Site icon Kannada News-suddikshana

ಬಿಜೆಪಿ ಸರ್ಕಾರದ ಭ್ರಷ್ಟರ ಮಹಾಸಂಗಮ: ಕಾಂಗ್ರೆಸ್ ಟೀಕೆ

SUDDIKSHANA KANNADA NEWS

DATE:24-03-2023

DAVANAGERE

ದಾವಣಗೆರೆ: ಮಾರ್ಚ್ (MARCH) 25ರಂದು ದಾವಣಗೆರೆಯಲ್ಲಿ ಬಿಜೆಪಿ (BJP) ಆಯೋಜಿಸಿರುವುದು ವಿಜಯ ಸಂಕಲ್ಪ ಯಾತ್ರೆಯ ಸಮಾರೋಪ ಅಲ್ಲ. ಭ್ರಷ್ಟರ ಮಹಾಸಂಗಮ ಎಂದು ಜಿಲ್ಲಾ ಕಾಂಗ್ರೆಸ್  (CONGRESS) ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಶೇಕಡಾ 40ರಷ್ಟು ಕಮೀಷನ್ ಪಡೆದು ಭ್ರಷ್ಟಾಚಾರ ನಡೆಸಿದ ಏಕೈಕ ಪಕ್ಷ ಬಿಜೆಪಿ. ಸರ್ಕಾರದಲ್ಲಿರುವ ಬಹುತೇಕ ಎಲ್ಲಾ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ದಾವಣಗೆರೆ (DAVANAGERE) ಯಲ್ಲಿಯೂ ಸಹ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ್ ಹಾಗೂ ಸಂಸದ ಜಿ. ಎಂ. ಸಿದ್ದೇಶ್ವರ (SIDDESHWARA)  ಅವರು ತಲಾ ಶೇ.20ರಷ್ಟು ಕಮೀಷನ್ ಪಡೆಯುತ್ತಾರೆ ಎಂದು ದೂರಿದರು.

ಲೋಕಾಯುಕ್ತ ದಾಳಿ ವೇಳೆ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರ ಸಿಕ್ಕಿ ಬಿದ್ದಾಗ ಕೋಟ್ಯಂತರ ರೂಪಾಯಿ ಹಣ ಪತ್ತೆಯಾಗಿದ್ದು ಜಗಜ್ಜಾಹೀರಾಗಿದೆ. ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಭ್ರಷ್ಟಾಚಾರ ನಡೆಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಭ್ರಷ್ಟರನ್ನು ಕಾಪಾಡುವ ಬಿಜೆಪಿ ಸರ್ಕಾರ ಶಾಸಕರನ್ನು ಇದುವರೆಗೆ ಬಂಧಿಸಿಲ್ಲ ಯಾಕೆ ಎಂದು ಪ್ರಶ್ನಿಸಿದರು.

ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಸಚಿವರು ಶೇಕಡಾ 40ರಷ್ಟು ಕಮೀಷನ್ ಕೇಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರೂ ಯಾವುದೇ ಕ್ರಮ ಆಗಿಲ್ಲ. ಇಷ್ಟೆಲ್ಲಾ ಭ್ರಷ್ಟಾಚಾರ ನಡೆದಿದ್ದರೂ ಧೃತರಾಷ್ಟ್ರ ಪ್ರೇಮದಂತೆ ನರೇಂದ್ರ ಮೋದಿ ಅವರು ಆಗಿದ್ದು, ಪ್ರಧಾನಿ ಅವರನ್ನು ಕರೆಯಿಸಿ ಭ್ರಷ್ಟರ ಮಹಾಸಂಗಮ ನಡೆಸುತ್ತಿರುವ ಬಿಜೆಪಿಯವರಿಗೆ ನಾಚಿಕೆಯಾಗಬೇಕು. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡಲಾಗುತ್ತಿದೆ ಎಂದು ಹೇಳಿದರು.

ರಾಜ್ಯದ ಜನರಿಗೆ ಮಂಕುಬೂದಿ ಎರಚಿ ಅನ್ಯಾಯ ಮಾಡಿರುವ ಬಿಜೆಪಿಗರು ಯಾವ ಮುಖ ಇಟ್ಟುಕೊಂಡು ಚುನಾವಣೆ (ELECTION)  ಎದುರಿಸಬೇಕೆಂಬ ಗೊಂದಲದಲ್ಲಿದ್ದು, ಇದೀಗ ಮೋದಿ ಹೆಸರಿನಲ್ಲಿ ಮತ ಕೇಳಲು ಮುಂದಾಗಿದ್ದು, ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಭವಿಷ್ಯ ನುಡಿದರು.

ಭ್ರಷ್ಟಾಚಾರದಲ್ಲಿ ಮುಳುಗಿರುವ ಬಿಜೆಪಿ ಸರ್ಕಾರದ ಪರ ಮೋದಿ ಅವರು ನಿಂತಿದ್ದಾರೆ ಎಂದೆನಿಸುತ್ತಿದೆ. ಇಷ್ಟೆಲ್ಲಾ ಅವ್ಯವಹಾರ, ಅಕ್ರಮ, ಭ್ರಷ್ಟಾಚಾರ ನಡೆದಿದ್ದರೂ ಸುಮ್ಮನಿರುವುದನ್ನು ನೋಡಿದರೆ ಮೋದಿ ಅವರ ಪಾಲು ಎಷ್ಟು. ಅಭಿವೃದ್ಧಿ ವಿಚಾರದಲ್ಲಿ ಮತ ಕೇಳುವ ಬದಲು ಮೋದಿ ಅವರಿಗೆ ಮತ ಹಾಕಿ ಎನ್ನುವ ಬಿಜೆಪಿಗರು ಅವರ ಮುಖವಿಟ್ಟುಕೊಂಡು ಚುನಾವಣೆ ಎದುರಿಸಲಿ ಎಂದು ಸವಾಲು ಹಾಕಿದರು.

ಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಕಕ್ಷೆ ಅನಿತಾ ಬಾಯಿ, ಮುಖಂಡರಾದ ಕೆ. ಜಿ. ಶಿವಕುಮಾರ್, ಹರೀಶ್ ಬಸಾಪುರ, ಸುಷ್ಮಾ ಪಾಟೀಲ್, ದಾಕ್ಷಾಯಿಣಿ, ರಾಜೇಶ್ವರಿ ಮತ್ತಿತರರು ಹಾಜರಿದ್ದರು.

Exit mobile version