ಬೆಂಗಳೂರು: ಈ ಭ್ರಷ್ಟ ಕಾಂಗ್ರೆಸ್ ಸರ್ಕಾರ ರಾಜ್ಯಕ್ಕೆ ತಗುಲಿರುವ ದೊಡ್ಡ ಅಭಿಶಾಪ ಎನ್ನುವಂತೆ ದಿನಕ್ಕೊಂದರಂತೆ ಕಾಂಗ್ರೆಸ್ “ಕರಪ್ಶನ್ ಮಾಡೆಲ್ ” ಬಯಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಆರೋಪಿಸಿದ್ದಾರೆ.
ಸಂಪೂರ್ಣ ಆಡಳಿತ ಯಂತ್ರವನ್ನು ಭ್ರಷ್ಟಾಚಾರದ ಕೂಪವನ್ನಾಗಿ ಮಾಡಿದ ಶ್ರೇಯಸ್ಸು ಮುಖ್ಯಮಂತ್ರಿ ಸಿದ್ದರಾಮಯ್ಯರ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಕಿಡಿಕಾರಿದ್ದಾರೆ.
ಈ ಕುಖ್ಯಾತಿ ಸಾಲದೆಂಬಂತೆ, ಡ್ರಗ್ಸ್ ಮಾಫಿಯಾ ವಿಚಾರದಲ್ಲಿ ಮಹಾರಾಷ್ಟ್ರ ಪೊಲೀಸ್ ಬೆಂಗಳೂರಿನ ಡ್ರಗ್ಸ್ ಜಾಲ ಬೇಧಿಸಿದಂತೆ, ನಮ್ಮ ಸಾರಿಗೆ ಇಲಾಖೆಯ RTO ಅಧಿಕಾರಿಗಳ ಭ್ರಷ್ಟಾಚಾರವನ್ನು ಗುಜರಾತ್ ಅಧಿಕಾರಿಗಳು ಬಯಲು ಮಾಡಿದ್ದಾರೆ! ಈ ಕಾಂಗ್ರೆಸ್ ಸರ್ಕಾರದ ಮಿತಿಮೀರಿದ ಭ್ರಷ್ಟಾಚಾರದಿಂದಾಗಿ, ಕರ್ನಾಟಕದ ಗೌರವ, ಘನತೆಗಳಿಗೂ ಕಳಂಕ ಉಂಟಾಗಿದೆ ಎಂದು ಕಿಡಿಕಾರಿದ್ದಾರೆ.
ಬೆಂಗಳೂರಿನ ಆರ್ ಟಿಒ ಕಚೇರಿಗಳಲ್ಲಿ ತಪಾಸಣೆಯೇ ಇಲ್ಲದೆ ಗುಜರಾತ್, ಮಹಾರಾಷ್ಟ್ರದ ವಾಹನಗಳಿಗೆ ‘ಫಿಟ್ನೆಸ್ ಸರ್ಟಿಫಿಕೇಟ್’ ಮಾರಾಟ ಮಾಡುತ್ತಿರುವ ಬಗ್ಗೆ ಗುಜರಾತ್ ಅಧಿಕಾರಿಗಳೇ ಮಾಹಿತಿ ನೀಡಿದ್ದಾರೆ. ಕಾಂಗ್ರೆಸ್ ಹೈಕಮಾಂಡ್ ನ ಎಟಿಎಂ ಸರ್ಕಾರದ ವ್ಯವಸ್ಥಿತ ಭ್ರಷ್ಟಾಚಾರಕ್ಕೆ ಹಿಡಿದ ಮತ್ತೊಂದು ಕೈಗನ್ನಡಿ. ಯಾವುದೇ ತಪಾಸಣೆ ಇಲ್ಲದೆ ಹೊರ ರಾಜ್ಯದ ವಾಹನಗಳಿಗೆ ಅಕ್ರಮವಾಗಿ ಫಿಟ್ನೆಸ್ ಸರ್ಟಿಫಿಕೇಟ್ಗಳನ್ನು ನೀಡಿ, ಅಲ್ಲಿನ ಜನರ ಜೀವದ ಜೊತೆ ಈ ಕ್ರಿಮಿನಲ್ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದಾರೆ. ಹೊರರಾಜ್ಯದ ವಾಹನ ಮಾಲೀಕರಿಂದಲೂ ಕಮಿಷನ್ ವಸೂಲಿ ಮಾಡುವ ಮೂಲಕ ರಾಜ್ಯದ ಘನತೆಯನ್ನು ಇಡೀ ದೇಶದ ಮುಂದೆ ಹರಾಜು ಹಾಕಲಾಗುತ್ತಿದೆ. ಇದು ಕೇವಲ ಅಧಿಕಾರಿಗಳ ಆಟವಲ್ಲ, ಮೇಲಿನಿಂದ ಕೆಳಗಿನವರೆಗೆ ಹರಿಯುತ್ತಿರುವ ‘ವಸೂಲಿ ಭಾಗ್ಯ’ದ ಫಲ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಒಂದೆಡೆ ಜನಸಾಮಾನ್ಯರಿಗೆ ಅಭಿವೃದ್ಧಿ ಎನ್ನುವುದೇ ಮರೀಚಿಕೆಯಾಗಿದ್ದರೆ, ಇನ್ನೊಂದೆಡೆ ಸರಣಿ ಹಗರಣಗಳ ಮೂಲಕ ಕಾಂಗ್ರೆಸ್ ಖಜಾನೆ ಲೂಟಿ ಮಾಡುತ್ತಿದೆ. ಮಾನ್ಯ ಮುಖ್ಯಮಂತ್ರಿಗಳೇ, ಕಡೆ ಪಕ್ಷ, ರಾಜ್ಯದ ಮಾನ ಕಳೆಯುತ್ತಿರುವ ಭ್ರಷ್ಟ ಅಧಿಕಾರಿಗಳ ವಿರುದ್ಧವಾದರೂ ಕಠಿಣ ಕ್ರಮ ತೆಗೆದುಕೊಳ್ಳಿ, ರಾಜ್ಯದ ಮಾನ ಉಳಿಸಿ! ಈ ಜನವಿರೋಧಿ ಸರ್ಕಾರ ತೊಲಗುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗುಡುಗಿದ್ದಾರೆ.






Leave a comment