Home ದಾವಣಗೆರೆ ಶಾಮನೂರು ಶಿವಶಂಕರಪ್ಪರ ಕೊಡುಗೆಯಿಂದ ಸಮರ್ಥ್ ಗೆಲ್ಲಲಿದ್ದಾರೆ: ಡಿ.ಕೆ. ಶಿವಕುಮಾರ್
ದಾವಣಗೆರೆಬೆಂಗಳೂರು

ಶಾಮನೂರು ಶಿವಶಂಕರಪ್ಪರ ಕೊಡುಗೆಯಿಂದ ಸಮರ್ಥ್ ಗೆಲ್ಲಲಿದ್ದಾರೆ: ಡಿ.ಕೆ. ಶಿವಕುಮಾರ್

Share
ಶಾಮನೂರು ಶಿವಶಂಕರಪ್ಪ
Share

ದಾವಣಗೆರೆ: “ನಮ್ಮ ಸರ್ಕಾರದ ಜನಪರ ಕಾರ್ಯಕ್ರಮ, ಶಾಮನೂರು ಶಿವಶಂಕರಪ್ಪ ಅವರು ಈ ಭಾಗಕ್ಕೆ ನೀಡಿರುವ ಕೊಡುಗೆಯಿಂದ ಈ ಭಾಗದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರನ್ನು ಉಪಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು.

ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ್ ಮಲ್ಲಿಕಾರ್ಜುನ ಅವರ ನಾಮಪತ್ರ ಸಲ್ಲಿಕೆ ಬಳಿಕ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.

“ಮುಖ್ಯಮಂತ್ರಿಗಳು, ನಾನು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಆಯುಬ್ ಹಾಗೂ ನಮ್ಮ ಪಕ್ಷದ ಅಭ್ಯರ್ಥಿ ಸಮರ್ಥ್ ಅವರು ಇಂದು ಉಪಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಕಾಂಗ್ರೆಸ್ ಪಕ್ಷ ಎಲ್ಲರನ್ನು ವಿಶ್ವಾಸಕ್ಕೆ ಪಡೆದು, ಒಮ್ಮತದಿಂದ ಸಮರ್ಥ್ ಅವರನ್ನು ಪಕ್ಷದ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರೂ ಗ್ರಾಮೀಣ ಭಾಗದ ಜನರ ಸೇವೆ ಮಾಡಲು ತಮ್ಮದೇ ಆದ ಆಸೆ, ಆಕಾಂಕ್ಷೆಯೊಂದಿಗೆ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆ” ಎಂದು ತಿಳಿಸಿದರು.

“ಸಮರ್ಥ್ ಅವರು ಮತ್ತೆ ವ್ಯಾಸಂಗಕ್ಕಾಗಿ ವಿದೇಶಕ್ಕೆ ಹೋಗುವುದನ್ನು ಶಾಮನೂರು ಶಿವಶಂಕರಪ್ಪನವರೇ ಇಲ್ಲೇ ಇದ್ದು ವೃತ್ತಿ ಮಾಡುವಂತೆ ಹೇಳಿದ್ದರು. ಕ್ಷೇತ್ರದ ಜನತೆ, ಎಲ್ಲಾ ವರ್ಗದ ಮುಖಂಡರು, ಪಕ್ಷದ ವರಿಷ್ಠರು ಎಲ್ಲರೂ ಚರ್ಚೆ ಮಾಡಿ ಈ ತೀರ್ಮಾನ ಮಾಡಿದ್ದೇವೆ. ಈ ಮಧ್ಯೆ ಮುಸಲ್ಮಾನ ಸಮುದಾಯದ ಶಾಸಕರುಗಳು ಈ ಕ್ಷೇತ್ರದಲ್ಲಿ ತಮ್ಮ ಸಮುದಾಯದ ಜನಸಂಖ್ಯೆ ಹೆಚ್ಚಾಗಿದೆ. ನೀವು ನಮಗೆ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು. ನಾವು ಲೆಕ್ಕಾಚಾರ ಹಾಕಿದೆವು.
ಕಾಂಗ್ರೆಸ್ ಪಕ್ಷ ಈ ಹಿಂದೆ ಟಿಕೆಟ್ ನೀಡಲಾಗದ ಕಾರಣಕ್ಕೆ ಜಬ್ಬಾರ್ ಅವರನ್ನು ಮೂರು ಬಾರಿ ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದೆವು. ಮುಂದಿನ ದಿನಗಳಲ್ಲಿ ರಾಜ್ಯಸಭೆ, ವಿಧಾನ ಪರಿಷತ್ ಹಾಗೂ ಅಧ್ಯಕ್ಷ ಸ್ಥಾನ ನೀಡುವ ಮೂಲಕ ಈ ಸಮಾಜಕ್ಕೆ
ನ್ಯಾಯ ಒದಗಿಸಿಕೊಂಡು ಬಂದಿದ್ದೇವೆ. ಇದನ್ನು ಮುಂದುವರಿಸುತ್ತೇವೆ. ಇದು ನಮ್ಮ ಪಕ್ಷದ ಸಿದ್ಧಾಂತ” ಎಂದು ಹೇಳಿದರು.

“ನಾವು ದಾವಣಗೆರೆ ಜಿಲ್ಲೆ ಬೆಂಗಳೂರಿಗಿಂತ ಬಹಳ ಉತ್ತಮವಾಗಿ ಯೋಜಿತವಾಗಿ ರೂಪುಗೊಂಡಿರುವ ನಗರವಾಗಿದೆ. ಇದರ ಅಭಿವೃದ್ಧಿಗೆ ನೂರಾರು ಕೋಟಿ ರೂ. ಮೊತ್ತದ ಪ್ಯಾಕೇಜ್ ಗಳನ್ನು ನೀಡಲಾಗಿದೆ. ಈ ಭಾಗಕ್ಕೆ ಶಾಮನೂರು ಶಿವಶಂಕರಪ್ಪ ಅವರು ಕೊಟ್ಟಿರುವ ಕೊಡುಗೆ, ಶಿಕ್ಷಣ ಸಂಸ್ಥೆ ಆ ಮೂಲಕ ಈ ಜಿಲ್ಲೆ ಶಿಕ್ಷಣ ಕೇಂದ್ರವಾಗಿ ರೂಪುಗೊಂಡಿದೆ. ಈ ಜಿಲ್ಲೆಯ ಈ ಪ್ರಗತಿಗೆ ಕೊಡುಗೆ ನೀಡಿದ್ದು ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಹಾಗೂ ಅವರ ಸಂಸ್ಥೆ. ಇದೆಲ್ಲವನ್ನು ಜನ ಸ್ಮರಿಸುತ್ತಿದ್ದಾರೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

“ಎಲ್ಲರಿಗೂ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಎಲ್ಲಾ ಮಹಿಳೆಯರಿಗೆ ಆರ್ಥಿಕ ಶಕ್ತಿ ತುಂಬಲು ನೀಡಿರುವ ಕೊಡುಗೆಯನ್ನು ಜನ ಸ್ಮರಿಸುತ್ತಿದ್ದಾರೆ. ಈ ಎಲ್ಲಾ ಹಿನ್ನೆಲೆಯಲ್ಲಿ ನಮ್ಮ ಅಭ್ಯರ್ಥಿ ಸಮರ್ಥ್ ಅವರು ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಿದ್ದಾರೆ. ಸ್ಥಳೀಯ ಮಾಧ್ಯಮಗಳು ನಮಗೆ ತಮ್ಮ ಮನವಿ ಸಲ್ಲಿಸಿದ್ದು, ನಾವು ಬೆಂಗಳೂರಿಗೆ ಹೋದ ಬಳಿಕ ಕೂತು ಚರ್ಚೆ ಮಾಡಿ ಈ ವಿಚಾರವಾಗಿ ಯಾವ ರೀತಿ ನೀತಿ ರೂಪಿಸಬೇಕು ಎಂದು ಚರ್ಚೆ ಮಾಡಿ ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ” ಎಂದು ಹೇಳಿದರು.

Share

Leave a comment

Leave a Reply

Your email address will not be published. Required fields are marked *