SUDDIKSHANA KANNADA NEWS/DAVANAGERE/DATE:29_09_2025
ದಾವಣಗೆರೆ: ನೃತ್ಯವೆಂದರೆ ಕೇವಲ ಚಲನೆ ಮಾತ್ರವಲ್ಲ, ಅದು ಹೃದಯದ ಭಾವನೆಗಳ ಅಭಿವ್ಯಕ್ತಿಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ ನೃತ್ಯವು ಅತ್ಯಂತ ಪ್ರಮುಖವಾದ ಸ್ಥಾನವನ್ನು ಪಡೆದಿದೆ ಎಂದು ಬಿಜೆಪಿ ಮುಖಂಡರಾದ ಗಾಯತ್ರಿ ಸಿದ್ದೇಶ್ವರ ಅವರು ಅಭಿಪ್ರಾಯಪಟ್ಟರು.
READ ALSO THIS STORY: ದಾವಣಗೆರೆಯಲ್ಲಿ ವಿಜಯದಶಮಿ ಆಚರಣೆಯ ಮೆರವಣಿಗೆ: ತಾತ್ಕಾಲಿಕ ವಾಹನ ಮಾರ್ಗ ಬದಲಾವಣೆ
ಅವರು ದಾವಣಗೆರೆಯ ಸರಸ್ವತಿ ನಗರದ ನೃತ್ಯ ವಿದ್ಯಾನಿಲಯ ಮತ್ತು ಉಡುಪಿ ಜಿಲ್ಲೆಯ ಸೌಕೂರಿನ ಬಣ್ಣದ ಸಕ್ಕಟ್ಟು ಲಕ್ಷ್ಮಿನಾರಾಯಣಯ್ಯ ಪ್ರತಿಷ್ಠಾನದ ವತಿಯಿಂದ ಕಲಾಶೈಲದಲ್ಲಿ ಶರನ್ನವರಾತ್ರಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ದಸರಾ ನೃತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ವಿಶ್ರಾಂತ ಪೋಲಿಸ್ ಅಧಿಕಾರಿ ಶಂಕರಯ್ಯ ವಾಡಿಯವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ದಾವಣಗೆರೆ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಎಸ್.ಟಿ.ವೀರೇಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನೃತ್ಯೋತ್ಸವದ ಅಂಗವಾಗಿ ಕಲಾಶೈಲದಲ್ಲಿ ಆಯೋಜಿಸಿದ್ದ ಶಾರದಾ ದೇವಿಯ ಪೂಜೆ ನಂತರ ವಿದುಷಿ ರಕ್ಷಾ ರಾಜಶೇಖರ ಸಕ್ಕಟ್ಟು ಅವರು “ಕಂಡೇನ ಕನಸಿನಲಿ” ಎಂಬ ಗಾಯನಕ್ಕೆ
ನರ್ತಿಸಿದರು. ಗಾಯನ ಮತ್ತು ನೃತ್ಯ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು.
ನೃತ್ಯ ವಿದ್ಯಾನಿಲಯ ಸಂಸ್ಥೆಯ ಮುಖ್ಯಸ್ಥರಾದ ರಾಜಶೇಖರ ಸಕ್ಕಟ್ಟು ಅವರು ನವರಾತ್ರಿಯ ವಿಶೇಷತೆಗಳ ಕುರಿತು ಪ್ರಾಸ್ತವಿಕವಾಗಿ ಮಾತಾಡಿದರು. ಕಾರ್ಯಕ್ರಮವನ್ನು ಬಹುಶ್ರುತ ವಿದ್ವಾಂಸ ಶ್ರೀಕಾಂತ ಭಟ್ಟ ನಿರೂಪಣೆ ಮಾಡಿದರು.