SUDDIKSHANA KANNADA NEWS/ DAVANAGERE/ DATE:25-08-2023
ದಾವಣಗೆರೆ (Davanagere): ನಗರದ ಬಿಐಇಟಿ ತಾಂತ್ರಿಕ ಮಹಾವಿದ್ಯಾಲಯದ ಎಸ್. ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಆ. 27ರಂದು ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ ಹಾಗೂ ಸಮಸ್ತ ಭಕ್ತ ವೃಂದದ ಆಶ್ರಯದಲ್ಲಿ ಭಾರತದ ಪ್ರಥಮ ವಚನ ಸಂಸ್ಕೃತಿ ಅಭಿಯಾನ ತುಮ್ಹಾರೆ ಸಿವಾ ಔರ್ ಕೋಯಿ ನಹೀ ಅಥವಾ ನೀನಲ್ಲದೇ ಮತ್ತಾರು ಇಲ್ಲವಯ್ಯಾ ವಚನ ನೃತ್ಯರೂಪಕ ಪ್ರದರ್ಶನ ಮತ್ತು ಗುರುವಂದನೆ ಕಾರ್ಯಕ್ರಮ ನಡೆಯಲಿದೆ ಎಂದು ಸಮಾಜದ ಮುಖಂಡ ಅಣಬೇರು ರಾಜಣ್ಣ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಸಂಜೆ ಆರು ಗಂಟೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, ಆ ಬಳಿಕ ಬಸವಣ್ಣನವರ ಆಯ್ದ 44 ವಚನಗಳ ಆಧಾರಿತ ವಚನ ನೃತ್ಯರೂಪಕ ಪ್ರದರ್ಶನ ಜರುಗಲಿದೆ. ಸುಮಾರು 2 ಸಾವಿರ ಮಂದಿ ಆಗಮಿಸಲಿದ್ದು, ಪ್ರಸಾದದ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.
ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಅಖಿಲ ಭಾರತೀಯ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರಾಧ್ಯಕ್ಷ ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ, ತೋಟಗಾರಿಕೆ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಶಾಸಕರಾದ ದೇವೇಂದ್ರಪ್ಪ, ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ, ರಂಗಸಂಘಟಕರಾದ ಶ್ರೀನಿವಾಸ ಜಿ. ಕಪ್ಪಣ್ಣ, ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್, ಸಹಕಾರಿ ಧುರೀಣ ಜೆ. ಆರ್. ಷಣ್ಮುಖಪ್ಪ, ಕನ್ನಡ ಮ್ತತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿ. ರವಿಚಂದ್ರ ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಶ್ರೀನಿವಾಸ ಜಿ. ಕಪ್ಪಣ್ಣ ಕಾರ್ಯಕ್ರಮ ವಿನ್ಯಾಸ ಮತ್ತು ನಿರ್ವಹಣೆ ಮಾಡಲಿದ್ದು, ಸಿ. ಅಶ್ವಥ್ ಸಂಗೀತ ಸಂಯೋಜನೆ ಮಾಡಿದ್ದಾರೆ. ನೃತ್ಯ ಸಂಯೋಜನೆ ಮತ್ತು ನಿರ್ದೇಶನ
ಸ್ನೇಹಾ ಕಪ್ಪಣ್ಣ ಅವರದ್ದು. ಪ್ರಧಾನ ವ್ಯವಸ್ಥಾಪಕರು ಹಾಗೂ ಪ್ರದರ್ಶನದ ಬೆಳಕಿನ ವ್ಯವಸ್ಥೆಯನ್ನು ವೈ. ಡಿ. ಬದಾಮಿ ಅವರು ವಹಿಸಿಕೊಂಡಿದ್ದಾರೆ ಎಂದರು.
ಈ ಸುದ್ದಿಯನ್ನೂ ಓದಿ:
Davanagere: ಐದಾರು ದಿನಗಳಲ್ಲಿ ದಾವಣಗೆರೆಗೆ ಮೃತದೇಹಗಳು: ಪತ್ನಿ, ಪುತ್ರ ಕೊಂದು ಆತ್ಮಹತ್ಯೆಗೆ ಮಾನಸಿಕ ಖಿನ್ನತೆ ಕಾರಣನಾ…? ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ…?
ಭಾರತದ 14 ರಾಜ್ಯಗಳಲ್ಲಿ ಈಗಾಗಲೇ 47 ಪ್ರದರ್ಶನಗಳು ಯಶಸ್ವಿಯಾಗಿ ನಡೆದಿವೆ. ಈ ವಚನ ನೃತ್ಯವು ಸೆ. 2 ರಂದು ಸಾಣೇಹಳ್ಳಿಯಲ್ಲಿ ಸಮಾರೋಪಗೊಳ್ಳಲಿದೆ. ಭಾರತದ ರಂಗಭೂಮಿಯ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಾಖಲಾರ್ಹ ಕೆಲಸ. ಸಾಣೇಹಳ್ಳಿಯ ಶ್ರೀ ಶಿವಕುಮಾರ ಕಲಾ ಸಂಘ ಮತ್ತು ದಾವಣಗೆರೆ (Davanagere) ಸಮಸ್ತ ಭಕ್ತವೃಂದ ಸಹಯೋಗದಲ್ಲಿ ಈ ನೃತ್ಯರೂಪಕ ಪ್ರದರ್ಶನಗೊಳ್ಳುತ್ತಿದ್ದು, ಇದೇ ವೇಳೆ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಅವರಿಗೆ ಗುರುವಂದನಾ ಕಾರ್ಯಕ್ರಮವನ್ನೂ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಪ್ರದರ್ಶನ ವೀಕ್ಷಿಸಲು, ಪಂಡಿತಾರಾಧ್ಯ ಶ್ರೀಗಳ ಅಭಿವಂದಿಸಲು ಅನೇಕ ಸಂಘ, ಸಂಸ್ಥೆಗಳ ಮುಖ್ಯಸ್ಥರು, ಕಲಾಸ್ತರು, ಬಸವಪ್ರೇಮಿಗಳು, ಶಾಲಾ ಕಾಲೇಜಿನ ಸಾವಿರಾರು ಯುವಕ ಯುವತಿಯರು ಭಾಗವಹಿಸುವರು. ಪ್ರದರ್ಶನದ ಬಳಿಕ ಸಂವಾದವನ್ನೂ ಏರ್ಪಡಿಸಲಾಗಿದೆ ಎಂದು ಹೇಳಿದರು.
ಸಾಹಿತಿ, ಬರಹಗಾರ ಎಂ. ಜಿ. ಈಶ್ವರಪ್ಪ ಅವರು ಮಾತನಾಡಿ ವಿಶ್ವಗುರು ಜಗಜ್ಯೋತಿ ಬಸವಣ್ಣನವರು ಸಮಾಜೋ ಧಾರ್ಮಿಕ ಸುಧಾರಕರು. ಲಿಂಗಾಯತ ಧರ್ಮ ಮತ್ತು ಅನುಭವ ಮಂಟಪದ ಸಂಸ್ಥಾಪಕರು. ದೂರದೃಷ್ಟಿಯ ದಾರ್ಶನಿಕರು. ಪ್ರಜಾಪ್ರಭುತ್ವದ ಪಿತಾಮಹರು. ಜಾತ್ಯತೀತತೆ ಮತ್ತು ಲಿಂಗ ಸಮಾನತೆಯ ಮೂಲಕ ಸ್ತ್ರೀಯರ ಮತ್ತು ಕೆಳವರ್ಗದವರ ಸಮಾನತೆ ಎತ್ತಿ ಹಿಡಿದವರು. ಅವರ ವಚನಗಳು ಸಾರ್ವಕಾಲಿಕ ಮೌಲ್ಯಗಳನ್ನು ಒಳಗೊಂಡಿದೆ. ಈ ನಿಟ್ಟಿನಲ್ಲಿ ಬಸವಣ್ಣನವರ 44 ವಚನಗಳನ್ನು ಹಿಂದಿ ಭಾಷೆಗೆ ಅನುವಾದಿಸಿ ಅದರ ನೃತ್ಯ ಪ್ರದರ್ಶನವನ್ನು ದೇಶಾದ್ಯಂತ ಏರ್ಪಡಿಸಲಾಗಿದೆ. ಈ ಪ್ರದರ್ಶನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಹ ಪ್ರಶಂಸೆಯ ಪತ್ರ ಬರೆದಿದ್ದಾರೆ ಎಂದು ವಿವರಿಸಿದರು.
ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ರಂಗಭೂಮಿಯನ್ನು ಸಮರ್ಥವಾಗಿ, ಪೂರ್ಣ ಪ್ರಮಾಣದಲ್ಲಿ ಧರ್ಮೋಪದೇಶಕ್ಕೆ ಬಳಸಿಕೊಳ್ಳುತ್ತಿರುವವರಲ್ಲಿ ಪ್ರಮುಖರು. ಸಾಣೇಹಳ್ಳಿಯನ್ನು ಕೇಂದ್ರವಾಗಿಸಿಕೊಂಡು ಶ್ರೀ ಶಿವಕುಮಾರ ಕಲಾಸಂಘ ಮತ್ತದರ ಅಂಗ ಸಂಸ್ಥೆಗಳ ಮೂಲಕ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ಹತ್ತಾರು ಹಲವು ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಇದೇ ಸಾಲಿಗೆ ಸೇರುವ ಮತ್ತೊಂದು ಯೋಜನೆ ತುಮ್ಹಾರೆ ಸಿವಾ ಔರ್ ಕೋಯಿ ನಹೀ ಅಥವಾ ನೀನಲ್ಲದೇ ಮತ್ತಾರೂ ಇಲ್ಲವಯ್ಯ ಎಂಬ ಬಸವಣ್ಣನವರ ಆಯ್ದ 44 ವಚನಗಳನ್ನು ಹಿಂದಿಭಾಷೆಗೆ ಅನುವಾದಿಸಿ, ರಾಗ ಸಂಯೋಜಿಸಿ, ಹಾಡಿಸಿರುವುದಲ್ಲದೇ, ಆಕರ್ಷಕವಾಗಿ ನೃತ್ಯ ಸಂಯೋಜನೆ ಮಾಡಿರುವುದು ದೇಶದ ಮೊದಲ ವಚನ ಸಂಸ್ಕೃತಿ ಅಭಿಯಾನ ಎಂಬ ಹೆಗ್ಗಳಿಕೆ ಪಡೆದಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಐಗೂರು ಚಂದ್ರಶೇಖರ್, ಶಾಮನೂರು ಬಸವರಾಜ್, ಪರಮೇಶ್ವರಪ್ಪ, ನಾಗರಾಜ್ ಪಲ್ಲಾಗಟ್ಟೆ ಮತ್ತಿತರರು ಹಾಜರಿದ್ದರು.