Home “ವಿಐಪಿ ರುದ್ರಾ ಷೇರ್ ಬಗ್ಗೆ ಎಚ್ಚರದಿಂದಿರಿ”: ದಾವಣಗೆರೆಯ ಮಹಿಳಾ ಟೆಕ್ಕಿಗೆ 93 ಲಕ್ಷ ರೂ. ವಂಚಿಸಿದ ಸೈಬರ್ ವಂಚಕರು!
Homeಕ್ರೈಂ ನ್ಯೂಸ್ದಾವಣಗೆರೆಬೆಂಗಳೂರು

“ವಿಐಪಿ ರುದ್ರಾ ಷೇರ್ ಬಗ್ಗೆ ಎಚ್ಚರದಿಂದಿರಿ”: ದಾವಣಗೆರೆಯ ಮಹಿಳಾ ಟೆಕ್ಕಿಗೆ 93 ಲಕ್ಷ ರೂ. ವಂಚಿಸಿದ ಸೈಬರ್ ವಂಚಕರು!

Share
ದಾವಣಗೆರೆ
Share

ದಾವಣಗೆರೆ: ಲಾಭದ ಆಸೆ ತೋರಿಸಿ ದಾವಣಗೆರೆಯ ಮಹಿಳಾ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 93 ಲಕ್ಷ ರೂಪಾಯಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

ನಗರದ ಸಿದ್ದವೀರಪ್ಪ ಬಡಾವಣೆಯ 38 ವರ್ಷದ ಮಹಿಳಾ ಟೆಕ್ಕಿ ಮೋಸ ಹೋದವರು ಎಂದು ತಿಳಿದು ಬಂದಿದೆ.

ಘಟನೆ ಹಿನ್ನೆಲೆ ಏನು?

ಷೇರು ಮಾರುಕಟ್ಟೆಯಲ್ಲಿ ಹಣ ವಿನಿಯೋಗಿಸಿದರೆ ಲಾಭ ಪಡೆಯಬಹುದು. ಕೋಟ್ಯಂತರ ರೂಪಾಯಿ ಹಣ ಸಂಪಾದಿಸಬಹುದು ಎಂದು ನಂಬಿಸಿ ಮಹಿಳಾ ಟೆಕ್ಕಿಯೊಬ್ಬರಿಂದ ಹಂತ ಹಂತವಾಗಿ ಹಣ ಪೀಕಿದ್ದಾರೆ. ಆ ಬಳಿಕ 93 ಲಕ್ಷ ರೂಪಾಯಿ ವಂಚನೆಗೆ ಒಳಗಾದ ಟೆಕ್ಕಿ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ತನ್ನ ಪತಿಯ ಮೊಬೈಲ್ ನಲ್ಲಿ ವಿಐಪಿ ರುದ್ರಾ ಷೇರ್ ಎಂಬ ವ್ಯಾಟ್ಸಪ್ ಗ್ರೂಪ್ ಇತ್ತು. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಹಣ ಸಂಪಾದನೆ ಮಾಡಬಹುದು ಎಂಬ ಸಂದೇಶವನ್ನು ಮಹಿಳಾ ಟೆಕ್ಕಿ ನೋಡಿದ್ದಾರೆ. ಇದನ್ನು ನಂಬಿದ ಮಹಿಳಾ ಟೆಕ್ಕಿ ಹೆಚ್ಚಿನ ಲಾಭದ ಆಸೆಗೆ ಪತಿ ಬ್ಯಾಂಕ್ ಅಕೌಂಟ್ ನಿಂದ ಹತ್ತು ಬಾರಿ ಹಣ ವರ್ಗಾವಣೆ ಮಾಡಿದ್ದಾರೆ. ಒಮ್ಮೆ 17 ಲಕ್ಷ, ಮತ್ತೊಮ್ಮೆ 16 ಲಕ್ಷ, ಮೂರನೇ ಬಾರಿ 14 ಲಕ್ಷ ರೂಪಾಯಿ ಸೇರಿದಂತೆ ಹಲವು ಬಾರಿ ಹಣ ಸಂದಾಯ ಮಾಡಿದ್ದಾರೆ.

ಷೇರು ಮಾರುಕಟ್ಟೆಯಲ್ಲಿ ಬಂದಂಥ ಲಾಭಾಂಶ ಹಣ ನಗದೀಕರಣಗೊಳಿಸಲು ಹೋದಾಗ ವಂಚನೆಗೆ ಒಳಗಾಗಿರುವುದು ಮಹಿಳಾ ಟೆಕ್ಕಿಗೆ ಗೊತ್ತಾಗಿದೆ. ಆ ಬಳಿಕ ಮೊಬೈಲ್ ಗೆ ಕರೆ ಮಾಡಿದರೆ ಪ್ರತಿಕ್ರಿಯೆ ಬಂದಿಲ್ಲ. ಆಗ ತಾನು ಮೋಸ ಹೋಗಿರುವುದು ಗೊತ್ತಾಗಿದೆ. ಕೂಡಲೇ ಸಿಇಎನ್ ಅಪರಾಧ ಪೊಲೀಸ್ ಠಾಣೆಗೆ ಮಹಿಳಾ ಟೆಕ್ಕಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಸೈಬರ್ ವಂಚನೆ ಬಗ್ಗೆ ಎಚ್ಚರವಿರಿ:

ಈ ಹಿಂದೆಯೂ ಪೊಲೀಸ್ ಇಲಾಖೆಯು ಹಲವು ಬಾರಿ ಸೈಬರ್ ವಂಚಕರ ಬಗ್ಗೆ ಹುಷಾರಾಗಿರುವಂತೆ ಸೂಚನೆ ನೀಡಿದ್ದರೂ, ಎಚ್ಚರಿಕೆ ಕೊಟ್ಟಿದ್ದರೂ ಜನರು ಪದೇ ಪದೇ ಮೋಸ ಹೋಗುತ್ತಿರುವುದು ಬೆಳಕಿಗೆ ಬರುತ್ತಿದೆ. ಹೆಚ್ಚಿನ ಹಣದ ಆಸೆಗೆ ಅಪರಿಚಿತ ವೆಬ್ ಸೈಟ್ ಗಳಿಗೆ ಭೇಟಿ ನೀಡುವುದು, ಮೊಬೈಲ್ ಗೆ ಬರುವ ಸಂದೇಶ ನಂಬಬಾರದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದಾದರೆ ನುರಿತವರ ಜೊತೆ ಚರ್ಚಿಸಿ ಆ ನಂತರ ಹೂಡಿಕೆ ಮಾಡಬಹುದು. ಈ ಬಗ್ಗೆ ಎಚ್ಚರ ವಹಿಸುವಂತೆ ಜಿಲ್ಲಾ ಪೊಲೀಸ್ ಇಲಾಖೆಯು ಸೂಚನೆ ನೀಡಿದೆ.

Share

Leave a comment

Leave a Reply

Your email address will not be published. Required fields are marked *