ದಾವಣಗೆರೆ: ಸುಮಾರು ನಾಲ್ಕು ದಶಕಗಳ ಕಾಲ ಕಾನೂನಿನ ಕಣ್ಣಿನಿಂದ ತಪ್ಪಿಸಿಕೊಂಡಿದ್ದ 82 ವರ್ಷದ ವೃದ್ಧನನ್ನು ದಾವಣಗೆರೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.
1985ರಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ಎ1 ಆರೋಪಿಯಾಗಿದ್ದ ಹಾಲುವರ್ತಿ ಗ್ರಾಮದ ಹನುಮಂತಪ್ಪ ಎಂಬಾತನೇ ಈಗ ನ್ಯಾಯಾಂಗ ಬಂಧನಕ್ಕೊಳಗಾದ ವ್ಯಕ್ತಿ.
ಪ್ರಕರಣದ ಹಿನ್ನೆಲೆ:
ದಿನಾಂಕ 16/08/1985 ರಂದು ಹಾಲುವರ್ತಿ ಗ್ರಾಮದ ಹನುಮಂತಪ್ಪ, ಅರ್ಜುನಪ್ಪ ಮತ್ತು ಬಸಪ್ಪ ಎಂಬುವವರು ಜಮೀನಿನ ವಿಚಾರವಾಗಿ ಭೀಮಾಬಾಯಿ ಎಂಬುವವರ ಮೇಲೆ ಕುಡಗೋಲಿನಿಂದ ಹಲ್ಲೆ ನಡೆಸಿ ರಕ್ತಗಾಯಗೊಳಿಸಿದ್ದರು. ಈ ಸಂಬಂಧ ಚಂದ್ರಾನಾಯ್ಕ್ ಎಂಬುವವರು ದೂರು ನೀಡಿದ್ದು, ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಕಲಂ 341, 324, 34 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ದೀರ್ಘಕಾಲದ ತಲೆಮರೆಸುವಿಕೆ:
ಪ್ರಕರಣ ದಾಖಲಾದ ನಂತರ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದರು. ಹೀಗಾಗಿ 14/11/1989 ರಂದು ನ್ಯಾಯಾಲಯವು ಇದನ್ನು LPR (Long Pending Register) ಪ್ರಕರಣ ಎಂದು ಘೋಷಿಸಿತ್ತು.
ಪೊಲೀಸ್ ಕಾರ್ಯಾಚರಣೆ:
ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ. ಅವರ ಮಾರ್ಗದರ್ಶನದಲ್ಲಿ, ಪಿಐ ಅಣ್ಣಯ್ಯ ಕೆ.ಟಿ. ಮತ್ತು ಪಿಎಸ್‌ಐ ಜೋವಿತ್ ರಾಜ್ ಅವರನ್ನೊಳಗೊಂಡ ತಂಡವು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿತ್ತು.
ಅಂತಿಮವಾಗಿ 26/02/2026 ರಂದು ಹಾಲೇಕಲ್ಲು ಗ್ರಾಮದಲ್ಲಿ ವಾಸವಿದ್ದ ಹನುಮಂತಪ್ಪನನ್ನು ಪತ್ತೆಹಚ್ಚಿ ಬಂಧಿಸಲಾಗಿದೆ. ಪ್ರಕರಣದ ಎ2 ಮತ್ತು ಎ3 ಆರೋಪಿಗಳು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.





Leave a comment