Site icon Kannada News-suddikshana

ಕಾರ್ಮಿಕರ ಭವಿಷ್ಯ ನಿಧಿ ದುರ್ಬಳಕೆಗೆ ಕಡಿವಾಣ: ಎಂ. ವೆಂಕಟೇಶನ್

SUDDIKSHANA KANNADA NEWS/ DAVANAGERE/ DATE:27-02-2025

ದಾವಣಗೆರೆ: ಗುತ್ತಿಗೆ ಪೌರ ಕಾರ್ಮಿಕರು, ಸಫಾಯಿ ಕರ್ಮಚಾರಿಗಳ ಭವಿಷ್ಯನಿಧಿ(ಪಿಎಫ್) ಹಾಗೂ ಇಎಸ್‌ಐ ವ್ಯವಸ್ಥಿತ ದುರ್ಬಳಕೆಗೆ ಕಡಿವಾಣ ಹಾಕಬೇಕು ಎಂದು ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ವೆಂಕಟೇಶನ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಮಾನ್ಯುಯಲ್ ಸ್ಕ್ಯಾವೆಂಜರ್‌ಗಳ ನೇಮಕಾತಿ ನಿಷೇಧ ಮತ್ತು ಅವರ ಪುನರ್ ವಸತಿ ಅಧಿನಿಯಮ-2013 ರ ಕಾಯ್ದೆಯ ಅನುಷ್ಠಾನ ಕುರಿತು ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರ-ಪಟ್ಟಣ ಸ್ಥಳೀಯ ಸಂಸ್ಥೆಗಳ ಗುತ್ತಿಗೆದಾರರು ಕಾರ್ಮಿಕರ ಹೆಸರಿನಲ್ಲಿ ಪಿಎಫ್, ಇಎಸ್‌ಐ ಹಣ ಮುರಿದುಕೊಂಡು ನಂತರ ಕಟ್ಟದೇ ಮೋಸ ಮಾಡುತ್ತಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಮೋಸ ಮಾಡುತ್ತಿರುವ ಗುತ್ತಿಗೆದಾರರನ್ನು ಪತ್ತೆ ಹಚ್ಚಿ ಕಪ್ಪು ಪಟ್ಟಿಗೆ ಸೇರಿಸಿ ಕಾನೂನುರೀತ್ಯ ಕ್ರಮಕೈಗೊಳ್ಳಬೇಕು. ಕಾರ್ಮಿಕರಿಗೆ ಇಎಸ್‌ಐ ಜೈವಿಕ ಗುರುತಿನ ಚೀಟಿ ಕೊಡದಿರುವುದು ತುಂಬಾ ದೊಡ್ಡ ತಪ್ಪು ನಗರ ಪಟ್ಟಣ ಸ್ಥಳೀಯ ಸಂಸ್ಥೆ ಅಧಿಕಾರಿಗಳ ಕಾರ್ಯ ವೈಖರಿಯನ್ನು ಸರಿಯಾದ ರೀತಿ ಮಾಡಬೇಕೆಂದರು.

ಸಫಾಯಿ ಕರ್ಮಚಾರಿಗಳು, ಪೌರ ಕಾರ್ಮಿಕರ ಖಾತೆಗೆ ವೇತನ ಸರಿಯಾಗಿ ನೀಡುತ್ತಿಲ್ಲ. ಪಿಎಫ್, ಇಎಸ್‌ಐ ಹಣ ಜಮೆಯಾಗಿದ್ದರ ಬಗ್ಗೆ ಕಾಲ ಕಾಲಕ್ಕೆ ಖಚಿತಪಡಿಸಿಕೊಳ್ಳಬೇಕಿದ್ದು, ತ್ವರಿತವಾಗಿ ಇಎಸ್‌ಐ ಜೈವಿಕ ಗುರುತಿನ ಚೀಟಿ ವಿತರಿಸಲು ಸೂಚಿಸಿದರು.

ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಜಿ.ಎಂ. ಮಾತಾನಾಡಿ ಮಾನ್ಯುಯಲ್ ಸ್ಕ್ಯಾವೆಂಜರ್ ಹಾಗೂ ಅವರ ಕುಟುಂಬಗಳಲ್ಲಿರುವ ಮಕ್ಕಳಿಗೆ ನಿಯಮನುಸಾರ ಪುನರ್‌ವಸತಿ, ಶಿಕ್ಷಣ, ವಿದ್ಯಾರ್ಥಿ ವೇತನ ಇನ್ನಿತರೆ ಸೌಲಭ್ಯ ಕಲ್ಪಿಸಿ ಕೊಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಕುಟುಂಬಗಳ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿ ಪರಿಶೀಲಿಸಿ, ಸರ್ಕಾರದಿಂದ ಬರುವ ಸೌಲಭ್ಯವನ್ನು ದೊರಕಿಸಬೇಕು. ನಿವೇಶನ ಹೊಂದಿರುವ ಹಾಗೂ ನಿವೇಶನ ರಹಿತ ಕುಟುಂಬಗಳ ಬಗ್ಗೆ ಪಟ್ಟಿಯನ್ನು ಸಂಬಂಧಪಟ್ಟ ಅಧಿಕಾರಿಗಳು ಸಲ್ಲಿಸಬೇಕು. ನಿವೇಶನ ರಹಿತ ಕುಟುಂಬಗಳಿಗೆ ಅಂಬೇಡ್ಕರ್ ವಸತಿ ಯೋಜನೆಯಡಿ ನಿವೇಶನ ನೀಡಲಾಗುವುದು ಸಮಿತಿಯ ಸದಸ್ಯರು ಪೌರಕಾರ್ಮಿಕರು ಆರೋಗ್ಯ ತಪಾಸಣೆಗೆ ಒಳಪಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಪ್ರಕರಣದ ಬಗ್ಗೆ ದೂರು ಬಂದ ತಕ್ಷಣ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸಂಬಂಧಿಸಿದ ಪರಿಶೀಲನಾಧಿಕಾರಿ ತುರ್ತಾಗಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು. ಸುರಕ್ಷಾ ಪರಿಕರಗಳನ್ನು ನೀಡಬೇಕೆಂದು ಮಾಹಿತಿ ನೀಡಿದರು.

ಸಪಾಯಿ ಕರ್ಮಚಾರಿಗಳಿಗೆ ಕೇಂದ್ರ ಸರ್ಕಾರದಿಂದ ಹಲವಾರು ಸೌಲಭ್ಯಗಳಿದ್ದು 5 ಲಕ್ಷದಿಂದ 50 ಲಕ್ಷ ರೂ.ಗಳವರಗೆ ಸಾಲ ಸೌಲಭ್ಯಗಳಿದ್ದು ಕೇಂದ್ರದ ಯೋಜನೆಗಳು ರಾಜ್ಯದಲ್ಲಿ ಸಿಗುವಂತೆ ಅಧಿಕಾರಿಗಳು ನೋಡಿಕೊಳ್ಳಬೇಕೆಂದರು. ಪೌರಾ ಕಾರ್ಮಿಕರಿಗೆ ಶೇ.30 ರಷ್ಟು ಮಾತ್ರ ಗುರುತಿನ ಚೀಟಿಯನ್ನು ನೀಡಿದ್ದು, ಈ ಕೂಡಲೇ ಎಲ್ಲರಿಗೂ ಗುರುತಿನ ಚೀಟಿ ನೀಡಬೇಕೆಂದರು.

ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಸುರೇಶ್.ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್, ಜಿ.ಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ, ಉಪಸ್ಥಿತರಿದ್ದರು.

Exit mobile version