SUDDIKSHANA KANNADA NEWS/ DAVANAGERE/ DATE:31_07_2025
ದಾವಣಗೆರೆ: ರಾಜ್ಯದಲ್ಲಿ ಯೂರಿಯಾ ಗೊಬ್ಬರದ ಅಭಾವ ಸೃಷ್ಟಿಯಾಗಿದೆ. ರೈತರ ಹೋರಾಟವೂ ಮುಂದುವರಿದಿದೆ. ಕಳೆದ ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರು ಕಾಳಸಂತೆಯಲ್ಲಿ ಯೂರಿಯಾ ಗೊಬ್ಬರ ಮಾರಾಟ ಮಾಡಿದರೆ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದರು. ಮಾತ್ರವಲ್ಲ, ಹೆಚ್ಚು ದಾಸ್ತಾನು ಮಾಡದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದರು.
ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರೂ ಸಹ ಯೂರಿಯಾ ಗೊಬ್ಬರ ಕಾಳಸಂತೆಯಲ್ಲಿ ಮಾರಾಟ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದರು. ಆದರೂ ಕಾಳಸಂತೆಯಲ್ಲಿ ಮಾರಾಟದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ರೆವಿನ್ಯೂ ಅಧಿಕಾರಿಗಳೊಂದಿಗೆ ಪೊಲೀಸರು ವಿವಿಧೆಡೆ ಗೋದಾಮುಗಳಿಗೆ ದಿಢೀರ್ ದಾಳಿ ನಡೆಸಿದರು.
READ ALSO THIS STORY: ಉಚಿತ CIBIL, Equifax, Experian ಮತ್ತು CRIF ಕ್ರೆಡಿಟ್ ವರದಿಗಳನ್ನು ಆನ್‌ಲೈನ್‌ನಲ್ಲಿ ಪರಿಶೀಲಿಸುವುದು ಹೇಗೆ?
ರಾಜ್ಯದಲ್ಲಿ ಕೃತಕ ಗೊಬ್ಬರದ ಅಭಾವ ಕಂಡು ಬರುತ್ತಿರುವ ಮಾಹಿತಿ ಇದ್ದು, ಕಾಳ ಸಂತೆಯಲ್ಲಿ ಗೊಬ್ಬರವನ್ನು ಮಾರುತ್ತಿರುವ ಬಗ್ಗೆಯೂ ದೂರುಗಳು ಬಂದಿವೆ. ಈ ಸಂಬಂಧ ಹಿರಿಯ ಅಧಿಕಾರಿಗಳ ಸೂಚನೆಯಂತೆ ರೆವಿನ್ಯೂ ಅಧಿಕಾರಿಗಳ ಸಹಯೋಗದೊಂದಿಗೆ ಪೊಲೀಸ್ ಅಧಿಕಾರಿಗಳು ಜಂಟಿಯಾಗಿ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳ ವ್ಯಾಪ್ತಿಗಳಲ್ಲಿ ಬರುವ ಗೊಬ್ಬರದ ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ದಾವಣಗೆರೆಯಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ ಹಾಗೂ ದಾವಣಗೆರೆ ಗ್ರಾಮಾಂತರ ಉಪವಿಭಾಗದಲ್ಲಿ ಡಿವೈಎಸ್ಪಿ ಬಸವರಾಜ್ ಬಿ. ಎಸ್., ಚನ್ನಗಿರಿ ಪೊಲೀಸ್ ಉಪ ವಿಭಾಗ ವ್ಯಾಪ್ತಿಯಲ್ಲಿ ಸಹಾಯಕ ಪೊಲೀಸ್ ಅಧೀಕ್ಷಕ ಸ್ಯಾಮ್ ವರ್ಗೀಸ್, ವಿವಿಧ ಠಾಣೆಗಳು, ಪೊಲೀಸ್ ಠಾಣಾಧಿಕಾರಿಗಳ ನೇತೃತ್ವದಲ್ಲಿ ರೆವಿನ್ಯೂ ಅಧಿಕಾರಿಗಳ ಜಂಟಿ ಕಾರ್ಯಚರಣೆ ನಡೆಸಿದರು. ಗೋದಾಮುಗಳಲ್ಲಿ ದಾಸ್ತಾನು ಇದ್ದ ಗೊಬ್ಬರ ಕುರಿತಂತೆ ಪರಿಶೀಲನೆ ಮುಂದುವರಿದಿದೆ.