂದು ಹೇಳಿದರು.
- Abdul Jabbar
- AHINDA Vote Bank
- Congress Ticket Dispute
- Davanagere Politics
- Davanagere South By-election
- Durgamma Temple Festival
- Groupism in Congress.
- H.B. Manjappa
- Karnataka By-elections 2026
- Muslim Community Ticket Demand
- S. S. MALLIKARJUN
- ಅಬ್ದುಲ್ ಜಬ್ಬಾರ್
- ಅಹಿಂದ ವರ್ಗ
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ಉಪಚುನಾವಣೆ 2026
- ಕಾಂಗ್ರೆಸ್ ಟಿಕೆಟ್ ಫೈಟ್
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕೀಯ
- ದುರ್ಗಮ್ಮನ ಹಬ್ಬ ದಾವಣಗೆರೆ
- ಮುಸ್ಲಿಂ ಸಮುದಾಯ ಟಿಕೆಟ್ ಬೇಡಿಕೆ
- ಹೆಚ್.ಬಿ. ಮಂಜಪ್ಪ





Leave a comment