Site icon Kannada News-suddikshana

ಜ.13ರಂದು ಶಾಸಕಾಂಗ ಪಕ್ಷದ ಸಭೆ ಕರೆದ ಕೈ ನಾಯಕರು!

ಬೆಂಗಳೂರು: ಪಕ್ಷದಲ್ಲಿ ಡಿನ್ನರ್‌ ಪಾರ್ಟಿ ವಿವಾದದ ನಡುವೆಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಅಚ್ಚರಿ ಮೂಡಿಸಿದೆ.

ಜ. 13ರ ಸಂಜೆ 6ಕ್ಕೆ ಖಾಸಗಿ ಹೊಟೇಲ್‌ನಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ ಎಂದು ಸಿಎಲ್‌ಪಿ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ್‌ ತಿಳಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ವಿಧಾನ ಪರಿಷತ್ತಿನ ಸಭಾನಾಯಕ ಎನ್‌.ಎಸ್‌. ಬೋಸರಾಜು, ಪಕ್ಷದ ಎಲ್ಲ ಕಾರ್ಯಾಧ್ಯಕ್ಷರು ಭಾಗವಹಿಸುತ್ತಿದ್ದಾರೆ. ಪಕ್ಷದ ಶಾಸಕರು, ವಿಧಾನ ಪರಿಷತ್ತಿನ ಸದಸ್ಯರು, ಲೋಕಸಭೆ ಹಾಗೂ ರಾಜ್ಯಸಭೆಯ ಸದಸ್ಯರು ಭಾಗವಹಿಸುವಂತೆ ಕೋರಲಾಗಿದೆ.

ಕೆಪಿಸಿಸಿ ಅಧ್ಯಕ್ಷರು ಬದಲಾಗಬೇಕು, ಸಂಪುಟ ಪುನಾರಚನೆಯೂ ಆಗಬೇಕೆಂಬ ಕೂಗು ಕಾಂಗ್ರೆಸ್‌ ಪಕ್ಷದೊಳಗೆ ಕೂಗು ಕೇಳಿ ಬರುತ್ತಿರುವುದರ ನಡುವೆಯೇ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ನಿವಾಸದಲ್ಲಿ ನಡೆದ ಡಿನ್ನರ್‌ ಪಾರ್ಟಿ, ಆನಂತರ ಗೃಹ ಸಚಿವ ಡಾ| ಜಿ. ಪರಮೇಶ್ವರ್‌ ಕರೆದಿದ್ದ ಡಿನ್ನರ್‌ ಪಾರ್ಟಿ ಎಐಸಿಸಿ ಸೂಚನೆ ಮೇರೆಗೆ ರದ್ದಾದ ಹಿನ್ನೆಲೆಯಲ್ಲಿ ಈಗ ಸಿಎಲ್‌ಪಿ ಸಭೆ ಕರೆದಿರುವುದು ಮಹತ್ವ ಪಡೆದುಕೊಂಡಿದೆ. ಆದರೆ ಬೆಳಗಾವಿಯಲ್ಲಿ ಜ. 21ರಂದು ನಡೆಯಲಿರುವ ಕಾಂಗ್ರೆಸ್‌ ಸಮಾವೇಶದ ಸಿದ್ಧತೆಗಳ ಬಗ್ಗೆ ಈ ಸಭೆ ಕರೆಯಲಾಗಿದೆ ಎಂದು ಸ್ವತಃ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.

Exit mobile version