Home ದಾವಣಗೆರೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ: ದಾವಣಗೆರೆಯಲ್ಲಿ ಪ್ರಾಣಿಬಲಿ, ಮದ್ಯಪಾನ ನಿಷೇಧ, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ!
ದಾವಣಗೆರೆಬೆಂಗಳೂರು

ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ: ದಾವಣಗೆರೆಯಲ್ಲಿ ಪ್ರಾಣಿಬಲಿ, ಮದ್ಯಪಾನ ನಿಷೇಧ, ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ!

Share
ದಾವಣಗೆರೆ
Share

ದಾವಣಗೆರೆ: ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆಯು ಫೆ. 22 ರಿಂದ 25 ರವರೆಗೆ 3 ದಿನಗಳ ಕಾಲ ನಡೆಯಲಿದ್ದು, ಭಕ್ತಿಪೂರಕವಾಗಿ ವಿಜೃಂಭಣೆಯಿಂದ ನಡೆಯಲು ಕ್ರಮವಹಿಸಲಾಗಿದೆ, ಜಾತ್ರೆ ಸಮಯದಲ್ಲಿ ದೇವಸ್ಥಾನದ ಸುತ್ತಮುತ್ತಲು ಪ್ರಾಣಿಬಲಿಯನ್ನು ನಿಷೇಧಿಸಲಾಗಿದೆ.

ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗ್ರತೆಯಾಗಿ ಮದ್ಯಪಾನವನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು. ಬ್ಯಾನರ್ ಅಳವಡಿಕೆಗೆ ಅನುಮತಿ ಕಡ್ಡಾಯ ಎಂದು ಜಿಲ್ಲಾಧಿಕಾರಿ ಜಿ. ಎಂ. ಗಂಗಾಧರ ಸ್ವಾಮಿ ತಿಳಿಸಿದರು.

ಅವರು ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಮಹೋತ್ಸವದ ಅಂಗವಾಗಿ ದೇವಸ್ಥಾನದ ಬಳಿ ಏರ್ಪಡಿಸಿದ್ದ ಪೂರ್ವಬಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಚಿವರ ಅಧ್ಯಕ್ಷತೆಯಲ್ಲಿ ಮತ್ತು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಟ್ಟು ಐದು ಸಭೆಗಳನ್ನು ನಡೆಸಲಾಗಿದೆ. ಕಳೆದ ಜಾತ್ರೆಯಲ್ಲಿನ ಅನುಭವಗಳ ಆಧಾರದ ಮೇಲೆ ಪೊಲೀಸ್ ಅಧಿಕಾರಿಗಳು ಮತ್ತು ಧರ್ಮದರ್ಶಿಗಳು ನೀಡಿದ ಸಲಹೆಗಳನ್ನು ಈ ಬಾರಿ ಜಾರಿಗೆ ತರಲಾಗುತ್ತಿದೆ. ದೇವಸ್ಥಾನದ ಸುತ್ತಮುತ್ತಲ 500 ಮೀಟರ್ ವ್ಯಾಪ್ತಿಯಲ್ಲಿ ಸುಮಾರು ವರ್ಷಗಳಿಂದ ಸ್ವಚ್ಛಗೊಳಿಸದ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಈ ಪ್ರಕ್ರಿಯೆಯಲ್ಲಿ ಸುಮಾರು 100 ಟ್ರಕ್ ಲೋಡ್ ಗಳಷ್ಟು ಹೂಳನ್ನು ಹೊರತೆಗೆಯಲಾಗಿದೆ ಎಂದು ತಿಳಿಸಿದರು.

ರಸ್ತೆ ದುರಸ್ತಿ:

ಬಾರ್ ಲೈನ್ ರಸ್ತೆ, ರೇಣುಕಾ ಮಂದಿರ ರಸ್ತೆ ಮತ್ತು ಡಬಲ್ ರೋಡ್ಗಳಲ್ಲಿ ಚರಂಡಿ ನೀರು ಉಕ್ಕಿ ಹರಿಯದಂತೆ ಕ್ರಮ ಕೈಗೊಂಡು ರಸ್ತೆಗಳನ್ನು ಸರಿಪಡಿಸಲಾಗಿದೆ ಎಂದು ತಿಳಿಸಿದರು.

ಬೆಸ್ಕಾಂ ಲೈನ್ ಸಮಸ್ಯೆಗೆ ಪರಿಹಾರ:

ಬೆಸ್ಕಾಂ ಲೈನ್ ಗಳಲ್ಲಿನ ತೊಂದರೆಗಳನ್ನು ಸರಿಪಡಿಸಲಾಗಿದೆ ಮತ್ತು ತೆರೆದಿದ್ದ ಟ್ರಾನ್ಸ್ ಫಾರ್ಮರ್ ಗಳನ್ನು ಮುಚ್ಚಿ ರಕ್ಷಣೆ ಒದಗಿಸಲಾಗಿದೆ. ಆರೋಗ್ಯ ಇಲಾಖೆಯ ಮೂಲಕ ಸೊಳ್ಳೆಗಳ ಕಾಟವಿಲ್ಲದಂತೆ ಮತ್ತು ನೀರು ನಿಲ್ಲದಂತೆ ಕ್ರಮ ವಹಿಸಲಾಗಿದೆ. ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ಸೇರಿ ಸುಗಮ ಸಂಚಾರಕ್ಕಾಗಿ ಎರಡು ಬಾರಿ ಸ್ಥಳ ಪರಿಶೀಲನೆ ನಡೆಸಲಾಗಿದೆ. ದೇವಸ್ಥಾನದ ಸುತ್ತಮುತ್ತಲು ಇರುವ ದೇವಸ್ಥಾನಗಳು ಮತ್ತು ಕಳೆದ ಬಾರಿ ಬಿಟ್ಟುಹೋಗಿದ್ದ ದೇವಸ್ಥಾನಗಳಿಗೆ ಬಣ್ಣ ಬಳಿಯುವ ಕೆಲಸ ನಡೆಯುತ್ತಿದ್ದು, ಎರಡು ದಿನಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.

ಮಹನೀಯರ ಪ್ರತಿಮೆಗಳಿಗೆ ಜಲಪ್ರೋಕ್ಷಣೆ:

ಶಿವಾಜಿ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನವರಂತಹ ಮಹನೀಯರ ಪ್ರತಿಮೆಗಳನ್ನು ಜಲಪ್ರೋಕ್ಷಣೆ ಮಾಡಿ ಸ್ವಚ್ಛಗೊಳಿಸಲು ಆದೇಶಿಸಲಾಗಿದೆ, ಸ್ವಚ್ಛತಾ ಕಾರ್ಯ ಮುಗಿದ ನಂತರ ಪ್ರಮುಖ ರಸ್ತೆ ಮತ್ತು ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ವ್ಯವಸ್ಥೆ ಮಾಡಲಾಗಿದೆ.

ಸುರಕ್ಷತಾ ದೃಷ್ಠಿಯಿಂದ ದುರ್ಗಾಂಭ ದೇವಸ್ಥಾನದ ಸುತ್ತಮುತ್ತಲು ಉಪವಿಭಾಗಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು, ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆಯ ಉಪ ನಿರ್ದೇಶಕರು ಇವರುಗಳನ್ನ ನೊಡೆಲ್ ಅಧಿಕಾರಿಗಳು, ಚೌಡೇಶ್ವರಿ ದೇವಸ್ಥಾನ ಮತ್ತು ವಿನೋಬ್ ನಗರ ಸುತ್ತಮುತ್ತಲು ನೋಡಲ್ ಅಧಿಕಾರಿಗಳು ಮತ್ತು ಕಾಯಿ ಪೇಟೆ ಮತ್ತು ವಸಂತ ಟಾಕೀಸ್ ಪ್ರದೇಶಗಳಿಗೆ ಮಹಾನಗರ ಪಾಲಿಕೆ ಆಯುಕ್ತರು ರವರನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಿದ್ದು, ಸದರಿ ಅಧಿಕಾರಿಗಳು ಯಾವುದೇ ಅಹಿತಕರ ಘಟನೆ ನಡೆಯದಂತೆ ಸುರಕ್ಷತಾ ಕ್ರಮಗಳನ್ನು ವಹಿಸುವರು ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ದುರ್ಗಾಂಭಿಕ ದೇವಸ್ಥಾನದ ಸುತ್ತಮುತ್ತಲ ದೇವಸ್ಥಾನಗಳಿಗೆ ಸುಮಾರು 51 ಲಕ್ಷ ರೂ. ವೆಚ್ಚದಲ್ಲಿ ಬಣ್ಣವನ್ನು ಬಳಿಯಲಾಗುತ್ತಿದೆ, ದೇವಸ್ಥಾನದ ಬಳಿ 24 ಗಂಟೆ ಕುಡಿಯುವ ನೀರು, 30 ಸ್ವಚ್ಚತಾ ಸಿಬ್ಬಂದಿಗಳ ನೇಮಕ, ಉರುಳು ಸೇವೆ ಮಾಡಲು ಮರಳು, ಸ್ನಾನ ಮಾಡಲು 20 ನಳಗಳ ವ್ಯವಸ್ಥೆ ಮಾಡಲಾಗಿದ್ದು ಇವುಗಳಿಗೆ 11 ಲಕ್ಷ ವೆಚ್ಚ ಮಾಡಲಾಗುತ್ತಿದೆ. ಚೌಡೇಶ್ವರಿನಗರ, ವಿನೋಬ ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದೆ. ಒಳಚರಂಡಿ ವ್ಯವಸ್ಥೆಯನ್ನು ದುರಸ್ತಿ ಮಾಡಲಾಗಿದೆ. ದೇವಸ್ಥಾನದ ಸುತ್ತಮುತ್ತಲು, ಸಂಗೊಳ್ಳಿ ರಾಯಣ್ಣ ಸರ್ಕಲ್, ಗುಂಡಿ ಸರ್ಕಲ್, ದಾವಣಗೆರೆ ನಗರಕ್ಕೆ ಪ್ರವೇಶಿಸುವ ರಸ್ತೆಗಳು, ಮಹಾನಗರ ಪಾಲಿಕೆ ಕಚೇರಿ, ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಗಳಲ್ಲಿ ದೀಪಾಲಂಕಾರ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ದೇವಸ್ಥಾನದ ಸುತ್ತಮುತ್ತಲು ಪಾರ್ಕಿಂಗ್ ಸ್ಥಳದಲ್ಲಿ ಶೌಚಾಲಯಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.

ಸಿಸಿಟಿವಿ ಅಳವಡಿಕೆ:

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶೇಖರ್ ಹೆಚ್.ಟಿ ಅವರು ಮಾತನಾಡಿ, ನಗರದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಪ್ರಯುಕ್ತ ದೇವಸ್ಥಾನದ ಸುತ್ತಮುತ್ತಲು ಸಿಸಿಟಿವಿಗಳನ್ನು ಅಳವಡಿಸಲಾಗಿದೆ, ಸರಗಳ್ಳತನ, ಮಹಿಳೆಯರು ಮತ್ತು ಮಕ್ಕಳ ಸುರಕ್ಷತಾ ದೃಷ್ಠಿಯಿಂದ ಅಗತ್ಯ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ, ದೇವಸ್ಥಾನದ ಪಕ್ಕದಲ್ಲಿ ತಾತ್ಕಾಲಿಕ ಪೊಲೀಸ್ ಠಾಣೆಯನ್ನು ತೆರೆಯಲಾಗಿದೆ ಎಂದರು.

ಬ್ಯಾರಿಕೇಡ್ ವ್ಯವಸ್ಥೆ:

ಭಕ್ತಾಧಿಗಳಿಗೆ ಹಾಗೂ ವಿವಿಐಪಿಗಳಿಗೆ ದರ್ಶನಕ್ಕೆ ಅನುಕೂಲಕರವಾಗಲು ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ಸುಗಮ ಸಂಚಾರ ನಡೆಸಲು ಪೊಲೀಸ್ ವ್ಯವಸ್ಥೆ ಮಾಡಲಾಗಿದೆ. ಬ್ಯಾನರ್ ಮತ್ತು ಬಂಟಿಂಗ್ ಅಳವಡಿಸಲು ಕಡ್ಡಾಯವಾಗಿ ಅನುಮತಿ ಪಡೆದು
ಅಳವಡಿಸಬೇಕು, ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ದ ಕ್ರಮಕೈಗೊಳ್ಳಲಾಗುವುದು ಮತ್ತು ಪ್ರಜೋದನಕಾರಿ ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ಪ್ರಾಣಿಬಲಿ ಕುರಿತು ಹಳೆಯ ಛಾಯಾಚಿತ್ರಗಳನ್ನು ಅಪ್ ಲೋಡ್ ಮಾಡಬಾರದು, ಕಾನೂನು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೆಲಸಗಳನ್ನು ಮಾಡಬಾರದು ಎಂದು ತಿಳಿಸಿದರು.

ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಸಿಇಒ ಗಿತ್ತೇ ಮಾಧವ ವಿಠಲ್ ರಾವ್, ಶ್ರೀ ದುರ್ಗಾಂಭಿಕಾ ದೇವಿ ಜಾತ್ರೆ ಸಮಿತಿಯ ಸದಸ್ಯರುಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *