Site icon Kannada News-suddikshana

ದರ್ಶನ್ ಮತ್ತು ಇತರ ಆರೋಪಿಗಳು 4.30ಕ್ಕೆ ಕೋರ್ಟ್‌ಗೆ

ಬೆಂಗಳೂರು; ಕೊಲೆ ಪ್ರಕರಣದ ಆರೋಪದಲ್ಲಿ ಬಂಧಿತರಾಗಿರುವ ದರ್ಶನ್‌ರನ್ನು ಪೊಲೀಸರು ಕೋರ್ಟ್‌ಗೆ ಹಾಜರುಪಡಿಸಲು ತಯಾರಿ ನಡೆಸಿದ್ದಾರೆ. ನ್ಯಾಯಾಲಯದಲ್ಲಿ ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ನೀಡುವಂತೆ ಮನವಿ ಮಾಡುವ ನಿರೀಕ್ಷೆ ಇದೆ.

ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪದಲ್ಲಿ ಮಂಗಳವಾರ ಬೆಳಗ್ಗೆ ಮೈಸೂರಿನ ಖಾಸಗಿ ಹೋಟೆಲ್‌ನಲ್ಲಿ ನಟ ದರ್ಶನ್, ಅವರ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗದ ನಗರದ ಲಕ್ಷ್ಮೀ ವೆಂಕಟೇಶ್ವರ ಬಡಾವಣೆಯ ನಿವಾಸಿ ರೇಣುಕಾಸ್ವಾಮಿಯ ಶವ ಜೂನ್‌ 9ರ ಬೆಳಗ್ಗೆ ಮೋರಿಯಲ್ಲಿ ಪತ್ತೆಯಾಗಿತ್ತು.

ಈ ಹತ್ಯೆ ಪ್ರಕರಣದ ಸಂಬಂಧ ಬೆಂಗಳೂರಿನ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ದರ್ಶನ್ ಸೇರಿ 13 ಆರೋಪಿಗಳ ವಿಚಾರಣೆಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ನಡೆಸುತ್ತಿದ್ದಾರೆ. ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಆರೋಪಿಗಳನ್ನು 4.30ಕ್ಕೆ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ.

ಠಾಣೆಯಲ್ಲಿಯೇ ವೈದ್ಯಕೀಯ ಪರೀಕ್ಷೆ?: ಭದ್ರತಾ ಕಾರಣಗಳಿಂದಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ವೈದ್ಯರನ್ನು ಕರೆಸಿಕೊಂಡು ಪೊಲೀಸರು ನಟ ದರ್ಶನ್ ವೈದ್ಯಕೀಯ ಪರೀಕ್ಷೆ ನಡೆಸುತ್ತಿದ್ದಾರೆ. ಸಂಜೆ 4.30ಕ್ಕೆ ಬೆಂಗಳೂರು ನಗರದ 24ನೇ ಎಸಿಎಂಎಂ ಕೋರ್ಟ್‌ಗೆ ಆರೋಪಿಗಳನ್ನು ಹಾಜರುಪಡಿಸಲಿದ್ದು, ಅದಕ್ಕಾಗಿ ಕೋರ್ಟ್‌ ಆವರಣದಲ್ಲಿಯೂ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್, ದರ್ಶನ್ ಪ್ರೇಯಸಿ ಪವಿತ್ರಾ ಗೌಡ, ಪಟ್ಟಣಗೆರೆ ವಿನಯ್​, ಕಿರಣ್, ಮಧು, ಲಕ್ಷ್ಮಣ್​, ಆನಂದ್​​, ರಾಘವೇಂದ್ರ ಸೇರಿ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ರೇಣುಕಾಸ್ವಾಮಿ ಹತ್ಯೆ ನಡೆದ ಶೆಡ್‌ ಪಟ್ಟಣಗೆರೆ ವಿನಯ್‌ಗೆ ಸೇರಿದ್ದು, ಶೆಡ್‌ನಲ್ಲಿ ಪೊಲೀಸರು ಬೆಳಗ್ಗೆಯಿಂದ ತಪಾಸಣೆ ನಡೆಸಿ, ಅದನ್ನು ಸೀಜ್‌ ಮಾಡಿದ್ದಾರೆ. ದರ್ಶನ್ ಸೂಚನೆಯಂತೆ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಆರೋಪಿಯಾದ ರಾಘವೇಂದ್ರ ಮೂಲಕ ಕರೆಸಿ, ಬೆಂಗಳೂರಿನ ಕಾಮಾಕ್ಷಿಪಾಳ್ಯದ ಶೆಡ್‌ವೊಂದರಲ್ಲಿ ಕೂಡಿ ಹಾಕಲಾಗಿತ್ತು. ಜೂನ್ 8ರಂದು ಹತ್ಯೆ ಮಾಡಿ ಶವವನ್ನು ಮೋರಿಗೆ ಎಸೆಯಲಾಗಿತ್ತು.

 

Exit mobile version