Site icon Kannada News-suddikshana

Davanagere: ಶಕ್ತಿ ಯೋಜನೆಯಡಿ ಬಸ್ ಪ್ರಯಾಣಕ್ಕೆ ಮುಗಿಬಿದ್ದ ಮಹಿಳೆಯರು: ಪ್ರವಾಸೋದ್ಯಮಕ್ಕೆ ಬಂತು ಹೊಸ ಕಳೆ

Bus

Bus

SUDDIKSHANA KANNADA NEWS/ DAVANAGERE/ DATE:20-06-2023

 

ದಾವಣಗೆರೆ(Davanagere) ಕಾಂಗ್ರೆಸ್ ಚುನಾವಣೆಗೆ ಮುನ್ನ ಭರ್ಜರಿ ಐದು ಬಂಪರ್ ಗ್ಯಾರಂಟಿಗಳನ್ನು ನೀಡಿತ್ತು. ಅದರಲ್ಲಿ ಪ್ರಮುಖವಾದುದು ಶಕ್ತಿ ಯೋಜನೆ. ಸರ್ಕಾರಿ ಬಸ್ ಗಳಲ್ಲಿ ಮಹಿಳೆಯರು, ಯುವತಿಯರು ಸೇರಿದಂತೆ ಸ್ತ್ರೀಕುಲ ಖುಷಿ ಪಟ್ಟಿತ್ತು. ಬಸ್ ಗಳಲ್ಲಿ ಉಚಿತ ಪ್ರಯಾಣಕ್ಕೆ ಮುಗಿ ಬೀಳುವ ಜೊತೆಗೆ ತಾ ಮುಂದು ನಾ ಮುಂದು ಅಂತಾ ಬಸ್ ಹತ್ತುತ್ತಿದ್ದಾರೆ. ಈ ಮೂಲಕ ಖಾಲಿ ಖಾಲಿಯಾಗಿ ತೆರಳುತ್ತಿದ್ದ ಬಸ್ ಗಳು ತುಂಬಿ ತುಳುಕುತ್ತಿವೆ. ಇದರಿಂದ ಪ್ರವಾಸೋದ್ಯಮಕ್ಕೂ ಹೊಸ ಕಳೆ ಬಂದಿದೆ.

ಕಳೆದ ಒಂಬತ್ತು ದಿನಗಳ ಹಿಂದೆ ಈ ಯೋಜನೆಗೆ ರಾಜ್ಯಾದ್ಯಂತ ಚಾಲನೆ ನೀಡಲಾಗಿದೆ. ಅದೇ ರೀತಿಯಲ್ಲಿ ದಾವಣಗೆರೆ (Davanagere) ಯಲ್ಲಿಯೂ ಚಾಲನೆ ಕೊಡಲಾಗಿದೆ. ಈ ವೇಳೆ ಮಹಿಳೆಯರು ಸರ್ಕಾರಿ ಬಸ್ ನಲ್ಲಿ ಪ್ರಯಾಣಿಸಲು ಮುಗಿ ಬಿದ್ದಿದ್ದರು.

ಈ ಸುದ್ದಿಯನ್ನೂ ಓದಿ: 

Karnataka: ಕರ್ನಾಟಕದಲ್ಲಿ ಸರ್ಕಾರಿ ಉದ್ಯೋಗಗಳ ಮಾಹಿತಿ… ಎಸ್ಎಸ್ಎಲ್ ಸಿ, ಪಿಯುಸಿ, ಪದವೀಧರರು ಟ್ರೈ ಮಾಡಿ, ಕೆಲಸ ಗಿಟ್ಟಿಸಿಕೊಳ್ಳಿ

ಕೆಲಸಕ್ಕೆ ಬರುವವರಿಗೆ ಅನುಕೂಲ:

ಪ್ರತಿನಿತ್ಯ ಗಾರ್ಮೆಂಟ್ಸ್, ಫ್ಯಾಕ್ಟರಿ, ಅಂಗಡಿಗಳಿಗೆ ಕೆಲಸಕ್ಕೆ ಬರುವ ಮಹಿಳೆಯರಿಗೆ ತುಂಬಾನೇ ಅನುಕೂಲವಾಗಿದೆ. ತಿಂಗಳಿಗೆ ಐದರಿಂದ ಆರು ಸಾವಿರ ರೂಪಾಯಿ ವೇತನ ಸಿಗುತಿತ್ತು. ಶಕ್ತಿ ಯೋಜನೆಯಡಿ ಬಸ್ ನಲ್ಲಿ ಉಚಿತವಾಗಿ ಪ್ರಯಾಣ
ಮಾಡುವುದರಿಂದ ಕನಿಷ್ಠ ಎಂದರೂ ಒಂದು ಸಾವಿರ ರೂಪಾಯಿ ಉಳಿತಾಯವಾಗುತ್ತದೆ. ಮಾತ್ರವಲ್ಲ, ಸರ್ಕಾರಿ ಬಸ್ ಗಳ ಸಂಚಾರ ಉತ್ತಮವಾಗಿರುವುದರಿಂದ ಸರಿಯಾದ ವೇಳೆಗೆ ಕೆಲಸಕ್ಕೆ ಹಾಗೂ ಮನೆಗೆ ತಲುಪುತ್ತಿದ್ದೇವೆ. ಸರ್ಕಾರ ನೀಡಿರುವ
ಈ ಯೋಜನೆ ಅನುಕೂಲವಾಗಿದೆ ಎನ್ನುತ್ತಾರೆ ಮಹಿಳಾ ಕಾರ್ಮಿಕರು.

ವಿದ್ಯಾರ್ಥಿಗಳಿಗೆ ಪ್ರಯೋಜನ:

ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಶಾಲಾ ಕಾಲೇಜುಗಳಿಗೆ ಆಗಮಿಸುತ್ತಾರೆ. ತಾಲೂಕು ಮಟ್ಟ ಹಾಗೂ ಗ್ರಾಮೀಣ ಭಾಗದಲ್ಲಿಯೂ ಯುವತಿಯರು, ಬಾಲಕಿಯರು ಕಾಲೇಜು ಹಾಗೂ ಶಾಲೆಗಳಿಗೆ ತೆರಳುತ್ತಾರೆ. ಮೊದಲು ಬಸ್ ಪಾಸ್ ಮಾಡಿಸಬೇಕಿತ್ತು. ಕನಿಷ್ಠ ಎಂದರೂ ಆರು ನೂರು ರೂಪಾಯಿ ಖರ್ಚಾಗುತಿತ್ತು. ತಂದೆ ತಾಯಿ ಕೂಲಿ ಕಾರ್ಮಿಕರಾಗಿದ್ದು, ಬಸ್ ಪಾಸ್ ಪಡೆಯಲು ಹೆಣಗಾಡಬೇಕಾಗಿತ್ತು. ಆದ್ರೆ, ಸರ್ಕಾರಿ ಬಸ್ ನಲ್ಲಿ ಫ್ರೀಯಾಗಿ ಓಡಾಡುವುದರಿಂದ ಈ ಹೊರೆ ಕಡಿಮೆಯಾಗಿದೆ ಎನ್ನುತ್ತಾರೆ ವಿದ್ಯಾರ್ಥಿನಿಯರು.

ಪ್ರವಾಸೋದ್ಯಮಕ್ಕೆ ಬಂತು ಕಳೆ:

ಇನ್ನು ಬೇರೆ ಬೇರೆ ಜಿಲ್ಲೆಗಳಿಂದ ಬರುವ ಪ್ರವಾಸಿಗರು, ಭಕ್ತರು ಪ್ರವಾಸೋದ್ಯಮ ಸ್ಥಳಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಬಸ್ ಗಳಲ್ಲಿ ಉಚಿತ ಪ್ರಯಾಣ ಇರುವುದರಿಂದ ರಾಜ್ಯದ ನಾನಾ ಮೂಲೆಗಳಿಂದ ಶ್ರದ್ಧಾ ಭಕ್ತಿ ತಾಣ, ದೇಗುಲಗಳಿಗೆ ಹೆಚ್ಚಾಗಿ ಬರುತ್ತಿದ್ದಾರೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಶ್ರೀ ಕರಿಬಸವೇಶ್ವರ ಸ್ವಾಮಿಯ ದರ್ಶನಕ್ಕೆ ಲಕ್ಷಾಂತರ ಜನರು ಆಗಮಿಸಿದ್ದರು. ಅಮವಾಸ್ಯೆಯ ದಿನದಂತೂ ನಿರೀಕ್ಷೆಗೆ ಮೀರಿದ ಭಕ್ತರು ಆಗಮಿಸಿದ್ದರು. ಚನ್ನಗಿರಿ ತಾಲೂಕಿನ ಸೂಳೆಕೆರೆ, ಕೊಂಡಜ್ಜಿ ಕೆರೆ, ಗ್ಲಾಸ್ ಹೌಸ್ ಸೇರಿದಂತೆ ಪ್ರವಾಸೋದ್ಯಮ ತಾಣಗಳಲ್ಲಿ ಹೊಸ ಕಳೆ ಬಂದಿದೆ.

ವ್ಯಾಪಾರ ಜೋರು:

ದೇವಸ್ಥಾನಗಳಿಗೆ ಉಚಿತವಾಗಿ ಪ್ರಯಾಣ ಬೆಳೆಸುವ ಮಹಿಳೆಯರು ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳನ್ನು ಖರೀದಿಸಲೇಬೇಕು. ದೇವರಿಗೆ ಅರ್ಪಿಸಲು ಹಣ ಕೊಟ್ಟು ಪಡೆಯುತ್ತಾರೆ. ಇದರಿಂದಾಗಿ ವ್ಯಾಪಾರವೂ ಹೆಚ್ಚಾಗಿದೆ. ಈ ಹಿಂದೆ ದೇವಸ್ಥಾನಕ್ಕೆ ಬರುವವರು ಮನೆಯಿಂದ ಬರುವಾಗಲೇ ಪೂಜಾ ಸಾಮಗ್ರಿ ತರುತ್ತಿದ್ದರು. ಈಗ ದೇವಸ್ಥಾನಕ್ಕೆ ಬರುವ ಬಹುತೇಕರು ಇಲ್ಲಿಯೇ ಖರೀದಿ ಮಾಡುತ್ತಾರೆ. ನಾವು ಈ ಹಿಂದೆ ಮಾಡುತ್ತಿದ್ದ ವ್ಯಾಪಾರಕ್ಕಿಂತ ಈಗ ವ್ಯಾಪಾರ ಜಾಸ್ತಿಯಾಗಿದೆ.

ಎರಡು ಪಟ್ಟು ಹೆಚ್ಚಾಗಿದೆ. ಮಹಿಳೆಯರು ದೇವಸ್ಥಾನಕ್ಕೆ ಬರುವುದು ನೋಡಿದರೂ ಕೆಲವೊಮ್ಮೆ ದೇವರ ದರ್ಶನಕ್ಕೆ ಜನಸಾಗರವೇ ಹರಿದು ಬರುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಎನ್ನುತ್ತಾರೆ ದೇವಸ್ಥಾನದ ಮುಂದೆ ವ್ಯಾಪಾರ ಮಾಡುವ ವ್ಯಾಪಾರಸ್ಥರು.

ಪ್ರವಾಸೋದ್ಯಮಕ್ಕೂ ಲಾಭವಾಗುತ್ತಿದೆ. ವೀಕೆಂಡ್ ದಿನಗಳಲ್ಲಿ ಮಹಿಳೆಯರು ತಂಡೋಪತಂಡವಾಗಿ ರಾಜ್ಯದ ನಾನಾ ಮೂಲೆಗಳಿಂದ ಆಗಮಿಸುತ್ತಿದ್ದಾರೆ. ಶಕ್ತಿ ಯೋಜನೆಯಡಿ ಕೆ ಎಸ್ ಆರ್ ಟಿ ಸಿ ಗೆ ನಷ್ಟ ತಂದಿದೆ ಎಂದಾದರೆ, ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದೆ. ನಾರಿ ಶಕ್ತಿ ಸಂಚಾರದಿಂದ ದಾವಣಗೆರೆ ಜಿಲ್ಲೆಯೊಂದರಲ್ಲಿ ಕೋಟಿ ರೂಪಾಯಿಗೂ ಹೆಚ್ಚು ಟಿಕೆಟ್ ಪಡೆಯಲಾಗಿದೆ. ಲಕ್ಷಾಂತರ ಮಹಿಳೆಯರು ಪ್ರಯಾಣ ಮಾಡಿದ್ದಾರೆ. ಇದರಿಂದಾಗಿ ಸಾರಿಗೆ ಸಂಸ್ಥೆಗೆ ನಷ್ಟವಾಗಿದೆ.

ಆದ್ರೆ, ಪ್ರವಾಸೋದ್ಯಮ ಚೇತರಿಸಿಕೊಳ್ಳುತ್ತಿದ್ದು, ವಾರಾಂತ್ಯದ ದಿನಗಳಲ್ಲಿ ವ್ಯಾಪಾರವೂ ಜೋರಾಗಿದೆ. ಬಸ್ ಗಳಲ್ಲಿ ಫ್ರೀಯಾಗಿ ಬಂದರೂ ಇಲ್ಲಿ ಹಣ ಕೊಟ್ಟು ಖರೀದಿಸಲೇಬೇಕು. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ
ಸೂಳೆಕೆರೆಯಲ್ಲಿ ಬೋಟಿಂಗ್ ಗೂ ಬೇಡಿಕೆ ಬಂದಿದೆ. ಅದೇ ರೀತಿಯಲ್ಲಿ ಸಂತೇಬೆನ್ನೂರಿನ ಪುಷ್ಕರಣಿ ಸೌಂದರ್ಯ ವೀಕ್ಷಣೆಗೂ ತಂಡೋಪತಂಡವಾಗಿ ಕಾಲೇಜು ಯುವತಿಯರು, ಮಹಿಳೆಯರು ಆಗಮಿಸುತ್ತಿರುವುದು ವಿಶೇಷ.

ದಾವಣಗೆರೆ (Davanagere)ಯಲ್ಲಿ ಎಷ್ಟು ವಾಹನಗಳು ಸಂಚರಿಸುತ್ತವೆ..?

ಕೆ.ಎಸ್.ಆರ್.ಟಿ.ಸಿ. ವಿಭಾಗೀಯ ನಿಯಂತ್ರಕ ಸಿ.ಇ.ಶ್ರೀನಿವಾಸ್ ಅವರು ನೀಡಿರುವ ಮಾಹಿತಿ ಪ್ರಕಾರ, ದಾವಣಗೆರೆ ವಿಭಾಗದಲ್ಲಿ 386 ವಾಹನಗಳಿದ್ದು 368 ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಪ್ರತಿನಿತ್ಯ 1.50 ಲಕ್ಷ ಕಿ.ಮೀ ಕ್ರಮಿಸುವ ಮೂಲಕ 1.25 ಲಕ್ಷ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ. ವಿಭಾಗದಲ್ಲಿ 17 ವೋಲ್ವೋ, 3 ಸ್ಕ್ಯಾನಿಯ, 6 ನಾನ್ ಎಸಿ ಸ್ಲೀಪರ್, 29 ರಾಜಹಂಸ, 205 ಸಾರಿಗೆ, 16 ಗ್ರಾಮೀಣ ಸಾರಿಗೆ, 37 ಎಲ್.ಇ.ಡಿ.ನಗರ ಸಾರಿಗೆ, 61 ನರ್ಮ್ ನಗರ ಸಾರಿಗೆ, 12 ಇವ್ಹಿ ಪವರ್ ಪ್ಲಸ್ ವಾಹನಗಳಿರುತ್ತವೆ ಎಂದು ತಿಳಿಸಿದ್ದಾರೆ.

Davanagere Bus Free, Davanagere Ladies Travel, Davanagere Latest News,  Davanagere Suddi, ದಾವಣಗೆರೆ ಬಸ್ ಫ್ರೀ, ದಾವಣಗೆರೆಯಲ್ಲಿ ಬಸ್ ಸಂಚಾರಕ್ಕೆ ಮುಗಿಬಿದ್ದ ಮಹಿಳೆಯರು, ದಾವಣಗೆರೆಯಲ್ಲಿ ಸ್ತ್ರೀಯರ ಸಂಚಾರ ಹೇಗಿದೆ…? ದಾವಣಗೆರೆ ಕೆ ಎಸ್ ಆರ್ ಟಿ ಸಿ ಬಸ್ ಗಳ ಸಂಚಾರ

 

Exit mobile version