SUDDIKSHANA KANNADA NEWS/ DAVANAGERE/ DATE:29-09-2023
ದಾವಣಗೆರೆ (Davanagere): ಕಳೆದ 30 ವರ್ಷಗಳಿಂದಲೂ ದಾವಣಗೆರೆ (Davanagere) ಜಿಲ್ಲೆಯಲ್ಲಿ ಬಿಜೆಪಿಯವರೇ ಸಂಸದರಾಗಿದ್ದಾರೆ. ಆದ್ರೆ, ಹೇಳಿಕೊಳ್ಳುವಂತ ಸಬಲೀಕರಣ, ಅಭಿವೃದ್ಧಿ, ದೊಡ್ಡದಾದ ಯಾವ ಯೋಜನೆಗಳು ಬಂದಿಲ್ಲ. ಬಸ್ ನಿಲ್ದಾಣ, ಕೆಲ ರಸ್ತೆಗಳು ಸೇರಿದಂತೆ ಸಣ್ಣಪುಟ್ಟ ಕೆಲಸ ಆಗಿರುವುದು ಬಿಟ್ಟರೆ ಹೇಳಿಕೊಳ್ಳುವಂಥ ಸಬಲೀಕರಣದತ್ತ ಹೆಜ್ಜೆ ಇಟ್ಟಿಲ್ಲ. ಸಂಸದ ಜಿ. ಎಂ. ಸಿದ್ದೇಶ್ವರ ಅವರಿಗೆ ಕನ್ನಡ ಬಿಟ್ಟರೆ ಬೇರೆ ಭಾಷೆಗಳ ಜ್ಞಾನ ಕಡಿಮೆ. ಹಾಗಾಗಿ, ಸಂಸತ್ ನಲ್ಲಿ ಸಮರ್ಥವಾಗಿ ಜಿಲ್ಲೆಯ ಸಮಸ್ಯೆಗಳು ಪ್ರಸ್ತಾಪ ಆಗಿಲ್ಲ ಎಂದು ದಾವಣಗೆರೆ (Davanagere) ಲೋಕಸಭಾ ಕಾಂಗ್ರೆಸ್ ಆಕಾಂಕ್ಷಿ ಜಿ. ಬಿ. ವಿನಯ್ ಕುಮಾರ್ ಅವರು ಸಿದ್ದೇಶ್ವರ ಅವರಿಗೆ ಟಾಂಗ್ ನೀಡಿದರು.
Read Also This Story:
Davanagere: ಹೈಕಮಾಂಡ್ ಸೂಚನೆ ಮೇರೆಗೆ ದಾವಣಗೆರೆ ಜಿಲ್ಲಾ ಪ್ರವಾಸ: ಲೋಕಸಭೆಗೆ ನನಗೆ ಕಾಂಗ್ರೆಸ್ ಟಿಕೆಟ್ ಸಿಗುವ ವಿಶ್ವಾಸ: ಜಿ. ಬಿ. ವಿನಯ್ ಕುಮಾರ್
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಬಿಜೆಪಿ ಸಂಸದರಿಗೆ ಹಿಂದಿ, ಇಂಗ್ಲೀಷ್ ಭಾಷಾ ಜ್ಞಾನ ಕಡಿಮೆ. ಹಾಗಾಗಿ, ಕಾವೇರಿ ನದಿ ನೀರು ಹಂಚಿಕೆ ವಿಚಾರ ಸಂಬಂಧ ಕೇಂದ್ರದ ಮಟ್ಟದಲ್ಲಿ ಸಮರ್ಥವಾಗಿ ಬಿಜೆಪಿ ನಾಯಕರ ಮನವೊಲಿಸಲು ಸಾಧ್ಯವಾಗುತ್ತಿಲ್ಲ. ಕಾವೇರಿ ವಿಚಾರದಲ್ಲಿ ಬಿಜೆಪಿ ಸಂಸದರು ಯಾಕೆ ಧ್ವನಿ ಎತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಪ್ರಧಾನಿ ಮೋದಿ ಅವರ ಬಳಿ ಇದ್ದ ಅಸ್ತ್ರಗಳು ಖಾಲಿಯಾಗಿವೆ. ರಾಷ್ಟ್ರೀಯತೆ, ಕೋಮು ಪ್ರಚೋದನೆ, ಹಿಂದುತ್ವ ಸೇರಿದಂತೆ ಹಲವು ವಿಚಾರಗಳು ಈಗ ಹಳೆಯದ್ದಾಗಿವೆ. ನಿರುದ್ಯೋಗ ಹೆಚ್ಚಿದೆ. ಕಳೆದ 9 ವರ್ಷಗಳಲ್ಲಿ ಯುವಕರಿಗೆ ಉದ್ಯೋಗ ಸರಿಯಾಗಿ ಸಿಕ್ಕಿಲ್ಲ. ಇದು ಯುವ ಸಮುದಾಯಕ್ಕೂ ಚೆನ್ನಾಗಿ ಗೊತ್ತಿದೆ. ಹಾಗಾಗಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿ ಪ್ರಭಾವ ಬೀರದು ಎಂಬುದು ನನ್ನ ಭಾವನೆ. ನನಗೆ ಕನ್ನಡ, ಹಿಂದಿ, ಇಂಗ್ಲೀಷ್ ಮೂರು ಭಾಷೆಗಳು ಬರುತ್ತವೆ. ಸಂಸತ್ತಿನಲ್ಲಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಮರ್ಥವಾಗಿ ಮಂಡಿಸುವ ಶಕ್ತಿ ಇದೆ. ನಾನೂ ವಿದ್ಯಾವಂತ. ಹಾಗಾಗಿ, ಟಿಕೆಟ್ ಸಿಕ್ಕರೆ ಬಿಜೆಪಿಗೆ ಸೋಲುಣಿಸುವುದು ಕಷ್ಟವಾಗೋಲ್ಲ ಎಂದು ಅಭಿಪ್ರಾಯಪಟ್ಟರು.
ದಾವಣಗೆರೆ (Davanagere) ಜಿಲ್ಲೆಯು ರಾಷ್ಟ್ರಮಟ್ಟದಲ್ಲಿ ಗುರುತಿಸುವಂತಾಗಬೇಕು ಎಂಬುದು ನನ್ನ ದೊಡ್ಡ ಕನಸು. ಇದಕ್ಕಾಗಿ ರಾಜಕೀಯಕ್ಕೆ ಬಂದಿದ್ದೇನೆ. ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಯುವಕರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದರು. ಈಗ ರಾಹುಲ್ ಗಾಂಧಿ ಅವರು ಯುವಕರಿಗೆ ರಾಜಕಾರಣದಲ್ಲಿ ಹೆಚ್ಚಿನ ಅವಕಾಶ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಆಲೋಚನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನನಗೆ ಅವಕಾಶ ಸಿಗುವ ವಿಶ್ವಾಸ ಇದೆ ಎಂದು ತಿಳಿಸಿದರು.
ಭದ್ರಾ ಡ್ಯಾಂನಿಂದ ಭದ್ರಾ ಬಲದಂಡೆ ನಾಲೆಯಲ್ಲಿ ನೀರು ಹರಿಸಬೇಕು. ರೈತರ ಹೋರಾಟಕ್ಕೆ ನನ್ನ ಸಂಪೂರ್ಣ ಸಹಕಾರ ಇದೆ. ಬೇರೆ ಕಾರ್ಯಕ್ರಮ ಇದ್ದ ಕಾರಣಕ್ಕೆ ಹೋರಾಟದಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಜಿಲ್ಲೆಯ ರೈತರ ಹಿತ ಕಾಪಾಡಲು ಸದಾ ಸಿದ್ಧ. ನನ್ನ ಸಹಕಾರ, ಬೆಂಬಲ ಇದ್ದೇ ಇರುತ್ತದೆ. ರೈತರ ಪರ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಕುಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ:
ದಾವಣಗೆರೆ (Davanagere) ಜಿಲ್ಲೆಯ ಎಂಟು ಕ್ಷೇತ್ರಗಳ ಗಡಿ ಭಾಗದ ಗ್ರಾಮಗಳಲ್ಲಿ ಗ್ರಾಮ ವಾಸ್ತವ್ಯ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ. ಅಕ್ಟೋಬರ್ 8ರಿಂದ ಗ್ರಾಮ ವಾಸ್ತವ್ಯಕ್ಕೆ ಚಾಲನೆ ನೀಡಲಾಗುವುದು. ಹರಿಹರ ತಾಲೂಕಿನ ಕೊಪ್ಪ ಗ್ರಾಮದಿಂದ ಆರಂಭಿಸಬೇಕು ಎಂಬ ಯೋಚನೆ ಇದ್ದು, ಇದಕ್ಕಾಗಿ ಎಲ್ಲಾ ಮಾಹಿತಿ ಪಡೆದುಕೊಳ್ಳುತ್ತಿದ್ದೇನೆ. ಎಷ್ಟೋ ಕುಗ್ರಾಮಗಳಲ್ಲಿ ರಸ್ತೆ ಇಲ್ಲ, ಕುಡಿಯಲು ನೀರು ಇಲ್ಲ, ವಿದ್ಯುಚ್ಛಕ್ತಿ ಇಲ್ಲ. ಮೂಲಭೂತ ಸೌಲಭ್ಯ ವಂಚಿತ ಗ್ರಾಮಗಳನ್ನು ಆಯ್ಕೆ ಮಾಡಿ ಗ್ರಾಮ ವಾಸ್ತವ್ಯ ನಡೆಸುತ್ತೇನೆ. ವಾರದಲ್ಲಿ ಎರಡು ದಿನಗಳ ಕಾಲ ಈ ಕಾರ್ಯಕ್ರಮ ನಡೆಸಬೇಕು ಎಂದುಕೊಂಡಿದ್ದೇನೆ. ಜನರ ಕುಂದುಕೊರತೆ ಆಲಿಸುತ್ತೇನೆ. ಕಷ್ಟ ಕೇಳುತ್ತೇನೆ. ನನ್ನ ಕೈಯಲ್ಲಿ ಸಾಧ್ಯವಾದಷ್ಟು ಪರಿಹಾರಕ್ಕೆ ಶ್ರಮಿಸುತ್ತೇುನೆ ಎಂದು ಮಾಹಿತಿ ನೀಡಿದರು.
ಸಿಎಂ ಬಗ್ಗೆ ಅವಹೇಳನ ಸರಿಯಲ್ಲ:
ಸಾಮಾಜಿಕ ಜಾಲತಾಣಗಳಲ್ಲಿ ಖದೀಮ ಕಾಂಗ್ರೆಸ್ ಎಂಬ ಹೆಸರಿನಲ್ಲಿ ಸಿಎಂ ಸಿದ್ದರಾಮಯ್ಯರ ಬಗ್ಗೆ ತುಂಬಾ ಅವಹೇಳನಕಾರಿಯಾಗಿ ಚಿತ್ರಿಸಲಾಗಿದೆ. ಈ ಸಂಬಂಧ ಈಗಾಗಲೇ ದಾವಣಗೆರೆಯಲ್ಲಿ ಪೊಲೀಸರಿಗೆ ದೂರು ಕೊಡಲಾಗಿದೆ. ಆದ್ರೆ, ಎಫ್ ಐ ಆರ್ ದಾಖಲಾಗಿಲ್ಲ. ಈ ಹಿಂದೆ ಎಸ್. ಎಸ್. ಮಲ್ಲಿಕಾರ್ಜುನ್ ಅವರ ಬಗ್ಗೆಯೂ ಅವಹೇಳನಕಾರಿಯಾಗಿ ತಂತ್ರಜ್ಞಾನ ಉಪಯೋಗಿಸಿಕೊಂಡು ಮಾಫಿಂಗ್ ಮಾಡಿ ಅವಹೇಳನ ಮಾಡಲಾಗಿತ್ತು. ಖದೀಮ ಕಾಂಗ್ರೆಸ್ ಪೇಜ್ ಈಗ ಡಿಲೀಟ್ ಆಗಿದೆ. ಯಾರೇ ಆಗಿದ್ದರೂ ಕ್ರಮ ಆಗಲೇಬೇಕು ಎಂದು ಆಗ್ರಹಿಸಿದರು.