Site icon Kannada News-suddikshana

5 ಕೋಟಿ ರೂ.ವೆಚ್ಚದಲ್ಲಿ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಾಣ

SUDDIKSHANA KANNADA NEWS/ DAVANAGERE/ DATE:23-08-2024

ದಾವಣಗೆರೆ: ಬಸವಾಪಟ್ಟಣ ಶ್ರೀ ಹಾಲಸ್ವಾಮಿಗಳ ಮಠದ ಪಕ್ಕದಲ್ಲಿರುವ ಗುಡ್ಡದ ಬಳಿ ಹರಿಯುತ್ತಿರುವ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಾಣ ಮಾಡಬೇಕೆಂದು ಸಾರ್ವಜನಿಕರು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಶಾಸಕ ಕೆ.ಎಸ್.ಬಸವಂತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಚನ್ನಗಿರಿ ತಾಲೂಕಿನ ಬಸವಾಪಟ್ಟಣಕ್ಕೆ ಈಚೆಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸುಮಾರು ಎರಡೂವರೆ ಕಿ.ಮೀ.ದೂರ ಕಾಲ್ನಡಿಗೆಯಲ್ಲೇ ಸಾಗಿ ಹಾಲುವರ್ತಿ ಹಳ್ಳವನ್ನು ಪರಿಶೀಲನೆ ನಡೆಸಿದರು.

ಮಳೆ ಬಂದಾಗ ಇಲ್ಲಿ ಹರಿಯುವ ಹಳ್ಳ ದಾಗಿನಕಟ್ಟೆ ಕೆರೆ ಸೇರಿದಂತೆ ನಾಲ್ಕು ಹಳ್ಳಿಗಳ ಕೆರೆಗಳಿಗೆ ನೀರು ಸೇರುತ್ತದೆ. ಇದರಿಂದ ಈ ಭಾಗದ ಜಮೀನು, ಜನಜಾನುವಾರುಗಳ ಕುಡಿಯುವ ನೀರಿಗೆ ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿ ಮಿನಿ ಜಲಾಶಯ ನಿರ್ಮಾಣ ಮಾಡಿದರೆ ಸುಮಾರು 10 ರಿಂದ 15 ಕಿ.ಮೀ. ದೂರದಷ್ಟು ನೀರು ನಿಲುಗಡೆಯಾಗಿ ಅಂದಾಜು 45 ಅಡಿ ನೀರು ಸಂಗ್ರಹಿಸಬಹುದು. ಇದರಿಂದ ಅಂತರ್ಜಲ ಮಟ್ಟ ಹೆಚ್ಚಳವಾಗಿ ಸಾವಿರಾರು ಎಕರೆಗೆ ನೀರು ಒದಗಿಸಬಹುದು ಅಲ್ಲದೇ, ಬಸವಾಪಟ್ಟಣ, ದಾಗಿನಕಟ್ಟೆ, ಸಾಗರಪೇಟೆ, ಹರಸಾಗರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಹಳ್ಳಿಗಳ ಕುಡಿಯುವ ನೀರಿನ ಬವಣೆ ನೀಗಿಸಬಹುದು ಎಂದು ಗ್ರಾಮಸ್ಥರು ಶಾಸಕರಿಗೆ ಮನವರಿಕೆ ಮಾಡಿದರು.

5 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲು ಕ್ರಮ:

ಅಂದಾಜು 5 ಕೋಟಿ ರೂ‌ ವೆಚ್ಚದಲ್ಲಿ ಬಸವಾಪಟ್ಟಣದ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಿಸಿದರೆ ಬೇಸಿಗೆ ಕಾಲದ ಸಂದರ್ಭದಲ್ಲಿ ಅಂತರ್ಜಲ ಮಟ್ಟ ಕುಸಿಯದಂತೆ ಈ ಭಾಗದ ನೀರಾವರಿ ಪ್ರದೇಶ ಮತ್ತು ಜನಜಾನುವಾರುಗಳ ಕುಡಿಯುವ ನೀರಿನ ಬವಣೆ ನೀಗಿಸಬಹುದು. ಈ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ, ಮಿನಿ ಜಲಾಶಯ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ಗ್ರಾಮಸ್ಥರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಭರವಸೆ ನೀಡಿದರು.

ಏತ ನೀರಾವರಿ ಯೋಜನೆಗಳಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುವುದಕ್ಕಿಂತ ಕೇವಲ ಐದಾರು ಕೋಟಿ ರೂ.ವೆಚ್ಚದಲ್ಲಿ ಮಳೆ ಬಂದಾಗ ವ್ಯರ್ಥವಾಗಿ ನೀರು ಹರಿದು ಹೋಗುವ ಹಳ್ಳಗಳಿಗೆ ಚೆಕ್ ಡ್ಯಾಂ ಅಥವಾ ಮಿನಿ ಜಲಾಶಯ ನಿರ್ಮಿಸಿ ನೀರು ಸಂಗ್ರಹಿಸಿದರೆ ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. ವಿಶೇಷವಾಗಿ ಇಂತಹ ಯೋಜನೆಗಳಿಗೆ ಆದ್ಯತೆ ಕೊಡಬೇಕೆಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯನವರ ಆಶಯವಾಗಿದೆ. ಈ ನಿಟ್ಟಿನಲ್ಲಿ ಹಾಲುವರ್ತಿ ಹಳ್ಳಕ್ಕೆ ಮಿನಿ ಜಲಾಶಯ ನಿರ್ಮಿಸಿದರೆ ಈ ಭಾಗದ ಬಹುತೇಕ ಹಳ್ಳಿಗಳ ನೀರಿನ ಸಮಸ್ಯೆ ಬಗೆಹರಿಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ.ನಾಗರಾಜ್, ಅಲ್ಪಸಂಖ್ಯಾತರ ವಿಭಾಗದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಇದಾಯತ್ ವುಲ್ಲಾ, ಗ್ರಾಪಂ ಮಾಜಿ ಅಧ್ಯಕ್ಷ ಡೊ.ಇಬ್ರಾಹಿಂ ಸಾಬ್, ಟಿ.ಅಯಾವುಲ್ಲಾ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

Exit mobile version