SUDDIKSHANA KANNADA NEWS/DAVANAGERE/DATE:16_10_2025
ದಾವಣಗೆರೆ: ನಗರದಲ್ಲಿನ ಬ್ಲಾಕ್ ಸ್ಪಾಟ್ ಗುಂಡಿಗಳನ್ನು ಮುಚ್ಚಿ ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚನೆ ನೀಡಿದರು.
ಈ ಸುದ್ದಿಯನ್ನೂ ಓದಿ: ಮಾಮೂಲು ಪಡೆಯುವಾಗ ಪ್ರಗ್ನೆಂಟ್ ಇರೋಲ್ವ: ಅರಣ್ಯಾಧಿಕಾರಿ ಶ್ವೇತಾ ಬಗ್ಗೆ ಕೀಳುಮಟ್ಟದ ಹೇಳಿಕೆ ಕೊಟ್ಟ ಚನ್ನಗಿರಿ “ಕೈ” ಶಾಸಕ ಶಿವಗಂಗಾ ಬಸವರಾಜ್!
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಗುರುತಿಸಿರುವ ಅಪಘಾತ ಮತ್ತು ಸೂಕ್ಷ್ಮ ವಲಯಗಳನ್ನು ಅಭಿವೃದ್ಧಿಪಡಿಸಬೇಕು. ಅಗತ್ಯ ಸಂಚಾರಿ ಹಾಗೂ ಸೂಚನಾ ಫಲಕ ಅಳವಡಿಸಬೇಕು. ಇತ್ತೀಚೆಗೆ ಚನ್ನಗಿರಿ ವ್ಯಾಪ್ತಿಯಲ್ಲಿ ರಸ್ತೆ ಅಪಘಾತದಲ್ಲಿ 4 ಜನ ಸಾವನ್ನಪ್ಪಿದ್ದಾರೆ. ಅದರಲ್ಲೂ ಮಹಿಳೆಯರೇ ಹೆಚ್ಚು ತೊಂದರೆಗೊಳಗಾಗುತ್ತಿದ್ದಾರೆ. ಆದುದರಿಂದ ತ್ವರಿತವಾಗಿ ರಸ್ತೆ ದುರಸ್ಥಿಗೊಳಿಸಬೇಕು. ರಸ್ತೆ ಬ್ಲಾಕ್ ಸ್ಪಾಟ್‌ಗಳನ್ನು ಮುಚ್ಚಬೇಕಾದರೆ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಗಳು ದಾವಣಗೆರೆ, ಚನ್ನಗಿರಿ, ಹರಿಹರ ಹಾಗೂ ನ್ಯಾಮತಿ ತಾಲ್ಲೂಕಿನಲ್ಲಿ ಅಪಘಾತವಲಯಗಳನ್ನು ಗುರುತಿಸಿ ಅಪಘಾತ ಸಂಭವಿಸದಂತೆ ಕ್ರಮ ಕೈಗೊಳ್ಳಲಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಲು ಈಗಾಗಲೇ ಟೆಂಡರ್ ಕರೆಯಲಾಗಿದೆ. ಶೀಘ್ರದಲ್ಲಿಯೇ ರಸ್ತೆಗುಂಡಿ ಮುಚ್ಚುವ ಕಾಮಗಾರಿ ಆರಂಭಿಸಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಹೊಸ ಕುಂದುವಾಡ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ – 48 ಅಂಡರ್ ಪಾಸ್ ಕಾಮಗಾರಿ ಹಾಗೂ ದಾವಣಗೆರೆ- ಚನ್ನಗಿರಿ ಹೊರ ವಲಯದಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ -369 ಕಾಮಗಾರಿ ವಿಳಂಬವಾಗುತ್ತಿದ್ದು, ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿವೆ. ಆದುದರಿಂದ ರಸ್ತೆಯ ಇಕ್ಕೆಲಗಳ ಸರ್ವೀಸ್ ರಸ್ತೆ ಕಾಮಗಾರಿ, ತ್ವರಿತವಾಗಿ ಪೂರ್ಣಗೊಳಿಸಬೇಕು. ರಸ್ತೆಯ ಬದಿಯಲ್ಲಿ ಬೀದಿ ದೀಪಗಳಿಲ್ಲ. ಬೀದಿ ದೀಪ ಅಳವಡಿಸಿ ಅಲ್ಲಿನ ಸಾರ್ವಜನಿಕರಿಗೆ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕು. ಆನಗೋಡು ಗ್ರಾಮದ ಬಳಿ ಸರ್ವೀಸ್ ರಸ್ತೆಯ ಪಕ್ಕದಲ್ಲಿಯೇ ಡಾಬಾ, ಹೊಟೇಲ್‌ಗಳು ಇರುವುದರಿಂದ ಏಕಾಏಕಿ ತಿರುವು ಪಡೆದುಕೊಳ್ಳುವ ಕಾರಣದಿಂದ ಅಪಘಾತ ಪ್ರಕರಣ ಹೆಚ್ಚುತ್ತಿವೆ. ಅವುಗಳನ್ನು ತೆರವುಗೊಳಸಿಬೇಕು. ಹಾಗೆಯೇ ಅಂಡರ್ ಪಾಸ್ ರಸ್ತೆ ಬದಿ ವ್ಯಾಪಾರಿಗಳು ನಿರ್ಮಿಸಿಕೊಂಡಿರುವ ಗೂಡಂಗಡಿಗಳನ್ನು ನಿಯಮಾನುಸಾರ ಅಳತೆ ಮಾಡಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.