Site icon Kannada News-suddikshana

2 ದಿನಗಳಲ್ಲಿ ಹರಿಹರ ತಾಲ್ಲೂಕಿನ ಕೆಲ ಗ್ರಾಮಗಳ ಮೆಕ್ಕೆಜೋಳ ಬೆಳೆ ಹಾನಿ, ಜಂಟಿ ಸಮೀಕ್ಷೆಗೆ ಸೂಚನೆ

ಹರಿಹರ

ದಾವಣಗೆರೆ: 2 ದಿನಗಳಲ್ಲಿ ಹರಿಹರ ತಾಲ್ಲೂಕಿನ ಕೆಲ ಗ್ರಾಮಗಳ ಮೆಕ್ಕೆಜೋಳ ಬೆಳೆ ಹಾನಿ, ಜಂಟಿ ಸಮೀಕ್ಷೆಗೆ ಸೂಚನೆ ನೀಡಲಾಗಿದೆ.

READ ALSO THIS STORY: “ಪಿಎಂ ಅವಾಸ್ ಯೋಜನೆಗೆ ಅಧಿಕಾರಿ, ಸಿಬ್ಬಂದಿ, ಮಧ್ಯವರ್ತಿಗಳಿಗೆ ಹಣ ನೀಡಬೇಡಿ”

ಜಿಲ್ಲೆಯಲ್ಲಿ ವಿಪತ್ತು ನಿರ್ವಹಣೆಗಾಗಿ ಜಿಲ್ಲಾಧಿಕಾರಿ ಹಾಗೂ ತಹಶೀಲ್ದಾರರ ಪಿಡಿ ಖಾತೆಯಲ್ಲಿ ಒಟ್ಟು ರೂ.25.19 ಕೋಟಿ ಅನುದಾನ ಲಭ್ಯವಿದೆ ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆ ಮಳೆ 300 ಮಿ.ಮೀ ಇದ್ದು ಸೆಪ್ಟೆಂಬರ್ 6 ರವರೆಗೆ 395 ಮಿ.ಮೀ ವಾಸ್ತವಿಕ ಮಳೆಯಾಗಿದೆ. ವಿಪತ್ತು ತಡೆಗಟ್ಟಲು ಆಗಸ್ಟ್ ನಲ್ಲಿ ತುಂಗಭದ್ರಾ ನದಿಯಲ್ಲಿ 1 ಲಕ್ಷಕ್ಕೂ ಹೆಚ್ಚಿನ ಕ್ಯೂಸೆಕ್ಸ್‍ಗೆ ಹೆಚ್ಚಿದಾಗ ಮುಂಜಾಗ್ರತಾ ಕ್ರಮವಾಗಿ ತುಂಗಭದ್ರಾ ನದಿ ಪಾತ್ರದಲ್ಲಿ ಬರುವ ಹೊನ್ನಾಳಿ ಬಾಲ್‍ರಾಜ್ ಘಾಟ್ ಪ್ರದೇಶದ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ನದಿಯಲ್ಲಿ ಪ್ರಸ್ತುತ 24 ಸಾವಿರ ಕ್ಯೂಸೆಕ್ಸ್ ನೀರು ಹರಿಯುತ್ತಿದ್ದು ಯಾವುದೇ ಪ್ರವಾಹ ಪರಿಸ್ಥಿತಿ ಇರುವುದಿಲ್ಲ.

ಜೂನ್ 12 ರಂದು ಭಾರಿ ಮಳೆಗೆ ಹೊನ್ನಾಳಿ ತಾಲ್ಲೂಕಿನ ನೇರಲಗುಂಡಿ ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿದ್ದರಿಂದ 26 ಕುಂಟುಂಬಗಳಿಗೆ ತಲಾ ರೂ.2500 ರೂ.ಗಳಂತೆ ಒಟ್ಟು ರೂ.65000 ಗಳ ಪರಿಹಾರ ನೀಡಲಾಗಿದೆ. ಇಲ್ಲಿಯವರೆಗೆ ಸಿಡಿಲು ಬಡಿದು 5 ಹಸುಗಳು ಮೃತಪಟ್ಟಿದ್ದು ರೂ.1,87,500 ಗಳ ಪರಿಹಾರ ನೀಡಲಾಗಿದೆ. ಇದುವರೆಗೆ 30 ಮನೆಗಳು ತೀವ್ರ ಹಾಗೂ 63 ಮನೆಗಳು ಭಾಗಶಃ ಮಳೆಯಿಂದ ಹಾನಿಯಾಗಿದ್ದು ಮಾರ್ಗಸೂಚಿಯಂತೆ ರೂ.58.96 ಲಕ್ಷ ಪರಿಹಾರ ನೀಡಲಾಗಿದೆ.

ಮಳೆಯಿಂದ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದ್ದು ಇದರಲ್ಲಿ 44.58 ಕಿ.ಮೀ ರಾಜ್ಯ ಹೆದ್ದಾರಿ, 44.24 ಜಿಲ್ಲಾ ರಸ್ತೆ, 116.4 ಗ್ರಾಮೀಣ ರಸ್ತೆ, 2 ಸೇತುವೆ, 8 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 12 ಅಂಗನವಾಡಿ, 82 ಶಾಲೆಗಳು, 882 ವಿದ್ಯುತ್ ಕಂಬಗಳು, 43 ಟಿಸಿ, 3 ಕಿ.ಮೀ ವಿದ್ಯುತ್ ಮಾರ್ಗ ಹಾಳಾಗಿರುತ್ತದೆ. ಕೇಂದ್ರ ಹಾಗೂ ರಾಜ್ಯ ವಿಪತ್ತು ನಿರ್ವಹಣಾ ಮಾರ್ಗಸೂಚಿ ಅನ್ವಯ ದುರಸ್ಥಿ ಮಾಡಲು ಕ್ರಮ ಕೈಗೊಳ್ಳಲಾಗಿದೆ.

ಹರಿಹರ ತಾಲ್ಲೂಕಿನ ರಾಜನಹಳ್ಳಿ, ರಾಮತೀರ್ಥ ಹಾಗೂ ಹೊಸಹಳ್ಳಿಯಲ್ಲಿ 45 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಹಾನಿಯಾಗಿರುವ ಬಗ್ಗೆ ವರದಿಯಾಗಿದ್ದು 2 ದಿನಗಳಲ್ಲಿ ಜಂಟಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಮಾಡಲಾಗುತ್ತದೆ ಎಂದು ಸಭೆಯಲ್ಲಿ ಚರ್ಚಿಸಲಾಯಿತು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್, ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version