Home ದಾವಣಗೆರೆ ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆಗಳು ಬಂದ್? ಮಂಜುನಾಥ ಭಂಡಾರಿ ಸ್ಫೋಟಕ ಹೇಳಿಕೆ!
ದಾವಣಗೆರೆನವದೆಹಲಿಬೆಂಗಳೂರು

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆಗಳು ಬಂದ್? ಮಂಜುನಾಥ ಭಂಡಾರಿ ಸ್ಫೋಟಕ ಹೇಳಿಕೆ!

Share
ದಾವಣಗೆರೆ
Share

ದಾವಣಗೆರೆ: ದಾವಣಗೆರೆ ಮತ್ತು ಬಾಗಲಕೋಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಸೋತರೆ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಬಗ್ಗೆ ರಾಜ್ಯ ಸರ್ಕಾರವು ಯೋಚಿಸಲಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಸಮಿತಿ ಸಂಚಾಲಕ ಮಂಜುನಾಥ ಭಂಡಾರಿ ಹೇಳಿದ್ದಾರೆ.

ಡಾ. ಶಾಮನೂರು ಶಿವಶಂಕರಪ್ಪನವರ ನಿಧನದಿಂದ ತೆರವಾಗಿರುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಏಪ್ರಿಲ್ 9ರಂದು ಉಪ ಚುನಾವಣೆ ನಿಗದಿ ಆದ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿ ಕಚೇರಿಯಲ್ಲಿ ಪಕ್ಷದ ಅಭ್ಯರ್ಥಿ ಆಯ್ಕೆ ಸಂಬಂಧ ಕರೆದಿದ್ದ ಜಿಲ್ಲಾ ಮುಖಂಡರು, ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ 2ಲಕ್ಷದ 31 ಸಾವಿರದ ಪೈಕಿ 1 ಲಕ್ಷದ 65 ಸಾವಿರ ಮಹಿಳಾ ಮತದಾರರಿದ್ದಾರೆ. ಗ್ಯಾರಂಟಿ ಯೋಜನೆಗಳನ್ನು ಕೊಟ್ಟಿದ್ದೇವೆ. ಮತ ಕೇಳುವಾಗ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ನೇತೃತ್ವದ ಸರ್ಕಾರವು ಮಹಿಳೆಯರಿಗೆ ಹೆಚ್ಚಿನ ಸವಲತ್ತು ನೀಡಿರುವ ಕುರಿತಂತೆ ಮತದಾರರಿಗೆ ತಿಳಿಸಿಕೊಡಿ ಎಂದು ಸಲಹೆ ನೀಡಿದರು.

ಮಹಿಳೆಯರಿಗೆ ಹೆಚ್ಚಿನ ಒತ್ತು ನೀಡಬೇಕೆಂದು ರಾಹುಲ್ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ನಿರ್ದೇಶನ ನೀಡಿದ್ದರು. ನಾವು ಅದನ್ನು ಪೂರೈಸಿದ್ದೇವೆ. ಗ್ಯಾರಂಟಿಗಳನ್ನು ಮಹಿಳೆಯರಿಗೆ ನೀಡಿದ್ದು, ಸೌಲಭ್ಯ ಪಡೆದವರದ್ದು ಮತಗಳಾಗಿ ಪರಿವರ್ತನೆಯಾಗಬೇಕು. ಚುನಾವಣೆಯಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬ ಯೋಚನೆ ಮಾಡಬೇಕಾಗುತ್ತದೆ ಎಂದು ಹೇಳಿದರು.

ಚುನಾವಣೆಗೆ ಉಳಿದಿರುವುದು ಕೆಲವೇ ದಿನಗಳು. ಯುಗಾದಿ, ರಂಜಾನ್ ಹಬ್ಬಗಳು ಬರುತ್ತವೆ. ಹೆಚ್ಚಿಗೆ ಸಮಯ ಸಿಗಲ್ಲ. ಹಾಗಾಗಿ, ಇಂದೇ ಸಲಹೆ ಸ್ವೀಕರಿಸುತ್ತಿದ್ದೇವೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪರಿಂದ ಎಲ್ಲಾ ಸಲಹೆ ಸ್ವೀಕರಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್. ಬಿ. ಮಂಜಪ್ಪ, ಮಾಜಿ ಸಚಿವ ಹೆಚ್. ಆಂಜನೇಯ, ಹುಸೇನ್, ಬಲರಾಜ್, ಡಿ. ಬಸವರಾಜ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಮಹಾನಗರ ಪಾಲಿಕೆ ಮಾಜಿ ಮೇಯರ್ ಗಳು, ಮಾಜಿ ಸದಸ್ಯರು, ಕಾಂಗ್ರೆಸ್ ವಿವಿಧ ಘಟಕಗಳ ಅಧ್ಯಕ್ಷರು ಹಾಜರಿದ್ದರು.

Share

Leave a comment

Leave a Reply

Your email address will not be published. Required fields are marked *