Site icon Kannada News-suddikshana

ಬೆಳೆ ವಿಮೆ ಸಮೀಕ್ಷೆ ವೇಳೆ ವ್ಯತ್ಯಾಸವಾಗದಂತೆ ನಡೆಸಿ, ಅಕ್ರಮಕ್ಕೆ ಆಸ್ಪದ ಕೊಡಬೇಡಿ: ಅಧಿಕಾರಿಗಳಿಗೆ ಖಡಕ್ ಸೂಚನೆ

SUDDIKSHANA KANNADA NEWS/ DAVANAGERE/ DATE:24_07_2025

ದಾವಣಗೆರೆ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಈವರೆಗೆ ಮುಂಗಾರಿನಲ್ಲಿ 40265 ರೈತರು ಬೆಳೆ ವಿಮೆಗೆ ನೊಂದಾಯಿಸಿದ್ದಾರೆ. ಬೆಳೆ ವಿಮೆ ಜೊತೆಗೆ ಬೆಳೆ ಕಟಾವು ಪ್ರಯೋಗವನ್ನು ಕರಾರುವಕ್ಕಾಗಿ ಮಾಡಬೇಕು. ಮತ್ತು ಬೆಳೆ ಸಮೀಕ್ಷೆಯ ವೇಳೆ ಯಾವುದೇ ವ್ಯತ್ಯಾಸವಾಗದಂತೆ ಸಮೀಕ್ಷೆ ಮಾಡಬೇಕು. ಪರಿಶೀಲನಾ ಹಂತದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಸರಿಯಾಗಿ ಪರಿಶೀಲನೆ ನಡೆಸಬೇಕು ಎಂದು ಜಿಲ್ಲಾಡಳಿತ ಸೂಚನೆ ಕೊಟ್ಟಿದೆ.

ಈ ಸುದ್ದಿಯನ್ನೂ ಓದಿ: ಕಡೂರಿನಲ್ಲಿ ಅಪಘಾತ: ದಾವಣಗೆರೆಯ ರಿಯಲ್ ಎಸ್ಟೇಟ್ ಉದ್ಯಮಿ ಪ್ರತಾಪ್ ಪವಾರ್ ದಾರುಣ ಸಾವು

ಯಾವುದೇ ತರಹದ ಲೋಪಗಳು ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಜವಾಬ್ದಾರರನ್ನಾಗಿ ಮಾಡಲಾಗುತ್ತದೆ. ಕಳೆದ ವರ್ಷ ಸೊಕ್ಕೆ ಹೋಬಳಿಯಲ್ಲಿ ಬೆಳೆ ಇಲ್ಲದಿದ್ದರೂ ಬೆಳೆಯನ್ನು ನೊಂದಾಯಿಸಿದ್ದನ್ನು ಡಿಸಿ ಗಂಗಾಧರ ಸ್ವಾಮಿ ನೆನಪು ಮಾಡಿಕೊಂಡರು.

ರೈತ ಉತ್ಪಾದಕ ಕಂಪನಿಗಳನ್ನು ಹೆಚ್ಚಿಸಿ:

ರೈತ ಉತ್ಪಾದಕ ಕಂಪನಿಗಳನ್ನು ಹೆಚ್ಚಿಸುವುದರಿಂದ ರೈತರಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ನಬಾರ್ಡ್‍ನಿಂದ 3, ಕೃಷಿ 16, ತೋಟಗಾರಿಕೆ 7, ಮೀನುಗಾರಿಕೆ 1, ರಾಜ್ಯ ಕುರಿ ಮತ್ತು ಉಣ್ಣೆ ಅಭಿವೃದ್ದಿ ನಿಗಮದಿಂದ 1 ಸೇರಿ ಒಟ್ಟು 28 ರೈತ ಉತ್ಪಾದಕ ಕಂಪನಿಗಳಿದ್ದು ಮಾಯಕೊಂಡ ಹೋಬಳಿಯಲ್ಲಿ ಇನ್ನೊಂದು ಎಫ್‍ಪಿಓ ಸೇರಿದಂತೆ ಅಗತ್ಯವಿರುವ ಕಡೆ ರೈತ ಉತ್ಪಾದಕ ಕಂಪನಿಗಳನ್ನು ಹೆಚ್ಚಿಸಲು ಸೂಚನೆ ನೀಡಿದರು.

ರಸಗೊಬ್ಬರ ಕೊರತೆಯಾಗಂತೆ ಕ್ರಮವಹಿಸಿ; ಜಿಲ್ಲೆಯಲ್ಲಿ ರಸಗೊಬ್ಬರದ ಕೊರತೆಯಾಗಂತೆ ಪೂರೈಕೆಗೆ ಕಂಪನಿಗಳು ಮುಂದಾಗಬೇಕು. ಕಳೆದ ವರ್ಷ ಈ ವರ್ಷಕ್ಕಿಂತಲೂ ಹೆಚ್ಚು ಮಳೆಯಾದರೂ ಸಮಸ್ಯೆಯಾಗಿರಲಿಲ್ಲ. ಕಂಪನಿಗಳು ಪೂರೈಕೆ ಮಾಡುವ ಶೇ 95 ರಷ್ಟು ರಸಗೊಬ್ಬರ ಪೂರೈಕೆಯಾಗಿದೆ ಎಂದು ಕಂಪನಿ ಪ್ರತಿನಿಧಿಗಳು ಸಭೆಯಲ್ಲಿ ತಿಳಿಸಿದಾಗ ಕೃಷಿ ಇಲಾಖೆ ಜಾಗೃತ ದಳದವರು ಪರಿಶೀಲನೆ ನಡೆಸಿ ಯಾವುದೇ ಕಾರಣಕ್ಕೂ ಗೊಬ್ಬರದ ಕೊರತೆಯಾಗಂತೆ ಕ್ರಮ ವಹಿಸಲು ಕಟ್ಟುನಿಟ್ಟಿನ ಸೂಚನೆ ನೀಡಿದರು.

ಸ್ತ್ರೀಶಕ್ತಿ ಸಂಘಗಳ ಆಹಾರ ಉತ್ಪನ್ನಗಳಿಗೆ ಉತ್ತೇಜನ; ಸರ್ಕಾರದಿಂದ ಆಯೋಜಿಸುವ ಸಭೆ, ಸಮಾರಂಭಗಳಲ್ಲಿ ನೀಡಲಾಗುವ ಆಹಾರಗಳ ತಿನಿಸುಗಳನ್ನು ಸ್ತ್ರೀ ಶಕ್ತಿ ಸಂಘ, ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ವಿತರಣೆ ಮಾಡಲು, ಇದನ್ನು ಎಲ್ಲಾ ಇಲಾಖೆ ಮುಖ್ಯಸ್ಥರು ಅನುಸರಿಸಲು ಜಂಟಿ ಸುತ್ತೋಲೆಯನ್ನು ಹೊರಡಿಸಲು ಜಂಟಿ ಕೃಷಿ ನಿರ್ದೇಶಕರಿಗೆ ಸೂಚನೆ ನೀಡಿ ಇದರಿಂದ ಮಾರುಕಟ್ಟೆಯನ್ನು ಹೆಚ್ಚಿಸುವ ಜೊತೆಗೆ ಗುಣಮಟ್ಟದ ಆಹಾರದ ವಿತರಣೆಯಾಗಲಿದೆ ಎಂದರು.

ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ರಾಘವೇಂದ್ರ ಪ್ರಸಾದ್, ನಬಾರ್ಡ್ ಡಿಡಿಎಂ ರಶ್ಮಿ, ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಸಿ.ಹಿರೇಮಠ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

Exit mobile version