Home ದಾವಣಗೆರೆ ಪಂಚ ಗ್ಯಾರಂಟಿಗಳು ಬಡವರ ಬದುಕಿನ ‘ಪಂಚಾಮೃತ’, ಅನುಷ್ಠಾನದಲ್ಲಿ ದಾವಣಗೆರೆ ರಾಜ್ಯದಲ್ಲೇ ಪ್ರಥಮ: ಎಸ್ .ಎಸ್. ಮಲ್ಲಿಕಾರ್ಜುನ್ ಘೋಷಣೆ!
ದಾವಣಗೆರೆಬೆಂಗಳೂರುವಾಣಿಜ್ಯ

ಪಂಚ ಗ್ಯಾರಂಟಿಗಳು ಬಡವರ ಬದುಕಿನ ‘ಪಂಚಾಮೃತ’, ಅನುಷ್ಠಾನದಲ್ಲಿ ದಾವಣಗೆರೆ ರಾಜ್ಯದಲ್ಲೇ ಪ್ರಥಮ: ಎಸ್ .ಎಸ್. ಮಲ್ಲಿಕಾರ್ಜುನ್ ಘೋಷಣೆ!

Share
ದಾವಣಗೆರೆ
Share

ದಾವಣಗೆರೆ: ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಕೇವಲ ಚುನಾವಣಾ ಭರವಸೆಗಳಲ್ಲ, ಅವು ಬಡವರ ಪಾಲಿನ ಆರ್ಥಿಕ ಶಕ್ತಿಯಾಗಿ ಮಾರ್ಪಟ್ಟಿವೆ. ಈ ಯೋಜನೆಗಳು ಜನರ ಬದುಕಿಗೆ ‘ಪಂಚಾಮೃತ’ದಂತೆ ಆಸರೆಯಾಗಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

ದಾವಣಗೆರೆಯ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ನಡೆದ ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆ ಜಿಲ್ಲೆಯು ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಶೇ. 98ರಷ್ಟು ಪ್ರಗತಿ ಸಾಧಿಸುವ ಮೂಲಕ ಇಡೀ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದೆ ಎಂದು ಅವರು ಹೆಮ್ಮೆಯಿಂದ ಘೋಷಿಸಿದರು.

ದಾವಣಗೆರೆ ಜಿಲ್ಲೆಯ ಸಾಧನೆಯ ಅಂಕಿ-ಅಂಶಗಳು:

ಅನ್ನಭಾಗ್ಯ:

12.42 ಲಕ್ಷ ಫಲಾನುಭವಿಗಳಿಗೆ ₹347.54 ಕೋಟಿ ವಿತರಣೆ.

ಗೃಹಲಕ್ಷ್ಮಿ:

3.74 ಲಕ್ಷ ಮಹಿಳೆಯರ ಖಾತೆಗೆ ₹1835 ಕೋಟಿ ಜಮೆ.

ಶಕ್ತಿ ಯೋಜನೆ:

12.82 ಕೋಟಿ ಬಾರಿ ಉಚಿತ ಪ್ರಯಾಣ, ಸರ್ಕಾರದಿಂದ ₹377 ಕೋಟಿ ಭರಿಸಲಾಗಿದೆ.

ಗೃಹಜ್ಯೋತಿ:

5.19 ಲಕ್ಷ ಮನೆಗಳಿಗೆ ಉಚಿತ ವಿದ್ಯುತ್, ₹603 ಕೋಟಿ ವೆಚ್ಚ.

ಯುವನಿಧಿ:

10,630 ನಿರುದ್ಯೋಗಿ ಯುವಕರಿಗೆ ₹33.23 ಕೋಟಿ ಆಸರೆ.

ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಮಾತನಾಡಿ, “ಈ ಯೋಜನೆಗಳು ಸರ್ವೋದಯ ತತ್ವದ ಮೇಲೆ ನಿಂತಿವೆ. ಗದಗದ ಮಹಿಳೆಯರು ಗ್ಯಾರಂಟಿ ಹಣದಿಂದ ದೇವಸ್ಥಾನ ನಿರ್ಮಿಸಿರುವುದು ಈ ಯೋಜನೆಗಳ ಯಶಸ್ಸಿಗೆ ಸಾಕ್ಷಿ,” ಎಂದರು.

ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಯೋಜನೆಗಳು ಮಹಿಳೆಯರ ಸ್ವಾವಲಂಬನೆಗೆ ದಾರಿಯಾಗಿವೆ ಎಂದು ಶ್ಲಾಘಿಸಿದರು.

ಗ್ಯಾರಂಟಿ ಯೋಜನೆಗಳ ಕುರಿತು ಮೋಹನ್ ಜಿ.ಕೆ ಅವರು ವಿಷಯ ಮಂಡಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಗುಂಡಿ ವೃತ್ತದವರೆಗೆ ಮೆರವಣಿಗೆಗೆ ರಾಜ್ಯ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಂ. ರೇವಣ್ಣ ಅವರು ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಜಾಥಾಗೆ ಚಾಲನೆ ನೀಡಿದರು.

ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ. ಶಾಂತನಗೌಡ, ಬಸವಂತಪ್ಪ ಕೆ.ಎಸ್., ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್, ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಉಪಾಧ್ಯಕ್ಷ ಎಸ್.ಆರ್.ಪಾಟೀಲ್, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಅಸಗೋಡು ಜಯಸಿಂಹ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ವಡ್ನಾಳು ಜಗದೀಶ್, ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಹೆಚ್.ಬಿ.ಮಂಜಪ್ಪ, ಶಾಮನೂರು ಟಿ. ಬಸವರಾಜು, ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠಲರಾವ್ ಹಾಗೂ ಇತರರು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *