ಬೆಂಗಳೂರು: ಕಳೆದ ವಾರ ರಾಜ್ಯದ ಕಾಂಗ್ರೆಸ್ ನಾಯಕರಿಗೆ ತಲುಪಿದ ಸುದ್ದಿ ಅಷ್ಟೇನೂ ಹಿತಕರವಾಗಿರಲಿಲ್ಲ.ಕಾರಣ?ಹೈದ್ರಾಬಾದ್ ನ ಕಟ್ಟರ್ ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿ ಕರ್ನಾಟಕದ ರಾಜಕಾರಣಕ್ಕೆ ಎಂಟ್ರಿ ಆಗಲಿದ್ದಾರೆ ಎಂಬುದು ಈ ಸುದ್ದಿ. ದಾವಣಗೆರೆ ದಕ್ಷಿಣ ಕ್ಷೇತ್ರದ ಬೈ ಎಲೆಕ್ಷನ್ ಸದ್ಯದಲ್ಲೇ ಬರಲಿದೆ. ಹಾಗಾಗಿ, ಅಸಾದುದ್ದೀನ್ ಓವೈಸಿ ಅವರು ದಾವಣಗೆರೆ ಧಣಿ ಶಾಮನೂರು ಶಿವಶಂಕರಪ್ಪರ ಸಾಮ್ರಾಜ್ಯ ದಾವಣಗೆರೆ ದಕ್ಷಿಣ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ.
ಆರ್. ಟಿ. ವಿಠ್ಠಲಮೂರ್ತಿ ಬರೆಯುತ್ತಾರೆ:
ಅಂದ ಹಾಗೆ ಆಲ್ ಇಂಡಿಯಾ ಮಜ್ಲಿಸ್ ಎ ಇತ್ತೆಹಾದ್ ಮುಸ್ಲಿಮಿನ್ ಪಕ್ಷದ ಸರ್ವೋಚ್ಚ ನಾಯಕರಾದ ಅಸಾದುದ್ದೀನ್ ಓವೈಸಿ ಅವರಿಗೆ ಕರ್ನಾಟಕದ ರಾಜಕಾರಣದ ಮೇಲೆ ಒಂದು ಕಣ್ಣು ಇದ್ದೇ ಇದೆ.
ಹೀಗಾಗಿಯೇ ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕದ ಹಲವು ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಅವರು ಯೋಚಿಸಿದ್ದರು.
ಅದೇ ಸಂದರ್ಭದಲ್ಲಿ ರಾಜ್ಯದ ಜೆಡಿಎಸ್ ನಾಯಕರು ತೆಲಂಗಾಣದ ಮುಖ್ಯಮಂತ್ರಿಯಾಗಿದ್ದ ಚಂದ್ರಶೇಖರರಾವ್ ಜತೆ ಕೈ ಜೋಡಿಸಲು ಓಡಾಡುತ್ತಿದ್ದುದರಿಂದ ಓವೈಸಿ ಅವರು ಡೆಡ್ಲಿ ಆಗುವ ಸಾಧ್ಯತೆಗಳಿದ್ದವು.ಯಾಕೆಂದರೆ ಒಂದು ಕಡೆಯಿಂದ ಚಂದ್ತಶೇಖರರಾವ್ ಇಲ್ಲಿಗೆ ಎಂಟ್ರಿ ಕೊಟ್ಟು,ಮತ್ತೊಂದು ಕಡೆಯಿಂದ ಓವೈಸಿ ನುಗ್ಗಿದ್ದರೆ ಕರ್ನಾಟಕದ ಮುಸ್ಲಿಂ ಮತಗಳು ಚೆದುರುವ,ಆ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಹೊಡೆತ ಬೀಳುವ ಸಾಧ್ಯತೆಗಳಿದ್ದವು.
ಆದರೆ ಕೊನೇ ಘಳಿಗೆಯಲ್ಲಿ ಚಿತ್ರ ಬದಲಾಯಿತು.ಅತ್ತ ಚಂದ್ರಶೇಖರರಾವ್ ಅವರು ಜೆಡಿಎಸ್ ಜತೆಗಿನ ಸಖ್ಯವನ್ನು ಮುಂದುವರಿಸಲಿಲ್ಲ.ಓವೈಸಿ ಕೂಡಾ ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮನಸ್ಸು ಮಾಡಲಿಲ್ಲ.ಅಲ್ಲಿಗೆ ಕರ್ನಾಟಕ ಏಕಪಕ್ಷೀಯವಾಗಿ ಕಾಂಗ್ರೆಸ್ ಪಾಲಾಯಿತು.
ಮೂಲಗಳ ಪ್ರಕಾರ:ಕೊನೇ ಘಳಿಗೆಯಲ್ಲಿ ಓವೈಸಿ ಕರ್ನಾಟಕಕ್ಕೆ ದೊಡ್ಡ ಮಟ್ಟದ ಎಂಟ್ರಿ ಕೊಡದೇ ಇರಲು ಅವರಿಗಿದ್ದ ಐತಿಹಾಸಿಕ ಧಾವಂತವೂ ಕಾರಣ.
ಅದೆಂದರೆ,ಕರ್ನಾಟಕದ ಹಳೆ ಮೈಸೂರು ಭಾಗದಲ್ಲಿರುವ ಬಹುತೇಕ ಮುಸ್ಲಿಮರು ಹೈದ್ರಾಬಾದ್ ಮೂಲದ ಮುಸ್ಲಿಂ ನಾಯಕರನ್ನು ಇಷ್ಟ ಪಡುವುದಿಲ್ಲ.ಇದಕ್ಕೆ ಕಾರಣ ಟಿಪ್ಪು ಸುಲ್ತಾನನ ಅವನತಿಗೆ ಹೈದ್ರಾಬಾದ್ ನ ನಿಜಾಮರು ಕೂಡಾ ಕಾರಣ ಎಂಬುದು.ಅವತ್ತು ಬ್ರಿಟಿಷರ ವಿರುದ್ದ ಒಂದಾಗಿ ಹೋರಾಡುವಂತೆ ಟಿಪ್ಪು ಸುಲ್ತಾನ್ ಅದೆಷ್ಟು ಪರಿಪರಿಯಾಗಿ ಕೇಳಿಕೊಂಡರೂ ನಿಜಾಮರು ತೆರೆಯ ಹಿಂದೆ ಬ್ರಿಟಿಷರ ಜತೆ ಕೈ ಜೋಡಿಸಿದರು ಮತ್ತು ಟಿಪ್ಪು ಪತನಕ್ಕೆ ಕಾರಣರಾದರು ಎಂಬುದು ಇವತ್ತಿಗೂ ಹಳೆ ಮೈಸೂರು ಭಾಗದ ಮುಸ್ಲಿಮರ ಮನಸ್ಸಿನಲ್ಲಿ ರಕ್ತಗತವಾಗಿ ಉಳಿದುಕೊಂಡಿದೆ.
ಹೀಗೆ ಹೈದ್ರಾಬಾದ್ ನಿಜಾಮರ ಮೇಲಿನ ಸಿಟ್ಟು ಉಳಿದುಕೊಂಡಿರುವುದರಿಂದ ಅವರು ಇವತ್ತಿಗೂ ಹೈದ್ರಾಬಾದ್ ಮೂಲದ ಮುಸ್ಲಿಂ ನಾಯಕರನ್ನು ಇಷ್ಟಪಡುವುದಿಲ್ಲ.
ಇದು ಗೊತ್ತಿರುವುದರಿಂದ ಓವೈಸಿ ಕೂಡಾ ಕರ್ನಾಟಕಕ್ಕೆ ದೊಡ್ಡ ಮಟ್ಟದಲ್ಲಿ ಎಂಟ್ರಿ ಕೊಡಲು ಹಿಂಜರಿಯುತ್ತಿದ್ದರು. ಒಂದು ಕಾಲದಲ್ಲಿ ಕರ್ನಾಟಕದ ಮುಸ್ಲಿಂ ಸಮುದಾಯದ ಜನಪ್ರಿಯ ನಾಯಕರಾಗಿದ್ದ ರೋಷನ್ ಬೇಗ್ ವಿರುದ್ಧ ಅಸಹನೆ ಹೊಂದಿದ್ದ ಓವೈಸಿ,ಶಿವಾಜಿ ನಗರ ವಿಧಾನಸಭಾ ಕ್ಷೇತ್ರಕ್ಕೆ ನುಗ್ಗಿ ಅಟ ಆಡಲು ಬಯಸಿದ್ದರು. ಆದರೆ ಅವತ್ತು ಮಂತ್ರಿಯಾಗಿದ್ದ ರೋಷನ್ ಬೇಗ್ ತಮ್ಮ ಪವರ್ರು ಬಳಸಿ ಓವೈಸಿ ಶಿವಾಜಿ ನಗರಕ್ಕೆ ನುಗ್ಗದಂತೆ ನೋಡಿಕೊಂಡಿದ್ದರು.
ಹೀಗಾಗಿ ಅಲ್ಲಿಂದ ಮುಂದೆ ಗುಲ್ಬರ್ಗ ಸೇರಿದಂತೆ ಹೈದ್ರಾಬಾದ್-ಕರ್ನಾಟಕದ ಕೆಲ ಕ್ಷೇತ್ರಗಳಲ್ಲಿ ಓವೈಸಿ ಒಂದು ಲೆವೆಲ್ಲಿನ ಅಟ ಅಡುತ್ತಾ ಬಂದಿದ್ದಾರಾದರೂ ಅವರಿಗೆ ದೊಡ್ಡ ಮಟ್ಟದ ಯಶಸ್ಸು ಸಿಕ್ಕಿಲ್ಲ. ಆದರೆ ಕರ್ನಾಟಕದ ಮುಸ್ಲಿಂ ರಾಜಕಾರಣ ದಿನದಿಂದ ದಿನಕ್ಕೆ ಅತಂತ್ರವಾಗುತ್ತಿರುವುದು,ಅಜೀಜ್ ಸೇಠ್,ಜಾಫರ್ ಷರೀಫ್ ಮತ್ತು ರೋಷನ್ ಬೇಗ್ ಅವರಂತಹ ನಾಯಕರು ಕಣ್ಣಿಗೆ ಕಾಣಿಸದೇ ಇರುವುದು ಓವೈಸಿಯವರ ಕರ್ನಾಟಕ ‘ಅರಂಗೇಟ್ರಂ’ಗೆ ಅನುಕೂಲಕರವಾಗಿ ಕಾಣುತ್ತಿದೆ.
ಅದರಲ್ಲೂ ದಾವಣಗೆರೆಯ ಧಣಿ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಕುಟುಂಬದವರಿಗೇ ಪಕ್ಷದ ಟಿಕೆಟ್ ಸಿಗಬೇಕು ಎಂದು ಶಾಮನೂರು ಫ್ಯಾಮಿಲಿ ಪಟ್ಟು ಹಿಡಿದಿರುವುದರಿಂದ ಕ್ಷೇತ್ರದ ನಂಬರ್ ಒನ್ ಶಕ್ತಿ ಅನ್ನಿಸಿಕೊಂಡ ಮುಸ್ಲಿಮರು ಅಸಹನೆಯಿಂದ ಕುದಿಯುತ್ತಿದ್ದಾರೆ.ಪರಿಣಾಮ?ತಮಗೆ ಟಿಕೆಟ್ ಸಿಗದೆ ಹೋದರೆ ಕಾಂಗ್ರೆಸ್ ವಿರುದ್ದವೇ ಸ್ಪರ್ಧಿಸಲು ಕಸರತ್ತು ನಡೆಸುತ್ತಿದ್ದಾರೆ.
ಇವತ್ತು ಓವೈಸಿ ಕರ್ನಾಟಕದ ಕಡೆ ಕಣ್ಣು ಹಾಕಲು ಈ ಅಂಶ ಬಹುಮುಖ್ಯ ಕಾರಣ.ಪರಿಣಾಮ?ಕೆಲ ದಿನಗಳ ಹಿಂದೆ ದಾವಣಗೆರೆಯಲ್ಲಿ ಓವೈಸಿ ಅಭಿಮಾನಿಗಳ ಪಡೆ ಒಂದು ಸಭೆ ನಡೆಸಿ ನಿರ್ಣಾಯಕ ಆಟಕ್ಕಿಳಿಯಲು ತೀರ್ಮಾನಿಸಿದೆ.
ಧಣಿಯ ಮನೆಯ ಲೆಕ್ಕಾಚಾರ
ಅಂದ ಹಾಗೆ ಶಾಮನೂರು ಶಿವಶಂಕರಪ್ಪ ಅವರ ನಿಧನದ ನಂತರ ಅವರ ಕುಟುಂಬದಲ್ಲಿ ಹಲವು ಬಗೆಯ ಲೆಕ್ಕಾಚಾರಗಳು ಅರಂಭವಾಗಿವೆ. ಅದರ ಪ್ರಕಾರ,ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದವರು ತಮ್ಮ ಕುಟುಂಬದವರಾದ್ದರಿಂದ ಈಗ ಎದುರಾಗಲಿರುವ ಉಪಚುನಾವಣೆಯಲ್ಲಿ ತಮ್ಮ ಕುಟುಂಬದವರೇ ಸ್ಪರ್ಧಿಸಬೇಕು ಎಂಬುದು ಒಟ್ಟಾರೆ ತೀರ್ಮಾನ. ಹೀಗಾಗಿ ಕಣಕ್ಕೆ ಶಾಮನೂರು ಶಿವಶಂಕರಪ್ಪನವರ ಎರಡನೇ ಪುತ್ರ ಗಣೇಶ್ ಇಳಿಯಬೇಕೋ?ಅಥವಾ ಸಚಿವ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಇಳಿಯಬೇಕೋ?ಎಂಬ ಚರ್ಚೆ ಶುರುವಾಗಿದೆ.
ಈ ಪೈಕಿ ಗಣೇಶ್ ಅವರು ಇದುವರೆಗೆ ರಾಜಕಾರಣದ ಪಡಸಾಲೆಯಲ್ಲಿ ಹೆಚ್ಚಾಗಿ ಕಂಡವರಲ್ಲ.ಇದೇ ರೀತಿ ಸಮರ್ಥ್ ಅವರು ವಯಸ್ಸಿನಲ್ಲಿ ಕಿರಿಯರು ಎಂಬ ಮಾತುಗಳು ಕೇಳಿ ಬರುತ್ತಿವೆಯಾದರೂ ರಾಜಕಾರಣದಲ್ಲಿ ಅಂತಹ ಮಾತುಗಳಿಗೆ ಶಕ್ತಿ ಕಡಿಮೆ.
ಎಲ್ಲಕ್ಕಿಂತ ಮುಖ್ಯವಾಗಿ ಶಾಮನೂರು ಸಾಮ್ರಾಜ್ಯದ ಶಕ್ತಿ ಉಳಿಯಬೇಕಿರುವುದರಿಂದ ಕುಟುಂಬದ ಈ ಇಬ್ಬರ ಪೈಕಿ ಒಬ್ಬರನ್ನು ಕಣಕ್ಕಿಳಿಸಬೇಕು ಅಂತ ಕುಟುಂಬ ಬಯಸಿದೆ.
ಮುಸ್ಲಿಮರ ಯೋಚನೆ ಏನು?
ಹೀಗೆ ಶಾಮನೂರು ಕುಟುಂಬದ ಲೆಕ್ಕಾಚಾರ ಒಂದು ಬಗೆಯಲ್ಲಿದ್ದರೆ ಮತ್ತೊಂದು ಕಡೆ ಮುಸ್ಲಿಮ್ ಮತ ಬ್ಯಾಂಕಿನ ಲೆಕ್ಕಾಚಾರ ಬೇರೆಯೇ ಇದೆ. ಅಂದ ಹಾಗೆ ಕ್ಷೇತ್ರದಲ್ಲಿರುವ 2.30 ಲಕ್ಷ ಮತದಾರರ ಪೈಕಿ ಎಂಬತ್ತು ಸಾವಿರದಷ್ಟು ಮುಸ್ಲಿಂ ಮತದಾರರಿದ್ದು,ಸಂಖ್ಯೆಯ ದೃಷ್ಟಿಯಿಂದ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಇಂತಹ ಕಾರಣಕ್ಕಾಗಿಯೇ ಹಿಂದೆ ಸೈಯ್ಯದ್ ಸೈಪುಲ್ಲಾ ಅವರಿಗೆ ಪಕ್ಷದ ಬಿ ಫಾರಂ ನೀಡಲಾಗಿತ್ತಾದರೂ ಕೊನೆ ಘಳಿಗೆಯಲ್ಲಿ ಅವರ ಬದಲಿಗೆ ಶಾಮ ನೂರು ಶಿವಶಂಕರಪ್ಪನವರಿಗೆ ಟಿಕೆಟ್ ನೀಡಲಾಗಿತ್ತು. ಅದರೆ ಇದಾಗಿ ಹಲ ಕಾಲ ಕಳೆದಿದ್ದು ಈಗ ಮುಸ್ಲಿಮರೊಬ್ಬರಿಗೆ ಟಿಕೆಟ್ ನೀಡಬೇಕು ಎಂಬುದು ಈ ಮತ ಬ್ಯಾಂಕಿನ ಪಟ್ಟು. ಹೀಗಾಗಿ ಸೈಯದ್ ಖಾಲಿದ್ ಅಹ್ಮದ್,ಅಬ್ದುಲ್ ಜಬ್ಬಾರ್ ಮತ್ತು ಮೆಹಬೂಬ್ ಪಾಷಾ ಅವರ ಹೆಸರುಗಳು ಫ್ರಂಟ್ ಲೈನಿಗೆ ಬಂದಿದ್ದು ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಗಮನ ಸೆಳೆಯುತ್ತಿವೆ.ಅದರೆ ಹೀಗೆ ಶಾಮನೂರು ಕುಟುಂಬದ ಲೆಕ್ಕಾಚಾರ ಮತ್ತು ಮುಸ್ಲಿಂ ಮತ ಬ್ಯಾಂಕಿನ ಲೆಕ್ಕಾಚಾರಗಳು ಪರಸ್ಪರ ಘಟ್ಟಿಸುತ್ತಿರುವುದರಿಂದ ಮುಂದೇನು?ಎಂಬ ಪ್ರಶ್ನೆ ಶುರುವಾಗಿದೆ.
ವಿಶೇಷ ಲೇಖನ: ಅರ್.ಟಿ.ವಿಠ್ಠಲಮೂರ್ತಿ
- AIMIM Karnataka
- Asaduddin Owaisi
- Congress Rebellion
- Davanagere Politics
- Davanagere South By-poll
- Karnataka Political Updates
- Muslim Vote Bank
- RT Vittalmurthy
- Shamanur Shivashankarappa
- SS Mallikarjun
- ಅಸಾದುದ್ದೀನ್ ಓವೈಸಿ
- ಆರ್ ಟಿ ವಿಠ್ಠಲಮೂರ್ತಿ
- ಎಐಎಂಐಎಂ ಕರ್ನಾಟಕ
- ಎಸ್. ಎಸ್. ಮಲ್ಲಿಕಾರ್ಜುನ್
- ಕರ್ನಾಟಕ ರಾಜಕೀಯ 2026
- ಕಾಂಗ್ರೆಸ್ ಬಂಡಾಯ
- ದಾವಣಗೆರೆ ದಕ್ಷಿಣ ಉಪಚುನಾವಣೆ
- ದಾವಣಗೆರೆ ರಾಜಕಾರಣ
- ಮುಸ್ಲಿಂ ಮತಬ್ಯಾಂಕ್
- ಶಾಮನೂರು ಶಿವಶಂಕರಪ್ಪ






Leave a comment