ದಾವಣಗೆರೆ: ದಾವಣಗೆರೆ: ದೇಶದ ವಿವಿಧ ಪ್ರಸಿದ್ಧ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನಕ್ಕೆ ಪ್ರವಾಸಿ ಟೂರ್ ಪ್ಯಾಕೇಜ್ ನಲ್ಲಿ ತೆರಳಿದ್ದ ದಾವಣಗೆರೆ ನಗರದ ಡಿಸಿಎಂ ಟೌನ್ ಶಿಪ್ ನ ವೃದ್ಧರೊಬ್ಬರು ನವದೆಹಲಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ. ಸಾವು ಸಂಭವಿಸಿದ 24 ಗಂಟೆಯೊಳಗೆ ಮೃತದೇಹವು ದಾವಣಗೆರೆಗೆ ತೆಗೆದುಕೊಂಡು ಬರಲು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕುಟುಂಬಸ್ಥರಿಗೆ ನೆರವಾಗಿದ್ದು, ಈ ಮಾನವೀಯ ಕಾರ್ಯಕ್ಕೆ ಪ್ರಶಂಸೆಗೆ ಪಾತ್ರವಾಗಿದೆ.
73 ವರ್ಷದ ಎ. ಷಣ್ಮುಖಪ್ಪ ಅವರೇ ನವದೆಹಲಿಯಲ್ಲಿ ಹೃದಯಾಘಾತಕ್ಕೆ ಒಳಗಾಗಿ ಸಾವು ಕಂಡವರು. ಕಳೆದ ಭಾನುವಾರ ಕೆಲ ದಿನಗಳ ಹಿಂದೆ ಕಾಶಿ ವಿಶ್ವನಾಥ ಸೇರಿದಂತೆ ದೇಶದ ಪ್ರಸಿದ್ಧ ದೇವಾಲಯಗಳನ್ನು ನೋಡಿಕೊಂಡು ಬರಲು ಟೂರ್ ಪ್ಯಾಕೇಜ್ ನಡಿ ಹೋಗಿದ್ದರು. ಆದರೆ ದೆಹಲಿಯಲ್ಲಿ ಸೋಮವಾರ 4 ಗಂಟೆಗೆ ಇದ್ದಕ್ಕಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿಲ್ಲ.
ಷಣ್ಮುಖಪ್ಪ ಅವರು ನಿಧನ ಹೊಂದಿದ ವಿಚಾರ ಡಿಸಿಎಂ ಟೌನ್ ಶಿಪ್ ನಲ್ಲಿ ಮಲ್ಲಿಕಾರ್ಜುನ್ ಪ್ರಾವಿಜನ್ ಸ್ಟೋರ್ ಮತ್ತು ಹಿಟ್ಟಿನ ಗಿರಣಿ ನಡೆಸುತ್ತಿದ್ದ ಅವರ ಪುತ್ರ ನಾಗರಾಜ್ ಅವರಿಗೆ ರಾತ್ರಿ 8 ಗಂಟೆಗೆ ಮಾಹಿತಿ ಬಂದಿದೆ. ತಂದೆ ಸಾವಿನ ಸುದ್ದಿ ಕೇಳಿ ಆಘಾತಕ್ಕೊಳಗಾದ ನಾಗರಾಜ್ ಅವರಿಗೆ ಒಮ್ಮೆಲೆ ಬರಸಿಡಿಲು ಬಡಿದಂತಾಗಿದೆ. ಕೂಡಲೇ ಡಿಸಿಎಂ ಟೌನ್ ಶಿಪ್ ನ ಕಾಂಗ್ರೆಸ್ ಯುವ ನಾಯಕ ಹಾಗೂ ಗ್ಯಾರಂಟಿ ಸಮಿತಿ ಸದಸ್ಯ ಜಿ. ಆರ್. ರಾಘವೇಂದ್ರ ಗೌಡ ಅವರಿಗೆ ತಂದೆ ನಿಧನದ ಸುದ್ದಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಯಾರೂ ಪರಿಚಯವಿಲ್ಲ. ಏನು ಮಾಡಬೇಕೆಂದು ತೋಚುತ್ತಿಲ್ಲ. ತಂದೆ ಮೃತದೇಹ ದಾವಣಗೆರೆಗೆ ಕರೆತರಲು ಸಹಕರಿಸುವಂತೆ ಮನವಿ ಮಾಡಿದ್ದಾರೆ. ರಾಘವೇಂದ್ರ ಗೌಡರು ಕೂಡಲೇ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ತೋಟಗಾರಿಕೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಕಚೇರಿ ಸಂಪರ್ಕಿಸಿದ್ದಾರೆ. ವಿಜಯ್ ಕುಮಾರ್ ಅವರ ಜೊತೆ ಮಾತನಾಡಿದ್ದಾರೆ. ವಿಜಯ್ ಕುಮಾರ್ ಅವರು ಈ ವಿಚಾರವನ್ನು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರಿಗೆ ತಿಳಿಸಿದ್ದಾರೆ.
ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಪುತ್ರನ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರೂ ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ನವದೆಹಲಿಯಲ್ಲಿನ ಸಂಸದರ ಕಚೇರಿಯ ಸಿಬ್ಬಂದಿ ಈ ವಿಚಾರ ತಿಳಿಸಿ, ಮೃತದೇಹದ
ಮರಣೋತ್ತರ ಪರೀಕ್ಷೆ ಸೇರಿದಂತೆ ಎಲ್ಲಾ ರೀತಿಯಲ್ಲಿಯೂ ಸಹಕರಿಸುವಂತೆ ಸೂಚನೆ ನೀಡಿದ್ದಾರೆ. ದಾವಣಗೆರೆ ಟೌನ್ ಶಿಪ್ ನಿವಾಸಿಯಾದ ಷಣ್ಮುಖಪ್ಪ ಎಂಬುವವರು ಮೃತಪಟ್ಟಿದ್ದು, ಕಾನೂನು ಪ್ರಕಾರ ಎಲ್ಲಾ ಕಾರ್ಯಗಳನ್ನು ಮುಗಿಸಿ ತಿಳಿಸುವಂತೆ ಹೇಳಿದ್ದಾರೆ. ಮಾತ್ರವಲ್ಲ, ಮೃತದೇಹವು ದಾವಣಗೆರೆಗೆ ಬರುವವರೆಗೂ ಆಗಾಗ್ಗೆ ಮಾಹಿತಿ ನೀಡುವಂತೆ ಸೂಚನೆ ನೀಡಿದ್ದಾರೆ.
ಷಣ್ಮುಖಪ್ಪ ಅವರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಎಲ್ಲಾ ಕಾನೂನು ಕಾರ್ಯಗಳನ್ನು ಪೂರ್ಣಗೊಳಿಸಿ ನವದೆಹಲಿಯಿಂದ ಹುಬ್ಬಳ್ಳಿಗೆ ವಿಮಾನದ ಮೂಲಕ ಮೃತದೇಹ ಕಳುಹಿಸಿಕೊಡಲಾಗಿದೆ. ಚುನಾವಣಾ ಪ್ರಚಾರದ ಒತ್ತಡ, ಸಭೆ, ಸಮಾರಂಭಗಳ ನಡುವೆಯೂ ಮೃತಪಟ್ಟ 24 ಗಂಟೆಯೊಳಗೆ ಮೃತದೇಹ ದಾವಣಗೆರೆ ತರಲು ಸಹಕರಿಸಿದ ಪ್ರಭಾ ಮಲ್ಲಿಕಾರ್ಜುನ್ ಅವರ ಮಾನವೀಯ ಸೇವೆಗೆ ಷಣ್ಮುಖಪ್ಪರ ಪುತ್ರ ನಾಗರಾಜ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಸಂಸದರು ನಮ್ಮ ಮನವಿಗೆ ಕೂಡಲೇ ಸ್ಪಂದಿಸಿದ್ದಾರೆ. ಪುತ್ರ ಸಮರ್ಥ್ ಶಾಮನೂರು ಚುನಾವಣೆಗೆ ಸ್ಪರ್ಧಿಸಿದ್ದರೂ ಕಾರ್ಯ ಒತ್ತಡದ ನಡುವೆ ತಂದೆಯವರ ಮೃತದೇಹ 24 ಗಂಟೆಯೊಳಗೆ ನಮಗೆ ತಲುಪುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದು,
ಜೀವನಪೂರ್ತಿ ಚಿರಋಣಿಯಾಗಿರುತ್ತೇನೆ ಎಂದು ಹೇಳಿದ್ದಾರೆ.
ಯುವ ಮುಖಂಡ ರಾಘವೇಂದ್ರ ಗೌಡ ಭೇಟಿ:
ಇನ್ನು ಈ ವಿಚಾರ ತಿಳಿಯುತ್ತಿದ್ದಂತೆ ನಾಗರಾಜ್ ಅವರ ಮನೆಗೆ ಭೇಟಿ ನೀಡಿದ್ದ ಕಾಂಗ್ರೆಸ್ ಯುವ ಮುಖಂಡ ರಾಘವೇಂದ್ರ ಗೌಡ ಅವರು, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ವಿಶೇಷ ಗಮನ ಹರಿಸಿದ ಪರಿಣಾಮ ಮೃತದೇಹವು ಇಷ್ಟು ಬೇಗ ಬರಲು ಸಾಧ್ಯವಾಯಿತು. ಕಷ್ಟದಲ್ಲಿರುವವರಿಗೆ ಸ್ಪಂದಿಸುವ, ಮಾನವೀಯ ಗುಣ ಹೊಂದಿರುವ ಪ್ರಭಾ ಮಲ್ಲಿಕಾರ್ಜುನ್ ಅವರ ಈ ಕಾರ್ಯ ನಮಗೆಲ್ಲಾ ಮಾದರಿ. ಪುತ್ರನೇ ಚುನಾವಣೆಗೆ ಸ್ಪರ್ಧಿಸಿದ್ದರೂ ಒತ್ತಡದ ನಡುವೆಯೂ ಸ್ಪಂದಿಸಿದ ರೀತಿ ಮಾನವೀಯತೆಗೆ ಸಾಕ್ಷಿಯಾಗಿದೆ ಎಂದು ರಾಘವೇಂದ್ರ ಗೌಡ ಅವರು ಹೇಳಿದ್ದಾರೆ.





Leave a comment