Site icon Kannada News-suddikshana

ದರ್ಶನ್ ಪರವೂ ಇಲ್ಲ, ವಿರುದ್ಧವೂ ಇಲ್ಲ: ಹಿರಿಯ ಅಧಿಕಾರಿಗಳು ಶಾಮೀಲಾಗಿದ್ದರೆ ಸಸ್ಪೆಂಡ್ ಎಂದ್ರು ಸಿಎಂ ಸಿದ್ದರಾಮಯ್ಯ..!

SUDDIKSHANA KANNADA NEWS/ DAVANAGERE/ DATE:26-08-2024

ಬೆಂಗಳೂರು: ನಾವು ಚಾಲೆಂಜಿಂಗ್ ಸ್ಟಾರ್ ದರ್ಶನ್‌ ತೂಗುದೀಪ ಪರವೂ ಇಲ್ಲ, ವಿರುದ್ಧವೂ ಇಲ್ಲ. ಜೈಲಿನ ಒಳಗೆ ದರ್ಶನ್‌ ಮತ್ತು ಇನ್ನಿತರರಿಗೆ ರಾಜಾತಿಥ್ಯ ನೀಡುತ್ತಿರುವ ಘಟನೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಂದ ಕರ್ತವ್ಯಲೋಪವಾಗಿದೆ. ಈ ವರೆಗೆ 7 ಜನರನ್ನು ಅಮಾನತು ಮಾಡಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅವರು, ದರ್ಶನ್ ಮತ್ತು ಇತರರಿಗೆ ರಾಜಾತಿಥ್ಯ ನೀಡಿರುವ ಕುರಿತಂತೆ ತನಿಖೆಯನ್ನೂ ಮಾಡಿಸಿ, ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು ಷಾಮೀಲಾಗಿದ್ದರೆ ಅವರನ್ನೂ ಅಮಾನತು ಮಾಡಲಾಗುವುದು ಎಂದು ತಿಳಿಸಿದರು.

ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್‌ಗೆ ಜೈಲಿನಲ್ಲಿ ವಿಶೇಷ ಪರಿಗಣನೆ ನೀಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಈಗಾಗಲೇ ಅಮಾನತು ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ದರ್ಶನ್‌ ವಿಚಾರದಲ್ಲಿ ಅಧಿಕಾರಿಗಳಿಂದ ಲೋಪ ಉಂಟಾಗಿದ್ದು, ಈಗಾಗಲೇ ಸಂಬಂಧಪಟ್ಟಂತೆ 7 ಮಂದಿಯನ್ನು ಅಮಾನತು ಮಾಡಲಾಗಿದೆ. ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಅಧಿಕಾರಿಗಳ ಮಟ್ಟದಲ್ಲಿ ನಡೆದಿರುವ ಲೋಪ ಇದಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಗೃಹ ಸಚಿವರಿಗೆ ಸೂಚಿಸಿದ್ದು, ಅವರ ವರದಿ ಆಧಾರದಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು ಎಂದರು.

ದರ್ಶನ ಬೇರೆ ಜೈಲಿಗೆ ಸ್ಥಳಾಂತರ ಮಾಡಬೇಕಾ ಬೇಡವೇ ಎಂಬ ಬಗ್ಗೆಯೂ ನಿರ್ಧಾರ ಕೈಗೊಳ್ಳಲಾಗುವುದು ಎಂದರು.

ನಾವು ಐದು ಗ್ಯಾರಂಟಿಗಳನ್ನು ಜಾರಿಗೊಳಿಸುವ ಮೂಲಕ ಜನರ ಪರ ಇರುವುದನ್ನು ಸಾಬೀತುಪಡಿಸಿದ್ದೇವೆ. ಈ ಕುರಿತು ಕೇಂದ್ರ ಸಚಿವ ಪ್ರಲ್ಹಾದ ಜೋಷಿಯವರಿಗೆ ನಮ್ಮನ್ನು ಪ್ರಶ್ನಿಸುವ ಯಾವುದೇ ನೈತಿಕತೆ ಇಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬೆಳಗಾವಿ ಜಿಲ್ಲೆ ದೊಡ್ಡ ಜಿಲ್ಲೆಯಾಗಿದ್ದು, ಅದನ್ನು ವಿಭಜನೆ ಮಾಡುವ ಕುರಿತು ಶಾಸಕರ ಜತೆ ಮಾತುಕತೆ ನಡೆಸಲಾಗುವುದು ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Exit mobile version